Evening Digest : ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು.

Seema.R | news18
Updated:June 6, 2019, 6:16 PM IST
Evening Digest : ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: June 6, 2019, 6:16 PM IST
  • Share this:
1. ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ

ಕನಕದಾಸ,  ಬಸವ ಹಾಗೂ ವಾಲ್ಮೀಕಿ ಸೇರಿದಂತೆ ಇನ್ನಿತರ ಜಯಂತಿಗಳಿಗೆ ರಜೆ ರದ್ದು ಮಾಡುವ ಪ್ರಸ್ತಾಪವನ್ನು ರಾಜ್ಯ ಸಚಿವ ಸಂಪುಟ ಕೈಬಿಟ್ಟಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ಜಯಂತಿ ರಜೆಗೆ ಕಡಿತಗೊಳಿಸುವ ನಿರ್ಧಾರದಿಂದ ಕಾಂಗ್ರೆಸ್​-ಜೆಡಿಎಸ್​ ಸಚಿವರು  ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ರಜೆಗಳನ್ನು ರದ್ದು ಮಾಡದೇ, ಯಥಾವತ್​ ಆಗಿ ಮುಂದುವರೆಸಲಾಗುವುದು. ಆದರೆ, ನಾಲ್ಕನೇ ಶನಿವಾರದಂದು ಸರ್ಕಾರಿ ರಜೆಗೆ ಸಿಎಂ ಸೂಚಿಸಿದ್ದಾರೆ.  ಇದರ ಜೊತೆಗೆ ಅನ್ನಭಾಗ್ಯ ಅಕ್ಕಿ ಪ್ರಮಾಣವನ್ನು ಏರಿಕೆ ಮಾಡಲಾಗುವುದಿಲ್ಲ.  ಸಿ ಮತ್ತು ಡಿ ಗ್ರೂಪ್ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆಯ ವ್ಯವಸ್ಥೆ. ಅದಕ್ಕಾಗಿ ಕರಡು ಕಾನೂನು ಜಾರಿಗೆ ತರಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಬರುವ ಅಧಿವೇಶನದಲ್ಲಿ ಕಾನೂನು ಜಾರಿಗೆ ತರಲಾಗುವುದು. ಸಿಇಟಿ ಮಾದರಿಯಲ್ಲೇ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ನಿರ್ಧರಿಸಲಾಗಿದೆ. ವರ್ಗಾವಣೆಗೆ ಸಿ ಗ್ರೂಪ್ ಗೆ 5 ವರ್ಷ ಡಿ ಗ್ರೂಪ್ ಗೆ 7 ವರ್ಷ ನಿಗದಿ ಮಾಡಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

2. ಚುನಾವಣೆಗೆ ಸಿದ್ದರಾಗಿ; ನಿಖಿಲ್​ ವಿಡಿಯೋ ವೈರಲ್​

"ಯಾವುದೇ ಸಂದರ್ಭದಲ್ಲಿ ಬೇಕಿದ್ದರೂ ಚುನಾವಣೆ ಬರಬಹುದು ಅದಕ್ಕೆ ನೀವು ಸಿದ್ಧರಾಗಿರಿ. ರಾಜ್ಯ ವಿಧಾನಸಭೆ ಚುನಾವಣೆಗೆ ಸನ್ನದ್ಧರಾಗಿ. ರಾಜ್ಯ ಸರ್ಕಾರಕ್ಕೆ ತೊಂದರೆಯಿಲ್ಲ. ಆದರೂ ನಾವೆಲ್ಲರೂ ಚುನಾವಣೆ ಎದುರಿಸಲು ಸಿದ್ಧರಾಗಿರಬೇಕು. ಇಂದು, ನಾಳೆ ಅಥವಾ ವರ್ಷ ಕಳೆದು ಚುನಾವಣೆ ಬರಬಹುದು. ಯಾವುದೇ ಕ್ಷಣದಲ್ಲಿ ಚುನಾವಣೆ ಬಂದರೂ ನಾವು ಅದಕ್ಕೆ ಸಿದ್ಧರಿರಬೇಕು. ಮುಂದಿನ ತಿಂಗಳಿನಿಂದಲೇ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕು," ಎಂದು ಜೆಡಿಎಸ್ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಸೂಚಿಸಿದ್ದಾರೆ. ಈ ವಿಡಿಯೋ ಸುನೀಲ್​ಗೌಡ ದಂಡಿಗಾನಹಳ್ಳಿಯ ಫೇಸ್​ಬುಕ್​ ಪೇಜ್​ನಲ್ಲಿ ವೈರಲ್​ ಆಗಿದೆ

3. ಸಿದ್ದರಾಮಯ್ಯ ತವರಲ್ಲೇ ಇಂಗ್ಲಿಷ್​ ಮೀಡಿಯಂಗೆ ಭಾರೀ ಬೇಡಿಕೆ

ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರ ಕನಸಿನ ಕೂಸಾದ ಇಂಗ್ಲಿಷ್​ ಮಾಧ್ಯಮ ಶಾಲೆ ವಿರೋಧದ ನಡುವೆಯೇ ಪ್ರಸಕ್ತ ವರ್ಷದಿಂದ  ಆರಂಭಗೊಂಡಿದೆ. ಈ ಯೋಜನೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ತವರೂರಿನಲ್ಲಿ ಜನರು ಕನ್ನಡ ಕಲಿಕೆಗಿಂತ ಇಂಗ್ಲಿಷ್​ ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಮೈತ್ರಿ ಸರ್ಕಾರದ ನಾಯಕರ ಭಿನ್ನಾಭಿಪ್ರಾಯದ ನಡುವೆಯೇ ಈ ಯೋಜನೆಗೆ ಚಾಲನೆಯನ್ನು ನೀಡಲಾಗಿದೆ. ಈಗಾಗಲೇ ಒಂದನೇ ತರಗತಿಯಿಂದ ಮಕ್ಕಳು ಆಂಗ್ಲ ಮಾಧ್ಯಮ ಕಲಿಕೆಗೆ ಉತ್ಸಾಹ ಕೂಡ ತೋರಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ತವರು  ಸಿದ್ದರಾಮನಹುಂಡಿಯಲ್ಲಿ ಪೋಷಕರು ಆಂಗ್ಲ ಮಾಧ್ಯಮ ಶಾಲೆಗೆ ಹೆಚ್ಚಿನ ಒಲವು ತೋರಿದ್ದಾರೆ. ಮೈಸೂರಿನಲ್ಲಿ ಒಟ್ಟು 46 ಶಾಲೆಗಳಲ್ಲಿ ಪ್ರಸಕ್ತ ವರ್ಷದಿಂದ ಇಂಗ್ಲಿಷ್​ ಮಾಧ್ಯಮ ಆರಂಭಿಸಲಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮಕ್ಕೆ ದಾಖಲಾಗುತ್ತಿದ್ದಾರೆ. ಅಲ್ಲದೇ, ಜಿಲ್ಲೆಯ 29 ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ದಾಖಲಾತಿಯೇ ನಡೆದಿಲ್ಲ.

4. ರೆಪೋ ದರ ಕಡಿತಗೊಳಿಸಿದ ಆರ್​ಬಿಐಆರ್​ಬಿಐ ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ ಸಾಲವನ್ನು (ರೆಪೋ ದರ) ಶೇ.0.25ರಷ್ಟು ಕಡಿತಗೊಳಿಸಿದೆ. ಪ್ರಸಕ್ತ ವರ್ಷದ ಎರಡನೇ ಮಾಸದ ಹಣಕಾಸು ನೀತಿ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್​ಬಿಐ ಗವರ್ನರ್​ ಶಕ್ತಿಕಾಂತ್​ದಾಸ್​​ ಸಾಲದ ಬಡ್ಡಿದರವನ್ನು ಇಳಿಕೆ ಮಾಡಿರುವ ಕುರಿತು ಪ್ರಕಟಿಸಿದ್ದಾರೆ. ಪ್ರಸಕ್ತ ಬಡ್ಡಿದರ ಶೇ.6ರಷ್ಟಿದ್ದು ಇದನ್ನು ಶೇ.5.75ರಷ್ಟಕ್ಕೆ ಇಳಿಕೆ ಮಾಡಲಾಗಿದೆ. ಸತತ ಮೂರು ದಿನಗಳ ಕಾಲ ಹಣಕಾಸು ನೀತಿ ಸಮಿತಿ ಸಭೆ ನಡೆಸಿದ ಬಳಿಕ ಈ ಆದೇಶ ಹೊರ ಬಿದ್ದಿದೆ. ಕಳೆದ ತನ್ನ ಎರಡು ವರದಿ ಆಧರಿಸಿ ಆರ್​ಬಿಐ 25ಬೇಸಿಸ್​ ಪಾಯಿಂಟ್​ ಇಳಿಕೆ ಮಾಡಿದೆ. ಇದರಿಂದ ಗೃಹ ಸಾಲದ ಇಎಂಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ. ಇದರ ಜೊತೆ ಬ್ಯಾಂಕ್​ ವಾಹಿವಾಟಿನ NEFT, RTGS ಶುಲ್ಕ ರದ್ದುಗೊಳಿಲಾಗಿದೆ.

5. ಮೋದಿ ಸಂಪುಟ ಎಂಟು ಸಮಿತಿಗಳಲ್ಲಿ ಅಮಿತ್​ ಶಾಗೆ ಸ್ಥಾನ

ಮೋದಿ ನೇತೃತ್ವದ ಎರಡನೇ ಅವಧಿ ಸರ್ಕಾರದಲ್ಲಿ ಬುಧವಾರ ಎಂಟು ಕೇಂದ್ರ ಸಂಪುಟ ಸಮಿತಿಗಳನ್ನು ರಚನೆ ಮಾಡಲಾಗಿದೆ. ಈ ಎಂಟು ಸಮಿತಿಗಳಲ್ಲಿ ಅಮಿತ್ ಶಾ ಪ್ರತಿನಿಧಿಗಳಾದ ಏಕೈಕ ಸಚಿವರಾಗಿದ್ದಾರೆ. ಬುಧವಾರ ಸರ್ಕಾರ ಎಂಟು ಪ್ರಮುಖ ಸಂಪುಟ ಸಮಿತಿಗಳನ್ನು ಪುನಾರಚನೆ ಮಾಡಿದ್ದು, ಪ್ರಧಾನಿ ಮೋದಿ ಅವರು ಎಂಟರಲ್ಲಿ ಆರು ಸಮಿತಿಗಳ ಮುಖ್ಯಸ್ಥರಾಗಿದ್ದಾರೆ. ಅಮಿತ್​ ಶಾ ಅವರು ಎಲ್ಲ ಎಂಟು ಸಮಿತಿಗಳ ಭಾಗವಾಗಿದ್ದರೆ ರಕ್ಷಣಾ ಸಚಿವ ರಾಜನಾಥ ಸಿಂಗ್​ ಅವರು ಆರರಲ್ಲಿ ಪ್ರತಿನಿಧಿಗಳಾಗಿದ್ದಾರೆ. ಸಚಿವ ಸಂಪುಟ ನೇಮಕಾತಿ ಸಮಿತಿ, ವಸತಿ ಸಂಪುಟ ಸಮಿತಿ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ, ರಾಜಕೀಯ ವ್ಯವಹಾರ ಸಂಪುಟ ಸಮಿತಿ, ರಕ್ಷಣಾ ಸಂಪುಟ ಸಮಿತಿ, ಹೂಡಿಕೆ ಮತ್ತು ಅಭಿವೃದ್ಧಿ ಸಂಪುಟ ಸಮಿತಿ ಹಾಗೂ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಸಂಪುಟ ಸಮಿತಿಗಳನ್ನು ರಚನೆ ಮಾಡಲಾಗಿದೆ.

6. ರಾಜ್ಯ ಸಿಬಿಐಗಿದ್ದ ನಿರ್ಬಂಧ ತೆರವು ಮಾಡಿದ ಜಗನ್​

ಮೋದಿ ಸರ್ಕಾರಕ್ಕೆ ಸೆಡ್ಡು ಹೊಡೆದು ರಾಜ್ಯಕ್ಕೆ ಸಿಬಿಐ ಪ್ರವೇಶ ನಿರ್ಬಂಧಿಸಿದ್ದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆದೇಶವನ್ನು ನೂತನ ಸಿಎಂ ಜಗನ್​ಮೋಹನ್​ ಹಿಂಪಡೆದಿದ್ದಾರೆ. ಕೇಂದ್ರ ಸರ್ಕಾರ ತನ್ನ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನು ಮುಂದೆ ಅನುಮತಿಯಿಲ್ಲದೇ ಸಿಬಿಐ ತನಿಖೆಗೆ ಮುಂದಾಗಬಾರದು ಎಂದು ಚಂದ್ರಬಾಬು ನಾಯ್ಡು ಆದೇಶಿಸಿದ್ದರು. ಈ ಹಿನ್ನೆಲೆ ದೆಹಲಿ ವಿಶೇಷ ಪೊಲೀಸ್​ ಸ್ಥಾಪನೆ​ ಕಾಯ್ದೆ-1964ರ ಪ್ರಕಾರ ರಾಜ್ಯದಲ್ಲಿ ಸಿಬಿಐಗೆ ಇದ್ದ ಸಾಮಾನ್ಯ ಸಮ್ಮತಿಯನ್ನು ಹಿಂಪಡೆದಿದ್ದರು. ಆದರೆ ಈಗ ಚಂದ್ರಬಾಬು ನಾಯ್ಡು ವಿಧಿಸಿದ್ದ ಈ ಆದೇಶವನ್ನು ಈಗ ಸಿಎಂ ಜಗನ್​ಮೋಹನ್​ ಹಿಂಪಡೆದಿದ್ದಾರೆ. ಈ ಮೂಲಕ ಸಿಬಿಐ ಪ್ರವೇಶಕ್ಕಿದ್ದ ತಡೆ ತೆರವಾಗಿದೆ.

7. ರೈತರಿಗೆ ಪರಿಹಾರ ನೀಡದ ಸರ್ಕಾರದ ವಿರುದ್ಧ ಹೆಬ್ಬಾಳ್ಕರ್​ ಕಿಡಿ

ಮೈತ್ರಿ ಸರ್ಕಾರದ ನಿರ್ಧಾರಗಳಿಗೆ ಕಾಂಗ್ರೆಸ್​ ಪಕ್ಷದ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಿಂದಾಲ್​ ನಿರ್ಧಾರಕ್ಕೆ ಕೈ ಮುಖಂಡ ಎಚ್​.ಕೆ ಪಾಟೀಲ್​ ವಿರೋಧ ವ್ಯಕ್ತಪಡಿಸಿದರೆ, ಎಸ್​ಟಿಪಿ ಘಟಕ (ಕೊಳಚೆ ನೀರು ಸಂಸ್ಕರಣಾ ಘಟಕ) ವಿಚಾರದಲ್ಲಿ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸರ್ಕಾರದ ವಿರುದ್ಧ​ ಗರಂ ಆಗಿದ್ದಾರೆ. ಹಲಗಾ ಗ್ರಾಮದ ಬಳಿ ಎಸ್​ಟಿಪಿ ಘಟಕ ಸ್ಥಾಪನೆಗೆ ರೈತರಿಂದ ಭೂಮಿ ಪಡೆದು ಪರಿಹಾರ ಕೊಡದ ಜಿಲ್ಲಾಡಳಿತ ಕ್ರಮದ ವಿರುದ್ಧ  ಶಾಸಕಿ ಲಕ್ಷೀ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ. "ಎಸ್​ಟಿಪಿ ಘಟಕ ಸ್ಥಾಪನೆಗೆ ಈಗಾಗಲೇ ಜಿಲ್ಲಾಡಳಿತ ಬಲವಂತವಾಗಿ ರೈತರ ಭೂಮಿ ಪಡೆದಿದೆ. ಹಲಗಾ ಗ್ರಾಮದ ರೈತರಿಗೆ ಅನ್ಯಾಯ‌ ಆಗಿದೆ. ರೈತರ ಕಷ್ಟದಲ್ಲಿ ನಾನು ಭಾಗಿಯಾಗುವುದು ನನ್ನ ಧರ್ಮ, ಎಕರೆಗೆ 3 ಲಕ್ಷ ಕೊಡಬಹುದು ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ರೈತರಿಗೆ ಜಿಲ್ಲಾಡಳಿತ ಭರವಸೆ ನೀಡಿಲ್ಲ. ಜಿಲ್ಲಾಡಳಿತಕ್ಕೆ ಯಾವುದೇ ಹೃದಯ ಇಲ್ಲ," ಎಂದು ಕಿಡಿಕಾರಿದ್ದಾರೆ

8. ತೆಲಂಗಾಣ ಕಾಂಗ್ರೆಸ್​ಗೆ ಭಾರೀ ಹಿನ್ನಡೆ

ತೆಲಂಗಾಣದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿ ಪಡೆಗೆ ಭಾರೀ ಹಿನ್ನಡೆಯಾಗಿದೆ. ಆಡಳಿತರೂಢ ಟಿಆರ್​​ಎಸ್​​ಗೆ ಕಾಂಗ್ರೆಸ್ಸಿನ 12 ಮಂದಿ ಶಾಸಕರು ಶೀಘ್ರದಲ್ಲೇ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಪಕ್ಷ ತೊರೆದಿರುವ ಶಾಸಕರು ಸ್ಪೀಕರ್​​ಗೆ ಜತೆಗೆ ಚರ್ಚಿಸಿದ್ದು, ಟಿಆರ್​ಎಸ್​ನೊಂದಿಗೆ ತಮ್ಮನ್ನು ವಿಲೀನ ಮಾಡುವಂತೆ ಮನವಿ ಮಾಡಿದ್ದಾರೆ. ಕಳೆದ ವರ್ಷ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ 119 ಸದಸ್ಯಬಲದ ಪೈಕಿ ಟಿಆರ್​ಎಸ್​​ 88 ಸ್ಥಾನ ಗೆದ್ದುಕೊಂಡಿತ್ತು. ಕಾಂಗ್ರೆಸ್​​ 19 ಸೀಟುಗಳನ್ನು ಗೆದ್ದುಕೊಂಡಿದ್ದು, ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ವಿಜಯ ಪತಾಕೆ ಹಾರಿಸಿತ್ತು. ಅಲ್ಲದೇ ಅಸಾದುದ್ದಿನ್‌ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಏಳು ಮಂದಿ ಶಾಸಕರನ್ನು ಹೊಂದಿತ್ತು

9. ಒಂಟಿ ಸಲಗ ಅಪಾಯ

‘ಆನೆ ನಡೇದಿದ್ದೇ ದಾರಿ. ಆನೆಗಳು ಗುಂಪಿನಲ್ಲಿದ್ದರೆ ಏನು ಅಪಾಯವಿಲ್ಲ. ಆದರೆ ಒಂಟಿ ಸಲಗವೇ ಡೇಂಜರ್​’- ಹೀಗೊಂದು ಮಾತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಯಿಯಿಂದ ಉದುರಿತ್ತು! ಯಾವುದೋ ಅತೃಪ್ತ ಶಾಸಕರನ್ನು ಉದ್ದೇಶಿಸಿ ಸಿದ್ದರಾಮಯ್ಯ ಈ ಮಾತನ್ನು ಹೇಳಿಲ್ಲ. ಅವರು ಹೀಗೆ ಹೇಳಲು ಕಾರಣ, ‘ಸಲಗ’ ಸಿನಿಮಾ! ದುನಿಯಾ ವಿಜಯ್ ನಟಿಸಿ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ‘ಸಲಗ’ ಚಿತ್ರದ ಮುಹೂರ್ತ ಇಂದು ನೆರವೇರಿದೆ. ಈ ಚಿತ್ರಕ್ಕೆ ಅತಿಥಿಯಾಗಿ ಕಿಚ್ಚ ಸುದೀಪ್, ಸಂಸದ ಡಿಕೆ ಸುರೇಶ್, ರಾಘವೇಂದ್ರ ರಾಜಕುಮಾರ್, ನಟ ಧನಂಜಯ್ ಸೇರಿ ಹಲವರು ಪಾಲ್ಗೊಂಡಿದ್ದರು. ಈ ವೇಳೆ ಸಿದ್ದರಾಮಯ್ಯ ಚಿತ್ರಕ್ಕೆ ಕ್ಲ್ಯಾಪ್​ ಮಾಡಿ, ಶುಭಕೋರಿದರು.

10. ವಿಶ್ವಕಪ್ 2019: ವಿಂಡೀಸ್ ಮಾರಕ ಬೌಲಿಂಗ್ ದಾಳಿ

ನಾಟಿಂಗ್​​ಹ್ಯಾಮ್​​ನ ಟ್ರೆಂಟ್​ಬ್ರಿಡ್ಜ್​​ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್​ನ ಹತ್ತನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ನ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿದೆ. ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಇಳಿದ ಕಾಂಗರೂ ಪಡೆ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇತ್ತೀಚಿನ ವರದಿ ಬಂದಾಗ ಆಸ್ಟ್ರೇಲಿಯಾ ಸ್ಕೋರ್ 200ರ ಅಂಚಿನಲ್ಲಿದ್ದು, 6 ಪ್ರಮುಖ ವಿಕೆಟ್ ಕಳೆದುಕೊಂಡಿದೆ.
First published: June 6, 2019, 6:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading