news18-kannada Updated:January 28, 2021, 2:12 PM IST
ಸಾಂದರ್ಭಿಕ ಚಿತ್ರ
ಕಲಬುರ್ಗಿ (ಜ. 28): ನಿರ್ಜನ ಪ್ರದೇಶದಲ್ಲಿ ಸಂಚರಿಸುವವರೇ ಈ ಗ್ಯಾಂಗ್ನ ಟಾರ್ಗೆಟ್. ಎದುರಿಗೆ ಸಿಕ್ಕವರ ಮೇಲೆ ಹಲ್ಲೆ ಮಾಡೋದು, ಹೆದರಿಸಿ ದರೋಡೆ ಮಾಡೋದು. ಪ್ರ್ಯಾಕ್ಟೀಸ್ ಗಾಗಿ ಅಮಾಯಕರನ್ನು ಬಡಿಗೆಯಿಂದ ಥಳಿಸೋದು, ಶೋಕಿಗಾಗಿ ತಲ್ವಾರ್ ಹಿಡಿದು ಫೋಟೋ, ವಿಡಿಯೋ ತೆಗೆಸಿಕೊಳ್ಳೋದು, ಅಮಾಯಕರು, ದಾರಿಹೋಕರಿಗೆ ಕಂಟಕವಾಗಿದ್ದ ಗ್ಯಾಂಗ್ ಅನ್ನು ಹೆಡೆಮುರಿ ಕಟ್ಟುವಲ್ಲಿ ಕಲಬುರ್ಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಯಾವುದೀ ಗ್ಯಾಂಗ್ ಅಂತೀರಾ? ಈ ಸ್ಟೋರಿ ನೋಡಿ.
ಹಣಕ್ಕಾಗಿ ದರೋಡೆ ಮಾಡೋದು ಸಾಮಾನ್ಯ. ಆದರೆ, ಈ ಗ್ಯಾಂಗ್ನವರು ಮಾತ್ರ ಹಣದ ಜೊತೆಗೆ ಶೋಕಿಗಾಗಿಯೂ ದರೋಡೆ ಮಾಡ್ತಿದ್ದರು. ಫ್ಯಾಷನ್ ಗಾಗಿ, ಪ್ರ್ಯಾಕ್ಟೀಸ್ ಆಗಲೆಂದು ವ್ಯಕ್ತಿಗಳನ್ನು ತಲೆ ಕೆಳಗು ಮಾಡಿ, ಮನಬಂದಂತೆ ಹಲ್ಲೆ ಮಾಡ್ತಿದ್ದರು. ಕೈಗಳಲ್ಲಿ ದೊಡ್ಡ ಗಾತ್ರದ ತಲ್ವಾರ್ ಹಿಡಿದು ಫೋಸ್ ಸಹ ಕೊಡುತ್ತಿದ್ದರು. ಇದೆಲ್ಲವನ್ನೂ ವಿಡಿಯೋ ಮಾಡಿಕೊಳ್ಳುವ ಚಟ ಇವರಿಗಿತ್ತು. ಇಂಥದ್ದೊಂದು ಖತರ್ನಾಕ್ ಗ್ಯಾಂಗ್ ಆ್ಯಕ್ಟಿವ್ ಆಗಿದೆ ಎನ್ನೋ ಮಾಹಿತಿ ತಿಳಿಯುತ್ತಿದ್ದಂತೆಯೇ ಕಲಬುರ್ಗಿ ಪೊಲೀಸರು ಅದರ ಬೆನ್ನು ಬಿದ್ದು, ಗ್ಯಾಂಗ್ ನ ಸದಸ್ಯರಿಗೆ ಹೆಡೆಮುರಿ ಕಟ್ಟಿದ್ದಾರೆ. ಕಲಬುರ್ಗಿ ನಗರ ರೌಡಿ ನಿಗ್ರಹ ಪಡೆಯಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು ಆರು ಜನ ಖತರ್ನಾಕ್ ದರೋಡೆಕೋರರನ್ನು ಬಂಧಿಸಲಾಗಿದೆ.

ಕಲಬುರ್ಗಿಯಲ್ಲಿ ಅಮಾಯಕರನ್ನು ಥಳಿಸುತ್ತಿರುವ ಗ್ಯಾಂಗ್
ನಿನ್ನೆ ರಾತ್ರಿ ಕಲಬುರ್ಗಿ ನಗರದ ಹೊರವಲಯದಲ್ಲಿ ಆ ಗ್ಯಾಂಗನ್ನು ಬಂಧಿಸಲಾಗಿದೆ. ಬಿಲ್ಡಪ್ ಕೊಡಲು ಅನೇಕರನ್ನು ಥಳಿಸುತ್ತಿದ್ದ ದುರುಳರು, ಅದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದರು. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ವಿಡಿಯೋ ಮಾಡಿಕೊಂಡು, ಫೋಟೋ ಗೆ ಫೋಸ್ ನೀಡುತ್ತಿದ್ದರು. ಇವರ ಬಹುತೇಕ ಕಾರ್ಯಾಚರಣೆ ಕಲಬುರ್ಗಿ ಹೊರವಲಯದ ಬುಲಂದ್ ಪರ್ವೇಜ್ ಕಾಲೋನಿ ಹಾಗೂ ಮಾಲಗತ್ತಿ ಕ್ರಾಸ್ ಗಳಲ್ಲಿ ನಡೀತಿತ್ತು. ಯುವಕನೋರ್ವನನ್ನು ಹಿಗ್ಗಾಮುಗ್ಗಾ ಥಳಿಸಿರೋ ದುಷ್ಕರ್ಮಿಗಳು, ತಲೆ ಕೆಳೆಗೆ ಕೈ ಕಾಲು ಮೇಲೆ ಮಾಡಿ ಹಿಡಿದು ಥಳಿಸಿರೋ ವಿಡಿಯೋವನ್ನು ಶೂಟ್ ಮಾಡಿಕೊಂಡಿದ್ದರು. ಯುವಕನೋರ್ವನನ್ನು ಒಬ್ಬ ಬಡಿಗೆಯಿಂದ ಹೊಡೆಯುತ್ತಿದ್ದರೆ, ಮತ್ತೊಬ್ಬ ಕಾಲಿನಿಂದ ಒದ್ದು ಹಿಂಸಿಸುತ್ತಿರೋದನ್ನೂ ವಿಡಿಯೋ ಮಾಡಲಾಗಿದೆ.
ಇದನ್ನೂ ಓದಿ: ಸಚಿವರಾಗುವ ವಿಶ್ವನಾಥ್ ಆಸೆ ಭಗ್ನ; ಹೈಕೋರ್ಟ್ನ ‘ಅನರ್ಹತೆ’ ತೀರ್ಪು ಎತ್ತಿಹಿಡಿದ ಸುಪ್ರೀಂ
ಮನಸ್ಸಿಗೆ ಬಂದಂತೆ ಹಿಂಸೆ ಮಾಡುತ್ತಿದ್ದ ಈ ಖತರ್ನಾಕ್ ಗ್ಯಾಂಗ್, ದರೋಡೆ, ಲ್ಯಾಂಡ್ ಡೀಲ್ ಕೇಸ್ ಮಾಡುತ್ತಿತ್ತು. ಬಂಧಿತ ಆರೋಪಿಗಳನ್ನು ಮಿರ್ಜಾ ಸಲ್ಮಾನ್, ಮಿರ್ಜಾ ಬೇಗ್, ಮಹಮ್ಮದ್ ರಫೀಕ್, ಶೇಖ್ ವಸೀಂ, ಮೊಹಮ್ಮದ್ ಜುಬೇರ್, ಮಾಜೀದ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಎರಡು ತಲ್ವಾರ್, ಮೂರು ಲಾಂಗ್ ಜಪ್ತಿ ಮಾಡಲಾಗಿದೆ. ಈ ಗ್ಯಾಂಗ್ ನ ಲೀಡರ್ ಸಲ್ಮಾನ್ ಆಗಿದ್ದು, ಈತನ ಮೇಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೆಲ ಪ್ರಕರಣಗಳು ದಾಖಲಾಗಿವೆ. ಅಮಾಯಕರನ್ನು ಟಾರ್ಗೆಟ್ ಮಾಡಿ ಹಲ್ಲೆ ಮಾಡಿ, ಬೆದರಿಸಿ ದರೋಡೆ ಮಾಡುತ್ತಿದ್ದರು. ಸಾರ್ವಜನಿಕರಿಗೆ ಉಪಟಳ ನೀಡ್ತಿದ್ದ ಗ್ಯಾಂಗ್ ನ್ನು ಎಸಿಪಿ ಅಂಶು ಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಅವರೆಲ್ಲರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.
ಬಂಧಿತರೆಲ್ಲರೂ ಬುಲಂದ್ ದರ್ವೇಜ್ ಕಾಲೋನಿಗೆ ಸೇರಿದವರಾಗಿದ್ದಾರೆ. ಫ್ಲಂಬರ್, ಗಾರೆ ಇತ್ಯಾದಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ದರು. ಸಲ್ಮಾನ್ ಪರಿಚಯವಾದ ನಂತರ ದರೋಡೆ ಕೆಲಸವನ್ನೂ ಕಾಯಕವನ್ನಾಗಿಸಿಕೊಂಡಿದ್ದರು. ಖತರ್ನಾಕ್ ಗ್ಯಾಂಗ್ ನ ಲೀಡರ್ ಎನಿಸಿಕೊಂಡಿದ್ದ ಮಿರ್ಜಾ ಸಲ್ಮಾನ್ ಇಮ್ರಾನ್ ಎಂಬುವವನ ಕೊಲೆಗೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ. ತಲೆ ಕೆಳಗು ಮಾಡಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೂ ಯಾರೂ ದೂರು ನೀಡಿಲ್ಲ.
ಲಭ್ಯ ವಿಡಿಯೋಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ತನಿಖೆಯನ್ನು ಮುಂದುವರೆಸಿದ್ದಾರೆ. ದೊಡ್ಡ ಗಾತ್ರದ ತಲ್ವಾರ್ ಗಳನ್ನು ಯಾರು ಮಾಡಿಕೊಟ್ಟಿದ್ದಾರೆ ಎಂಬುದರ ಪರಿಶೀಲನೆಯನ್ನೂ ಮಾಡಲಾಗುತ್ತಿದೆ. ಈ ಕುರಿತು ಕಲಬುರ್ಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
(ವರದಿ - ಶಿವರಾಮ ಅಸುಂಡಿ)
Published by:
Sushma Chakre
First published:
January 28, 2021, 2:12 PM IST