ಸಾವಯವ ಕೃಷಿಕನಿಂದ ತನ್ನದೇ ಮಾರುಕಟ್ಟೆ ಸೃಷ್ಟಿ; ಇದು ಕಲಬುರ್ಗಿ ರೈತನ ಯಶೋಗಾಥೆ

Organic Farming: ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹನುಮಂತಪ್ಪ ಬೆಳಗುಂಪಿ ತರಹೇವಾರಿ ಕೃಷಿ ಉತ್ಪನ್ನಗಳನ್ನು ಬೆಳೆಯುತ್ತಾರೆ. ಸಪೋಟ, ಸೀಬೆ, ಸೀತಾ ಫಲ, ಮೋಸಂಬಿ, ಪಪ್ಪಾಯ, ಅಂಜೂರ, ನಿಂಬೆಹಣ್ಣು ಇತ್ಯಾದಿ ಹಣ್ಣುಗಳನ್ನು ಬೆಳೆಯುತ್ತಾರೆ.

ಕಲಬುರ್ಗಿ ರೈತನ ಸಾವಯವ ಉತ್ಪನ್ನಗಳು

ಕಲಬುರ್ಗಿ ರೈತನ ಸಾವಯವ ಉತ್ಪನ್ನಗಳು

  • Share this:
ಕಲಬುರ್ಗಿ (ಫೆ. 6): ರೈತರು ಬೆಳೆಯುವ ಉತ್ಪನ್ನಗಳಿಗೆ ಮಾರುಕಟ್ಟೆಯದ್ದೇ ದೊಡ್ಡ ಸಮಸ್ಯೆ. ದಲ್ಲಾಳಿಗಳ ಹಾವಳಿ ಇತ್ಯಾದಿಗಳಿಂದಾಗಿ ಕೆಲವೊಮ್ಮೆ ರೈತ ಹಾಕಿದ ಬಂಡವಾಳವೂ ವಾಪಾಸ್ ಸಿಗೋದು ಅನುಮಾನ. ಆದರೆ, ಇಲ್ಲೊಬ್ಬ ರೈತರಿದ್ದಾರೆ, ಅವರೇ ಬೆಳೆಯನ್ನು ಬೆಳೆಯುತ್ತಾರೆ, ಅವರೇ ಮಾರಾಟ ಮಾಡುತ್ತಾರೆ. ಅದೂ ಸಹ ಸಂಪೂರ್ಣ ಸಾವಯವ ಉತ್ಪನ್ನಗಳನ್ನೇ ಮಾರಾಟ ಮಾಡುತ್ತಾರೆ. ಹೀಗೆ ಜನರಿಗೆ ಸಾವಯವ ಉತ್ಪನ್ನಗಳನ್ನು ಬೆಳೆದು, ನೇರವಾಗಿ ಗ್ರಾಹಕರಿಗೆ ತಲುಪಿಸೋ ಮೂಲಕ ತಾವೂ ಲಾಭ ಗಳಿಸು್ತಿದ್ದಾರೆ. ಯಾರೀ ರೈತ ಅಂತೀರಾ? ಈ ಸ್ಟೋರಿ ನೋಡಿ...

ಇವರ ಹೆಸರು ಹನುಮಂತಪ್ಪ ಬೆಳಗುಂಪಿ. ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹಸರಗುಂಡಗಿ ನಿವಾಸಿ. ಸ್ನಾತಕೋತ್ತರ ಪದವೀಧರರಾಗಿರೋ ಇವರು ಹಿಂದೆ ನೌಕರಿಯಲ್ಲಿದ್ದವರು. ಕ್ಯಾನ್ಸರ್ ಇತ್ಯಾದಿಗಳ ಕುರಿತು ಜಾಗೃತಿ ಮೂಡಿಸೋ ಕೆಲಸ ಮಾಡ್ತಿದ್ದವರು. ಕ್ಯಾನ್ಸರ್ ಗೆ ನಾವು ತಿನ್ನೋ ಆಹಾರವೂ ಒಂದು ಕಾರಣವಾಗಬಲ್ಲದು ಎಂಬ ಅಂಶ ಅರಿತುಕೊಂಡ ಹನುಮಂತಪ್ಪ ತಮ್ಮ ನೌಕರಿ ಬಿಟ್ಟು ಕೃಷಿ ಕಾಯಕದತ್ತ ಮುಖ ಮಾಡಿದರು. ಸಾಧ್ಯವಾದಷ್ಟು ಜನರಿಗೆ ಸಾವಯವ ಕೃಷಿ ಉತ್ಪನ್ನಗಳನ್ನು ಬೆಳೆದು ಪೂರೈಸೋಣ ಎಂಬ ಸಂಕಲ್ಪದೊಂದಿಗೆ ಕೃಷಿಯಲ್ಲಿ ತೊಡಗಿಕೊಂಡು 8 ವರ್ಷಗಳಾಗಿವೆ.

ಇವರು ತಮ್ಮ ಗ್ರಾಮಕ್ಕೆ ಸಮೀಪದಲ್ಲಿಯೇ ಇರುವ ಹೊಲದಲ್ಲಿ ತರಹೇವಾರಿ ಕೃಷಿ ಉತ್ಪನ್ನಗಳನ್ನು ಬೆಳೆಯುತ್ತಾರೆ. ಸಪೋಟ, ಸೀಬೆ, ಸೀತಾ ಫಲ, ಮೋಸಂಬಿ, ಪಪ್ಪಾಯ, ಅಂಜೂರ, ನಿಂಬೆಹಣ್ಣು ಇತ್ಯಾದಿ ಹಣ್ಣುಗಳನ್ನು ಬೆಳೆಯುತ್ತಾರೆ. ನೂರು ತೆಂಗಿನ ಗಿಡಗಳನ್ನೂ ಹಾಕಿದ್ದಾರೆ. ಜೊತೆಗೆ ತರಕಾರಿ, ಕಬ್ಬು ಇತ್ಯಾದಿಗಳನ್ನೂ ಬೆಳೀತಾರೆ. ಹಣ್ಣಿನ ಗಿಡಗಳ ಮಧ್ಯದಲ್ಲಿಯೇ ಅಲ್ಪಾವಧಿ ಬೆಳೆಗಳನ್ನು ಬೆಳೆದು ಡಬಲ್ ಬೆನಿಫಿಟ್ ತಗೋತಾರೆ.

ಇದನ್ನೂ ಓದಿ: Petrol Price: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ; ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ಹೀಗಿದೆ

ವೈವಿಧ್ಯಮಯ ತರಕಾರಿಗಳನ್ನು ಬೆಳೆಯೋ ಹನುಮಂತಪ್ಪ, ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸೋ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಹೊತ್ತು ಹೊಲದಲ್ಲಿ ಕೆಲಸ ಮಾಡೋ ಹನುಮಂತಪ್ಪ ಮಧ್ಯಾಹ್ನದ ನಂತರ ರಾತ್ರಿವರೆಗೂ ಕಲಬುರ್ಗಿಯಲ್ಲಿ ಮೂರು ಕಡೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಕಲಬುರ್ಗಿ ಸಾರ್ವಜನಿಕ ಉದ್ಯಾನವನ, ಅರಣ್ಯ ಇಲಾಖೆ ಎದುರು ಹಾಗೂ ಐವಾನ್ ಶಾಹಿ ಗೆಸ್ಟ್ ಹೌಸ್ ಎದುರು ಪಾಯಿಂಟ್ ಗಳನ್ನು ಮಾಡಿಕೊಂಡಿದ್ದಾರೆ. ವ್ಯಾನ್ ನಲ್ಲಿ ಕೃಷಿ ಉತ್ಪನ್ನಗಳನ್ನು ತಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ.

'ಕೆಲವೇ ಜನರಿಗಾದರೂ ರೋಗ ಮುಕ್ತ ಸಾವಯವ ಕೃಷಿ ಉತ್ಪನ್ನಗಳನ್ನು ಪೂರೈಸುತ್ತೇನೆ ಅನ್ನೋ ಸಮಾಧಾನ ನನಗಿದೆ. ಇಲ್ಲಿ ಲಾಭಕ್ಕಿಂತ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ನೀಡೋದು ಮುಖ್ಯ. ಅದೇ ಧ್ಯೇಯದೊಂದಿಗೆ ನನ್ನದೇ ಆದ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡಿದ್ದೇನೆ' ಎಂದು ರೈತ ಹನುಮಂತಪ್ಪ ಬೆಳಗುಂಪಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಹಣ್ಣು, ತರಕಾರಿಗಳ ಜೊತೆಗೆ ಇತರೆ ಉತ್ಪನ್ನಗಳನ್ನೂ ಹನುಮಂತಪ್ಪ ಮಾರಾಟ ಮಾಡುತ್ತಾರೆ. ತಮ್ಮ ಹೊಲದಲ್ಲಿ ಬೆಳೆದ ತೊಗರಿಯನ್ನು ತಾವೇ ಯಂತ್ರಕ್ಕೆ ಹಾಕಿ ನೇರವಾಗಿ ಗ್ರಾಹಕರಿಗೆ ಮುಟ್ಟಿಸುತ್ತಾರೆ. ಅಲ್ಲದೆ ಬೇರೆ ರೈತರು ಬೆಳೆದ ಸಾವಯವ ಉತ್ಪನ್ನಗಳನ್ನೂ ಮಾರಾಟ ಮಾಡುತ್ತಾರೆ. ಬೆಳಗುಂಪಿ ತಂದಿಡೋ ಯಾವುದೇ ಉತ್ಪನ್ನಗಳನ್ನಾದ್ರೂ ಗ್ರಾಹಕರು ಕಣ್ಣು ಮುಚ್ಚಿ ಖರೀದಿಸುತ್ತಾರೆ. ಅಷ್ಟರ ಮಟ್ಟಿಗೆ ಹನುಮಂತಪ್ಪನ ಉತ್ಪನ್ನಗಳ ಮೇಲೆ ಗ್ರಾಹಕರಿಗೆ ನಂಬಿಕೆ ಇದೆ. ಎಲ್ಲ ವಸ್ತುಗಳು ಗುಣಮಟ್ಟದಿಂದ ಕೂಡಿರುತ್ತವೆ.

'ಬೇರೆ ಕಡೆ ಸಾವಯವ ಉತ್ಪನ್ನಗಳನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಬೇಕು. ಆದರೆ ಇವರ ಬೆಳಿ ಕಡಿಮೆ ದರದಲ್ಲಿ ಒಳ್ಳೆಯ ಗುಣಮಟ್ಟದ ಉತ್ಪನ್ನಗಳು ಸಿಗುತ್ತವೆ. ಹೀಗಾಗಿ ಹಲವಾರು ದಿನಗಳಿಂದ ಇವರ ಬಳಿಯೇ ವಸ್ತುಗಳನ್ನು ಖರೀದಿಸುತ್ತೇವೆ. ರೈತರು ಈ ರೀತಿ ಮಾಡುವುದರಿಂದ ರೈತರಿಗೂ ಲಾಭವಾಗುತ್ತದೆ, ಗ್ರಾಹಕರಿಗೂ ಕಡಿಮೆ ದರದಲ್ಲಿ ಉತ್ಪನ್ನಗಳು ಸಿಗುತ್ತವೆ. ದಲ್ಲಾಳಿಗಳಿಗೆ ಹಂಚಿ ಹೋಗೋ ಆದಾಯ ರೈತ ಮತ್ತು ಗ್ರಾಹಕರ ನಡುವೆ ಹಂಚಿಕೆಯಾಗುತ್ತದೆ' ಎನ್ನುತ್ತಾರೆ ಗ್ರಾಹಕರು.

ಒಟ್ಟಾರೆ ಹನುಮಂತಪ್ಪ ಮಾರೋ ಹಣ್ಣಿರಲಿ, ತರಕಾರಿ ಇರಲಿ, ಸಿರಿ ಧಾನ್ಯಗಳಿರಲಿ, ಇತರೆ ಸಾವಯವ ಉತ್ಪನ್ನಗಳಾಗಲಿ, ಎಲ್ಲದನ್ನೂ ಗ್ರಾಹಕರು ಪ್ರೀತಿಯಿಂದ ಖರೀದಿಸುತ್ತಿದ್ದಾರೆ. ಕಡಿಮೆ ದರದಲ್ಲಿ ಗುಣಮಟ್ಟದ ವಸ್ತುಗಳು ಸಿಗುತ್ತಿದ್ದು, ಇವುಗಳ ಸೇವನೆಯಿಂದ ಆರೋಗ್ಯವೂ ವೃದ್ಧಿಯಾಗಲಿದೆ. ಹನುಮಂತಪ್ಪ ಮಾದರಿಯನ್ನು ಇತರೆ ರೈತರೂ ಅನುಸರಿಸಿದಲ್ಲಿ ಕೃಷಿಯಲ್ಲಿ ನಷ್ಟ ಅನ್ನೋ ಪ್ರಶ್ನೆಯೇ ಬರೋದಿಲ್ಲ. ಎಲ್ಲ ರೈತರಿಗೂ ಲಾಭದಾಯಕವಾಗಲಿದ್ದು, ಕೃಷಿ ಸಬಲೀಕರಣಕ್ಕೂ ನೆರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

(ವರದಿ - ಶಿವರಾಮ ಅಸುಂಡಿ)
Published by:Sushma Chakre
First published: