ಬೆಂಗಳೂರು(ಡಿ. 09): ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಪ್ರತಿಭಟನೆಗಳ ಸದ್ದು ನಡೆಯುತ್ತಲೇ ಇದೆ. ಕಳೆದ ವಾರ ಮರಾಠಾ ಪ್ರಾಧಿಕಾರ ವಿಚಾರವಾಗಿ ಕರ್ನಾಟಕ ಬಂದ್ ಆಯಿತು. ನಿನ್ನೆ ರೈತರ ವಿಚಾರಕ್ಕೆ ಭಾರತ್ ಬಂದ್ ಆಯಿತು. ಆದರೆ, ಇದು ಇಲ್ಲಿಗೇ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಕೇಂದ್ರದ ಮೂರು ಕೃಷಿ ಕಾಯ್ದೆಗಳು ಹಾಗೂ ರಾಜ್ಯ ಸರ್ಕಾರ ತಂದಿರುವ ಭೂಸುಧಾರಣೆ ಕಾಯ್ದೆ ತಿದ್ದುಪಡಿ, ವಿದ್ಯುಚ್ಛಕ್ತಿ ಕಾಯ್ದೆ ವಿರುದ್ಧ ರಾಜ್ಯದ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಇಂದು ರೈತರಿಂದ ಬಾರುಕೋಲು (ಚಾಟಿ) ಚಳವಳಿ ನಡೆದಿದೆ. ಕೈಯಲ್ಲಿ ಚಾಟಿ ಹಿಡಿದುಕೊಂಡು 10 ಸಾವಿರ ಸಂಖ್ಯೆಯಲ್ಲಿ ರೈತರು ಬೆಂಗಳೂರಿಗೆ ಲಗ್ಗೆ ಹಾಕುತ್ತಿದ್ದಾರೆ. ಇದರ ಜೊತೆಗೆ ಈಗ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕೂಡ ರೈತರ ಹೋರಾಟಕ್ಕೆ ಕೈಜೋಡಿಸಿದೆ. ಸಾವಿರಾರು ಕರವೇ ಕಾರ್ಯಕರ್ತರು ಇಂದು ಬೆಂಗಳೂರಿನಲ್ಲಿ ಬೃಹತ್ ಜಾಥಾ ನಡೆಸುತ್ತಿದ್ಧಾರೆ.
ಕಾರ್ಪೊರೇಷನ್ ವೃತ್ತದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಕರವೇ ಕಾರ್ಯಕರ್ತರು ರಾಜಭವನದವರೆಗೆ ಜಾಥಾ ಹೋಗಲಿದೆ. ಈ ಬಗ್ಗೆ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, ಸರ್ಕಾರದ ಕಾಯ್ದೆಗಳಿಂದ ರೈತರಿಗೆ ಅನ್ಯಾಯವಾಗುತ್ತದೆ. ರೈತ ವಿರೋಧಿ ಯಡಿಯೂರಪ್ಪ ಸರ್ಕಾರಕ್ಕೆ ರಾಜ್ಯದ ಜನರು ಉತ್ತರ ಕೊಡುತ್ತಾರೆ. ಈ ಕಾಯ್ದೆಗಳನ್ನ ವಿರೋಧಿಸಿ ನಾವು ರೈತರಿಗೆ ಬೆಂಬಲವಾಗಿ ನಿಂತಿದ್ದೇವೆ. ಇಂದು 3 ಸಾವಿರ ಕ.ರ.ವೇ. ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಳ್ಳಲಿದ್ಧಾರೆ ಎಂದರು.
ಇದನ್ನೂ ಓದಿ: ಭಾರತ್ ಬಂದ್ ಪಂಜಾಬ್ ರಾಜ್ಯದ ಏಜೆಂಟ್ಗಳ ಪ್ರಾಯೋಜಿತ ಪ್ರತಿಭಟನೆ: ಬಿಜೆಪಿ ಸಂಸದ ಮುನಿಸ್ವಾಮಿ
ನಿನ್ನೆ ಪರಿಷತ್ ಕಲಾಪದಲ್ಲಿ ರಾಜ್ಯ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಿದ ಜೆಡಿಎಸ್ ಪಕ್ಷ ವಿರುದ್ಧ ನಾರಾಯಣ ಗೌಡ ಹರಿಹಾಯ್ದರು. ಜೆಡಿಎಸ್ನವರ ಮತ್ತೊಂದು ಮುಖ ಜನರಿಗೆ ಪರಿಚಯವಾಗಿದೆ. ರೈತರ ಬಗ್ಗೆ ಜೆಡಿಎಸ್ಗೆ ಕಾಳಜಿ ಎಷ್ಟಿದೆ ಎಂಬುದು ಅರ್ಥ ಆಗುತ್ತಿದೆ. ನಿನ್ನೆ ಮಧ್ಯಾಹ್ನದವರೆಗೂ ಜೆಡಿಎಸ್ ಈ ಕಾಯ್ದೆಯನ್ನ ವಿರೋಧಿಸಿತ್ತು. ಸಂಜೆ ವೇಳೆಗೆ ಕಾಯ್ದೆ ಜಾರಿಗೊಳಿಸಲು ಒಪ್ಪಿಗೆ ನೀಡಿದೆ. ಇದರ ಹಿಂದೆ ಏನು ನಡೆದಿದೆ ಎಂದು ಗೊತ್ತಿಲ್ಲ. ಜೆಡಿಎಸ್ ಇಬ್ಬಗೆ ನೀತಿಯನ್ನು ಇದು ತೋರಿಸುತ್ತದೆ ಎಂದು ಕರವೇ ಮುಖ್ಯಸ್ಥರು ಕಿಡಿಕಾರಿದರು.
ಬೆಳಗ್ಗೆ 11ರಿಂದ ಪ್ರತಿಭಟನಾ ರ್ಯಾಲಿ ಹೊರಡುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜಭವನವರೆಗೂ ತೆರಳಿ ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಬರೆದಿರುವ ಪತ್ರವನ್ನು ರಾಜ್ಯಪಾಲರಿಗೆ ನೀಡಲಿದ್ಧಾರೆ.
ಇದನ್ನೂ ಓದಿ: ಕುದಿಯುತ್ತಿರುವ ಚನ್ನಪಟ್ಟಣ ಕಾಂಗ್ರೆಸ್, ಕಾರ್ಯಕರ್ತರು ಫುಲ್ ವೈಲೆಂಟ್; ಡಿ.ಕೆ.ಬ್ರದರ್ಸ್ ಸದ್ಯಕ್ಕೆ ಸೈಲೆಂಟ್!
ಇನ್ನು, ರಾಜ್ಯದ ವಿವಿಧೆಡೆಯಿಂದ ರೈತರು ಬಾರುಕೋರು ಪ್ರತಿಭಟನೆಗಾಗಿ ನಗರಕ್ಕೆ ಆಗಮಿಸುತ್ತಿದ್ದಾರೆ. ಬೆಳಗ್ಗೆಯೇ ಬಹಳಷ್ಟು ಸಂಖ್ಯೆಯಲ್ಲಿ ರೈತರ ಬರಬೇಕಿತ್ತಾದರೂ ಅಲ್ಲಲ್ಲಿ ಪೊಲೀಸರು ತಡೆದಿದ್ದರಿಂದ ರೈತರ ಆಗಮನ ವಿಳಂಬವಾಗಿದೆ ಎಂಬುದು ರೈತ ಮುಖಂಡರ ಹೇಳಿಕೆ. ಮಧ್ಯಾಹ್ನ 12:30ಕ್ಕೆ ಸಾವಿರಾರು ರೈತರು ಫ್ರೀಡಂ ಪಾರ್ಕ್ನಲ್ಲಿ ಸೇರುವ ನಿರೀಕ್ಷೆ ಇದೆ. ಅಲ್ಲಿಂದ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ಧಾರೆ.
ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ತಡೆಯಲು ಹಾಗೂ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬ್ಯಾರಿಕೇಡ್ಗಳನ್ನ ಹಾಕಿ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಸಜ್ಜಾಗಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ