HOME » NEWS » State » KALABURGI KMF EARNED 2 CRORE PROFIT SESR SAKLB

ಕಲಬುರ್ಗಿ ಕೆ.ಎಂ.ಎಫ್. 2 ಕೋಟಿ ಲಾಭ; ಹಾಲಿನ ದರ ಏರಿಸಿ ರೈತರಿಗೆ ಬಂಪರ್ ಕೊಡುಗೆ

ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಎರಡು ಕೋಟಿ ರೂಪಾಯಿ ಆದಾಯ ಗಳಿಸಿರುವುದರಿಂದ, ಅದನ್ನು ರೈತ ಸಮುದಾಯಕ್ಕ ವರ್ಗಾಯಿಸಲು ಒಕ್ಕೂಟ ತೀರ್ಮಾನಿಸಿದೆ

news18-kannada
Updated:January 25, 2021, 7:06 PM IST
ಕಲಬುರ್ಗಿ ಕೆ.ಎಂ.ಎಫ್. 2 ಕೋಟಿ ಲಾಭ;  ಹಾಲಿನ ದರ ಏರಿಸಿ ರೈತರಿಗೆ ಬಂಪರ್ ಕೊಡುಗೆ
ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಎರಡು ಕೋಟಿ ರೂಪಾಯಿ ಆದಾಯ ಗಳಿಸಿರುವುದರಿಂದ, ಅದನ್ನು ರೈತ ಸಮುದಾಯಕ್ಕ ವರ್ಗಾಯಿಸಲು ಒಕ್ಕೂಟ ತೀರ್ಮಾನಿಸಿದೆ
  • Share this:
ಕಲಬುರ್ಗಿ (ಜ. 25): ಭಾರೀ ನಷ್ಟದ ಮುಖ ನೋಡುತ್ತಿದ್ದ ಕಲ್ಯಾಣ ಕರ್ನಟಕದ ಕಲಬುರ್ಗಿ - ಬೀದರ್ - ಯಾದಗಿರಿ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಈ ವರ್ಷ ಲಾಭದತ್ತ ಮುಖ ಮಾಡಿದೆ. ಪ್ರಸಕ್ತ ಆರ್ಥಿಕ ವರ್ಷ 2 ಕೋಟಿ ರೂಪಾಯಿ ಲಾಭ ಗಳಿಸಿದೆ. ಕೇವಲ ಲಾಭ ಗಳಿಸಿದ್ದರೆ ಅಷ್ಟಾಗಿ ಚರ್ಚೆಗೆ ಬರತ್ತಿರಲಿಲ್ಲ. ಬದಲಿಗೆ ಬಂದ ಲಾಭವನ್ನು ರೈತ ಸಮುದಾಯಕ್ಕೆ ವರ್ಗಾಯಿಸುವ ತೀರ್ಮಾನ ಕೈಗೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಕಲಬುರ್ಗಿಯಲ್ಲಿರುವ ಕೆ.ಎಂ.ಎಫ್. ಕಚೇರಿಯಲ್ಲಿ ಇಂದು ನಡೆದ ಮಂಡಳಿ ಸಭೆಯನಲ್ಲಿ ಪ್ರಸಕ್ತ ಹಣಕಾಸು ವರ್ಷದ ಆದಾಯ, ವೆಚ್ಚಗಳ ಪರಿಶೀಲನೆ ಮಾಡಲಾಯಿತು. ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಎರಡು ಕೋಟಿ ರೂಪಾಯಿ ಆದಾಯ ಗಳಿಸಿರುವುದರಿಂದ, ಅದನ್ನು ರೈತ ಸಮುದಾಯಕ್ಕ ವರ್ಗಾಯಿಸಲು ಒಕ್ಕೂಟ ತೀರ್ಮಾನಿಸಿದೆ. ಕೋವಿಡ್ ಸಂದರ್ಭದಲ್ಲಿ ರೈತರ ಪರಿಶ್ರಮದಿಂದ ಹಾಲು ಶೇಖರಣೆಯಲ್ಲಿ  ಯಾವುದೇ ತೊಡಕಾಗಿಲ್ಲ. ಒಕ್ಕೂಟವೂ ಲಾಭ ಗಳಿಸುವಂತಾಗಿದೆ. ಹೀಗಾಗಿ ಇಂದು ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಬಂದ ಲಾಭವನ್ನು ರೈತರಿಗೆ ವರ್ಗಾಯಿಸುವ ತೀರ್ಮಾನ ಕೈಗೊಂಡಿರುವುದಾಗಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ ತಿಳಿಸಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಅವರು,  ಪ್ರತಿ ವರ್ಷ ನಮ್ಮ ಒಕ್ಕೂಟ ನಿರೀಕ್ಷಿತ ಆದಾಯ ಗಳಿಸುತ್ತಿರಲಿಲ್ಲ. ಒಕ್ಕೂಟ ಆರಂಭಗೊಂಡ 25 ವರ್ಷದಲ್ಲಿ ಇದೇ ಪ್ರಥಮ ಬಾರಿಗೆ 2 ಕೋಟಿ ರೂಪಾಯಿ ಲಾಭ ಗಳಿಸಿದೆ. ಹೀಗಾಗಿ ಲಾಭವನ್ನು ರೈತ ಸಮುದಾಯಕ್ಕೆ ವರ್ಗಾಯಿಸಲು ತೀರ್ಮಾನಿಸಲಾಗಿದೆ. ಹಸುವಿನ ಹಾಲಿನ ದರವನ್ನು ಪ್ರತಿ ಲೀಟರ್ ಗೆ 2 ರೂಪಾಯಿ ಹಾಗೂ ಎಮ್ಮೆ ಹಾಲಿನ ದರವನ್ನು ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚುವರಿ ದರ ನೀಡಲು ತೀರ್ಮಾನಿಸಲಾಗಿದೆ. ಸಾಮಾನ್ಯವಾಗಿ ರಾಜ್ಯ ಸರ್ಕಾರ ದರ ಏರಿಕೆ ಮಾಡಿದಾಗ ಮಾತ್ರ ನಾವೂ ಸಹ ದರ ಏರಿಕೆ ಮಾಡುತ್ತಿದ್ದವು. ಆದರೆ, ಈ ಬಾರಿ ಮಾತ್ರ ಒಕ್ಕೂಟವೇ ಸ್ವತಂತ್ರವಾಗಿ ಹಾಲಿನ ದರ ಏರಿಕೆ ನಿರ್ಧಾರ ಕೈಗೊಂಡಿದೆ ಎಂದರು.

ಜನವರಿ ತಿಂಗಳಿನಿಂದ ಮೇ ಅಂತ್ಯದವರೆಗೂ ರೈತರು ಹಾಕುವ ಹಾಲಿಗೆ ಹೆಚ್ಚಿನ ದರ ನೀಡಲು ತೀರ್ಮಾನಿಸಲಾಗಿದೆ. ಬೇಸಿಗೆಯ ಸಂದರ್ಭದಲ್ಲಿ ಹಾಲು ಉತ್ಪಾದನೆಯ ಮೇಲೂ ಒಂದಷ್ಟು ಪರಿಣಾಮ ಬೀರಲಿದೆ. ಇಂತಹ ಸಂದರ್ಭದಲ್ಲಿ ಹಾಲು ಉತ್ಪಾದಕರಿಗೆ ದರ ಏರಿಕೆ ನೆರವಾಗಲಿದೆ. ದರ ಏರಿಕೆಯಿಂದ ಉತ್ತೇಜಿತರಾಗಿ ಹಾಲು ಉತ್ಪಾದನೆಗೆ ರೈತರು ಹಚ್ಚು ಪರಿಶ್ರಮ ಹಾಕಲಿದ್ದಾರೆ ಎನ್ನುವ ವಿಶ್ವಾಸವಿದೆ . ಹಾಲು ದರ ಏರಿಕೆ ಜೊತೆಗೆ ರೈತರ ಖರೀದಿಸುವ ಪಶು ಆಹಾರದ ಮೇಲೆಯೂ ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ ಎಂದರು.

ಇದನ್ನು ಓದಿ: ಮುಗಿಯದ ಖಾತೆ ಕಗ್ಗಂಟು: ವೈದ್ಯಕೀಯ ಖಾತೆ ಪಡೆಯುವಲ್ಲಿ ಸುಧಾಕರ್ ಯಶಸ್ವಿ​; ಮೂವರಿಗೆ ಖಾತೆ ಮರುಹಂಚಿಕೆ

ನಂದಿನಿ ಗೋಲ್ಡ್ ಪಶು ಆಹಾರಕ್ಕೆ ಪ್ರತಿ ಟನ್ ಗೆ 18,900 ರೂಪಾಯಿ ದರ ನಿಗದಿಯಾಗಿದ್ದು, ಒಂದು ಸಾವಿರ ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಹಾಗೆಯೇ ನಂದಿನಿ ಬೈಪಾಸ್ ಪಶು ಆಹಾರದ ದರ ಪ್ರತಿ ಟನ್ ಗೆ 21,800 ದರವಿದ್ದು, ಒಂದು ಸಾವಿರ ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ, ನಂದಿನಿ ಖನಿಜ ಮಿಶ್ರಣ ಪ್ರತಿ ಕೆ.ಜಿ. ಗೆ 25 ರೂಪಾಯಿ ದರವಿದ್ದು, ಪ್ರತಿ ಕೆ.ಜಿ. ಗೆ 10 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ರೈತರು ಹಸಿರು ಮೇವು ಬೆಳೆಯಲು ಮೇವಿನ ಬಿತ್ತನೆ ಕಡ್ಡಿಗಳನ್ನು ಉಚಿತವಾಗಿ ನೀಡಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರೈತರು ಇದರ ಲಾಭ ಪಡೆದು ಬೇಸಿಗೆಯಲ್ಲಿ ಹಾಲಿನ ಕೊರತೆಯನ್ನು ಸರಿದೂಗಿಸಬೇಕೆಂದು  ರೈತ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಸದ್ಯ ಕಲಬುರ್ಗಿ - ಬೀದರ್ - ಯಾದಗಿರಿ ಹಾಲು ಒಕ್ಕೂಟಕ್ಕೆ ನಿತ್ಯ 51 ಸಾವಿರ ಲೀಟರ್ ಹಾಲು ಶೇಖರಣೆಗೊಳ್ಳುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ 28 ಹೆಚ್ಚುವರಿ ಸಂಘಗಳನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಸಂಘಗಳ ಸಂಖ್ಯೆ 460ಕ್ಕೆ ಏರಿಕೆಯಾಗಿದೆ. ಕಲಬುರ್ಗಿ - ಬೀದರ್ - ಯಾದಗಿರಿ ಹಾಲು ಒಕ್ಕೂಟ ಬಂಪರ್ ಕೊಡುಗೆ ನೀಡಿರೋದ್ರಿಂದ ಕಲ್ಯಾಣ ಕರ್ನಾಟಕದ ರೈತರು ಹರ್ಷಗೊಂಡಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by: Seema R
First published: January 25, 2021, 7:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories