ಕನ್ನಡದ ಕೆಂಪೇಗೌಡ ಸಿನಿಮಾ (Kempegowda Cinema) ಶೈಲಿಯಲ್ಲಿ ಅಪಹರಣಕ್ಕೆ ಒಳಗಾಗಿದ್ದ ಬಾಲಕನನ್ನು (Boy Kidnap) ಕಲಬುರಗಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಸಿಪಿಐ ಅರುಣ್ ಮುರಗುಡಿ ತಂಡ (CPI Arun Muragudi And Team) ಬಾಲಕನನ್ನು ರಕ್ಷಣೆ ಮಾಡಿದೆ. ಬುಧವಾರ ಬೆಳಗ್ಗೆ ಬಾಲಕನನ್ನು ಅಪಹರಿಸಿ ಆತನ ಪೋಷಕರಿಗೆ 10 ಲಕ್ಷ ರೂಪಾಯಿ ನೀಡುವಂತೆ ಡಿಮ್ಯಾಂಡ್ ಮಾಡಲಾಗಿತ್ತು. ಕಲಬುರಗಿ ನಗರದ ಸಿದ್ದೇಶ್ವರ ಕಾಲೋನಿಯ ನಿವಾಸಿಯಾಗಿರುವ ಶಿಕ್ಷಕ ಗುರುನಾಥ್ ಆರ್. ರಾಥೋಡ್ ಎಂಬವರ 10 ವರ್ಷದ ಸುದರ್ಶನ್ ಅಪಹರಣಕ್ಕೊಳಗಾಗಿದ್ದ ಬಾಲಕ. ಎಂದಿನಂತೆ ಶಾಲೆಗೆ ತೆರಳುತ್ತಿರುವಾಗ ಆಟೋದಲ್ಲಿ ಬಂದು ಸುದರ್ಶನ್ನನ್ನು ಅಪಹರಣ ಮಾಡಲಾಗಿತ್ತು. ಅಪಹರಣದ ಬಳಿಕ ಪೋಷಕರಿಗೆ ನಿಮ್ಮ ಮಗ ಜೀವಂತವಾಗಿರಬೇಕಾದ್ರೆ 10 ಲಕ್ಷನೀಡುವಂತೆ ಡಿಮ್ಯಾಂಡ್ ಮಾಡಿದ್ದರು.
ಪೊಲೀಸರಿಗೆ ಹೇಳಿದ್ರೆ ಮಗನನ್ನು ಕೊಲೆ ಮಾಡೋದಾಗಿ ಬೆದರಿಕೆ ಹಾಕಲಾಗಿತ್ತು. ಆದ್ರೂ ಶಿಕ್ಷಕ ಗುರುನಾಥ್ ಮಗನ ಅಪಹರಣದ ವಿಷಯವನ್ನು ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ನೀಡಿದ್ದರು.
ನಿರ್ಜನ ಪ್ರದೇಶದಲ್ಲಿ ಬಾಲಕನನ್ನ ಬಿಟ್ಟು ಪರಾರಿ
ಪೊಲೀಸರು ತಮ್ಮನ್ನು ಫಾಲೋ ಮಾಡುತ್ತಿರುವ ವಿಷಯ ತಿಳಿದ ಅಪಹರಣಕಾರರು ಬಾಲಕನನ್ನು ಸಂಜೆ ನಾಲ್ಕು ಗಂಟೆ ಸಮಯಕ್ಕೆ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಕಲಬುರಗಿ ತಾಲೂಕಿನ ಪಾಳ ಗ್ರಾಮದ ಹೊರವಲಯದಲ್ಲಿ ಬಾಲಕನನ್ನು ಬಿಡಲಾಗಿತ್ತು. ಇದೀಗ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಬಾಲಕನ ತಂದೆ ಗುರುನಾಥ್ ಹೇಳಿಕೆ
ಬೆಳಗ್ಗೆ ಎಂದಿನಂತೆ ನಾನು ಶಾಲೆಗೆ ಹೋಗಿದ್ದೆ. ಸುಮಾರು 8.30ಕ್ಕೆ ಸೋದರ ಕರೆ ಮಾಡಿ ನಿಮ್ಮ ಮಗನನ್ನ ಅಪಹರಣ ಮಾಡಲಾಗಿದೆ. ಹಣ ಕೇಳಿ ಕೆಲವರು ಫೋನ್ ಮಾಡಿದ್ದಾರೆ ಎಂಬ ವಿಷಯವನ್ನು ನನಗೆ ತಿಳಿಸಿದ. ನನ್ನ ಮಗು ಅಪಹರಣವಾಗಿದೆ ಎಂದು ಕಮಿಷನರ್ ಸರ್ ಗಮನಕ್ಕೆ ತಂದ ಕೂಡಲೇ ಅವರು ಎಲ್ಲಾ ಸಿಬ್ಬಂದಿಗೆ ವಿಷಯ ತಿಳಿಸಿ ಮಗುವನ್ನು ರಕ್ಷಣೆ ಮಾಡುವಂತೆ ಸೂಚಿಸಿದರು ಎಂದು ಗುರುನಾಥ್ ಹೇಳಿದ್ದಾರೆ.
ಪೊಲೀಸರು ಸೂಚನೆಯಂತೆ ಅಪಹರಣಕಾರರ ಜೊತೆ ಮಾತು
ಸಿಬ್ಬಂದಿಯೂ ಸಹ ಎಲ್ಲಾ ಕಡೆ ಮಗುವಿನ ಪತ್ತೆ ಕಾರ್ಯ ಆರಂಭಿಸಿದರು. ಅಪಹರಣಕಾರರು ಫೋನ್ ಮಾಡುತ್ತಿರುವ ಎಲ್ಲಾ ಮಾಹಿತಿಯನ್ನು ಪೊಲೀಸರಿಗೆ ನೀಡಿದೆ. ಅವರು ಹೇಳುತ್ತಿದ್ದಂತೆ ಹಣ ಸಿದ್ಧ ಮಾಡಿಕೊಂಡಿದ್ದೇನೆ ಎಂದು ಕಿಡ್ನ್ಯಾಪರ್ಸ್ ಹೇಳಿದರು.
ಶಾಲಾ ಕಟ್ಟಡದಲ್ಲಿ ಹಣ ಎಸೆಯುವಂತೆ ಹೇಳಿದ್ದ ಅಪಹರಣಕಾರರು
ಮೊದಲು ಅವರು ಹೇಳಿದ ಜಾಗಕ್ಕೆ ತೆರಳಿದೆ. ಅಲ್ಲಿ ಸಿವಿಲ್ ಡ್ರೆಸ್ನಲ್ಲಿ ಅಲ್ಲಿಯೇ ಇದ್ದರು. ಒಂದು ಗಂಟೆಯ ನಂತರ ಫೋನ್ ಮಾಡಿದ ಅಪಹರಣಕಾರರು, ಪಾಳು ಬಿದ್ದಿರುವ ಶಾಲಾ ಕಟ್ಟಡದ ಕೋಣೆಯೊಂದರಲ್ಲಿ ಹಣ ಎಸೆದು ಹೋಗುವಂತೆ ಹೇಳಿದರು. ಅಲ್ಲಿಂದ ಕೂಗಳತೆ ದೂರದಲ್ಲಿರುವ ದೇವಸ್ಥಾನದಲ್ಲಿ ಮಗನನ್ನು ಕರೆದುಕೊಂಡು ಹೋಗುವಂತೆ ಹೇಳಿದರು.
ಪಾಳ ಗ್ರಾಮಸ್ಥರಿಂದ ಫೋನ್ ಕರೆ
ಶಾಲಾ ಕಟ್ಟಡದಲ್ಲಿ ಹಣ ಎಸೆಯೋದು ಹೇಗೆ ಅಂತ ಹೇಳಿದಾಗ ಓರ್ವನನ್ನು ಕಳುಹಿಸುತ್ತೇನೆ ಎಂದು ಹೇಳಿದ್ರು. ಇದಾದ ಕೆಲ ಗಂಟೆಗಳಲ್ಲಿ ಅಪರಿಚಿತರು ಫೋನ್ ಮಾಡಿ, ನಿಮ್ಮ ಮಗ ನಮಗೆ ಸಿಕ್ಕಿದ್ದಾನೆ. ಆತ ಓಡಿಕೊಂಡು ಬಂದು ಸಹಾಯ ಕೇಳಿದ. ನಿಮ್ಮ ಸಂಖ್ಯೆ ನೀಡಿದ್ದರಿಂದ ಕಾಲ್ ಮಾಡದ್ದೇವೆ ಅಂತ ಹೇಳಿದರು.
ಇದನ್ನೂ ಓದಿ: Shivamogga: ಚಿಕಿತ್ಸೆ ದೊರೆಯದ್ದಕ್ಕೆ ಸಾವನ್ನಪ್ಪಿದ ಕುರಿಯನ್ನು ಆಸ್ಪತ್ರೆ ಮುಂದೆ ನೇತಾಕಿದ ರೈತ
ನಾವು ದೇವಸ್ಥಾನದ ಅರ್ಚಕರು. ಭಯಗೊಂಡಿದ್ದ ಹುಡುಗನಿಗೆ ನೀರು ಕುಡಿಸಿ ನಮ್ಮ ಬಳಿಯೇ ಇರಿಸಿಕೊಂಡಿದ್ದೇವೆ. ಆತ ಸುರಕ್ಷಿತವಾಗಿದ್ದು, ಬಂದು ನಿಮ್ಮ ಮಗನನ್ನು ಕರೆದುಕೊಂಡು ಹೋಗಿ ಎಂದು ಹೇಳಿದಾಗ ನಾವು ಅಲ್ಲಿಗೆ ಹೋದಾಗ ಮಗ ಸಿಕ್ಕ ಎಂದು ತಂದೆ ಗುರುನಾಥ್ ಆರ್. ರಾಥೋಡ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ