Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:June 22, 2019, 5:42 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: June 22, 2019, 5:42 PM IST
  • Share this:
1. ಸಿಎಂ ಅಫಜಲಪುರ ಗ್ರಾಮವಾಸ್ತವ್ಯ ಮುಂದೂಡಿಕೆ

ಮುಖ್ಯಮಂತ್ರಿ ಕುಮಾರಸ್ವಾಮಿ ನಿಗದಿಯಂತೆ ಶುಕ್ರವಾರ ಗುರುಮಿಟ್ಕಲ್​ ಕ್ಷೇತ್ರದ ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಇದನ್ನು ಅನುಸರಿಸಿ ಶನಿವಾರ ಕಲಬುರ್ಗಿಯ ಅಫಜಲಪುರ ಕ್ಷೇತ್ರದ ಹೆರೂರು ಗ್ರಾಮಕ್ಕೆ ವಾಸ್ತವ್ಯ ಹೂಡಲು ನಿಶ್ಚಯಿಸಲಾಗಿತ್ತು. ಆದರೆ, ನಿನ್ನೆ ಸುರಿದ ಮಳೆಯಿಂದಾಗಿ ಹೆರೂರು ಗ್ರಾಮ ವಾಸ್ತವ್ಯ ಮುಂದೂಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಸಿಎಂ ಕುಮಾರಸ್ವಾಮಿಯವರ ಆಗಮನಕ್ಕಾಗಿ ಗ್ರಾಮದಲ್ಲಿ ಕೈಗೊಂಡಿದ್ದ ಸಿದ್ಧತೆಗಳು ಬರುತೇಕ ಪೂರ್ಣಗೊಂಡಿದ್ದವು. ವಾಸ್ತವ್ಯ ಮಾಡಲಿರುವ ಶಾಲೆಗೆ ಬಣ್ಣ ಹಚ್ಚಿ, ಕಾಂಪೌಂಡ್ ಗೋಡೆ ನಿರ್ಮಿಸಿ, ಶೌಚಾಲಯ, ಬಾತ್ ರೂಮ್ ವ್ಯವಸ್ಥೆ ಸೇರಿದಂತೆ ಇತರೆ ಕೆಲಸಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಕಾರ್ಯವೂ ನಡೆದಿದ್ದವು. ಆದರೆ, ಶುಕ್ರವಾರ ಗ್ರಾಮದಲ್ಲಿ ಭಾರೀ ಮಳೆಯಾಗಿದೆ.

2. ದೆಹಲಿ ಬಿಜೆಪಿ ಕಚೇರಿಗೆ ಹುಸಿ ಬಾಂಬ್​ ಬೆದರಿಕೆ ಕರೆ

ದೆಹಲಿಯಲ್ಲಿರುವ ಭಾರತೀಯ ಜನತಾ ಪಕ್ಷದ ಮುಖ್ಯ ಕಚೇರಿಗೆ ಬಾಂಬ್​ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಹುಸಿ ಕರೆ ಮಾಡಿ ಆತಂಕ ಸೃಷ್ಟಿಸಿದ ಘಟನೆ ಇಂದು ನಡೆದಿದೆ. ಬಿಜೆಪಿಯ ಕಚೇರಿಯ ನಿಯಂತ್ರಣ ಕಚೇರಿಗೆ ಕರೆ ಮಾಡಿದಾತ ಬಾಂಬ್​ ಇಟ್ಟಿರುವುದಾಗಿ ತಿಳಿಸಿದ್ದಾನೆ. ಬಳಿಕ ಇದೊಂದು ಸುಳ್ಳು ಕರೆ ಎಂಬುದು ತನಿಖೆ ವೇಳೆ ಬಯಲಾಗಿದೆ. ಕರ್ನಾಟಕದ​ ಮೈಸೂರಿನಿಂದ ಈ ಕರೆ ಬಂದಿದೆ ಎಂದು ದೆಹಲಿ ಕೇಂದ್ರ ಡಿಸಿಪಿ ತಿಳಿಸಿದ್ದಾರೆ. ದೀನ್​ ದಯಾಳ್​ ಉಪಾಧ್ಯಯ ಮಾರ್ಗದಲ್ಲಿರುವ ಕಚೇರಿಗೆ ಬೆಳಗ್ಗೆ 11 ಗಂಟೆಗೆ ಕಚೇರಿಗೆ ಈ ಕರೆ ಬಂದಿದ್ದು, ಕರೆ ಮೂಲ ಹುಡುಕಿದಾಗ ಅದು ಮೈಸೂರಿನಿಂದ ಬಂದಿರುವುದಾಗಿ ತಿಳಿದುಬಂದಿದೆ. ರಾಜೀವ್​ ಗುಣವಂತ್​ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದ್ದು, ಆರೋಪಿಗೆ ಹುಡುಕಾಟ ಆರಂಭಿಸಲಾಗಿದೆ

3. ಸೋಲಿಗೆ ಕುಗ್ಗಲ್ಲ; ದೇವೇಗೌಡ

ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಮುಂದಿನ ತಿಂಗಳು 50 ಸಾವಿರ ಹೆಣ್ಣು ಮಕ್ಕಳನ್ನು ಸೇರಿಸಿ ಸಭೆ ಮಾಡುತ್ತೇನೆ. ಜಿಲ್ಲಾ ಘಟಕಗಳನ್ನು ರಚನೆ ಮಾಡಿ ಅದರಲ್ಲಿ ಕಾರ್ಯಾಧ್ಯಕ್ಷರು , ಅಧ್ಯಕ್ಷರುಗಳ ನೇಮಕ ಮಾಡುತ್ತೇವೆ. ನಿಮ್ಮ ಆಯ್ಕೆ ಯಾರು ಆಗಬೇಕು ಅಂತ ನಿರ್ಧರಿಸಿ. ಇವತ್ತಿನಿಂದ ಹೊಸ ಅಧ್ಯಾಯ ಪ್ರಾರಂಭ ಮಾಡೋಣ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಜೆಡಿಎಸ್​ ಮಹಿಳಾ ಘಟಕದ ಸಭೆಯಲ್ಲಿ ಹೇಳಿದರು. ಇಂದು ಜೆಪಿ ಭವನದಲ್ಲಿ ಆಯೋಜನೆಗೊಂಡಿದ್ದ ಜೆಡಿಎಸ್​ ಮಹಿಳಾ ಘಟಕದ ಅಧ್ಯಕ್ಷೆ ಆಯ್ಕೆ, ಮಹಿಳಾ ಸಮಾವೇಶ ಸಂಬಂಧ ಸಭೆಯಲ್ಲಿ ಮಾತನಾಡಿದ ದೇವೇಗೌಡರು, ಯಾರು ಮಾತನಾಡುತ್ತೀರೊ ಮಾತನಾಡಿ, ನಾನು ಎಲ್ಲವನ್ನು ಆಲಿಸುತ್ತೇನೆ. ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ ಎಂದು ಹೇಳಿದರು. ಇಂದಿನ ಸಭೆಯಲ್ಲಿ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ಚರ್ಚೆ ನಡೆಸಲಾಗಿದ್ದು, ಮುಂದಿನ ತಿಂಗಳು ನಡೆಯುವ ಜೆಡಿಎಸ್ ಮಹಿಳಾ ಸಮಾವೇಶದ ದಿನದಂದು ಮಹಿಳಾ ಘಟಕದ ಅಧ್ಯಕ್ಷರ ಹೆಸರು ಘೋಷಣೆ ಮಾಡಲಾಗುತ್ತದೆ.

3. ಶರಾವತಿ ಹಿನ್ನೀರು ರಾಜಧಾನಿಗೆ ತರುವ ನಿರ್ಣಯ ಸರಿಯಲ್ಲ; ಬಿವೈರಾಘವೇಂದ್ರಬೆಂಗಳೂರು ಉದ್ಧಾರವಾದರೆ ಸಾಕು. ರಾಜ್ಯ ಉದ್ದಾರವಾಗಲಿದೆ ಎಂಬ ಧೋರಣೆ ರಾಜ್ಯ ಸರ್ಕಾರ ಹೊಂದಿದೆ. ಇದೇ ಕಾರಣಕ್ಕೆ ಶರಾವತಿ ಹಿನ್ನೀರನ್ನು ಬೆಂಗಳೂರಿಗೆ ತರುವ ಯೋಜನೆಗೆ ಮುಂದಾಗಿದೆ. ಶಿವಮೊಗ್ಗದಲ್ಲಿಯೇ ಭೀಕರ ಬರ ಆವರಿಸಿದ್ದು, ಈ  ಯೋಜನೆಯನ್ನು ಸರ್ಕಾರ ಕೈ ಬಿಡಬೇಕು ಎಂದು  ಸಂಸದ ಬಿವೈ ರಾಘವೇಂದ್ರ ಒತ್ತಾಯಿಸಿದರು. ಸರ್ಕಾರದ ನಿರ್ಣಯ ಕುರಿತು ಮಾತನಾಡಿದ ಅವರು,  ರಾಜಧಾನಿಯಲ್ಲಿನ ಬರ ನೀಗಿಸಲು ಶರಾವತಿ ನೀರನ್ನು ಬೆಂಗಳೂರಿಗೆ ತರಲು ಯೋಜನೆ ರೂಪಿಸಲು ಸರ್ಕಾರ ಮುಂದಾಗಿರುವುದು ಅತ್ಯಂತ ಖೇದಕರ ಸಂಗತಿ. ಪರಿಸರ ಉಳಿಸುವ ಯೋಜನೆ ರೂಪಿಸುವುದನ್ನು ಬಿಟ್ಟು,  ಈ ರೀತಿಯ ಯೋಜನೆ ಮಾಡಿರುವುದು ಸರಿಯಲ್ಲ ಎಂದರು.

4. ಡಿಕೆಶಿ ಶಕುನಿ ಇದ್ದಂಗೆ; ಶ್ರೀರಾಮುಲು

ತನ್ನನ್ನು ಶಕುನಿ ಎಂದು ಕರೆದಿದ್ದ ಸಚಿವ ಡಿ.ಕೆ ಶಿವಕುಮಾರ್​​ ವಿರುದ್ಧ ಬಿಜೆಪಿ ಹಿರಿಯ ನಾಯಕ ಮತ್ತು ಶಾಸಕ ಶ್ರೀರಾಮುಲು ಕಿಡಿಕಾರಿದ್ದಾರೆ. ಅಲ್ಲದೇ ಶೀಘ್ರದಲ್ಲೇ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರ ಬಿದ್ದು ಹೋಗಲಿದೆ. ಡಿ.ಕೆ ಶಿವಕುಮಾರ್​​ ಶಕುನಿ ಇದ್ದಂಗೆ. ಯುದ್ದ ಮುಗಿದ ಮೇಲೆ ನಿಜವಾದ ಶಕುನಿ ಯಾರೆಂದು? ಗೊತ್ತಾಗಲಿದೆ ಎಂದು ಶ್ರೀರಾಮುಲು ಕುಹಕವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತಾಡಿದ ಶಾಸಕ ಶ್ರೀರಾಮುಲು, ಮಹಾ ಭಾರತ ಕಾಲದಲ್ಲಿ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಶಕುನಿ ಆಟಕ್ಕೆ ಹೇಗೆ ಕೌರವರು ಬಲಿಯಾದರು? ಎಂಬುದು ಕೇಳಿದ್ದೇವೆ. ಹಾಗೆಯೇ ಸಚಿವ ಡಿ.ಕೆ ಶಿವಕುಮಾರ್​​ ಶಕುನಿ ಆಟಕ್ಕೆ ಮೈತ್ರಿ ಸರ್ಕಾರ ಕೂಡ ಪತನವಾಗಲಿದೆ. ಸದ್ಯದಲ್ಲೇ ಇವರ ನಿಜವಾದ ಬಣ್ಣ ಬಯಲಾಗಲಿದೆ ಎಂದರು.

5. ಟಿಎಂಸಿ-ಬಿಜೆಪಿ ಬೆಂಬಲಿಗರ ನಡುವೆ ಗಲಭೆ

ಪಶ್ಚಿಮಬಂಗಾಳದ ನಾರ್ಥ್ 24 ಪಾರ್ಗಾನಸ್​ ಭಾತ್​ಪಾರಾದಲ್ಲಿ ಮತ್ತೊಮ್ಮೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹಿಂಸಾಚಾರ ಭುಗಿಲೆದ್ದಿದೆ. ಕೇಂದ್ರ ಸಚಿವ ಎಸ್​.ಎಸ್​.ಅಹ್ಲುವಾಲಿಯಾ ಅವರು ಈ ಸ್ಥಳಕ್ಕೆ ಭೇಟಿ ನೀಡಿದ ಸಂಬಂಧದಲ್ಲಿ ಪೊಲೀಸರ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ದಿನದ ಹಿಂದೆ ನಡೆದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದರು. ಆದಾಗ್ಯೂ ಮೃತ ಕುಟುಂಬಕ್ಕೆ ಸಮಾಧಾನ ಹೇಳಲು ಕೇಂದ್ರ ಸಚಿವರು ಬಂದಾಗ ಮತ್ತೆ ಹಿಂಸಾಚಾರವಾಗಿದೆ. ಬಂಗಾಳಿ ಪೊಲೀರು ಮತ್ತು ಮಮತಾ ಬ್ಯಾನರ್ಜಿಯನ್ನು ಮೂದಲಿಸಿ ಬಿಜೆಪಿ ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಬೀಸಿ, ಗುಂಪನ್ನು ಚದುರಿಸಿದ್ದಾರೆ

6. ಕಿಕ್​ ಬ್ಯಾಕ್​ ಆರೋಪ ಐಎಎಫ್​ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ

ತರಬೇತಿ ವಿಮಾನ ಖರೀದಿ ವ್ಯವಹಾರದ ವೇಳೆ ಕಿಕ್​ ಬ್ಯಾಕ್​ ಪಡೆದಿರುವ ಆರೋಪದ ಮೇಲೆ ಭಾರತೀಯ ವಾಯು ಪಡೆ ಅಧಿಕಾರಿ,  ರಕ್ಷಣಾ ಉದ್ಯಮಿ ಸಂಜಯ್​ ಭಂಡಾರಿ ಹಾಗೂ ಸ್ವಿಜರ್ಲೆಂಡ್​ ಮೂಲದ ಪಿಲಟ್ಯೂಸ್​ ಏರ್​ಕ್ರಾಫ್ಟ್​ ಕಂಪನಿ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ. 2009ರಲ್ಲಿ ತರಬೇತಿ ವಿಮಾನ ವೇಳೆ ಅಕ್ರಮ ವ್ಯವಹಾರ ನಡೆಸಿದ್ದು, ಈ ಸಂಬಂಧ 2016ರಲ್ಲಿ ಸಂಸ್ಥೆ ಪ್ರಾಥಮಿಕ ತನಿಖೆ ಆರಂಭಿಸಿತ್ತು.  75 ತರಬೇತಿ ವಿಮಾನ ಖರೀದಿ ವ್ಯವಹಾರದ ವೇಳೆ  ​ ಕಿಕ್​ ಬ್ಯಾಕ್​ ಪ್ರಸ್ತಾಪವನ್ನು ಮುಂದಿಟ್ಟಿರುವುದು ತನಿಖೆ ವೇಳೆ ಬಯಲಾಗಿದೆ.
ಆಫ್​ಸೆಟ್​ ಇಂಡಿಯಾ ಸಲ್ಯೂಷನರ್​ ಪ್ರೈವೆಟ್​ ಲಿಮಿಟೆಡ್​ನ ಸಂಜಯ್​ ಬಂಡಾರಿ ಹಾಗೂ ಬಿಮಲ್​ ಜೊತೆ ಕಂಪನಿ ರಹಸ್ಯ ಮಾತುಕತೆ ನಡೆಸಿದೆ. 2010ರಲ್ಲಿ ನಡೆದ ಸೇವಾ ಪೂರೈಕೆದಾರ ಒಪ್ಪಂದದ ಸಂದರ್ಭದಲ್ಲಿ ಭಂಡಾರಿ ವಂಚನೆ ಮಾಡಿ ಸಹಿ ಹಾಕಿದ್ದಾರೆ. ಈ ಒಪ್ಪಂದ ರಕ್ಷಣಾ ಖರೀದಿ ನಿಯಮವನ್ನು ಉಲ್ಲಂಘಿಸಿದೆ ಎಂದು ಸಿಬಿಐ ತಿಳಿಸಿದೆ.

7. ಮೈತ್ರಿಯಿಂದಲೇ ಸೋಲಾಯ್ತು; ವೀರಪ್ಪ ಮೊಯ್ಲಿ

ಜೆಡಿಎಸ್​ನೊಂದಿಗೆ ಮೈತ್ರಿ  ಮಾಡಿಕೊಂಡಿದ್ದಕ್ಕೆ ಈ ಬಾರಿಯ ಚುನಾವಣೆಯಲ್ಲಿ ನಮಗೆ ಹೀನಾಯ ಸೋಲಾಯ್ತು. ಮೈತ್ರಿ ಇಲ್ಲದಿದ್ದರೆ ರಾಜ್ಯದಲ್ಲಿ 15 ಸೀಟು ಗೆಲ್ಲುತ್ತಿದ್ದೆವು ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ ನೀಡಿದ್ದಾರೆ. ನಿನ್ನೆಯಷ್ಟೇ ಮಾಧ್ಯಮಗಳ ಮುಂದೆ ಕಾಂಗ್ರೆಸ್​ ಬಗ್ಗೆ ಅಸಮಾಧಾನ ಹೊರಹಾಕಿದ್ದ ಮಾಜಿ ಪ್ರಧಾನಿ ದೇವೇಗೌಡರು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ. ಕಾಂಗ್ರೆಸ್​ ನಾಯಕರ ನಡುವೆಯೇ ಹೊಂದಾಣಿಕೆಯಿಲ್ಲ. ಇದುವರೆಗೂ ನಾನೇನೂ ಮಾತನಾಡದೆ ಸಹಿಸಿಕೊಂಡುಬಂದಿದ್ದೇನೆ ಎಂದು ಹೇಳಿದ್ದರು.

8. ಮಾಜಿ ವಿಧಾನಪರಿಷತ್​ ಸದಸ್ಯ ಎಸ್​ಎಂ ಶಂಕರ್​ ನಿಧನ

ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರ ಖಾಸಾ ಸಹೋದರ ಎಸ್​.ಎಂ. ಶಂಕರ್ (83) ಇಂದು ವಿಧಿವಶರಾಗಿದ್ದಾರೆ. ಎಸ್​. ಎಂ. ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಸ್​.ಎಂ. ಶಂಕರ್ ಅವರನ್ನು ಸದನದ ಮೇಲ್ಮನೆಗೆ ಆಯ್ಕೆ ಮಾಡಿ ಕಳುಹಿಸಲಾಗಿತ್ತು. ವಯೋ ಸಹಜ ಖಾಯಿಲೆಗೆ ಒಳಗಾಗಿದ್ದ ಎಸ್​.ಎಂ. ಶಂಕರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ

9. ಹುಟ್ಟುಹಬ್ಬ ಆಚರಿಸದಿರಲು ಗಣೇಶ್​ ನಿರ್ಧಾರ

ನಟ ಗೋಲ್ಡನ್​ ಸ್ಟಾರ್​ ಗಣೇಶ್​ ಈ ಬಾರಿ ತಮ್ಮ ಹುಟ್ಟು ಹಬ್ಬ ಆಚರಣೆ ಮಾಡದಿರಲು ನಿರ್ಧರಿಸಿದ್ದಾರೆ. ಈ ಕುರಿತು ಇಂದು ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ನೀಡಿದ್ದಾರೆ ಜುಲೈ 2ರಂದು ಗಣೇಶ್​ ಹುಟ್ಟುಹಬ್ಬ. ಇದಕ್ಕಾಗಿ ಈಗಾಗಲೇ ಅವರ ಅಭಿಮಾನಿಗಳು ತಯಾರಿ ನಡೆಸಿದ್ದಾರೆ. ದೂರದೂರದಿಂದ ಬಂದು ಅವರ ಹುಟ್ಟು ಹಬ್ಬಕ್ಕೆ ಉಡುಗೊರೆ ಕೊಡಲು ತಯಾರಿ ನಡೆಸಿದ್ದಾರೆ. ಆದರೆ, ಗಣೇಶ್​ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು, ಹುಟ್ಟು ಹಬ್ಬ ಆಚರಣೆಯಿಂದ ಹಿಂದೆ ಸರಿದಿದ್ದಾರೆ. ಹೌದು ಗಣೇಶ್​ ಅವರಿಗೆ ಜೀವನ ಸ್ಪೂರ್ತಿ ಕಲಿಸಿದ್ದ ಅವರ ತಂದೆ ಅವರನ್ನು ಅಗಲಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅವರು ಈ ಬಾರಿ ತಮ್ಮ ಹುಟ್ಟು ಹಬ್ಬ ಆಚರಣೆ ಮಾಡದಿರಲು ನಿರ್ಧರಿಸಿದ್ದಾರೆ.

10. ವಿಶ್ವಕಪ್ 2019: ಸಂಕಷ್ಟದಲ್ಲಿ ಟೀಂ ಇಂಡಿಯಾ

ಸೌತಾಂಪ್ಟನ್​​ನ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತಾದರು, ಬಳಿಕ ವಿಜಯ್ ಶಂಕರ್ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾದರು. ಈ ಮಧ್ಯೆ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಕೊಹ್ಲಿ ಅರ್ಧಶತಕದ ಬೆನ್ನಲ್ಲೆ ಶಂಕರ್ ಔಟ್ ಆದರೆ ಕೊಹ್ಲಿ ಆಟ 67 ರನ್ಗೆ ಅಂತ್ಯವಾಯಿತು. ಸದ್ಯ 4 ವಿಕೆಟ್ ಕಳೆದುಕೊಂಡಿರುವ ಭಾರತ ಪರ ಎಂ ಎಸ್ ಧೋನಿ ಹಾಗೂ ಕೇದರ್ ಜಾಧವ್ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ
First published:June 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ