Evening Digest : ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18
Updated:June 1, 2019, 7:17 PM IST
Evening Digest : ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: June 1, 2019, 7:17 PM IST
  • Share this:
1. ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಸೋನಿಯಾ ಗಾಂಧಿ ನೇಮಕ

ಕಾಂಗ್ರೆಸ್​ ಪಕ್ಷದ ಸಂಸದೀಯ ನಾಯಕರಾಗಿ ಸೋನಿಯಾ ಗಾಂಧಿ ಆಯ್ಕೆಯಾಗಿದ್ದಾರೆ. ಈ ವಿಚಾರವನ್ನು ಕಾಂಗ್ರೆಸ್​ ವಕ್ತಾರ ಸಂದೀಪ್​ ಸುರ್ಜೇವಾಲಾ ಅಧಿಕೃತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಸಂದೀಪ್​, "ಸೋನಿಯಾ ಗಾಂಧಿ ಅವರು ಕಾಂಗ್ರೆಸ್​ ಸಂಸದೀಯ ಪಕ್ಷದ ನಾಯಕರಾಗಿ ನೇಮಕಗೊಂಡಿದ್ದಾರೆ. ಕಾಂಗ್ರೆಸ್​​ ಮೇಲೆ ನಂಬಿಕೆ ಇಟ್ಟ 12.13 ಕೋಟಿ ಜನರಿಗೆ ಅವರು ಧನ್ಯವಾದ ಹೇಳಿದ್ದಾರೆ," ಎಂದಿದ್ದಾರೆ. ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸ್ಥಾನಕ್ಕೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರು ಸೋನಿಯಾ ಹೆಸರನ್ನು ಸೂಚಿಸಿದ್ದರು ಎಂಬುದು ಮೂಲಗಳ ಮಾಹಿತಿ. ಈ ಮೊದಲು ಕರ್ನಾಟಕ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ​ ಖರ್ಗೆ  ಸಂಸದೀಯ ನಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಅವರು ಈ ಬಾರಿಯ ಚುನಾವಣೆಯಲ್ಲಿ ಖರ್ಗೆ ಬಿಜೆಪಿ ಅಭ್ಯರ್ಥಿ ಉಮೇಶ್​ ಜಾಧವ್​ ವಿರುದ್ಧ ಸೋತಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಯ್​ಬರೇಲಿ ಕ್ಷೇತ್ರದಿಂದ ಸೋನಿಯಾ ಗಾಂಧಿ ಸ್ಪರ್ಧೆ ಮಾಡಿ ಗೆದ್ದಿದ್ದರು

2. ಅಮೆರಿಕದಲ್ಲಿ ಮತ್ತೆ ಗುಂಡಿನ ಮೊರೆತ; ಉದ್ಯೋಗಿಯ ಕೋಪಕ್ಕೆ 11 ಸಹೋದ್ಯೋಗಿಗಳು ಬಲಿ

ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ. ಕೋಪಗೊಂಡ ವ್ಯಕ್ತಿಯೋರ್ವ ಕಚೇರಿಯಲ್ಲೇ ಗುಂಡು ಹಾರಿಸಿದ್ದು, 11 ಸಹೋದ್ಯೋಗಿಗಳನ್ನು ಬಲಿ ತೆಗೆದುಕೊಂಡಿದ್ದಾನೆ. ಈತನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. ವರ್ಜಿನಿಯಾ ಬೀಚ್​ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂಜೆ ವೇಳೆ ಮುನ್ಸಿಪಲ್​ ಕಟ್ಟಡದ ಒಳಗೆ ಆಗಮಿಸಿದ ಈತ ಏಕಾಏಕಿ ಗುಂಡು ಹಾರಿಸಿದ್ದ. ಈ ವೇಳೆ ಪೊಲೀಸರು ಅಲ್ಲಿದ್ದವರ ರಕ್ಷಣೆಗೆ ಮುಂದಾಗಿದ್ದರು. ಆಗ, ಪೊಲೀಸರ ಮೇಲೂ ಶಸ್ತ್ರಾಸ್ತ್ರಧಾರಿ ಗುಂಡು ಹಾರಿಸಲು ಮುಂದಾಗಿದ್ದ. ಪೊಲೀಸರು ಪ್ರತಿ ದಾಳಿ ನಡೆಸಿ ಆತನನ್ನು ಹತ್ಯೆಗೈದಿದ್ದಾರೆ. ಪೊಲೀಸ್​ ಅಧಿಕಾರಿ ಸೇರಿದಂತೆ ಕಟ್ಟಡದಲ್ಲಿದ್ದ ಆರು ಜನರ ಪ್ರಾಣ ಉಳಿದಿದೆ. 11 ಜನರು ಮೃತಪಟ್ಟಿದ್ದಾರೆ. ಇತ್ತೀಚೆಗೆ ಕೆಲಸದ ಸ್ಥಳದಲ್ಲಿ ನಡೆದ ಅತಿ ಭೀಕರ ಗುಂಡಿನ ದಾಳಿ ಇದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಾಗೂ ಎಫ್​ಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

3.ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕಿಮ್ ಜಾಂಗ್

ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿ ಮಾಡುತ್ತಲೇ ಇರುವ ಉತ್ತರ ಕೊರಿಯಾ ನಾಯಕ ಕಿಮ್​ ಜಾಂಗ್​ ಉನ್​ ಈಗ ಅಧಿಕಾರಿಗಳಿಗೆ ಮರಣದಂಡನೆ ವಿಧಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಫೆಬ್ರವರಿಯಲ್ಲಿ ಅಮೆರಿಕ ಹಾಗೂ ಉತ್ತರ ಕೊರಿಯಾ ನಡುವೆ ಶೃಂಗ ಸಭೆ ನಡೆದಿತ್ತು. ಸಭೆಯನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಉತ್ತರ ಕೊರಿಯಾ ವಿಶೇಷ ರಾಯಭಾರಿ ಕಿಮ್​ ಹ್ಯಾಕ್​ ಚೋಲ್​ ಹೊತ್ತಿದ್ದರು. ಆದರೆ, ಸಭೆ ಸಂಪೂರ್ಣವಾಗಿ ವಿಫಲವಾಗಿತ್ತು. ಹಾಗಾಗಿ ಕಿಮ್ ಹ್ಯಾಕ್​​ ಸೇರಿ ಐದು ಅಧಿಕಾರಿಗಳಿಗೆ ಕಿಮ್​ ಜಾಂಗ್​ ಮರಣದಂಡನೆ ವಿಧಿಸಿದ್ದಾರೆ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ. ಇದಾದ ಕೆಲವೇ ತಿಂಗಳಲ್ಲಿ ಅವರು ಸತ್ತಿಲ್ಲ ಬದುಕಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಈ ವಿಚಾರ ಗೊಂದಲದಲ್ಲಿದೆ.

4.ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಸೋತದ್ದಕ್ಕೆ ಬೇಸರವಿದೆ; ಪೇಜಾವರ ಶ್ರೀರಾಜ್ಯದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಾಗಬಾರದಿತ್ತು ಎಂದು ಪೇಜಾವರ ಮಠದ ಮಠಾಧಿಪತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, “ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಏಕೈಕ ಉದ್ದೇಶದಿಂದ ಕಾಂಗ್ರೆಸ್​ ಹಾಗೂ ಜೆಡಿಎಸ್ ಮೈತ್ರಿ ಸಾಧಿಸಿಕೊಂಡಿತ್ತು. ಪರಿಣಾಮ ಜನರಲ್ಲಿ ಹಿಂದುತ್ವದ ಭಾವನೆ ಜಾಗೃತವಾಯಿತು. ಇದೇ ಕಾರಣಕ್ಕೆ ಮೈತ್ರಿ ಪಕ್ಷದ ಎಲ್ಲಾ ನಾಯಕರು ಸೋಲಬೇಕಾದ ಪರಿಸ್ಥಿತಿ ಎದುರಾಯಿತು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ

5.ಪುರಸಭೆ ಚುನಾವಣೆಗೆ ನಾನು ಹೇಳಿದ ಒಬ್ಬರಿಗೆ ಟಿಕೆಟ್​ ಕೊಡಲಿಲ್ಲ; ಸಾ.ರಾ.ಮಹೇಶ್ ವಿರುದ್ಧ ವಿಶ್ವನಾಥ್ ಅಸಮಾಧಾನ

 ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಇಂದು ಸಚಿವ ಸಾ.ರಾ.ಮಹೇಶ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಕೆ.ಆರ್.ನಗರ ಪುರಸಭೆ ಚುನಾವಣೆಯಲ್ಲಿ ನಾನು ಕುರುಬ ಸಮುದಾಯದ ಒಬ್ಬ ನಾಯಕರಿಗೆ ಟಿಕೆಟ್ ನೀಡುವಂತೆ ಸಾ.ರಾ.ಮಹೇಶ್ ಅವರಲ್ಲಿ ಮನವಿ ಮಾಡಿಕೊಂಡೆ. ಆದರೂ ಟಿಕೆಟ್ ನೀಡಲಿಲ್ಲ. ನಾನು ಅವರದೇ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದರೂ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ನನಗೆ ನೇರವಾಗಿ ಹೇಳಿದರು. ಕುರುಬ ಸಮುದಾಯದ ಬಗ್ಗೆ ಏಕಿಷ್ಟು ಅಸಡ್ಡೆ ನಿಮಗೆ ಎಂದು ಪ್ರಶ್ನೆ ಮಾಡಿದರು. >ಕೆ.ಆರ್.ನಗರ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ನಮ್ಮ ಕುರುಬ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ಕೂಡ ನೀಡಿಲ್ಲ. ನಮ್ಮ ಸಮುದಾಯವನ್ನು ಕಡೆಗಣಿಸಿದ್ದಾರೆ. ಪಕ್ಷದ ರಾಜ್ಯಾದ್ಯಕ್ಷನಾಗಿ ನಾನು ಹೇಳಿದ ಒಬ್ಬರಿಗೂ ಟಿಕೆಟ್ ನೀಡದೆ ದುರಂಹಕಾರದಿಂದ ವರ್ತಿಸಿದ್ದಾರೆ. ಹಣ ಬಲವೇ ಮುಖ್ಯ ಎನ್ನುವ ಮನೋಬಾವವನ್ನು ಇನ್ನಾದರೂ ಬಿಡಿ ಎಂದು ಕೆ.ಆರ್.ನಗರದ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು

6.ಒಂದೇ ಕುಟುಂಬದ ನಾಲ್ವರು ಕೆರೆಗೆ ಬಿದ್ದು ಸಾವು

ಎತ್ತಿನಗಾಡಿಯಲ್ಲಿ ಕೆರೆ ಬದಿಯಲ್ಲಿ ಚಲಿಸುತ್ತಿದ್ದಾಗ ಗಾಡಿ ಆಯತಪ್ಪಿ ಕೆರೆಗೆ ಜಾರಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಧಾರುಣ ಘಟನೆ ಹಾಸನದಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ದಂಪತಿಗಳಾದ ರಾಜೇಗೌಡ(55) ಲಕ್ಷ್ಮೀ(50) ಹಾಗೂ ಅವರ ಸಂಬಂಧಿಕರ ಮಕ್ಕಳಾದ ರುಚಿತ (7) ದುಚಿತ (5) ಎಂದು ಗುರುತಿಸಲಾಗಿದೆ. ರಾಜೇಗೌಡರ ಮನೆಯಲ್ಲಿದ್ದು ವ್ಯಾಸಾಂಗ ಮಾಡುತ್ತಿದ್ದ ಮೊಮ್ಮಕ್ಕಳು ತಾತ ಮತ್ತು ಅಜ್ಜಿಯ ಜೊತೆ ಜಮೀನಿನಲ್ಲಿ ಆಲೂಗೆಡ್ಡೆ ಬಿತ್ತನೆ ಮಾಡಲು ತೆರಳುತ್ತಿದ್ದ ವೇಳೆ ಈ ಅವಘಡ ಜರುಗಿದೆ.

7.ಹಾಸನ ನೂತನ ಸಂಸದರಿಗೆ ದೇವೇಗೌಡರ ಉಡುಗೊರೆ

ಹಾಸನ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಪ್ರಜ್ವಲ್​ ರೇವಣ್ಣ ಅವರಿಗೆ ಜೆಡಿಎಸ್ ಯುವ ಘಟಕದ ಸಾರಥ್ಯ ವಹಿಸಲು ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ. ಪ್ರಜ್ವಲ್ ಹಿಂದಿನಿಂದಲೂ ಸಂಘಟನೆಯಲ್ಲಿ ಬಹಳ ಚತುರರಾಗಿದ್ದಾರೆ. ಪಕ್ಷ ಸಂಘಟನೆ, ಜನರ ನಡುವೆ ಬೆರೆಯುವಿಕೆ, ಕಾರ್ಯಕರ್ತರ ಜೊತೆಗಿನ ಒಡನಾಟ ಗುರುತಿಸಿರುವ ದೇವೇಗೌಡರು ತಮ್ಮ ಮೊಮ್ಮಗನಿಗೆ ಈ ಜವಾಬ್ದಾರಿ ನೀಡಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ರಾಜ್ಯಾದ್ಯಕ್ಷರಾಗಿ ಎಚ್ ವಿಶ್ವನಾಥ್  ಇದ್ದಾರೆ. ಸದ್ಯ ಯುವ ಘಟಕದ ಅಧ್ಯಕ್ಷರಾಗಿ ಮಧು ಬಂಗಾರಪ್ಪ ಇದ್ದಾರೆ. ವಿಶ್ವನಾಥ್  ಕುರುಬ ಜಾತಿ ಪ್ರತಿನಿಧಿ, ಮಧು ಬಂಗಾರಪ್ಪ ಈಡಿಗ ಸಮುದಾಯಕ್ಕೆ ಸೇರಿದವರು. ಒಕ್ಕಲಿಗ ಜಾತಿಯಿಂದ ಆಯಕಟ್ಟಿನ ಸ್ಥಳದಲ್ಲಿ ಒಬ್ಬರಾದರೂ ಇರಲಿ ಎಂದು ಈ ಯೋಚನೆ ಮಾಡಲಾಗಿದೆ8.

8.ಕಲ್ಬುರ್ಗಿ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಬಂಧಿಸಿದ ಎಸ್​ಐಟಿ

ರಾಜ್ಯದ ಪ್ರಗತಿಪರ ಚಿಂತಕ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಎಸ್​ಐಟಿ ಪೊಲೀಸರು ಶುಕ್ರವಾರ ಸಂಜೆ ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ. ಈ ಮೂಲಕ ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲಿ ಎಸ್​ಐಟಿ ಅಧಿಕಾರಿಗಳು ಮಹತ್ವದ ಘಟ್ಟ ತಲುಪಿದ್ದಾರೆ. ಕೃಷ್ಣಮೂರ್ತಿ ಬಂಧಿತ ಪ್ರಮುಖ ಆರೋಪಿ. ಗೌರಿ ಲಂಕೇಶ್​ ಹತ್ಯೆ ಪ್ರಕರಣದ ಆರೋಪಿ ಅಮೋಲ್‌ ಕಾಳೆ ನೀಡಿದ್ದ ಹೇಳಿಕೆ ಆಧರಿಸಿ ಕೃಷ್ಣಮೂರ್ತಿಯನ್ನು ಬಂಧಿಸಲಾಗಿದೆ.

9.Amar Movie: ಸಿನಿಮಾ ನೋಡುವ ಮುನ್ನವೇ ಅಭಿ ಜತೆ ಅಭನಯಿಸಲು ಆಫರ್​ ಕೊಟ್ರಾ ಕಿಚ್ಚ ಸುದೀಪ್​..?

ಸ್ಯಾಂಡಲ್​ವುಡ್​ನ ಹಿರಿಯಣ್ಣನಂತಿದ್ದ ಅಂಬರೀಷ್​ ಅವರ ಒಬ್ಬನೇ ಮಗ ಅಭಿಷೇಕ್​ ಅಂಬರೀಷ್​ ಅಭಿನಯದ 'ಅಮರ್​' ಸಿನಿಮಾ ನಿನ್ನೆಯಷ್ಟೆ (ಮೇ.31) ಬಿಡುಗಡೆಯಾಗಿದೆ. ಅಭಿಯ ಚೊಚ್ಚಲ ಚಿತ್ರಕ್ಕಾಗಿ ಸ್ಯಾಂಡಲ್​ವುಡ್​ ಸೇರಿದಂತೆ ದಕ್ಷಿಣ ಸಿನಿ ಕ್ಷೇತ್ರದ ತಾರೆಯರು ಶುಭ ಹಾರೈಸುತ್ತಿದ್ದಾರೆ. ಆದರೆ ನಮ್ಮ ಕರುನಾಡ ಕಿಚ್ಚ ಮಾತ್ರ ಅಭಿಗೆ ಸಿನಿ ರಂಗಕ್ಕೆ ಸ್ವಾಗತ ಕೋರುವುದರೊಂದಿಗೆ ವಿಶೇಷವಾದ ಸಿಹಿ ಸುದ್ದಿಯನ್ನೂ ಕೊಟ್ಟಿದ್ದಾರೆ. ಹೌದು, ಅಭಿ ಸಿನಿಮಾ ಯಶಸ್ಸು ಕಾಣಲಿ ಎಂದು ಹಾರೈಸಿರುವ ಕಿಚ್ಚ, ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. ಅಭಿಗಾಗಿ ವಿಶೇಷವಾದ ವಿಡಿಯೋ ಮಾಡಿರುವ ಸುದೀಪ್​, ಸ್ಯಾಂಡಲ್​ವುಡ್​ನಲ್ಲಿ ಒಟ್ಟಿಗೆ ಇರೋಣ, ಒಂದಾಗಿ ನಡೆಯೋಣ ಹಾಗೂ ಒಟ್ಟಿಗೆ ಕೆಲಸ ಮಾಡೋಣ ಎಂದಿದ್ದಾರೆ.

10.ICC Cricket World Cup 2019 : ಕಿವೀಸ್ ಬೌಲರ್​ಗಳ ಬಿರುಗಾಳಿ; ಶ್ರೀಲಂಕಾ 136ಕ್ಕೆ ಆಲೌಟ್

ಕಾರ್ಡಿಫ್​​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್​​ಗಳು ಬಿರುಗಾಳಿ ಎಬ್ಬಿಸಿದ್ದಾರೆ. ಶ್ರೀಲಂಕಾ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ಗೆ ಅಟ್ಟುವಲ್ಲಿ ಹೆನ್ರಿ ಹಾಗೂ ಫರ್ಗುಸನ್ ಯಶಸ್ವಿಯಾಗಿದ್ದು 136 ರನ್​ಗಳಿಗೆ ಆಲೌಟ್ ಆಗಿದ್ದಾರೆ. ನಾಯಕ ಕರುಣರತ್ನೆ(ಅಜೇಯ 52) ಏಕಾಂಗಿಯಾಗಿ ರನ್ ಕಲೆಹಾಕಿದ್ದು ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟ್ಸ್​ಮನ್​ಗಳು ಕ್ರೀಸ್ ಕಚ್ಚಿ ಆಡಲಿಲ್ಲ. ಪರಿಣಾಮ 29.2 ಓವರ್​​ನಲ್ಲೆ ಶ್ರೀಲಂಕಾ 136 ರನ್​ಗಳಿಗೆ ಆಲೌಟ್ ಆಗಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:June 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ