Justice Satish Chandra Sharma; ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸತೀಶ್ ಚಂದ್ರ ಶರ್ಮಾ ನೇಮಕ

“ನನ್ನ 18 ವರ್ಷಗಳ ಅನುಭವದಲ್ಲಿ ಹೇಳುವುದಾದರೆ ನ್ಯಾಯಾಧೀಶರ ಕೆಲಸ ಎಂದಿಗೂ ಸುಲಭವಲ್ಲ. ನ್ಯಾಯಾಧೀಶರು ಕಠೋರವಾಗಿರದೆ ಕಟ್ಟುನಿಟ್ಟಾಗಿರಬೇಕು ಎಂದು ನಾನು ನಂಬುತ್ತೇನೆ. ನ್ಯಾಯದಾನಕ್ಕೆ ಹೊರತಾಗಿ ನ್ಯಾಯಾಧೀಶರು ಎಂದಿಗೂ ಯಾರನ್ನೂ ಮೆಚ್ಚಿಸಲು ಹೋಗಬಾರದು ಎಂದು ನಾನು ಅಚಲವಾಗಿ ನಂಬಿದ್ದೇನೆ” ಎಂದು ಓಕಾ ಅವರು ಹೇಳಿದರು.

ನ್ಯಾಯಮೂರ್ತಿಯಾದ ಸತೀಶ್‌ ಚಂದ್ರ ಶರ್ಮಾ

ನ್ಯಾಯಮೂರ್ತಿಯಾದ ಸತೀಶ್‌ ಚಂದ್ರ ಶರ್ಮಾ

 • Share this:
  ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ (Karnataka High Court) ಅತ್ಯಂತ ಹಿರಿಯ ನ್ಯಾಯಮೂರ್ತಿಯಾದ ಸತೀಶ್‌ ಚಂದ್ರ ಶರ್ಮಾ (Justice Satish Chandra Sharma) ಅವರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿದೆ. “ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಭಯ್‌ ಶ್ರೀನಿವಾಸ್‌ ಓಕಾ (Justice Abhay Srinivas Oka) ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದು, ಅವರು ಹುದ್ದೆ ತೆರವು ಮಾಡಿದ ಬಳಿಕ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಲು ಕರ್ನಾಟಕ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾದ ಸತೀಶ್‌ ಚಂದ್ರ ಶರ್ಮಾ ಅವರನ್ನು ಭಾರತ ಸಂವಿಧಾನದ 223 ವಿಧಿಯಡಿ ದೊರೆತಿರುವ ಅಧಿಕಾರ ಬಳಸಿ ರಾಷ್ಟ್ರಪತಿ ನೇಮಕ ಮಾಡಿದ್ದಾರೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

  ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಭಯ್‌ ಶ್ರೀನಿವಾಸ್‌ ಓಕಾ ಅವರು ಆಗಸ್ಟ್‌ 25ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ನ್ಯಾ. ಓಕಾ ಮಾತ್ರವಲ್ಲದೇ ನ್ಯಾ. ಬಿ ವಿ ನಾಗರತ್ನ ಅವರನ್ನೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿದೆ.

  ಆಗಸ್ಟ್‌ 17ರಂದು ಸುಪ್ರೀಂ ಕೋರ್ಟ್‌ ಕೊಲಿಜಿಯಂ ನ್ಯಾಯಮೂರ್ತಿಗಳಾದ ಓಕಾ, ವಿಕ್ರಮ್‌ ನಾಥ್‌, ಜೆ ಕೆ ಮಹೇಶ್ವರಿ, ಹಿಮಾ ಕೊಹ್ಲಿ, ಬಿ ವಿ ನಾಗರತ್ನ, ಸಿ ಟಿ ರವಿಕುಮಾರ್‌, ಎಂ ಎಂ ಸುಂದರೇಶ್‌, ಬೆಲಾ ತ್ರಿವೇದಿ ಹಾಗೂ ಹಿರಿಯ ವಕೀಲ ಪಿ ಎಸ್‌ ನರಸಿಂಹ ಅವರ ಹೆಸರುಗಳನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಿತ್ತು.

  ವಿಶ್ವದ ಬಲಿಷ್ಠ ನ್ಯಾಯಾಲಯದಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದೆ: ಓಕಾ

  “ವಿಶ್ವದ ಬಲಿಷ್ಠ ನ್ಯಾಯಾಲಯದಲ್ಲಿ ಕೆಲಸ ಮಾಡುವ ಅವಕಾಶ ನನಗೆ ಈಗ ದೊರೆತಿದೆ” ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದನೋನ್ನತಿ ಪಡೆದಿರುವ ಕರ್ನಾಟಕ ಹೈಕೋರ್ಟ್‌ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅಭಿಪ್ರಾಯಪಟ್ಟರು.

  ಬೆಂಗಳೂರಿನ ಹೈಕೋರ್ಟ್‌ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ವಕೀಲರ ಪರಿಷತ್‌ ಸಹಯೋಗದಲ್ಲಿ ಹೈಕೋರ್ಟ್‌ ವತಿಯಿಂದ ನ್ಯಾ. ಓಕಾ ಮತ್ತು ನ್ಯಾ. ಬಿ ವಿ ನಾಗರತ್ನ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. “ಕಳೆದ ಹದಿನೆಂಟು ವರ್ಷಗಳಿಂದ ನ್ಯಾಯಮೂರ್ತಿಯಾಗಿರುವ ನಾನು ಪ್ರತಿದಿನವೂ ಒಂದಿಲ್ಲೊಂದು ಹೊಸ ವಿಚಾರ ತಿಳಿದುಕೊಂಡಿದ್ದೇನೆ. ಇದಕ್ಕಾಗಿ ವಕೀಲರ ಪರಿಷತ್‌ಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಈಗ, ವಿಶ್ವದ ಬಲಿಷ್ಠ ನ್ಯಾಯಾಲಯದಲ್ಲಿ ಮೂರೂವರೆ ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡುವ ಅವಕಾಶ ದೊರೆತಿದೆ” ಎಂದು ನ್ಯಾ. ಓಕಾ ಹೇಳಿದರು.

  ಮಹಾರಾಷ್ಟ್ರದ ಥಾಣೆಯ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದಾಗ ಮುಂದೊಂದು ದಿನ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗುತ್ತೇನೆ ಎಂದು ಊಹೆ ಮಾಡಿರಲಿಲ್ಲ ಎಂದ ಓಕಾ ಅವರು “ಅಂತಿಮವಾಗಿ ಇದಕ್ಕೆಲ್ಲವೂ ನಾನು ಅರ್ಹನೇ ಎಂಬುದನ್ನು ಹೇಳುವುದು ವಕೀಲರ ಪರಿಷತ್‌ಗೆ ಬಿಟ್ಟ ವಿಚಾರ. ಅರ್ಹತೆಗಿಂತ ಹೆಚ್ಚಿನದನ್ನು ನಾನು ಪಡೆದಿದ್ದೇನೆ ಎಂದು ವೈಯಕ್ತಿಕವಾಗಿ ನನಗನ್ನಿಸಿದೆ” ಎಂದರು.

  ಸಂಬಂಧ ಪಟ್ಟ ಎಲ್ಲರೂ ಶಕ್ತಿಮೀರಿ ಪ್ರಯತ್ನಿಸಿದರೆ ದೇಶದಲ್ಲಿ ಬಲಿಷ್ಠ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದುವ ಶಕ್ತಿ ಕರ್ನಾಟಕಕ್ಕೆ ಇದೆ. “2021ರ ಅಂತ್ಯದ ವೇಳೆಗೆ ಒಂದೇ ಒಂದು ಐದು ವರ್ಷದ ವಿಚಾರಣಾ ಪ್ರಕರಣ ಬಾಕಿ ಉಳಿಯಬಾರದು ಎಂಬುದನ್ನು ಸಾಧಿಸುವ ನಿರ್ಧಾರ ಮಾಡಿದ್ದೆ. ಕೋವಿಡ್‌ನಿಂದ ಈ ಕನಸು ನನಸಾಗಲಿಲ್ಲ. ಇದು, 2022ರ ಅಂತ್ಯದ ವೇಳೆಗಾದರೂ ಸಾಧ್ಯವಾಗಬೇಕು ಎಂದು ಹೊಸ ನಿರ್ದೇಶನಗಳನ್ನು ನೀಡಿದ್ದೇನೆ” ಎಂದರು.

  ಇದನ್ನು ಓದಿ: Bharat Bandh: ಕೃಷಿ ಕಾನೂನು ವಿರೋಧಿಸಿ ರೈತರ ಪ್ರತಿಭಟನೆ; ಸೆ.25ಕ್ಕೆ ಭಾರತ್ ಬಂದ್​ಗೆ ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ

  “ನನ್ನ 18 ವರ್ಷಗಳ ಅನುಭವದಲ್ಲಿ ಹೇಳುವುದಾದರೆ ನ್ಯಾಯಾಧೀಶರ ಕೆಲಸ ಎಂದಿಗೂ ಸುಲಭವಲ್ಲ. ನ್ಯಾಯಾಧೀಶರು ಕಠೋರವಾಗಿರದೆ ಕಟ್ಟುನಿಟ್ಟಾಗಿರಬೇಕು ಎಂದು ನಾನು ನಂಬುತ್ತೇನೆ. ನ್ಯಾಯದಾನಕ್ಕೆ ಹೊರತಾಗಿ ನ್ಯಾಯಾಧೀಶರು ಎಂದಿಗೂ ಯಾರನ್ನೂ ಮೆಚ್ಚಿಸಲು ಹೋಗಬಾರದು ಎಂದು ನಾನು ಅಚಲವಾಗಿ ನಂಬಿದ್ದೇನೆ” ಎಂದು ಓಕಾ ಅವರು ಹೇಳಿದರು.
  Published by:HR Ramesh
  First published: