Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:June 3, 2019, 6:49 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: June 3, 2019, 6:49 PM IST
  • Share this:
1. ಜೂ.1ರಿಂದ ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಗ್ರಾಮ ವಾಸ್ತವ್ಯವನ್ನು ಜೂನ್ 21ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನಲ್ಲಿ ಹಾಗೂ ಜೂನ್ 22 ರಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ನಡೆಸಲಿದ್ದಾರೆ. ಅದರಂತೆಯೇ ಜುಲೈ 5 ಹಾಗೂ 6 ರಂದು ಬೀದರ್ ಜಿಲ್ಲೆ ಬಸವಕಲ್ಯಾಣ ಹಾಗೂ ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕುಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ. ಮುಖ್ಯಮಂತ್ರಿಗಳು ತಾವು ಪ್ರಾರಂಭಿಸಲು ಉದ್ದೇಶಿಸಿರುವ ಗ್ರಾಮ ವಾಸ್ತವ್ಯದ ಕುರಿತು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು. ಈ ಗ್ರಾಮ ವಾಸ್ತವ್ಯದ ಸ್ವರೂಪ ಹೇಗಿರಬೇಕು ಎಂಬ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

 

2. ಮತ್ತೊಂದು ಅವಧಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ದೋವಲ್​ ಮುಂದುವರಿಕೆ

ರಾಷ್ಟ್ರೀಯ ಭದ್ರತಾ ವಲಯದಲ್ಲಿ ಅಜಿತ್ ದೋವಲ್​ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಕೇಂದ್ರ ಸರ್ಕಾರ ಅವರನ್ನು ಕೇಂದ್ರ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನದೊಂದಿಗೆ ಮತ್ತೆ ಐದು ವರ್ಷಗಳ ಕಾಲ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮುಂದುವರೆಸಲಾಗಿದೆ. 2014ರಲ್ಲಿ ಮೋದಿ ಸರ್ಕಾರದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕವಾಗಿದ್ದ ಅಜಿತ್ ದೋವಲ್​ ಅವರ ನೇತೃತ್ವದಲ್ಲಿ 2016ರಲ್ಲಿ ಉರಿ ಉಗ್ರರ ದಾಳಿಗೆ ಪ್ರತಿಯಾಗಿ ಯಶಸ್ವಿಯಾಗಿ ಸರ್ಜಿಕಲ್​ ಸ್ಟ್ರೈಕ್​ ನಡೆಸಿದ್ದರು. ಮತ್ತು ಬಾಲಾಕೋಟ್ ​ಏರ್​ ಸ್ಟ್ರೈಕ್​ ಕೂಡ ಇವರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನಡೆಸಿದ್ದರು.

3.ಸಾಲುಮರದ ತಿಮಕ್ಕನ ಭೇಟಿ ಬಳಿಕ ಮರ ಕಡಿಯದಂತೆ ಸಿಎಂ ಸೂಚನೆ

ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ರಸ್ತೆ ಬದಿಯ ಮರಗಳನ್ನು ಕಡಿಯದಂತೆ ಮನವಿ‌ ಮಾಡಿದ್ದಾರೆ. ಬಾಗೇಪಲ್ಲಿ- ಹಲಗೂರು ಮಾರ್ಗದಲ್ಲಿ ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದಲ್ಲಿ ರಸ್ತೆ ಬದಿಯ ಮರಗಳನ್ನು ಕಡಿಯಲು ಮುಂದಾಗಿದ್ದಾರೆ ಎಂದು ಸಾಲುಮರದ ತಿಮ್ಮಕ್ಕೆ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.  ಸಿಎಂ ಭೇಟಿ ಬಳಿಕ ಮಾತನಾಡಿದ ಸಾಲುಮರದ ತಿಮ್ಮಕ್ಕ, "ರಸ್ತೆಗಾಗಿ ಮರ ಕಡಿಯುತ್ತಿದ್ದಾರೆ.  ಮರ ಕಡಿಯದಂತೆ ಮನವಿ‌ ಮಾಡಿದ್ದೇನೆ. ಸಿಎಂ ಮತ್ತು ಡಿಸಿಎಂ ಪರಮೇಶ್ವರ್ ಅವರು ಮರ ಕಡಿಯುವುದಿಲ್ಲ ಎಂದು ಮಾತು ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಮರ ಕಡಿಯಬಾರದು. ಒಂದು ವೇಳೆ ಮರ ಕಡಿಯಲು ಮುಂದಾದರೆ, ನಾನು ಹಗಲು-ರಾತ್ರಿ ಮರಗಳ ಕೆಳಗೆ ಕುಳಿತು ಪ್ರತಿಭಟನೆ ಮಾಡುತ್ತೇನೆ" ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು4.ಸಂಪರ್ಕ ಕಳೆದುಕೊಂಡ ಭಾರತೀಯ ವಾಯುಪಡೆ ವಿಮಾನ

ಭಾರತೀಯ ವಾಯುಪಡೆಯ ವಿಮಾನವೊಂದ ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿತಗೊಂಡಿದ್ದು, ಆತಂಕ ಸೃಷ್ಟಿಯಾಗಿದೆ. ಸೇನಾ ಸಾಗಣೆ ಏರ್​ಕ್ರಾಫ್ಟ್​ ಆನ್​ಟೋನೊವ್​ ಎನ್​ 32 ನಾಪತ್ತೆಯಾದ ವಿಮಾನ. ವಿಮಾನದಲ್ಲಿ ಒಟ್ಟು 13 ಮಂದಿ ಪಯಣಿಸುತ್ತಿದ್ದು,  8 ಮಂದಿ ಸಿಬ್ಬಂದಿ ಹಾಗೂ 5 ಜನ ಪ್ರಯಾಣಿಕರಿದ್ದರು. ವಿಮಾನದ ಸಂಪರ್ಕಕ್ಕಾಗಿ ವಾಯು ಪಡೆ ಸಂಪರ್ಕಿಸುತ್ತಿದೆ. ಅಸ್ಸಾಂನ ಜೊರಾತ್​ನಿಂದ 12.25ಕ್ಕೆ ಟೇಕಾಫ್​ ಆಗಿದ್ದ ವಿಮಾನ ಮಧ್ಯಾಹ್ನ 1 ಗಂಟೆ ಬಳಿಕ ಸಂಪರ್ಕ ಕಳೆದುಕೊಂಡಿದೆ. ಈ ವಿಮಾನ ಅಸ್ಸಾಂನಿಂದ ಅರುಣಾಚಲ ಪ್ರದೇಶದ ಮೆಚುಕಾಗೆ ಹಾರಾಟ ನಡೆಸಿತು.  ಸುಧಾರಿತ ವಿಮಾನ ಇಳಿಯುವ ಜಾಗ ಹೊಂದಿರುವ ಮೆಚುಕಾ ಚೀನಾ ಗಡಿ ಬಳಿ ಇದೆ

5.ಇನ್ಮುಂದೆ ಮಹಿಳೆಯರಿಗೆ ದೆಹಲಿ ಮೆಟ್ರೋ, ಬಸ್​ನಲ್ಲಿ ಉಚಿತ ಸಂಚಾರ

2020ರಲ್ಲಿ ನಡೆಯುವ ದೆಹಲಿ ವಿಧಾನಸಭೆ ಚುನಾವಣೆಗೆ ಆಡಳಿತ ಪಕ್ಷವಾದ ಆಮ್​ ಆದ್ಮಿ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದೆ. ರಾಜ್ಯದ ಮಹಿಳೆಯರು ದೆಹಲಿ ಮೆಟ್ರೋ, ಸಾರಿಗೆ ಹಾಗೂ ಕ್ಲಸ್ಟರ್​ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಈ ಯೋಜನೆ ಘೋಷಿಸುವ ಸುಳಿವನ್ನು ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಶನಿವಾರ ನಡೆದ ಸಭೆಯಲ್ಲಿ ನೀಡಿದ್ದರು. ಇಂದು ಆ ಯೋಜನೆ ಘೋಷಿಸಿದ ಅವರು, ಮಹಿಳೆಯರ ಸುರಕ್ಷಿತ ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಿಕೊಳ್ಳುವ ಉದ್ದೇಶದೊಂದಿಗೆ ದೆಹಲಿ ಮೆಟ್ರೋ ಮತ್ತು ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದರು

6. ಏರ್​ಪೋರ್ಟ್​ ಸಂಪರ್ಕ ಕಲ್ಪಿಸಲು ಹೊಸ ಮಾರ್ಗದ ಸರ್ವೆಗೆ ಟೆಂಡರ್​

ಬೆಂಗಳೂರು ಅಂತಾರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣ ತಲುಪಲು ಹಲವು ಗಂಟೆಗಳ ಸಮಯವೇ ಬೇಕು. ಇದಕ್ಕೆ ಕಾರಣ ಅತಿಯಾದ ಸಂಚಾರ ದಟ್ಟಣೆ. ಇನ್ನು ನಾಲ್ಕು ವರ್ಷ ಕಳೆದರೆ ಈ ಸಮಸ್ಯೆಗೆ ಸ್ವಲ್ಪ ಮಟ್ಟಿನ ಮುಕ್ತಿ ದೊರಕಲಿದೆ. ಅದಕ್ಕೆ ಕಾರಣ ನಮ್ಮ ಮೆಟ್ರೋ. ಹೌದು, ದಕ್ಷಿಣ ಬೆಂಗಳೂರು ಹಾಗೂ ಪೂರ್ವ ಬೆಂಗಳೂರಿನ ಜನತೆ ಇನ್ನು 4 ವರ್ಷಗಳ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಹಳ ಬೇಗನೇ ಸೇರಬಹುದು. ಅದಕ್ಕಾಗಿ ನಮ್ಮ ಮೆಟ್ರೋ ತನ್ನ ಫೇಸ್ 2ಬಿ ಏರ್​​ಪೋರ್ಟ್ ಮೆಟ್ರೋ ಲೈನ್ ಜೋಡಣೆಯನ್ನು ಬದಲಾಯಿಸಿದೆ. ಈ ಮಾರ್ಗದಲ್ಲಿ ಮೆಟ್ರೋ ರೈಲು ಮಾರ್ಗ ನಿರ್ಮಾಣ ಸಾಧ್ಯತೆ ಬಗ್ಗೆ ಟೆಕ್ನಿಕಲ್ ಸರ್ವೆ ನಡೆಸಲು ನಮ್ಮ ಮೆಟ್ರೋ ಟೆಂಡರ್ ಕೂಡ ಕರೆದಿದೆ

7. ಸ್ಥಳೀಯ ಸಂಸ್ಥೆ ಚುನಾವಣೆ: ಬಿಎಸ್​ವೈ ತವರಲ್ಲಿ ಕಾಂಗ್ರೆಸ್​ ಮುನ್ನಡೆ

ಲೋಕಸಭೆಯಲ್ಲಿ ಬಿಜೆಪಿಗೆ ಅಧಿಕಾರ ಕೊಟ್ಟ ಮತದಾರರು,  ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಾತ್ರ ಕೈಗೆ ಜೈಕಾರ ಹೇಳಿದ್ದಾರೆ. ಈಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ತವರು ಕ್ಷೇತ್ರವಾದ ಶಿವಮೊಗ್ಗದಲ್ಲಿ ಕೂಡ ಕಾಂಗ್ರೆಸ್​​ಗೆ  ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ನೀಡುವ ಮೂಲಕ ಮತದಾರರು ಕಮಲ ಪಾಳೆಯಕ್ಕೆ ತೀವ್ರ ನಿರಾಶೆ  ಮೂಡಿಸಿದ್ದಾರೆ. ಜಿಲ್ಲೆಯ ಸಾಗರ ನಗರಸಭೆಯ 31 ವಾರ್ಡ್, ಶಿಕಾರಿಪುರ ಪುರಸಭೆಯ 23 ವಾರ್ಡ್, ಹೊಸನಗರ ಪಟ್ಟಣ ಪಂಚಾಯಿತಿ 11 ಹಾಗೂ ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯ 17 ವಾರ್ಡ್, ಸೊರಬ 12 ಹಾಗೂ ಹೊಸನಗರದ 11 ವಾರ್ಡ್​ ಸೇರಿದಂತೆ ಒಟ್ಟು 105 ವಾರ್ಡ್​ಗಳಿಗೆ ಜೂನ್​.1 ರಂದು ಚುನಾವಣೆ ನಡೆದಿತ್ತು. ಈ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು ಎಲ್ಲೆಡೆ ಕಾಂಗ್ರೆಸ್​ ಮುನ್ನಡೆ ಕಾಯ್ಡುಕೊಂಡಿದೆ.

8. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್​.ವಿಶ್ವನಾಥ್​ ರಾಜೀನಾಮೆ?

ಕೆಆರ್ ನಗರದ ಸ್ಥಳೀಯ ಸಂಸ್ಥೆ ಚುನಾವಣೆಯ ವಿಚಾರದಲ್ಲಿ ಸಚಿವ ಸಾ.ರಾ. ಮಹೇಶ್ ವಿರುದ್ಧ ಟೀಕೆ ಮಾಡಿದ್ದ ಹೆಚ್. ವಿಶ್ವನಾಥ್ ಅವರು ನಾಳೆ ಬೆಳಗ್ಗೆ 11ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದಾರೆ. ಮೂಲಗಳ ಪ್ರಕಾರ, ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷರ ಲೆಟರ್ ಹೆಡ್ ಬದಲು ಸಾಮಾನ್ಯ ಶಾಸಕರ ಲೆಟರ್​ಹೆಡ್​ನಲ್ಲಿ ಪತ್ರಿಕಾಗೋಷ್ಠಿಗೆ ಆಹ್ವಾನ ಕೊಟ್ಟಿರುವುದು ಅವರ ರಾಜೀನಾಮೆ ವದಂತಿಗೆ ಇಂಬುಕೊಡುವಂತಿದೆ. ಈ ಮುಂಚೆ ವಿಶ್ವನಾಥ್ ಅವರು ಎರಡು ಬಾರಿ ರಾಜೀನಾಮೆಗೆ ಮುಂದಾಗಿದ್ದರು. ಆದರೆ, ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ರಾಜೀನಾಮೆ ಸ್ವೀಕರಿಸಲು ಒಪ್ಪಿರಲಿಲ್ಲ. ಈಗ ದೃಢನಿರ್ಧಾರಕ್ಕೆ ಬಂದಂತಿರುವ ಮಾಜಿ ಸಚಿವರಾದ ಅವರು, ನಾಳೆ ಸುದ್ದಿಗೋಷ್ಠಿಯಲ್ಲೇ ರಾಜೀನಾಮೆ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿ ನಂತರ ದೇವೇಗೌಡರ ಬಳಿ ರಾಜೀನಾಮೆ ಸಲ್ಲಿಸುವ ಯೋಜನೆ ಹಾಕಿಕೊಂಡಿದ್ಧಾರೆನ್ನಲಾಗಿದೆ

 

9. ನಾಳೆ ಸುದೀಪ್​ ಅಭಿನಯದ ಪೈಲ್ವಾನ್​ ಚಿತ್ರದ ಪೋಸ್ಟರ್​ ಬಿಡುಗಡೆ

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಎಂದರೆ 'ಪೈಲ್ವಾನ್'. ಈ ಚಿತ್ರಕ್ಕಾಗಿ ಅವರು ತಮ್ಮ ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ.  ಇದೇ ಮೊದಲ ಬಾರಿಗೆ ಬಾಕ್ಸರ್ ಆಗಿ ಕಾಣಿಸಿಕೊಂಡಿರೋ ಸುದೀಪ್, ಈ ಚಿತ್ರದಲ್ಲಿನ ಪಾತ್ರಕ್ಕೆಂದು 16 ಕೆಜಿ ತೂಕವನ್ನ ಸಹ ಇಳಿಸಿಕೊಂಡಿದ್ದಾರೆ. ಅಷ್ಟೇಅಲ್ಲ ಜೀವನದಲ್ಲಿ ಜಿಮ್​ ಮುಖವನ್ನೇ ನೋಡದವರು ಮೊದಲ ಬಾರಿಗೆ ಜಿಮ್​ ಮೆಟ್ಟಿಲು ಹತ್ತಿದ್ದಾರೆ. ಇಷ್ಟೆಲ್ಲ ಶ್ರಮಪಟ್ಟು ಮಾಡಿರುವ ಈ ಸಿನಿಮಾದಲ್ಲಿ ಕಿಚ್ಚನ ಲುಕ್, ಅದರಲ್ಲೂ ಬಾಕ್ಸಿಂಗ್​ ಲುಕ್​ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ. ನಾಳೆ ಅಂದರೆ ಜೂನ್​ 4ರಂದು ಸಂಜೆ 4ಕ್ಕೆ ಸುದೀಪ್​ ಅವರ ಬಾಕ್ಸಿಂಗ್​ ಪೋಸ್ಟರ್​ ಬಿಡುಗಡೆಯಾಗಲಿದೆ.

10. ವಿಶ್ವಕಪ್ 2019: ಉತ್ತಮ ಮೊತ್ತದತ್ತ ಪಾಕ್

ನ್ಯಾಟಿಂಗ್​ಹ್ಯಾಮ್​​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನ ಆರನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಉತ್ತಮ ಆಟ ಪ್ರದರ್ಶಿಸುತ್ತಿದೆ. ಬಾಬರ್ ಅಜಮ್ ಹಾಗೂ ಮೊಹಮ್ಮದ್ ಹಫೀಜ್​ರ ಆಕರ್ಷಕ ಅರ್ಧಶತಕದ ನೆರವಿನಿಂದ ಪಾಕ್ ಮೊತ್ತ ಈಗಾಗಲೇ 250ರ ಅಂಚಿನಲ್ಲಿದೆ. ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಪಾಕಿಸ್ತಾನಕ್ಕೆ ಈ ಪಂದ್ಯ ಮುಖ್ಯವಾಗಿದೆ. ಇತ್ತ ಇಂಗ್ಲೆಂಡ್​ನಲ್ಲು ಘಟಾನುಘಟಿ ಆಟಗಾರರಿದ್ದು, ಹೈವೋಲ್ಟೇಜ್ ಪಂದ್ಯವಾಗುವ ನಿರೀಕ್ಷೆಯಿದೆ. ಇತ್ತೀಚಿನ ವರಿದ ಬಂದಾಗ ಪಾಕಿಸ್ತಾನ .. ಓವರ್​ಗೆ 3 ವಿಕೆಟ್ ಕಳೆದುಕೊಂಡು … ರನ್ ಕಲೆಹಾಕಿದೆ.
First published:June 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ