Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:June 17, 2019, 6:16 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: June 17, 2019, 6:16 PM IST
  • Share this:
1. ದೇಶಾದ್ಯಂತ ವೈದ್ಯರ ಮುಷ್ಕರ; ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಮಂಡಳಿ ಕರೆ ನೀಡಿರುವ ಬಂದ್​​ಗೆ ದೇಶಾದ್ಯಂತ ವೈದ್ಯರು ಬೆಂಬಲ ನೀಡಿದ್ದಾರೆ. ವೈದ್ಯರ ಮುಷ್ಕರದಿಂದ ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತೆ ಆಗಿದೆ. ಇನ್ನು ರಾಜ್ಯದಲ್ಲಿ ಕೂಡ ಬಂದ್​ಗೆ ಬೆಂಬಲ ವ್ಯಕ್ತವಾಗಿದ್ದು, ವೈದ್ಯರೆಲ್ಲರು ಪ್ರತಿಭಟನೆ ನಡೆಸಿದ್ದಾರೆ. ವೈದ್ಯರ ಮುಷ್ಕರ ಕೈ ಬಿಡುವಂತೆ ಮನವಿ ಮಾಡಿ ಇಂದು ಮತ್ತೊಮ್ಮೆ ಸಿಎಂ ಮಮತಾ ಬ್ಯಾನರ್ಜಿ ಸಭೆ ನಡೆಸಿದ್ದಾರೆ. ಇದೇ ವೇಳೆ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ರಕ್ಷಣೆಗೆ ಭದ್ರತೆ ನಿಯೋಜಿಸಬೇಕೆಂದು ಕೋರಿ ಅಲೋಕ್ ಶ್ರೀವಾಸ್ತವ ಎಂಬ ವಕೀಲರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದು, ನಾಳೆ ಅರ್ಜಿ ವಿಚಾರಣೆ ಮಾಡುವುದಾಗಿ ತಿಳಿಸಿದೆ. ನ್ಯಾ. ದೀಪಕ್​ ಗುಪ್ತಾ ಮತ್ತು ಸೂರ್ಯ ಕಾಂತ್​ ಒಳಗೊಂಡ ರಜಾ ಪೀಠ ಜೂನ್​ 18ರಂದು  ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

2. ರಾಜ್ಯ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ

ರಾಜ್ಯ ಪೊಲೀಸ್ ಇಲಾಖೆಗೆ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಹತ್ತೊಂಬತ್ತು ಜನ ಐಪಿಎಸ್ ಅಧಿಕಾರಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅಲೋಕ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಈ ಮೊದಲು ಐಜಿಪಿ ಆಗಿದ್ದ ಅಲೋಕ್​ಗೆ ಎಡಿಜಿಪಿಯಾಗಿ ಬಡ್ತಿ ನೀಡಿ , ಬೆಂಗಳೂರು ನಗರ ಪೊಲೀಸ್ ಕಮಿಷನರ್ ನೇಮಕ ಮಾಡಲಾಗಿದೆ. ಟಿ. ಸುನಿಲ್ ಕುಮಾರ್ ನೇಮಾಕಾತಿ ವಿಭಾಗ ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಅಮ್ರಿತ್ ಪೌಲ್ ಈಸ್ಟರ್ನ್ ರೇಂಜ್ ಐಜಿಪಿ  ಆಗಿ ನೇಮಕ ಮಾಡಲಾಗಿದೆ. ಬೆಂಗಳೂರು ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಉಮೇಶ್ ಕುಮಾರ್, ಗೃಹ ಇಲಾಖೆಯ ಕಾರ್ಯದರ್ಶಿ (PCAS) ಬಿಕೆ. ಸಿಂಗ್ , ಬೆಂಗಳೂರು ಆಂತರಿಕ ಭದ್ರತೆಯ ಐಜಿಪಿಯಾಗಿ ಸೌಮೆಂದು ಮುಖರ್ಜಿ, ಸದರನ್  ರೇಂಜ್ ಐಜಿಪಿ ಆಗಿ ರಾಘವೇಂದ್ರ ಸುಹಾಸ್ ಸಿಸಿಬಿ ಮುಖ್ಯಸ್ಥರಾಗಿ ರವಿಕಾಂತೇ ಗೌಡ ವರ್ಗಾವಣೆ ಗೊಂಡಿದ್ದಾರೆ.

3. ಇಂದಿನಿಂದ ಸಂಸತ್​ ಅಧಿವೇಶನ

ಕೇಂದ್ರದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಸರ್ಕಾರದ ಮೊದಲ ಸಂಸತ್​​ ಕಲಾಪ ಇಂದಿನಿಂದ ಶುರುವಾಗಿದೆ. ಮೊದಲ ದಿನದ ಕಲಾಪದಲ್ಲಿ ಸ್ಪೀಕರ್​ ವಿರೇಂದ್ರ ಕುಮಾರ್​ ನೂತನವಾಗಿ ಆಯ್ಕೆಯಾದ ಸಂಸದರಿಗೆ ಪ್ರಮಾಣವಚನ ಬೋಧಿಸಿದರು. ಮೊದಲ ದಿನದ ಅಧಿವೇಶನದಲ್ಲಿ ರಾಹುಲ್​ ಗಾಂಧಿ ಗೈರು ಎದ್ದು ಕಾಣುತ್ತಿತ್ತು. ಈ ಬಾರಿ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಕೂಡ ಸಂಸತ್​​ ಪ್ರವೇಶಿಸಿ ಆಗಿದೆ. ಈ ಮಧ್ಯೆ ಸಂಸತ್​​ನಲ್ಲಿ ಪ್ರಮಾಣ ವಚನ ಸ್ವೀಕಾರದ ವೇಳೆ ಕರ್ನಾಟಕ ಸಂಸದರು, ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕನ್ನಡಾಭಿಮಾನ ಮೆರೆದಿದ್ದಾರೆ ಎಂಬುದು ವಿಶೇಷ.

4.ಸಂಖ್ಯೆಯ ಬಗ್ಗೆ ಚಿಂತಿಸಬೇಡಿ, : ವಿಪಕ್ಷಗಳಿಗೆ ಮೋದಿ ಸಲಹೆಪ್ರಜಾಪ್ರಭುತ್ವ ವ್ಯವಸ್ಥೆಯ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಪ್ರಾಮುಖ್ಯತೆ ಬಗ್ಗೆ ಪ್ರಧಾನಿ ಮೋದಿ ಸೋಮವಾರ ಮಾತನಾಡಿದ್ದಾರೆ. ವಿರೋಧ ಪಕ್ಷಗಳು ಸಂಖ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಸದನದಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಂಡು ಮಾತನಾಡಬೇಕು ಎಂದು ಹೇಳಿದ್ದಾರೆ. 17ನೇ ಲೋಕಸಭೆಯ ಬಜೆಟ್​ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಇದಕ್ಕೂ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಕ್ರಿಯಾಶೀಲವಾಗಿರಬೇಕು. ವಿರೋಧ ಪಕ್ಷಗಳು ಸಂಖ್ಯೆಯ ಬಗ್ಗೆ ಚಿಂತೆ ಮಾಡಬಾರದು. ಸದನದಲ್ಲಿ ವಿರೋಧ ಪಕ್ಷಗಳು ಮುಕ್ತವಾಗಿ ಮಾತನಾಡಲಿವೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ. ನಾವು ಸಂಸತ್ತಿಗೆ ಬಂದಾಗ ಪಕ್ಷ, ವಿಪಕ್ಷ ಎಂಬುದನ್ನು ಮರೆತುಬಿಡಬೇಕು. ನಾವು ಕೇವಲ ನಿಷ್ಪಕ್ಷದ ಬಗ್ಗೆ ಚಿಂತಿಸಬೇಕು. ದೇಶದ ಅಭಿವೃದ್ಧಿ ವಿಚಾರವಾಗಿಯಷ್ಟೇ ಉತ್ಸಾಹ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಎಲ್ಲ ಸಂಸದರಿಗೆ ಕರೆ ನೀಡಿದರು.

5. ನಿರ್ಮಾಣ ಹಂತದ ವಾಟರ್​ಟ್ಯಾಂಕ್​ ಕುಸಿತ; ಮೂವರು ಸಾವು

ನಗರದ ಅಮೃತಹಳ್ಳಿಯ ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಬಡಾವಣೆಯಲ್ಲಿ ಬಿಡಬ್ಲೂಎಸ್​ಎಸ್​ಬಿ ನಿರ್ಮಿಸುತ್ತಿದ್ದ ನಿರ್ಮಾಣ ಹಂತದ ವಾಟರ್​ ಟ್ಯಾಂಕ್​ ಸೆಂಟ್ರಿಂಗ್​ ಕುಸಿದುಬಿದ್ದಿದ್ದು, ಮೂವರು ಕಾರ್ಮಿಕರು ಮೃತಪಟ್ಟ ಧಾರುಣ ಘಟನೆ ಸೋಮವಾರ ನಡೆದಿದೆ. 25ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದು, ನಾಲ್ವರು ಅವಶೇಷಗಳಡಿ ಸಿಲುಕಿರುವ ಅನುಮಾನ ವ್ಯಕ್ತವಾಗಿದೆ. ವಾಟರ್​ ಟ್ಯಾಂಕ್​ ಒಳಗೆ 25 ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಟ್ಯಾಂಕ್ ಸೆಂಟ್ರಿಂಗ್​​ ಕುಸಿದುಬಿದ್ದಿದೆ. ಇಪ್ಪತ್ತಕ್ಕೂ ಹೆಚ್ಚು ಜನರನ್ನು ರಕ್ಷಿಸಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಅವಶೇಷಗಳ ಅಡಿ ನಾಲ್ವರು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಮೃತರು ಬಿಹಾರ ಮತ್ತು ಕೊಲ್ಕತ್ತಾ ಮೂಲದವರು ಎಂದು ತಿಳಿದುಬಂದಿದೆ

6. ಜಿಂದಾಲ್​, ಐಎಂಎ ಪ್ರಕರಣದಲ್ಲಿ ಮೌನ ಮುರಿದ ಸಿದ್ದರಾಮಯ್ಯ

ಜಿಂದಾಲ್ ಮತ್ತು ಐಎಂಎ ಪ್ರಕರಣ ಸಂಬಂಧ ಮೊದಲ ಬಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮೌನ ಮುರಿದರು. ಈ ಕುರಿತಂತೆ ನಗರದಲ್ಲಿ ಮಾತಾಡಿದ ಅವರು, "ಮೈತ್ರಿ ಸರ್ಕಾರ ಜಿಂದಾಲ್​​ಗೆ ಭೂಮಿ ನೀಡುವ ವಿಚಾರದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಹಾಗಾಗಿ ಈ ವಿಚಾರ ಸಂಪುಟ ಉಪ ಸಮಿತಿಗೆ ನೀಡುವಂತೆ ನಾನೇ ಸಲಹೆ ನೀಡಿದ್ದೇ" ಎಂದರು. ಇನ್ನು ಸರ್ಕಾರದ ಭಾಗವಾಗಿರುವ ಕಾರಣ ನಾನು ಜಿಂದಾಲ್ ಬಗ್ಗೆ ಏನು? ಮಾತನಾಡಲಿಕ್ಕೆ ಹೋಗಿಲ್ಲ. ಐಎಂಎ ಪ್ರಕರಣದ ಆರೋಪಿ ಮುನ್ಸೂರು ಅಲಿಖಾನ್ ಕೂಡ ಯಾರು? ಎಂದು ಗೊತ್ತಿಲ್ಲ. ಯಾವುದೋ ಕಾರ್ಯಕ್ರಮವೊಂದಕ್ಕೆ ರೋಷನ್ ಬೇಗ್ ಆತನನ್ನು ಕರೆದುಕೊಂಡು ಬಂದಿದ್ದರು. ಅಲ್ಲಿಯೇ ವೇದಿಕೆ ಮೇಲೆ ಮಸ್ಸೂರ್ ನನ್ನ ಜೊತೆಗೆ ಪೋಟೊ ತೆಗೆಸಿಕೊಂಡಿದ್ದ. ಈ ಪ್ರಕರಣದ ತನಿಖೆಯೂ ಎಸ್​​ಐಟಿ ಅಧಿಕಾರಿಗಳು ನಡೆಸುತ್ತಿದ್ಧಾರೆ" ಎಂದು ಹೇಳಿದರು

7. ಸಾಲಬಾಧೆ: ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೈತ

ಸಾಲಬಾಧೆ ತಾಳಲಾರದೇ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೂ ಮುನ್ನ ವಿಡಿಯೋ ಮಾಡಿರುವ ರೈತ, ತಾನು ಕುಮಾರಸ್ವಾಮಿ ಅಪ್ಪಟ ಅಭಿಮಾನಿಯಾಗಿದ್ದು, ನಾಲ್ಕು ವರ್ಷ ಎಚ್​ಡಿಕೆಯೇ ಸಿಎಂ ಆಗಿರಬೇಕು ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಸಾವಿಗೆ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ರೈತ ತಾವು ಎಚ್​.ಡಿ. ಕುಮಾರಸ್ವಾಮಿ ಅವರ ಅಪ್ಪಟ್ಟ ಅಭಿಮಾನಿ ಎಂದು ತಿಳಿಸಿದ್ದಾರೆ. ಅಲ್ಲದೇ ತಮ್ಮ ಜಿಲ್ಲೆಯ ಸಂತೇಬಾಚಹಳ್ಳಿ ಹೋಬಳಿ ಕೆರೆ ತುಂಬಿಸುವಂತೆ ಇದೇ ವೇಳೆ ಕೋರಿಕೊಂಡಿದ್ದಾರೆ. ಕುಮಾರಸ್ವಾಮಿ ನಾಲ್ಕು ವರ್ಷವೂ ಸಿಎಂ ಆಗಿರಬೇಕು.ಈ ಸರ್ಕಾರ ಯಾವುದೇ ಕಾರಣಕ್ಕೂ ಬೀಳದಂತೆ ಸಚಿವ ಡಿಕೆ ಶಿವಕುಮಾರ್​ ಕಾಪಾಡಬೇಕು. ಯಡಿಯೂರಪ್ಪ ಅವರು ಕುಮಾರಸ್ವಾಮಿಯ ಕಾಲೆಳೆಯದಂತೆ ಕಾರ್ಯನಿರ್ವಹಿಸಬೇಕು. ಈ ಸರ್ಕಾರವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಮೇಲಿದೆ ಎಂದು ವಿಡಿಯೋದಲ್ಲಿ ರೈತ ತಿಳಿಸಿದ್ದಾರೆ.

8. ಉತ್ತರಪ್ರದೇಶದಲ್ಲಿ ದಲಿತನ ಸಜೀವ ದಹನ

ಮನೆಯಲ್ಲಿ ಮಲಗಿದ್ದ ದಲಿತ ವ್ಯಕ್ತಿಯನ್ನು ಜೀವ ಸಹಿತ ಬೆಂಕಿ ಹಚ್ಚಿ ಸುಟ್ಟು ಕೊಂದಿರುವ ಘಟನೆ ಉತ್ತರಪ್ರದೇಶದ ಪ್ರತಾಪ್​ಘರ್​ ಜಿಲ್ಲೆಯ  ರಾಮ್​ಪುರ ಎಂಬ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ವಿನಯ್ ಪ್ರಕಾಶ್ ಎಂದು ಗುರುತಿಸಲಾಗಿದೆ. ರಾಮ್​ಪುರ ಗ್ರಾಮದ ದಲಿತ ಜಾತಿಗೆ ಸೇರಿದ ವಿನಯ್ ಪ್ರಕಾಶ್ ಭಾನುವಾರ ರಾತ್ರಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಗ್ರಾಮದವರ ಜೊತೆ ಕುಳಿತು ವೀಕ್ಷಿಸಿದ್ದಾರೆ. ಭಾರತ ಪಂದ್ಯದಲ್ಲಿ ಗೆಲ್ಲುತ್ತಿದ್ದಂತೆ ಆತ ಕುಣಿದು ಕುಪ್ಪಳಿಸುತ್ತಾ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಮತ್ತೊಂದು ಪಂಗಡದವರ ಜೊತೆ ಸಣ್ಣ ವಿವಾದ ಹುಟ್ಟಿ ಮಾತಿಗೆ ಮಾತು ಬೆಳೆದಿದೆ.

9. ಅನಾರೋಗ್ಯಕ್ಕೆ ತುತ್ತಾದ ಖ್ಯಾತ ನಿರ್ದೇಶಕ ಮಣಿರತ್ನಂ

ಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಆರೋಗ್ಯ ಹದಗೆಟ್ಟಿದ್ದು, ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಕನ್ನಡ, ತಮಿಳು, ತೆಲುಗುವಿನಲ್ಲಿ ಬ್ಲಾಕ್​ಬಸ್ಟರ್ ಸಿನಿಮಾಗಳನ್ನು ನೀಡಿರುವ ಮಣಿರತ್ನಂ ಅನೇಕ ವರ್ಷಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಮಣಿರತ್ನಂ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇತ್ತೀಚೆಗೆ ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಮುಂಬೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

10. ವಿಶ್ವಕಪ್ 2019: ಬೃಹತ್ ಮೊತ್ತದತ್ತ ವಿಂಡೀಸ್

ವಿಶ್ವಕಪ್​​ನಲ್ಲಿಂದು ನಡೆಯುತ್ತಿರುವ 23ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ತಂಡಗಳು ಸೆಣೆಸಾಟ ನಡೆಸುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿರುವ ಕೆರಿಬಿಯನ್ನರು ಆರಂಭಿಕ ಆಟಗಾರ ಕ್ರಿಸ್ ಗೇಲ್ರ ವೈಫಲ್ಯದ ಹೊರತಾಗಿಯು ಭರ್ಜರಿ ಮೊತ್ತ ಕಲೆಹಾಕುತತಿದೆ. ಎವಿನ್ ಲೆವಿಸ್ 70 ರನ್ಗೆ ಔಟ್ ಆದರೆ, ಶಾಯ್ ಹೋಪ್ ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಈ ಮೂಲಕ 40 ಓವರ್ಗೂ ಮುನ್ನವೇ ತಂಡದ ಮೊತ್ತ 200ರ ಗಡಿ ದಾಟಿದ್ದು, ಬೃಹತ್ ಟಾರ್ಗೆಟ್ ನೀಡುವತ್ತ ಚಿತ್ತ ನೆಟ್ಟಿದೆ.
First published:June 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ