HOME » NEWS » State » KALABURGI RAIN HEAVY RAINFALL AT KALABURGI AND A BOY WASHED AWAY LG

ನೋಡ ನೋಡುತ್ತಿದ್ದಂತೆಯೇ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ; ಶವ ಪತ್ತೆ ಹಚ್ಚಿದ ಅಗ್ನಿಶಾಮಕ ಸಿಬ್ಬಂದಿ

ಕಲಬುರ್ಗಿ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಕಳೆದ ರಾತ್ರಿ ಕಲಬುರ್ಗಿ ನಗರ ಮತ್ತಿತರ ಕಡೆ ಧಾರಾಕಾರವಾಗಿ ಸುರಿದಿದೆ. ಕಲಬುರ್ಗಿ, ಚಿಂಚೋಳಿ, ಸೇಡಂ ಮೊದಲಾದ ತಾಲೂಕುಗಳಲ್ಲಿ ಜನತೆ ತತ್ತರಿಸಿ ಹೋಗಿದ್ದಾರೆ.

news18-kannada
Updated:September 21, 2020, 10:45 AM IST
ನೋಡ ನೋಡುತ್ತಿದ್ದಂತೆಯೇ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ; ಶವ ಪತ್ತೆ ಹಚ್ಚಿದ ಅಗ್ನಿಶಾಮಕ ಸಿಬ್ಬಂದಿ
ರಕ್ಷಣಾ ಸಿಬ್ಬಂದಿ
  • Share this:
ಕಲಬುರ್ಗಿ(ಸೆ.21): ಗ್ರಾಮದ ಜನ ನೋಡ ನೋಡುತ್ತಿದ್ದಂತೆಯೇ ಎಲ್ಲರ ಕಣ್ಣೆದುರಿಗೇ ಯುವಕ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಹೃದಯ ವಿದ್ರಾವಕ ಘಟನೆ ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ಶ್ರೀಚಂದ ಗ್ರಾಮದ ಬಳಿ ನಡೆದಿದೆ. ಗ್ರಾಮಸ್ಥರು ರಕ್ಷಣೆಗೆಂದು ನೀಡಿದ್ದ ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳುವಷ್ಟರಲ್ಲಿ ಯುವಕ ಕೊಚ್ಚಿ ಹೋಗಿ, ಶವವಾಗಿ ಪತ್ತೆಯಾಗಿದ್ದಾನೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಹಲವಾರು ಅವಾಂತರಗಳಿಗೆ ಕಾರಣವಾಗಿದೆ.  ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಇಂದು ಪತ್ತೆಯಾಗಿದೆ. ಮೃತ ಯುವಕನನ್ನು ಶ್ರೀಚಂದ ಗ್ರಾಮದ ಬೀರಶೆಟ್ಟಿ ಬೋಧನವಾದಿ(28) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಯುವಕ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ. ಆತನ ಶವಕ್ಕಾಗಿ ನಿನ್ನೆ ರಾತ್ರಿಯಿಂದಲೂ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರಿಂದ ಶೋಧ ಕಾರ್ಯ ನಡೆದಿತ್ತು. ಕತ್ತಲಿನ ಕಾರಣಕ್ಕೆ ಶೋಧ ಕಾರ್ಯಕ್ಕೆ ಅಡಚಣೆ ಉಂಟಾಗಿತ್ತು. ಇಂದು ಬೆಳಿಗ್ಗೆ ಯುವಕನ ಶವ ಕೊಚ್ಚಿ ಹೋದ ಸ್ಥಳದ ಸಮೀಪದಲ್ಲಿಯೇ ಸಿಕ್ಕಿದೆ.

ಯುವಕನ ಸಾವಿನ ಸುದ್ದಿ ತಿಳಿದು ಕುಟುಂಬದ ಸದಸ್ಯರ ರೋಧನ ಮುಗಿಲು ಮುಟ್ಟುವಂತೆ ಮಾಡಿದೆ. ಗ್ರಾಮಸ್ಥರೂ ಕಣ್ಣೀರು ಹಾಕಿದ್ದಾರೆ. ಹೊಲದಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿತ್ತು. ನೀರು ರಭಸದಿಂದ ಹರಿಯುತ್ತಿದ್ದರೂ ಹಳ್ಳ ದಾಟಲು ಯುವಕ ಯತ್ನಿಸಿದ್ದ. ಸೇತುವೆ ಮಧ್ಯದಲ್ಲಿದ್ದಾಗ ಬೈಕ್ ಸ್ಕಿಡ್ ಆಗಿತ್ತು. ಬೈಟ್ ಸೈಲೆನ್ಸರ್ ನಲ್ಲಿ ನೀರು ಹೋಗಿದ್ದರಿಂದ ಅದನ್ನು ಎತ್ತಿ ಸ್ಟಾರ್ಟ್ ಮಾಡಲು ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಆದರೂ ಬೈಕ್ ಸ್ಟಾರ್ಟ್ ಮಾಡಲು ಯುವಕ ಯತ್ನಿಸಿದ್ದ.

ಸ್ಥಳಕ್ಕೆ ಧಾವಿಸಿದ್ದ ಗ್ರಾಮಸ್ಥರು ಬೀರಶೆಟ್ಟಿಯ ರಕ್ಷಣೆಗೆ ಮುಂದಾಗಿದ್ದರು. ಆತನ ಬಳಿ ಹಗ್ಗ ಎಸೆದು ಸೊಂಟಕ್ಕೆ ಕಟ್ಟಿಕೊಳ್ಳುವಂತೆ ಹೇಳಿದ್ದರು. ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳುತ್ತಿದ್ದ ಸಂದರ್ಭದಲ್ಲಿಯೇ ಯುವಕ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾನೆ. ಜನ ನೋಡ ನೋಡುತ್ತಿದ್ದಂತೆಯೇ ಯುವಕ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ. ನಾಲ್ಕು ದಿನಗಳ ಹಿಂದೆಯಷ್ಟೇ ಚಿಂಚೋಳಿಯ ಗಣಾಪುರ ಬಳಿ ತಹಶೀಲ್ದಾರ ಪಂಡಿತ ಬಿರಾದಾರ ಎನ್ನುವವರ ಕಾರು ಕೊಚ್ಚಿ ಹೋಗಿತ್ತು. ಮರ ಹತ್ತಿ ಕುಳಿತಿದ್ದ ತಹಶೀಲ್ದಾರರನ್ನು ಅಗ್ನಿ ಶಾಮಕ ದಳ ಸಿಬ್ಬಂದಿ ರಕ್ಷಿಸಿತ್ತು. ಅದರ ಬೆನ್ನ ಹಿಂದೆಯೇ ಆಳಂದ ತಾಲೂಕಿನ ಬೊಮ್ನಳ್ಳಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಜೆಸ್ಕಾಂ ಎಇಇ ಶವವಾಗಿ ಪತ್ತೆಯಾಗಿದ್ದ. ಇದೀಗ ಮತ್ತೊಂದು ಹಳ್ಳದಲ್ಲಿ ಯುವಕ ಕೊಚ್ಚಿ ಹೋಗಿ ಶವವಾಗಿ ಸಿಕ್ಕಿದ್ದಾನೆ. ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Kodagu Rain: ಕೊಡಗಿನಲ್ಲಿ ಇನ್ನೆರಡು ದಿನ ಭಾರೀ ಮಳೆ; ರೆಡ್​ ಅಲರ್ಟ್​ ಘೋಷಣೆ

ಭೀಮಾ ನದಿಯಲ್ಲಿಯೂ ಪ್ರವಾಹ ಭೀತಿ

ಕರ್ನಾಟಕ ಮತ್ತು ಮಹಾರಾಷ್ಟ್ರ ಭಾರಿ ಮಳೆ ಹಿನ್ನೆಲೆಯಲ್ಲಿ ಭೀಮಾ ನದಿಯಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ನಿಂದ 1 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಭೀಮಾ ನದಿಗೆ ಬಿಡಲಾಗುತ್ತಿದೆ. ಘತ್ತರಗಿ ಬಳಿ ಸೇತುವೆ ಮೇಲೆ ಹರೀತಿರೋ ನೀರು. ಪರಿಣಾಮ ಅಫಜಲಪುರ-ಜೇವರ್ಗಿ ರಸ್ತೆ ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಭೀಮಾ ನದಿ ಒಳ ಹರಿಸುವ ಮತ್ತಷ್ಟು ಹೆಚ್ಚಳ ಸಾಧ್ಯತೆಯಿದ್ದು, ನದಿ ಬಳಿ ತೆರಳದಿರುವಂತೆ ನದಿ ಪಾತ್ರದ ಜನತೆಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಜಿಲ್ಲೆಯ ಹಲವೆಡೆ ಕಳೆದ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮುಂದುವರಿದ ಮಳೆ ಅಬ್ಬರಕಲಬುರ್ಗಿ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಕಳೆದ ರಾತ್ರಿ ಕಲಬುರ್ಗಿ ನಗರ ಮತ್ತಿತರ ಕಡೆ ಧಾರಾಕಾರವಾಗಿ ಸುರಿದಿದೆ. ಕಲಬುರ್ಗಿ, ಚಿಂಚೋಳಿ, ಸೇಡಂ ಮೊದಲಾದ ತಾಲೂಕುಗಳಲ್ಲಿ ಜನತೆ ತತ್ತರಿಸಿ ಹೋಗಿದ್ದಾರೆ. ಸೇಡಂನ ವಾಸವದತ್ತಾ ಸಿಮೆಂಟ್ ಕಾರ್ಖಾನೆ ಜಲಾವೃತಗೊಂಡಿದೆ. ಮೊಣಕಾಲು ಮಟ್ಟ ನಿಂತ ನೀರಿನಲ್ಲಿಯೇ ಕಾರ್ಮಿಕರು ಅಡ್ಡಾಡುವಂತಾಗಿದೆ. ಚಿಂಚೋಳಿ ತಾಲೂಕಿನ ಕೊಳ್ಳೂರು ಮತ್ತಿತರ ಕಡೆ ಮನೆಗಳಿಗೆ ನುಗ್ಗಿದ ನೀರು. ಜಿಲ್ಲೆಯ ಹಲವೆಡೆ ರಸ್ತೆಗಳ ಮೇಲೆಯೇ ಮೊಳಕಾಲು ಎತ್ತರಕ್ಕೆ ನೀರು ನಿಂತಿದೆ.ಕಲಬುರ್ಗಿ ನಗರದಲ್ಲಿಯೂ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನುಗ್ಗಿದ ನೀರು. ಮೈದುಂಬಿ ಹರೀತಿರೋ ನದಿ, ಹಳ್ಳ-ಕೊಳ್ಳಗಳು. ನಿತಂರವಾಗಿ ಸುರೀತಿರೋ ಮಳೆಗೆ ಜನತೆ ತತ್ತರಗೊಂಡಿದೆ. ಕೋಟ್ಯಂತರ ರೂಪಾಯಿ ಬೆಳೆ ಹಾನಿ ಸಂಭವಿಸಿದೆ.
Published by: Latha CG
First published: September 21, 2020, 10:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories