ಸಿಎಲ್​ಪಿ, ವಿಪಕ್ಷ ನಾಯಕ ಸ್ಥಾನ ಒಬ್ಬರಿಗೇ ಬೇಡ; ಅಧಿಕಾರ ಹಂಚಿಕೆಯಾಗಲಿ: ಕೆಹೆಚ್ ಮುನಿಯಪ್ಪ

ಆಯ್ಕೆ ಸಂಬಂಧ ಈಗಾಗಲೇ ಹೈಕಮಾಂಡ್ ರಾಜ್ಯಕ್ಕೆ ವೀಕ್ಷಕರನ್ನ ಕಳಿಸಿತ್ತು. ವೀಕ್ಷಕರ ವರದಿ ಆಧಾರದಲ್ಲಿ ಇಂದು ಯಾರನ್ನು ನೇಮಕ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಬಹುದು. ಪಕ್ಷದ ಹಿತದೃಷ್ಟಿಯಿಂದ ಶೀಘ್ರ ನೇಮಕವಾದರೆ ಒಳಿತು

news18-kannada
Updated:January 21, 2020, 1:09 PM IST
ಸಿಎಲ್​ಪಿ, ವಿಪಕ್ಷ ನಾಯಕ ಸ್ಥಾನ ಒಬ್ಬರಿಗೇ ಬೇಡ; ಅಧಿಕಾರ ಹಂಚಿಕೆಯಾಗಲಿ: ಕೆಹೆಚ್ ಮುನಿಯಪ್ಪ
ಮಾಜಿ ಸಂಸದ ಕೆ.ಎಚ್.ಮುನಿಯಪ್ಪ
  • Share this:
ಬೆಂಗಳೂರು(ಜ. 21): ಕೆಪಿಸಿಸಿ ಅಧ್ಯಕ್ಷ ನೇಮಕ ವಿಚಾರದಲ್ಲಿ ಹೈ ಕಮಾಂಡ್​ ತೋರುತ್ತಿರುವ ವಿಳಂಬ ನೀತಿ ಕಾಂಗ್ರೆಸ್​ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಈಗಾಗಲೇ ಅಧ್ಯಕ್ಷರ ಆಯ್ಕೆಗೆ ಕೆ.ಹೆಚ್.​ ಮುನಿಯಪ್ಪ, ಎಂಬಿ ಪಾಟೀಲ್​, ಡಿಕೆ ಶಿವಕುಮಾರ್​ ಆಕಾಂಕ್ಷಿಯಾಗಿದ್ದು, ಎಲ್ಲರೂ ಸೋನಿಯಾ ಮೇಲೆ ಒತ್ತಡದ ತಂತ್ರ ಹೇರುತ್ತಿದ್ದಾರೆ. ಈ ನಡುವೆ ಗೊಂದಲಕ್ಕೆ ಒಳಗಾಗಿರುವ ಹೈ ಕಮಾಂಡ್​ ಕಾದು ನೋಡುವ ತಂತ್ರ ಅನುಸರಿಸಿದ್ದು, ಇದು ಹುದ್ದೆ ಆಕಾಂಕ್ಷಿಗಳಲ್ಲಿ ಅತೃಪ್ತಿ ಮೂಡಿಸಿದೆ. 

ಈ ಕುರಿತು ಇಂದು ಮಾತನಾಡಿರುವ ಮಾಜಿ ಸಂಸದ ಕೆಎಚ್​ ಮುನಿಯಪ್ಪ, ಆಯ್ಕೆ ಸಂಬಂಧ ಈಗಾಗಲೇ ಹೈಕಮಾಂಡ್ ರಾಜ್ಯಕ್ಕೆ ವೀಕ್ಷಕರನ್ನ ಕಳಿಸಿತ್ತು. ವೀಕ್ಷಕರ ವರದಿ ಆಧಾರದಲ್ಲಿ ಇಂದು ಯಾರನ್ನು ನೇಮಕ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಬಹುದು. ಪಕ್ಷದ ಹಿತದೃಷ್ಟಿಯಿಂದ ಶೀಘ್ರ ನೇಮಕವಾದರೆ ಒಳಿತು ಎಂದಿದ್ದಾರೆ.

ಇನ್ನು ಹುದ್ದೆಗೆ ನಾನು ಕೂಡ  ಆಕಾಂಕ್ಷಿಯಾಗಿದ್ದು, ನನ್ನೊಟ್ಟಿಗೆ ಹಲವು ನಾಯಕರು ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ನಮ್ಮ ಉದ್ದೇಶ ಪಕ್ಷ ಸಂಘಟಿತವಾಗಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂಬುದು ನಮ್ಮ ಅಂತಿಮ ಉದ್ದೇಶ.

ನೇಮಕಾತಿಯಲ್ಲಿ ವಿಳಂಬವಾಗಿರುವುದಕ್ಕೆ ಕಾರಣ ಸೋನಿಯಾ ದೆಹಲಿ ಚುನಾವಣೆಯಲ್ಲಿ  ಬ್ಯುಸಿಯಾಗಿರುವುದಾಗಿದೆ. ಇಂದು ಈ ಬಗ್ಗೆ ಅವರು ತೀರ್ಮಾನಿಸಿ, ಆಯ್ಕೆ ತಿಳಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಸಿಎಲ್​ಪಿ ಮತ್ತು ಪ್ರತಿಪಕ್ಷ ನಾಯಕ ಸ್ಥಾನವನ್ನು ಹಂಚಿಕೆ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದಲ್ಲಿ ಇಂತಹದೊಂದು ಪ್ರಯತ್ನ ಮಾಡಲಾಗಿದೆ. ಪಕ್ಷದಲ್ಲಿ ಹಲವು ಹಿರಿಯರಿದ್ದಾರೆ. ಎರಡನ್ನೂ ಬೇರೆ ಮಾಡಿದರೆ ತಪ್ಪೇನಿಲ್ಲ. ಅಧಿಕಾರ ಹಂಚಿಕೆಯಾಗಬೇಕು. ಇದರಿಂದ ಮತ್ತೊಬ್ಬರಿಗೂ ಅವಕಾಶ ಸಿಕ್ಕಂತೆ ಆಗುತ್ತದೆ. ಹೀಗಿದ್ದಾಗ ಮಾತ್ರ ಪಕ್ಷ ಕಟ್ಟಲು ಸಾಧ್ಯವಾಗುತ್ತದೆ. ಇದೇ ಅಭಿಪ್ರಾಯವನ್ನು ನಾನು ರಾಜ್ಯ ಉಸ್ತುವಾರಿ ವೇಣುಗೋಪಾಲ್​ ಬಳಿ ಕೂಡ ತಿಳಿಸಿದ್ದೇನೆ ಎಂದರು.

ನಾಲ್ವರು ಕಾರ್ಯಾಧ್ಯಕ್ಷರ ನೇಮಕಕ್ಕೆ ಕುರಿತು ಮಾತನಾಡಿದ ಅವರು, ಕಾರ್ಯಾಧ್ಯಕ್ಷ ಹುದ್ದೆಯನ್ನು ಹಿಂದೆಯೂ ಮಾಡಲಾಗಿತ್ತು. ಈಗಲೂ ಒಬ್ಬರು ಕಾರ್ಯಾಧ್ಯಕ್ಷರಿದ್ದಾರೆ. ಎಷ್ಟೇ ಜನ ಕಾರ್ಯಾಧ್ಯಕ್ಷರಿದ್ದರೂ ಅಧ್ಯಕ್ಷರೇ ಮುಖ್ಯವಾಗುತ್ತಾರೆ. ಅಧ್ಯಕ್ಷರಿಗೆ ಎಲ್ಲವನ್ನು ನಿಭಾಯಿಸುವುದು ಕಷ್ಟವಾಗುವ ಹಿನ್ನೆಲೆ ಹೆಚ್ಚಿನ ಕಾರ್ಯಾಧ್ಯಕ್ಷರನ್ನ ಮಾಡಬಹುದು. ಕಾರ್ಯಾಧ್ಯಕ್ಷರಿದ್ದರೆ ಪಕ್ಷ ಸಂಘಟನೆಗೂ ಅನುಕೂಲವಾಗಲಿದೆ. ಇಲ್ಲಿಯವರೆಗೆ ಒಂದೆರಡು ಕಾರ್ಯಾಧ್ಯಕ್ಷ ಹುದ್ದೆ ಇತ್ತು. ಮತ್ತೆ ಇದನ್ನು ಹೊಸದಾಗಿ ಸೃಷ್ಟಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದೇ ರೀತಿ ಸಮನ್ವಯ ಸಮಿತಿ ಕೂಡ ಹಿಂದಿನಿಂದಲೂ ಇದೆ.  ಈ ಸಮಿತಿಯಲ್ಲಿ ಪಕ್ಷದಲ್ಲಿನ ಬೆಳವಣಿಗೆ ಬಗ್ಗೆ ಚರ್ಚಿಸಬಹುದು. ಇದು ಹೊಸದೇನಲ್ಲ  ಮೊದಲಿನಿಂದಲೂ ಇದೆ. ಎಲ್ಲರ ಮಧ್ಯೆ ಹೊಂದಾಣಿಕೆಗೆ ಸಮನ್ವಯ ಸಮಿತಿ ಸಹಾಯ ಮಾಡುವುದರ ಜೊತೆಗೆ, ಎಲ್ಲರ ಭಾವನೆಗಳನ್ನ ಅರ್ಥ ಮಾಡಿಕೊಳ್ಳೋಕೆ ಸಾಧ್ಯವಾಗಲಿದೆ ಎಂದರು.ಇದನ್ನು ಓದಿ: ಪರಮೇಶ್ವರ್​ ಪತ್ರಕ್ಕೆ ವೇಣುಗೋಪಾಲ್​ ಸಿಡಿಮಿಡಿ; ಕೆಪಿಸಿಸಿ ಅಧ್ಯಕ್ಷ ಗಾದಿಯ ಟೆನ್ಷನ್ ಹೆಚ್ಚಳ

ಪಕ್ಷಕ್ಕೆ ಸೇರ್ಪಡನೆಯಾದ ಬಳಿಕ ವಲಸಿಗ, ಮೂಲ ಕಾಂಗ್ರೆಸ್ ಎಂಬ ಅಸಮಾಧಾನ ಇರಬಾರದು. ಪಕ್ಷಕ್ಕೆ ಸೇರಿದ ಮೇಲೆ ಅವರು ನಮ್ಮವರೇ. ಸಿದ್ದರಾಮಯ್ಯ ಕಾಂಗ್ರೆಸ್​ಗೆ ಬಂದು ಈಗಾಗಲೇ  14 ವರ್ಷವಾಗಿದೆ. ಪಕ್ಷದಲ್ಲಿ 40  ವರ್ಷದಿಂದ  ಖರ್ಗೆ, ಹರಿಪ್ರಸಾದ್, ನಾನು ಎಲ್ಲರೂ ಇದ್ದೇವೆ. ಆದರೂ ಕೂಡ ಸಿದ್ದರಾಮಯ್ಯ ಅವರಿಗೆ  ಉತ್ತಮ ಅವಕಾಶ ಕೊಟ್ಟಿದ್ದೇವೆ. ಹೊಸಬರು, ಹಳಬರು ಎಂಬ ಭೇದಭಾವ ಬರಬಾರದು. ಎಲ್ಲರೂ ಸರಿಯಾಗಿ ನಡೆದುಕೊಂಡರೆ ಈ ಅಸಮಾಧಾನ ಬರಲ್ಲ ಎಂದು ಕಿವಿಮಾತು ಹೇಳಿದರು.
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ