ಸಚಿವ ಪ್ರಿಯಾಂಕ ಖರ್ಗೆ, ಶಾಸಕ ಬಸವರಾಜ್ ಮತ್ತಿಮೋಡ್​ಗೆ ಪ್ರತಿಷ್ಠೆಯ ಕಣ ಕಲಬುರ್ಗಿ

news18
Updated:August 28, 2018, 3:08 PM IST
ಸಚಿವ ಪ್ರಿಯಾಂಕ ಖರ್ಗೆ, ಶಾಸಕ ಬಸವರಾಜ್ ಮತ್ತಿಮೋಡ್​ಗೆ ಪ್ರತಿಷ್ಠೆಯ ಕಣ ಕಲಬುರ್ಗಿ
ಸಚಿವ ಪ್ರಿಯಾಂಕ ಖರ್ಗೆ ಮತ್ತು ಬಿಜೆಪಿ ಶಾಸಕ ಬಸವರಾಜ್ ಮತ್ತಿಮೋಡ್
news18
Updated: August 28, 2018, 3:08 PM IST
ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ (ಆ.28) : ಜಿಲ್ಲೆಯ ಶಹಾಬಾದ್ ನಗರಸಭೆ, ಚಿಂಚೋಳಿ, ಚಿತ್ತಾಪುರ, ಆಳಂದ, ಅಫಜಲಪುರ, ಜೇವರ್ಗಿ ಮತ್ತು ಸೇಡಂ ಪುರಸಭೆಗಳಿಗೆ ಚುನಾವಣೆ ನಡೆಯಲಿದೆ. 167 ಸ್ಥಾನಗಳಿಗೆ 536 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ಕಲಬುರ್ಗಿ ಮಹಾನಗರ ಪಾಲಿಕೆ ಮತ್ತು ವಾಡಿ ಪುರಸಭೆ ಹೊರತುಪಡಿಸಿ ಉಳಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. ಶಹಾಬಾದ್ ನಗರಸಭೆಯ 27, ಆಳಂದ ಪುರಸಭೆಯ 27, ಅಫಜಲಪುರ ಪುರಸಭೆಯ 23, ಜೇವರ್ಗಿ ಪುರಸಭೆಯ 23, ಸೇಡಂ ಪುರಸಭೆಯ 24, ಚಿತ್ತಾಪುರ ಪುರಸಭೆಯ 23 ಹಾಗೂ ಚಿಂಚೋಳಿ ಪುರಸಭೆಯ 23 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 167 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದ್ದು, 536 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 170 ಮೂಲ ಮತಗಟ್ಟೆಗಳಿದ್ದು, 48 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 218 ಮತಗಟ್ಟೆ ಸ್ಥಾಪಿಸಲಾಗಿದ್ದು ಈ ಪೈಕಿ 103 ಸೂಕ್ಷ್ಮ, 45 ಅತಿ ಸೂಕ್ಷ್ಮ ಹಾಗೂ 70 ಮತಗಟ್ಟೆಗಳನ್ನು ಸಾಮಾನ್ಯ ಎಂದು ಗುರುತಿಸಲಾಗಿದೆ.

ಬಹುತೇಕ ಕಡೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೆ, ಕೆಲವೆಡೆ ಜೆಡಿಎಸ್ ಅಭ್ಯರ್ಥಿಗಳೂ ಪೈಪೋಟಿ ನೀಡುವ ಮೂಲಕ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ವಿಧಾನಸಭೆ ಚುನಾವಣೆಯ ನಂತರ ಮತ್ತು ಲೋಕಸಭಾ ಚುನಾವಣೆಗೆ ಪೂರ್ವದಲ್ಲಿ ನಡೆಯುತ್ತಿರುವ ಈ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ. ಬಹುತೇಕ ವಾರ್ಡ್​ಗಳಲ್ಲಿ ತುರುಸಿನ ಸ್ಪರ್ಧೆ ಕಂಡು ಬರುತ್ತಿದೆ.

ಚಿತ್ತಾಪುರ ತಾಲೂಕಿನ ಶಹಾಬಾದ್ ನಗರಸಭೆಯಲ್ಲಿ 27 ವಾರ್ಡ್​ಗಳಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ 27 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ. ಜೆಡಿಎಸ್ ಪಕ್ಷ 22 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಚುನಾವಣಾ ಅಖಾಡದಲ್ಲಿ ಒಟ್ಟು 114 ಅಭ್ಯರ್ಥಿಗಳಿದ್ದಾರೆ. ಕಳೆದ ಬಾರಿ ಶಹಾಬಾದ್ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈ ಬಾರಿಯೂ ತನ್ನ ಪ್ರಾಬಲ್ಯ ಮೆರೆಯುವ ಮೂಲಕ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್ ಇದೆ. ಶಹಾಬಾದ್ ನಗರಸಭೆ ಕಲಬುರ್ಗಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿದ್ದು, ಸದ್ಯ ಬಿಜೆಪಿಯ ಬಸವರಾಜ ಮತ್ತಿಮೋಡ್ ಶಾಸಕರಾಗಿದ್ದಾರೆ. ಸಚಿವ ಪ್ರಿಯಾಂಕ ಖರ್ಗೆ ಚಿತ್ತಾಪುರ ಶಾಸಕರಾಗಿದ್ದು, ಅವರ ವ್ಯಾಪ್ತಿಯಲ್ಲಿ ಬಾರದಿದ್ದರೂ, ಶಹಾಬಾದ್ ನಗರಸಭೆಯ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿಸಿಕೊಂಡಿದ್ದಾರೆ. ಹೀಗಾಗಿ ಶಹಾಬಾದ್ ನಗರಸಭೆ ಸಚಿವ ಪ್ರಿಯಾಂಕ ಖರ್ಗೆ ಮತ್ತು ಬಿಜೆಪಿ ಶಾಸಕ ಬಸವರಾಜ ಮತ್ತಿಮೋಡ್ ನಡುವಿನ ಪೈಪೋಟಿ ಎಂಬ ಸ್ವರೂಪ ಪಡೆದುಕೊಂಡಿದೆ. ಜೆಡಿಎಸ್ ಸಹ ತನ್ನ ಪ್ರಾಬಲ್ಯ ಮೆರೆಯುವ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿ, ಅದೃಷ್ಟ ಪರೀಕ್ಷೆ ನಡೆಸಿದೆ.

ಇನ್ನು ಜಿಲ್ಲೆಯ ಚಿಂಚೋಳಿ ಪುರಸಭೆಯಲ್ಲಿ 23 ವಾರ್ಡ್ ಗಳಿದ್ದು, ಇಲ್ಲಿಯೂ ತುರುಸಿನ ಪೈಪೋಟಿ ನಡೆದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ 23 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ. ಜೆಡಿಎಸ್ ಕೇವಲ 8 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಳೆದ ಬಾರಿ ಚಿಂಚೋಳಿ ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಸದ್ಯ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಡಾ.ಉಮೇಶ್ ಜಾಧವ್ ಶಾಸಕರಾಗಿದ್ದು, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರತಿಷ್ಠೆಯನ್ನಾಗಿಸಿಕೊಂಡಿದ್ದಾರೆ. ಮಾಜಿ ಸಚಿವ ಸುನಿಲ್ ವಲ್ಯಾಪುರೆ ವಿಧಾನಸಭೆಯಲ್ಲಿ ಸೋತರೂ ನಗರ ಸಂಸ್ಥೆಗಳಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಜೆಡಿಎಸ್ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ.
Loading...

ಚಿತ್ತಾಪುರ ಪುರಸಭೆ ಜಿಲ್ಲೆಯ ಪ್ರತಿಷ್ಠಿತ ನಗರ ಸ್ಥಳೀಯ ಸಂಸ್ಥೆಯ ಅಖಾಡವಾಗಿ ಮಾರ್ಪಟ್ಟಿದೆ. ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ಸಮಾಜ ಕಲ್ಯಾಣ ಸಚಿವರಾಗಿರುವುದರಿಂದ ಮತ್ತು ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರ ಸಂಸ್ಥೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಎಲ್ಲ 23 ವಾರ್ಡ್ ಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಲಾಗಿದೆ. ಇದಕ್ಕೆ ಸವಾಲೆನ್ನುವ ರೀತಿಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ಮಾಜಿ ಶಾಸಕ ವಾಲ್ಮೀಕಿ ನಾಯಕ ಸಹ ಎಲ್ಲ 23 ವಾರ್ಡ್ ಗಳಿಗೆ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿ ತೀವ್ರ ಪೈಪೋಟಿ ನೀಡಿದ್ದಾರೆ. ಕಳೆದ ಬಾರಿ ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈ ಬಾರಿಯೂ ತನ್ನ ಪ್ರಾಬಲ್ಯ ಮೆರೆದು, ಮತ್ತೆ ಕಾಂಗ್ರೆಸನ್ನು ಅಧಿಕಾರಕ್ಕೆ ತರುವ ಉತ್ಸಾದಲ್ಲಿ ಪ್ರಿಯಾಂಕ ಖರ್ಗೆ ಇದ್ದಾರೆ. ಇದಕ್ಕೆ ಬ್ರೇಕ್ ಹಾಕಿ ಕಮಲ ಅರಳಿಸುವ ಯತ್ನದಲ್ಲಿ ಬಿಜೆಪಿ ಮುಖಂಡರಿದ್ದಾರೆ. ಜೆಡಿಎಸ್ ಕೇವಲ 7 ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದು, ಅಖಾಡದಲ್ಲಿ ಒಟ್ಟು 61 ಅಭ್ಯರ್ಥಿಗಳಿದ್ದಾರೆ.

ಸೇಡಂ ಪುರಸಭೆಯ 23 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ 23 ವಾರ್ಡ್ ಗಳಿಗೆ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ. ಕಳೆದ ಬಾರಿ ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ಕಳೆದ ಚುನಾವಣೆಯ ಸಂದರ್ಭದಲ್ಲಿ ಶರಣಪ್ರಕಾಶ ಪಾಟೀಲ ಸೇಡಂ ಶಾಸಕರಾಗಿ, ಸಚಿವರೂ ಆಗಿದ್ದ ಸಂದರ್ಭದಲ್ಲಿಯೂ ಹೆಚ್ಚು ಸ್ಥಾನ ಪಡೆದಿದ್ದ ಬಿಜೆಪಿ ಪಕ್ಷೇತರರ ನೆರವಿನಿಂದ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಚಿತ್ರಣ ಬದಲಾಗಿದೆ. ಸೇಡಂ ವಿಧಾನಸಭೆಯಲ್ಲಿ ಬಿಜೆಪಿಯ ರಾಜಕುಮಾರ ಪಾಟೀಲ ತೇಲ್ಕೂರ ಗೆದ್ದಿದ್ದಾರೆ. ಅದೇ ಗೆಲುವಿನ ಉಮೇದಿನಲ್ಲಿರುವ ರಾಜಕುಮಾರ ಪಾಟೀಲ, ಸೇಡಂ ಪುರಸಭೆಯಲ್ಲಿ ಮತ್ತೊಮ್ಮೆ ಕಮಲ ಅರಳಿಸುವ ತವಕದಲ್ಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿ ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಇದ್ದಾರೆ. ಜೆಡಿಎಸ್ ಇಲ್ಲಿ 13 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಒಟ್ಟು 70 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ಜೇವರ್ಗಿ ಪುರಸಭೆ ವಿಷಯಕ್ಕೆ ಬಂದರೆ ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಆಡಳಿತವಿತ್ತು. ಕಾಂಗ್ರೆಸ್ ನ ಅಜೇಯಸಿಂಗ್ ಶಾಸಕನಾಗಿ, ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿದ್ದರೂ ಅಧಿಕಾರ ಗದ್ದುಗೆ ಏರುವಲ್ಲಿ ವಿಫಲವಾಗಿತ್ತು. ಹೀಗಾಗಿ ಈ ಬಾರಿ ಎಲ್ಲ 23 ವಾರ್ಡಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಧಿಕಾರದ ಗದ್ದುಗೆ ಏರಲು ರಣತಂತ್ರ ರೂಪಿಸದೆ. ಈ ಬಾರಿಯೂ ಶಾಸಕ ಅಜೇಯಸಿಂಗ್ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುತ್ತಿದೆ. ಇನ್ನು ಕಳೆದ ಬಾರಿ ಚುನಾವಣೆಯ ನಂತರ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಈಗ ಜೆಡಿಎಸ್ ಸಖ್ಯ ತೊರೆದು ಎಲ್ಲ 23 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಮತ್ತೊಮ್ಮೆ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಉಮೇದಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷ 20 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೇವರ್ಗಿಯ ಬಹುತೇಕ ವಾರ್ಡ್ ಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಟ್ಟು 77 ಅಭ್ಯರ್ಥಿಗಳು ಕಣದಲ್ಲಿದ್ದು, ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಅಫಜಲಪುರ ಪುರಸಭೆ ವಿಷಯಕ್ಕೆ ಬಂದರೆ ಎಲ್ಲವೂ ಉಲ್ಟಾ-ಪಲ್ಟಾ ಎಂಬ ಸ್ಥಿತಿ ಇದೆ. ಕಳೆದ ಬಾರಿ ಯಡಿಯೂರಪ್ಪ ಅವರ ಜೊತೆ ಕೆಜೆಪಿ ಸೇರಿದ್ದ ಎಂ.ವೈ.ಪಾಟೀಲ ಪುರಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ತರುವ ಮೂಲಕ ಕೆಜೆಪಿಯನ್ನು ಅಧಿಕಾರ ಗದ್ದುಗೆ ತರುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿತ್ತು. ಆದರೆ ಇದೀಗ ರಾಜಕೀಯ ಚಿತ್ರಣ ಬದಲಾಗಿದೆ. ಕಳೆದ ಬಾರಿ ಪುರಸಭೆಯಲ್ಲಿ ಜಯಭೇರಿ ಬಾರಿಸಿದ್ದ ಎಂ.ವೈ.ಪಾಟೀಲ ಕಾಂಗ್ರೆಸ್ ಗೆ ಪಕ್ಷಾಂತರಗೊಂಡು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನಲ್ಲಿದ್ದ ಮಾಲೀಕಯ್ಯ ಗುತ್ತೇದಾರ ಬಿಜೆಪಿಗೆ ಪಕ್ಷಾಂತಗೊಂಡು ಸೋತಿದ್ದಾರೆ. ಹೀಗಾಗಿ ಮುಖಂಡರು ಅದಲು ಬದಲಾಗಿದ್ದು, ಇಬ್ಬರೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರತಿಷ್ಠಿಯನ್ನಾಗಿಸಿಕೊಂಡಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ತಲಾ 21 ವಾರ್ಡ ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೆಡಿಎಸ್ ಕೇವಲ 3 ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದ್ದು, ಒಟ್ಟು 56 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಆಳಂದ ಪುರಸಭೆಯಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾ ಜಿದ್ದಿ ಏರ್ಪಟ್ಟಿದೆ. ಒಟ್ಟು 27 ವಾರ್ಡ್ ಗಳಿದ್ದು ಎಲ್ಲ 27 ವಾರ್ಡ್ ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಳೆದ ಬಾರಿ ಅಧಿಕಾರದ ಗದ್ದುಗೆ ಏರಿದ್ದ ಜೆಡಿಎಸ್ ನಿಂದ ಕೇವಲ 13 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಲ್ಲಿದ್ದ ಸುಭಾಷ್ ಗುತ್ತೇದಾರ ಅದೇ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಪೂರ್ಣ ಬಹುಮತ ಬಾರದಿದ್ದರೂ, ಪಕ್ಷೇತರ ಮತ್ತಿತರರ ಬೆಂಬಲ ಪಡೆದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ನಂತರದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಸುಭಾಷ್ ಗುತ್ತೇದಾರ ಅವರೇ ಆಳಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದೇ ಗೆಲುವಿನ ಹುಮ್ಮಸ್ಸಿನಲ್ಲಿರುವ ಸುಭಾಷ್ ಗುತ್ತೇದಾರ ಬಿಜೆಪಿಯನ್ನು ಅಧಿಕಾರ ಗದ್ದುಗೇರಿಸುವ ಉತ್ಸಾಹ ತೋರಿದ್ದಾರೆ. ಕಳದೆ ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋಲನುಭವಿಸಿದ ಮಾಜಿ ಶಾಸಕ ಬಿ.ಆರ್.ಪಾಟೀಲ, ತಮ್ಮ ಸೋಲಿನ ಸೇಡನ್ನು ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಮೂಲಕ ತೀರಿಸಿಕೊಳ್ಳುವ ತವಕದಲ್ಲಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಜಿಲ್ಲೆಯ ಹೆಚ್ಚಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈ ಬಾರಿ ಜಿಲ್ಲೆಯಲ್ಲಿ ಐವರು ಶಾಸಕರು ಮತ್ತು ಓರ್ವ ಸಂಸದರಿದ್ದು, ಈ ಬಾರಿಯೂ ಗೆಲುವಿನ ನಾಗಾಲೋಟ ಮುಂದುವರೆಯಲಿದೆ. ಕಾಂಗ್ರೆಸ್ ಪ್ರಾಬಲ್ಯ ಉಳಿಯಲಿದೆ ಎಂಬ ವಿಶ್ವಾಸ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಅವರದ್ದು. ಆದರೆ ಜಿಲ್ಲೆಯಲ್ಲಿ ಈ ಬಾರಿ ನಾಲ್ವರು ಬಿಜೆಪಿ ಶಾಸಕರಿದ್ದು, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಉತ್ತಮ ಪೈಪೋಟಿ ನೀಡಲಿದ್ದೇವೆ. ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸುವ ಮೂಲಕ ಕಮಲ ಅರಳಿಸಲಿದ್ದೇವೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ಇದ್ದಾರೆ. ನಾವೇನು ಕಡಿಮೆ ಇಲ್ಲ ಎನ್ನುತ್ತಿರುವ ಜೆಡಿಎಸ್, ರಾಜ್ಯದಲ್ಲಿ ನಮ್ಮ ಪಕ್ಷದ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಅದರ ಫಲಶೃತಿ ಎಂಬಂತೆ ಹೆಚ್ಚಿನ ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದು, ಪಕ್ಷಕ್ಕೆ ಚೇತರಿಕೆ ತುಂಬಲಿದ್ದಾರೆ ಎನ್ನುತ್ತಾರೆ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಗೌಡ ತೆಲ್ಲೂರ. ಒಟ್ಟಾರೆ ವಿಧಾನಸಭೆ ಚುನಾವಣೆಯ ನಂತರ ಮತ್ತು ಲೋಕಸಭಾ ಚುನಾವಣೆಗೆ ಪೂರ್ವದಲ್ಲಿ ನಡೆಯುತ್ತಿರುವ ಈ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ. ಬಹುತೇಕ ವಾರ್ಡ್ ಗಳಲ್ಲಿ ತುರುಸಿನ ಸ್ಪರ್ಧೆ ಕಂಡು ಬರುತ್ತಿದೆ. ಚುನಾವಣಾ ಪ್ರಚಾರ ಆರಂಭಗೊಂಡಿದ್ದು, ಎಲ್ಲರ ಚಿತ್ತ ಮತದಾರರನ್ನು ಸೆಳೆಯುವತ್ತ ಹರಿದಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ