Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:June 11, 2019, 6:28 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: June 11, 2019, 6:28 PM IST
  • Share this:
1.ಐಎಂಎ ವಂಚನೆ ಪ್ರಕರಣ; ಎಸ್​ಐಟಿ ತನಿಖೆಗೆ

ಐಎಂಎ ಜ್ಯುವೆಲರಿ ಬಹುಕೋಟಿ ವಂಚನೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಗೆ ವಹಿಸಿದ್ದ ರಾಜ್ಯ ಸರ್ಕಾರ ಇದೀಗ ಪ್ರಕರಣದ ವಿಚಾರಣೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿದೆ. ಇದಕ್ಕೂ ಮುನ್ನ ಸಿಎಂ ಕುಮಾರಸ್ವಾಮಿ ಅವರು ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿದ್ದರು. ಆದರೆ, ಸಚಿವ ಜಮೀರ್​ ಸೇರಿ ಹಲವು ಶಾಸಕರ ಒತ್ತಾಯ ನಂತರ ಪ್ರಕರಣದ ಗಂಭೀರತೆ ಅರಿತು ಎಸ್​ಐಟಿ ತನಿಖೆಗೆ ವಹಿಸಲಾಗಿದೆ. ಸಚಿವ ಜಮೀರ್ ಅಹಮದ್ ನೇತೃತ್ವದ ಕಾಂಗ್ರೆಸ್ ಅಲ್ಪಸಂಖ್ಯಾತ ಶಾಸಕರಾದ ಎನ್.ಎ. ಹ್ಯಾರೀಸ್, ರಿಜ್ವಾನ್ ಅರ್ಷದ್, ನಜೀರ್ ಅಹಮದ್ ಮತ್ತು ಅಬ್ದುಲ್ ಜಬ್ಬಾರ್ ಅವರ ನಿಯೋಗ ಇಂದು ಸಿಎಂ ಕುಮಾರಸ್ವಾಮಿ ಅವರನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಭೇಟಿಯಾಗಿ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹಿಸುವಂತೆ ಮನವಿ ಮಾಡಿತು

2.ಬ್ಯಾಂಕ್​ನವರ ತಪ್ಪಿನಿಂದ ಸಾಲಮನ್ನಾ ಹಣ ವಾಪಸ್ಸಾಗುವುದಿಲ್ಲ;

ರೈತರ ಖಾತೆಗೆ ಜಮೆ ಆಗಿರುವ ಸಾಲ ಮನ್ನಾ ಹಣ ವಾಪಸ್ಸಾಗಿರುವುದು  ಬ್ಯಾಂಕ್ ಸಿಬ್ಬಂದಿಯ ತಪ್ಪಿನಿಂದ ಆಗಿರುವುದು ಎಂದು ಬ್ಯಾಂಕಿನವರೇ ಹೇಳಿದ್ದಾರೆ. ಇದರ ಬಗ್ಗೆ ತಿಳಿಯದಎ ಮಾಧ್ಯಮಗಳು ಸುಮ್ಮನೆ ಸುದ್ದಿ ಮಾಡ್ತಿದ್ದೀರಿ. ನಿಮ್ಮ ಸಂಪಾದಕರಿಗೆ ಈ ಬಗ್ಗೆ ಹೇಳಿ. ಸುಮ್ಮನೆ ಸುದ್ದಿ ಮಾಡುವುದರಿಂದ ಏನು  ನಿಮಗೇನು ಲಾಭ ಎಂದು ಯಾದಗಿರಿ ಬ್ಯಾಂಕ್​ ಪ್ರಕರಣ ಸಂಬಂಧ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿ, ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಎಚ್​ಡಿಕೆ, ಬೆಳಗ್ಗೆಯಿಂದ ಸುದ್ದಿ ಮಾಡುತ್ತಿದ್ದಿರಾ, ಇದರಿಂದ ಏನು ಪ್ರಯೋಜನ. ರಾಷ್ಟ್ರೀಯ ಬ್ಯಾಂಕ್ ನಿಂದ ಆಗಿರುವ ತಪ್ಪಿಗೆ ನಮ್ಮ ಮೇಲೆ ಯಾಕೆ ದೋಷಣೆ ಮಾಡುತ್ತೀರಾ. ಮೋದಿ ಬಗ್ಗೆ ದಿನಾ ಹೊಗಳುತ್ತೀರಾ ಅಲ್ವಾ. ಇದರ ಬಗ್ಗೆಯೂ ನೀವು ಮಾತಾಡಿ. ರಾಜ್ಯ ಅಭಿವೃದ್ದಿಯಾಗಬೇಕಾ ಅಥವಾ ಹಾಳಾಗಬೇಕಾ ನೀವೇ ನಿರ್ಧಾರ ಮಾಡಿ. ಅಸತ್ಯವನ್ನು ದಿನಾ ತೋರಿಸಿ ಏನ್ ಸಾಧನೆ ಮಾಡುತ್ತೀರಾ. ಈ ಸರ್ಕಾರದ ಮೇಲೆ ಸುಳ್ಳು ಹೇಳಿ ಏನ್ ಮಾಡ್ತೀರಾ. ಮೋದಿನಾ ದಿನಾ ಹೊಗಳುತ್ತೀರಾ. ಹೋಗಿ ಮೋದಿಗೆ ಹೇಳಿ ಎಂದು ಮಾಧ್ಯಮಗಳ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದರು.

3.ಡಿಸಿಎಂ-ರೇವಣ್ಣ ನಡುವೆ ಮಾತಿನ ಚಕಮಕಿ

ಉಪಮುಖ್ಯಮಂತ್ರಿ ನೇತೃತ್ವದಲ್ಲಿ ಇಂದು ನಡೆದು ಅಧಿಕಾರಿಗಳ ಸಭೆಯಲ್ಲಿ ಸಚಿವ ರೇವಣ್ಣ ಮತ್ತು ಡಾ.ಜಿ.ಪರಮೇಶ್ವರ್ ನಡುವೆ ವಾಗ್ವಾದ ನಡೆಯಿತು. ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ಸೂಚಿಸಿ ಪರಮೇಶ್ವರ್ ತರಾಟೆಗೆ ತೆಗೆದುಕೊಳ್ಳುವಾಗ ರೇವಣ್ಣ ಮಧ್ಯೆಪ್ರವೇಶಿಸಿ ತಮ್ಮ ಇಲಾಖೆ ಬಗ್ಗೆ ಸಮಜಾಯಿಷಿ ಕೊಡಲು ಮುಂದಾದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ.  ಯಾವುದೇ ಕಾಮಗಾರಿಗಳು ನಿಗದಿತ ಸಮಯದಲ್ಲೇ ಪೂರ್ಣವಾಗಬೇಕು. ಆದರೆ ಸರಿಯಾದ ಸಮಯಕ್ಕೆ ಕಾಮಗಾರಿ ಮುಗಿಯುತ್ತಿಲ್ಲ. ನೀವು ಗುತ್ತಿಗೆದಾರನಿಗೆ ಮತ್ತಷ್ಟು ಕಾಲಾವಕಾಶ ಕೊಟ್ಟರೆ ಕಾಮಗಾರಿ ವೆಚ್ಚ ಕೂಡ ಹೆಚ್ಚಾಗುತ್ತದೆ. ಹೀಗೆ ಕಾಮಗಾರಿ ಯಾಕೆ ಹೆಚ್ಚಳ ಆಗುತ್ತದೆ ಎಂದು ಪರಮೇಶ್ವರ್​ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು. ಇದರಿಂದ ಕಾಮಗಾರಿ ವೆಚ್ಚ ಕೋಟಿಗಟ್ಟಲೇ ಹೆಚ್ಚಾಗುತ್ತೆ. ಇದಕ್ಕೆ ಯಾರು ಹೊಣೆ? ನೀವು ನಿಗದಿ ಮಾಡಿದ ನಿಗದಿತ ಸಮಯದಲ್ಲೇ ಯಾಕೆ ಕೆಲಸ ಪೂರ್ಣ ಮಾಡಲ್ಲ? ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣ ಮಾಡಿ. ಇಲ್ಲವೇ ಸರ್ಕಾರದ ಹಣ ವ್ಯರ್ಥವಾಗುತ್ತದೆ. ಶಾಲಾ‌ ಸೇತುವೆ ನಿರ್ಮಾಣ ಅಗತ್ಯ ಇದ್ದರೆ ಅದನ್ನು ಮೊದಲೇ ಮಾಡೋಕೆ ಏನು? ಸಿಎಂ ಕುಮಾರಸ್ವಾಮಿ ಹೇಳಿದ ಮೇಲೆಯೇ ಅದನ್ನು ಮಾಡ್ತೀರಲ್ಲ ಎಂದು ಪರಮೇಶ್ವರ್ ಸಿಟ್ಟಾದರು.

4.ವೀರೇಂದ್ರ ಕುಮಾರ್​​ ಲೋಕಸಭೆ ಸ್ಪೀಕರ್​ನರೇಂದ್ರ ಮೋದಿ ಪ್ರಧಾನಿಯಾಗಿ ಎರಡನೇ ಬಾರಿ ಆಯ್ಕೆಯಾದ ಬೆನ್ನಲ್ಲೇ ಸಚಿವ ಸಂಪುಟ ರಚನೆ ಮಾಡಲಾಗಿತ್ತು. ಆದರೆ 17ನೇ ಲೋಕಸಭೆಯ ಸ್ಪೀಕರ್​ ಆಯ್ಕೆ ಆಗಿರಲಿಲ್ಲ. ಇದೀಗ ಬಿಜೆಪಿಯ ಸಂಸದ ವೀರೇಂದ್ರ ಕುಮಾರ್​ ಖತಿಕ್​ ಅವರನ್ನು ಸ್ಪೀಕರ್​ ಆಗಿ ಆಯ್ಕೆಮಾಡಲಾಗಿದೆ. ಶೀಘ್ರದಲ್ಲೇ ವೀರೇಂದ್ರ ಕುಮಾರ್​ ಲೋಕಸಭಾ ಸ್ಪೀಕರ್​ ಸ್ಥಾನವನ್ನು ಅಲಂಕರಿಸಲಿದ್ದಾರೆ. ವೀರೇಂದ್ರ ಕುಮಾರ್​ ಮಧ್ಯಪ್ರದೇಶದ ಸಾಗರ್​ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಹಿರಿಯ ಬಿಜೆಪಿ ಮುಖಂಡರೂ ಆಗಿದ್ಧಾರೆ. ಈ ಹಿಂದೆ ಮನೇಕಾ ಗಾಂಧಿಯವರನ್ನು ಸಂಪುಟದಿಂದ ಹೊರಗಿಟ್ಟಾಗ, ಈ ಬಾರಿಯ ಸ್ಪೀಕರ್​ ಆಗಿ ಅವರನ್ನು ನೇಮಕ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಈ ಊಹಾಪೋಹಕ್ಕೆ ಉತ್ತರ ಸಿಕ್ಕಿದ್ದು, ಸ್ಪೀಕರ್​ ಸ್ಥಾನಕ್ಕೆ ವೀರೇಂದ್ರ ಕುಮಾರ್​ ಆಯ್ಕೆಯಾಗಿದ್ದಾರೆ.

5.ಬಂಧಿತ ಉ.ಪ್ರದೇಶ ಪತ್ರಕರ್ತನ ಬಿಡುಗಡೆಗೆ ಸುಪ್ರೀಂ ಆದೇಶ

ಸಾಮಾಜಿಕ ಜಾಲತಾಣದ ಪೋಸ್ಟ್​ಗಳಿಗೆ ಸಂಬಂಧಪಟ್ಟ ಹಾಗೆ ಯಾವುದೇ ವ್ಯಕ್ತಿಯನ್ನು 11 ದಿನ ಜೈಲಿನಲ್ಲಿ ಇರಿಸುವಂತಿಲ್ಲ ಎಂದು ಮಂಗಳವಾರ ಸುಪ್ರೀಂಕೋರ್ಟ್​ ಹೇಳಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಬರೆವಣಿಗೆ ಹಂಚಿಕೊಂಡಿದ್ದ ಪತ್ರಕರ್ತನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು. ಈ ಬಂಧನ ಪ್ರಶ್ನಿಸಿ ಪತ್ರಕರ್ತನ ಹೆಂಡತಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ನಾವು ಗಮನಿಸುತ್ತಿದ್ದೇವೆ. ಇದು ಕೊಲೆ ಪ್ರಕರವಣವೇನಲ್ಲ. ಬಂಧನಕ್ಕೆ ಒಳಗಾಗಿರುವ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಈ ಕೂಡಲೇ ಬಿಡುಗಡೆ ಮಾಡಿ ಎಂದು ಕೋರ್ಟ್​ ಆದೇಶಿಸಿದೆ

6.ಪಶ್ಚಿಮ ಬಂಗಾಳ ಹಿಂಸಾಚಾರ; ಕಚ್ಚಾ ಬಾಂಬ್​ ದಾಳಿಗೆ ಇಬ್ಬರ ಸಾವು

ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವಿನ ಘರ್ಷಣೆ  ಬೆನ್ನಲ್ಲೇ ಅಪರಿಚಿತರ ಗುಂಪೊಂದು ನಿನ್ನೆ ಮಧ್ಯಾರಾತ್ರಿ  24 ಪರಗಣ ಜಿಲ್ಲೆಯ ಕಂಕಿನಾರದಲ್ಲಿ ಕಚ್ಚಾ ಬಾಂಬ್​ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸ್ಥಳದಲ್ಲಿ ಕಳ್ಳತನ ನಡೆಯುತ್ತಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಾವು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇವೆ. ಈ ಮಧ್ಯೆ ನಿನ್ನೆ ರಾತ್ರಿ ಅಪರಿಚಿತರ ಗುಂಪೊಂದು ಬಾಂಬ್​ ದಾಳಿ ನಡೆಸಿದೆ. ಇದರಿಂದ ನಾವು ಭಯಗೊಂಡಿದ್ದೇವೆ ಎಂದು ಇಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿದ್ದು, ಈ ನಡುವೆ ಈ ಬಾಂಬ್​ ದಾಳಿ ನಡೆದಿದೆ.

7.ನಾಪತ್ತೆಯಾದ ವಿಮಾನ ಅವಶೇಷ ಪತ್ತೆ

ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದ್ದ ಭಾರತೀಯ ವಾಯು ಪಡೆಯ ಎಎನ್​ 32 ವಿಮಾನದ ಅವಶೇಷಗಳು ಪತ್ತೆಯಾಗಿವೆ. ಜೂ.3ರಂದು ಅಸ್ಸಾಂನ ಜೊರಾತ್​ನಿಂದ ಅರುಣಾಚಲ ಪ್ರದೇಶದ ಮೆಚುಕಾಗೆ ಹೊರಟ್ಟಿದ್ದ ವಿಮಾನ ಟೇಕಾಫ್​ ಬಳಿಕ ಸಂಪರ್ಕ ಕಳೆದುಕೊಂಡಿತ್ತು. ವಿಮಾನದಲ್ಲಿ 8 ಸಿಬ್ಬಂದಿ, 5 ಪ್ರಯಾಣಿಕರು ಸೇರಿದಂತೆ 13 ಮಂದಿ ಪ್ರಯಾಣಿಸುತ್ತಿದ್ದರು. ಈ ವಿಮಾನದ ಪತ್ತೆಗಾಗಿ ಕಳೆದ 8 ದಿನಗಳಿಂದ ಭಾರತೀಯ ವಾಯುಪಡೆ ತೀವ್ರ ಶೋಧ ನಡೆಸಿತ್ತು. ಅರುಣಾಚಲ ಪ್ರದೇಶದ ಲಿಪೋನಿಂದ ಉತ್ತರಕ್ಕೆ 16 ಕಿಮೀ ದೂರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಭಾರತೀಯ ವಾಯುಪಡೆಯ ಮಿ 17 ಹೆಲಿಕ್ಯಾಪ್ಟರ್​ ಈ ಅವಶೇಷ ಪತ್ತೆ ಹಚ್ಚಿದೆ. ಸದ್ಯ ಈಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಿಗಾಗಿ ಹುಡುಕಾಟ ನಡೆದಿದ್ದು, ಅವರು ಬದುಕ್ಕಿದ್ದಾರಾ ಇಲ್ಲವಾ ಎಂಬ ಬಗ್ಗೆ ಶೋಧ ಕಾರ್ಯ ಮುಂದುವರೆದಿದೆ.

8.ಪ್ರಿಯಾಂಕಾ ಮಗುವಿಗೆ ಹೋಲಿಕೆ ಮಾಡಿದ ಶ್ರೀನಿವಾಸ್​

ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಹಾಗೂ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್​ 'ಮಗು'ವಿಗೆ ಹೋಲಿಕೆ ಮಾಡಿ ವಿಡಂಬನೆ ಮಾಡಿದ್ದಾರೆ. "ಛೇ ಪಾಪ, ನಾನು ಕಾಂಗ್ರೆಸ್​​ನಲ್ಲಿದ್ದಾಗ ಅವರು ಇನ್ನೂ ಮಗುವೇನೋ, ಈಗ ಅವರನ್ನು ರಾಜಕೀಯಕ್ಕೆ ಕರೆತಂದು ಚಾಕೊಲೇಟ್​ ಕೊಡುತ್ತಿದ್ದಾರೆ. ಸುಮ್ಮನೆ ಯಾಕೆ ಅವರ ಬಗ್ಗೆ ಮಾತನಾಡುತ್ತೀರಾ," ಎಂದು ಲೇವಡಿ ಮಾಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಕಾಂಗ್ರೆಸ್​​ನವರಿಗೆ ವಿರೋಧ ಪಕ್ಷದಲ್ಲಿ ಕೂರುವುದಕ್ಕೂ ಸ್ಥಾನ ಇಲ್ಲ. ಮೊದಲು ಅವರು ಪಕ್ಷ ಸಂಘಟನೆ ಮಾಡುವ ಕಡೆ ಗಮನ ಹರಿಸಲಿ," ಎಂದು ಟೀಕಿಸಿದರು.

9.ಅಭಿಮಾನಿ ಸಾವಿಗೆ ಮಿಡಿದ ದರ್ಶನ್​

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸುಮಲತಾ  ನಾಮಪತ್ರ ಸಲ್ಲಿಕೆ ವೇಳೆ ನಡೆದ ಬೃಹತ್​ ಸಮಾವೇಶಕ್ಕೆ ಬಂದಿದ್ದ ದರ್ಶನ್ ಹಾಗೂ ಅಂಬಿ ಅಭಿಮಾನಿಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಕುಟುಂಬಕ್ಕೆ ಈಗ ದಚ್ಚು ಸಹಾಯ ಮಾಡುವ ಮೂಲಕ ದರ್ಶನ್​ ಮಾನವೀಯತೆ ಮೆರೆದಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಉರಮಾರಕಸಲಗೆರೆ ಗ್ರಾಮದ ಅಭಿಮಾನಿ ಕಿರಣ್‍ ಸಾವನ್ನಪ್ಪಿದ ಅಭಿಮಾನಿ. ಇವರದು ಬಡ ಕುಟುಂಬವಾಗಿದ್ದು, ಕಿರಣ್​ ಸಾವಿನ ಬಳಿಕ  ಅವರ ಪೋಷಕರು ಚಿಕಿತ್ಸೆ ಪಡೆಯಲೂ ಹಣವಿಲ್ಲದೆ ತೊಂದರೆ ಪಡುತ್ತಿದ್ದರು. ಈ ಸುದ್ದಿ ತಿಳಿದ ದರ್ಶನ್​ ತಮ್ಮ ಆಪ್ತ ಇಂಡುವಾಳು ಸಚ್ಚಿದಾನಂದ ಅವರ ಮೂಲಕ ಒಂದು ಲಕ್ಷ ರೂ. ಹಣವನ್ನು ಕಿರಣ್ ಕುಟುಂಬಕ್ಕೆ ತಲುಪಿಸಿದ್ದಾರೆ

10 ವಿಶ್ವಕಪ್​ನಿಂದ ಶಿಖರ್ ಧವನ್ ಮೂರು ವಾರ ಹೊರಕ್ಕೆ

ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ ಎಂಬೊತ್ತಿಗೆ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಇಂಜುರಿಯಿಂದಾಗಿ ವಿಶ್ವಕಪ್ನಿಂದ ಮೂರು ವಾರಗಳ ಕಾಲ ಹೊರಗುಳಿದಿದ್ದಾರೆ. ಕಳೆದ ಆಸ್ಟ್ರೇಲಿಯಾ ಪಂದ್ಯದ ವೇಳೆ ಧವನ್ ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಬಳಿಕ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ್ದು ಮೂರು ವಾರಗಳ ಕಾಲ ವಿಶ್ರಾಂತಿ ಅಗ್ಯವಿದೆ ಎಂದು ಹೇಳಿದ್ದಾರೆ. ಸದ್ಯ ಧವನ್ ಜಾಗಕ್ಕೆ ಯಾವ ಆಟಗಾರ ಎಂಬ ಪ್ರಶ್ನೆ ಹಿಟ್ಟಿದ್ದು, ರಿಷಭ್ ಪಂತ್, ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್​ಗೆ ಸ್ಥಾನ ಸಿಗುವ ಅಂದಾಜಿದೆ.
First published:June 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ