Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:June 10, 2019, 6:39 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: June 10, 2019, 6:39 PM IST
  • Share this:
1.ಗಿರೀಶ್​ ಕಾರ್ನಾಡ್​ ಇನ್ನಿಲ್ಲ

ಹಿರಿಯ ಸಾಹಿತಿ ಗಿರೀಶ್​ ಕಾರ್ನಾಡ್​ ಇಂದು ನಿಧನ ಹೊಂದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕಾರ್ನಾಡ್​ ಕಳೆದ ಹಲವು ದಿನಗಳಿಂದ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಲ್ಯಾವೆಲ್ಲಿ ರೋಡ್​ ನಲ್ಲಿರುವ ನಿವಾಸದಲ್ಲಿ ಕಾರ್ನಾಡ್​ ಕೊನೆ ಉಸಿರೆಳೆದಿದ್ದಾರೆ.  ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಪರಿಗಣಿಸಿ ಪದ್ಮ ಶ್ರೀ, ಪದ್ಮಭೂಷಣ, ಜ್ಞಾನಪೀಠ ​ ಸೇರಿ ಅನೇಕ ಪ್ರಶಸ್ತಿಗಳು ಲಭ್ಯವಾಗಿದ್ದವು. ಇವರ ನಿಧನಕ್ಕೆ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದರು. ಇನ್ನು ಅವರ ಇಚ್ಛೆಯಂತೆಯೇ ಅವರ ಅಂತ್ಯ ಸಂಸ್ಕಾರವನ್ನು ಯಾವುದೆ ಸರ್ಕಾರಿ ಗೌರವವಿಲ್ಲದೆ ಸರಳವಾಗಿ ನೆರೆವೇರಿಸಲಾಗಿದೆ.

2.ಕಾರ್ನಾಡರ ಸಾವು ಸಂಭ್ರಮಿಸಿದ ವಿರೋಧಿಗಳು

ಕನ್ನಡದ ಖ್ಯಾತ ಸಾಹಿತಿ, ನಾಟಕಕಾರ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗಿರೀಶ್ ಕಾರ್ನಾಡ್​ ಇಂದು ದೈವಾದೀನರಾಗಿದ್ದಾರೆ. ಆದರೆ, ಯು.ಆರ್. ಅನಂತಮೂರ್ತಿ ಸಾವನ್ನಪ್ಪಿದಾಗ ಪಠಾಕಿ ಸಿಡಿಸಿ ಸಂಭ್ರಮಿಸಿದ ಅದೇ ಮನಸ್ಥಿತಿಗಳು ಇಂದು ಗಿರೀಶ್ ಕಾರ್ನಾಡ್ ಅವರ ಸಾವನ್ನೂ ಸಂಭ್ರಮಿಸುತ್ತಿವೆ. ಇಂತಹ ಹೀನ ಕೃತ್ಯಗಳಿಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿರುವುದು ನಿಜಕ್ಕೂ ವಿಷಾಧನೀಯ ಸಂಗತಿ. ವ್ಯಕ್ತಿ ಯಾರೇ ಆಗಿರಲಿ ಅವರ ಸಾವನ್ನು ಸಂಭ್ರಮಿಸುವುದು ಪೈಶಾಚಿಕ ಮನಸ್ಥಿತಿ. ಆದರೆ, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಅಂತಹ ಮನಸ್ಥಿತಿಗಳೇ ತಾಂಡವವಾಡುತ್ತಿವೆ. ಕೆಲವರು ಕಾರ್ನಾಡ್ ಸಾವನ್ನಪ್ಪಿರುವುದು ಒಳ್ಳೆಯ ಸುದ್ದಿ ಎಂದರೆ, ಮತ್ತೆ ಕೆಲವರು ಅವರ ವಿರುದ್ಧ ಅಸಂಬದ್ಧ ಹಾಗೂ ಅವಾಚ್ಯ ಪದಗಳನ್ನು ಬಳಕೆ ಮಾಡುವ ಮೂಲಕ ಕಾರ್ನಾಡ್ ಅವರನ್ನು ನಿಂದಿಸಿದ್ದಾರೆ. ಅಲ್ಲದೆ ಅವರ ಸಾವನ್ನು ಸಂಭ್ರಮಿಸಿದ್ದಾರೆ.

3. ಬೀದಿಗಿಳಿದ ರೈತರಿಂದ ರಾಜ್ಯಾದ್ಯಾಂತ ಪ್ರತಿಭಟನೆ

ಭೂಸ್ವಾಧೀನ ಕಾಯ್ದೆಗೆ ತಂದಿರುವ ತಿದ್ದುಪಡಿ ಕೈಬಿಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟು ರಾಜ್ಯಾದ್ಯಂತ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಹಸಿರು ಸೇನೆ ಸಂಘಟನೆಗಳ ಬೆಂಬಲದೊಂದಿಗೆ ರೈತರು ರಾಜ್ಯದ ವಿವಿಧೆ ಹೆದ್ದಾರಿಗಳನ್ನ ಬಂದ್ ಮಾಡಿದರು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಹಾವೇರಿ, ಗದಗ ಹಾಗೂ ಉತ್ತರ ಕರ್ನಾಟಕದ ಇತರ ಬಹುತೇಕ ಜಿಲ್ಲೆಗಳಲ್ಲಿ ರೈತರ ಪ್ರತಿಭಟನೆ ಯಶಸ್ವಿಯಾಗಿ ನಡೆದಿದೆ. ರೈತ ಸಂಘಟನೆಗಳು ಕರೆಕೊಟ್ಟ ಈ ಹೆದ್ದಾರಿ ಬಂದ್​ಗೆ ಹಲವೆಡೆ ಆರಂಭದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗದೇ ಹೋದರೂ ಹತ್ತು ಗಂಟೆಯ ನಂತರ ಸಾಕಷ್ಟು ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬೃಹತ್ ಪ್ರತಿಭಟನೆಯ ಅಂದಾಜು ಇದ್ದ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರಿಂದ ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆಯುವಲ್ಲಿ ಯಶಸ್ವಿಯಾದರು.

4. ಐಎಂಎ ಜ್ಯುವೆಲರ್ಸ್​ನಿಂದ ಜನರಿಗೆ ಮೋಸಶಿವಾಜಿನಗರ ಪ್ರತಿಷ್ಠಿತ ಐಎಂಎ ಜ್ಯುವೆಲರಿ ಅಂಗಡಿ ಮಾಲೀಕ ಮಹಮ್ಮದ್​ ಮನ್ಸೂರ್​ ಖಾನ್​ ಇಂದು ಬೆಳಗ್ಗೆ ಹರಿಬಿಟ್ಟ ವಿಡಿಯೋ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ. ತನಗೆ ಕಾಂಗ್ರೆಸ್​ ಶಾಸಕ ರೋಷನ್​ ಬೇಗ್​ ಹಣ ಪಡೆದು ಹಿಂದಿರುಗಿಸದೆ ವಂಚಿಸುತ್ತಿದ್ದಾರೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿಡಿಯೋ ಮಾಡಿರುವ ಮನ್ಸೂರ್ ಖಾನ್​ ನಗರ ಪೊಲೀಸ್ ಕಮಿಷನರ್​ಗೆ ಕಳುಹಿಸಿಕೊಟ್ಟಿದ್ದಾರೆ. ವಿಡಿಯೋ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಮನ್ಸೂರ್​ಖಾನ್​ಗೆ ಹಣ ನೀಡದ ನೂರಾರು ಜನರು ಮತ್ತು ಹೂಡಿಕೆದಾರರು ಶಿವಾಜಿನಗರದ ಐಎಂಎ ಜ್ಯುವೆಲರಿ ಅಂಗಡಿ ಬಳಿ ಜಮಾಯಿಸಿದರು. ನಂತರ ಅಂಗಡಿಗೆ ಮುತ್ತಿಗೆ ಹಾಕಲು ಜನರು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್​ ಮಾಡಿ, ಜನರನ್ನು ಚದುರಿಸಿದರು. ಸ್ಥಳದಲ್ಲಿ ಈಗಲೂ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

5. ಸಾಮಾಜಿಕ ಜಾಲತಾಣದಲ್ಲಿ ಸಿಎಂ ವಿರುದ್ಧ ನಿಂದನೆ ಆರೋಪ; ಇಬ್ಬರು ವಶಕ್ಕೆ

ಲೋಕಸಭಾ ಚುನಾವಣೆಯ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದಿಸುವವರ ಪಟ್ಟಿ ಬೆಳೆಯುತ್ತಲೇ ಇದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಕುಟುಂಬದ ವಿರುದ್ಧ ನಿಂದನಾತ್ಮಕ ವಿಡಿಯೋ ಒಂದನ್ನು ಅಪ್​ಲೋಡ್ ಮಾಡುವ ಮೂಲಕ ಇದೀಗ ಮತ್ತಿಬ್ಬರು ಪೊಲೀಸರ ಅಥಿತಿಯಾಗಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಚನ್ನಪಟ್ಟಣ ನಿವಾಸಿಗಳಾದ ಸಿದ್ದರಾಜು ಹಾಗೂ ಚಾಮರಾಜ ಎಂದು ಗುರುತಿಸಲಾಗಿದೆ. ಒಬ್ಬ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಮಂಡ್ಯದಲ್ಲಿ ಜೆಡಿಎಸ್ ಪಕ್ಷದ ಸೋಲು ಹಾಗೂ ಕುಮಾರಸ್ವಾಮಿಯವರ ಕುಟುಂಬ ರಾಜಕಾರಣಕ್ಕೆ ಬೇಸತ್ತು ಇವರಿಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿ ವಿಡಿಯೋ ಒಂದನ್ನು ಮಾಡಿದ್ದಾರೆ. ಅಲ್ಲದೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

6. ಕುಥುವಾ ಬಾಲಕಿ ಕೊಲೆಪ್ರಕರಣ; ಆರೋಪಿಗಳಿಗೆ ಜೀವವಾಧಿ ಶಿಕ್ಷೆ

ಜಮ್ಮು-ಕಾಶ್ಮೀರದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ದೇವಸ್ಥಾನ ಪೂಜಾರಿ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ಉಳಿದ ಮೂವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಪಠಾಣ್​ಕೋಟ್​ ವಿಶೇಷ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದೆ. ಪ್ರಕರಣ ಪ್ರಮುಖ ಆರೋಪಿ ಸಂಜಿ ರಾಮ್​ ಮತ್ತು ಆತನ ಸಂಬಂಧಿಗಳಾದ ಪರ್ವೇಶ್​ ಕುಮಾರ್, ದೀಪಕ್​ ಕುಂಜಾರಿಯಾ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರೆ, ಪೊಲೀಸ್​ ಸಬ್ಇನ್ಸ್​ಪೆಕ್ಟರ್​ ಆನಂದ್​ ದತ್ತಾ, ಹೆಡ್​ ಕಾನ್ಸ್​ಟೇಬಲ್​ ತಿಲಕ್​ ರಾಜ್​ ಮತ್ತು ವಿಶೇಷ ಪೊಲೀಸ್​ ಅಧಿಕಾರಿ ಸುರೇಂದರ್ ವರ್ಮಾ ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

7. ಜಾರ್ಖಂಡ್​ನಲ್ಲಿ ಭೀಕರ ಅಪಘಾತ; 11 ಜನರ ಸಾವು

ಪ್ರಯಾಣಿಕರ ಡಬಲ್ ಡೆಕ್ಕರ್ ಬಸ್​ ಒಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಬ್ರೇಕ್​ ಫೇಲ್ಯೂರ್ ಆಗಿ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ 11 ಜನ ಧಾರುಣ ಸಾವಿಗೆ ಈಡಾಗಿರುವ ಘಟನೆ ಜಾರ್ಖಂಡ್​ನ ಹಜಾರಿಭಾಗ್​ನಲ್ಲಿ ನಡೆದಿದೆ. ಘಟನೆಯಲ್ಲಿ 25 ಜನರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಹಜಾರಿಭಾಗ್ ರಾಷ್ಟ್ರೀಯ ಹೆದ್ದಾರಿ 2 ರಲ್ಲಿ ಬಸ್​ 120 ಕಿಮೀ ವೇಗದಲ್ಲಿ ಪಾಟ್ನಾದ ಮಸೂರಿ ಜಿಲ್ಲೆಯಿಂದ ರಾಂಚಿ ಕಡೆಗೆ ಚಲಿಸುತ್ತಿತ್ತು. ಈ ವೇಳೆ ಬ್ರೇಕ್​ ಕೆಲಸ  ನಿರ್ವಹಿಸುತ್ತಿಲ್ಲ ಎಂಬ ಅಂಶ ಚಾಲಕನ ಗಮನಕ್ಕೆ ಬಂದಿದೆ. ಪರಿಣಾಮ ಬಸ್​ ಅನ್ನು ನಿಯಂತ್ರಿಸಲು ಚಾಲಕ ಸಾಕಷ್ಟು ಪ್ರಯತ್ನಪಟ್ಟಿದ್ದಾನೆ. ಆದರೂ, ವೇಗದಲ್ಲಿ ಚಲಿಸುತ್ತಿದ್ದ ಬಸ್​ ಅನ್ನು ನಿಯಂತ್ರಿಸುವುದು ಸಾಧ್ಯವಾಗಲಿಲ್ಲ. ಪರಿಣಾಮ ಎದುರುಗಡೆಯಿಂದ ಬರುತ್ತಿದ್ದ ಟ್ರಕ್​ಗೆ ಬಸ್​ ಡಿಕ್ಕಿ ಹೊಡೆದಿದೆ.

 8. ಎಐಸಿಸಿ ಬದಲಾವಣೆ ಪರ್ವ; ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಹೆಸರು

ಲೋಕಸಭಾ ಚುನಾವಣೆಯ ನಂತರ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್​ ಪಕ್ಷದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎರಡು ದಶಕಗಳ ನಂತರ ಮೊದಲ ಬಾರಿಗೆ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರುವ ಎಲ್ಲಾ ಸಾಧ್ಯತೆಗಳೂ ಎದ್ದು ಕಾಣಿಸುತ್ತಿವೆ. ಅಲ್ಲದೆ ಕರ್ನಾಟಕ ಹಿರಿಯ ನಾಯಕ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರು ಈ ಸ್ಥಾನಕ್ಕೆ ಪಸ್ತಾಪವಾಗುತ್ತಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತೊಮ್ಮೆ ಹೀನಾಯ ಸೋಲು ಅನುಭವಿಸಿತ್ತು. ಈ ಸೋಲಿನ ಹೊಣೆ ಹೊತ್ತ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ ಹಿಂದುಳಿದ ವರ್ಗದ ವ್ಯಕ್ತಿಯನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಂತೆಯೂ ಸಲಹೆ ನೀಡಿದ್ದರು. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಎಐಸಿಸಿ ಅಧ್ಯಕ್ಷ ಸ್ಥಾನದ ರೇಸ್​ನಲ್ಲಿ ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

9 ಓವಲ್​ನಲ್ಲಿ ಇಂಡಿಯಾ-ಆಸ್ಟ್ರೇಲಿಯಾ ಮ್ಯಾಚ್​ ಕಣ್ತುಂಬಿಕೊಂಡ ಸಿನಿತಾರೆಯರು

ಲಂಡನ್​ನ ಓವಲ್​ ಕ್ರೀಡಾಂಗಣದಲ್ಲಿ ನಡೆದ ಭಾರತ V/S ಆಸ್ಟ್ರೇಲಿಯಾ ಪಂದ್ಯದಲ್ಲಿ ಈ ಸಲ ತಾರೆಯರ ಸಮಾಗಮವಾಗಿತ್ತು. ಒಂದು ಕಡೆ ಪ್ರಿನ್ಸ್ ಮಹೇಶ್​ಬಾಬು ಕುಟುಂಬ ಸಮೇತರಾಗಿ ಲಂಡನ್​ನಲ್ಲಿದ್ದರೆ, ಕಿಚ್ಚ ಸುದೀಪ್​ ಸಹ ಆಪ್ತರೊಂದಿಗೆ ಲಂಡನ್​ನಲ್ಲಿ ಪ್ರವಾಸದಲ್ಲಿದ್ದಾರೆ. ಹೀಗಾಗಿಯೇ ಈ ಎರಡೂ ಕುಟುಂಬಗಳೂ ಓವಲ್​ನಲ್ಲಿ ನಡೆದ ಪಂದ್ಯದ ನಡೆಯುವಾಗ ವೀಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮದ್ಯದ ದೊರೆ ಮಲ್ಯ ಸಹ ತಮ್ಮ ಮಗ ಸಿದ್ಧಾರ್ಥ್ ಜೊತೆ ಕಾಣಿಸಿಕೊಂಡಿದ್ದಾರೆ.

 10. ಕ್ರಿಕೆಟ್​​ಗೆ ಯುವರಾಜ್ ನಿವೃತ್ತಿ

 ಜಗತ್ತು ಕಂಡ ಅತ್ಯುತ್ತಮ ಆಟಗಾರ, 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಇಂದು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೊಷಿಸಿದ್ದಾರೆ. ಬಿಸಿಸಿಐ ಜೊತೆ ಚರ್ಚಿಸಿ ಮುಂಬೈನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಿಕ್ಸರ್ ಸಿಂಗ್ ತಮ್ಮ ಕ್ರಿಕೆಟ್ ಜೀವನದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು 19 ವರ್ಷದ ಕ್ರಿಕೆಟ್ಜೀವನವನ್ನು ಅಂತ್ಯಗೊಳಿಸಿದ್ದಾರೆ. ಯುವಿ ಒಟ್ಟು 304 ಏಕದಿನ ಪಂದ್ಯಗಳನ್ನು ಆಡಿದ್ದು 8701 ರನ್ ಕಲೆಹಾಕಿದ್ದಾರೆ. ಇದರಲ್ಲಿ 52 ಅರ್ಧಶತಕ ಹಾಗೂ 14 ಶತಕಗಳು ಸೇರಿವೆ. ಗರಿಷ್ಠ ಸ್ಖೋರ್ 150 ಆಗಿದೆ. ಜೊತೆಗೆ 111 ವಿಕೆಟ್ಗಳನ್ನು ಪಡೆದಿದ್ದಾರೆ.
First published:June 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ