Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R
Updated:July 3, 2019, 6:18 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1. ಅಧ್ಯಕ್ಷ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ರಾಹುಲ್​ ಗಾಂಧಿ

ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಇಂದು ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ರಾಹುಲ್ ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ. ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿ, ಕಾಂಗ್ರೆಸ್​ ಅಧ್ಯಕ್ಷನಾಗಿ ಕೆಲಸ ಮಾಡಿದ್ದು ನನಗೆ ಸಿಕ್ಕ ದೊಡ್ಡ ಗೌರವ. 2019ರ ಲೋಕಸಭೆ ಚುನಾವಣೆಯ ಸೋಲಿನ ಬಳಿಕ ಪಕ್ಷವನ್ನು ಸದೃಢಗೊಳಿಸಬೇಕಿದೆ. ಜನರಲ್ಲಿ ಪಕ್ಷದ ಮೇಲೆ ಭರವಸೆ ಮೂಡಿಸಬೇಕಿದೆ. ಪಕ್ಷಕ್ಕೆ ಪುನಶ್ಚೇತನ ನೀಡಬೇಕಿದೆ. ಹೀಗಾಗಿ ಈ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡಬೇಕಿದೆ ಎಂದು ರಾಹುಲ್​ ಬರೆದಿದ್ದಾರೆ. ಕಾಂಗ್ರೆಸ್​ ಪಕ್ಷದ ತಡ ಮಾಡದೆ ಪಕ್ಷದ ನೂತನ ಅಧ್ಯಕ್ಷನ ಆಯ್ಕೆ ಮಾಡಬೇಕು. ಈ ಆಯ್ಕೆಯ ಪ್ರಕ್ರಿಯೆಲ್ಲಿ ತಾನು ಭಾಗವಾಗಿಯೂ ಇರುವುದಿಲ್ಲ ಎಂದು ರಾಹುಲ್ ಗಾಂಧಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. 

2. ದೆಹಲಿ ಕೋಮು ಸಂಘರ್ಷ ಪೊಲೀಸ್​ ಕಮಿಷನರ್​ಗೆ ಸಮನ್ಸ್​

ದೆಹಲಿಯ ಚಾಂದನಿ ಚೌಕ್​ನಲ್ಲಿ ನಡೆದ ಕೋಮು ಸಂಘರ್ಷ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೆಹಲಿ ಪೊಲೀಸ್​ ಕಮಿಷನರ್ ಅಮೂಲ್ಯಾ ಪಾಟ್ನಾಯಕ್​ ಬುಧವಾರ ಚರ್ಚೆ ನಡೆಸಿದರು. ಘಟನೆ ಸಂಬಂಧ ವಿವರಣೆ ನೀಡುವಂತೆ ಅಮಿತ್ ಶಾ ಅವರು ಪೊಲೀಸ್​ ಕಮಿಷನರ್​ಗೆ ಸಮನ್ಸ್​ ನೀಡಿದ್ದರು. ಚಾಂದನಿ ಚೌಕ್​ ಬಳಿಯ ಪಾರ್ಕಿಂಗ್​ ಪ್ರದೇಶದಲ್ಲಿ ಭಾನುವಾರ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಪರಿಸ್ಥಿತಿ ಕುರಿತು ಅವರಿಗೆ ವಿವರಣೆ ನೀಡಿದ್ದೇವೆ. ಹೌಜ್​ ಕ್ವಾಜಿ ಪ್ರದೇಶ ಈಗ ಶಾಂತವಾಗಿದೆ ಎಂದು ಅಮಿತ್ ಶಾ ಭೇಟಿ ಬಳಿಕ ಪೊಲೀಸ್​ ಕಮಿಷನರ್ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಸಂಬಂಧ ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

3.ವರುಣಾದಲ್ಲಿ ಸಿದ್ದರಾಮಯ್ಯ ತುರ್ತು ಸಭೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಗ ಪ್ರತಿನಿಧಿಸುವ ಮೈಸೂರಿನ ವರುಣ ಕ್ಷೇತ್ರದಲ್ಲಿ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ಸಿದ್ದರಾಮಯ್ಯ ಅವರು ಐದು ಬಾರಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಮೊನ್ನೆಮೊನ್ನೆಯಷ್ಟೇ ಬಾದಾಮಿ ಕ್ಷೇತ್ರದಲ್ಲಿ ಬರೋಬ್ಬರಿ ನಾಲ್ಕು ದಿನಗಳ ಕಾಲ ಪ್ರವಾಸ ಮಾಡಿ ಜನಸಂಪರ್ಕ ನಡೆಸಿದ್ದರು. ಅದಾದ ಬೆನ್ನಲ್ಲೇ ತಮ್ಮ ಮೂಲ ಕ್ಷೇತ್ರವಾಗಿರುವ, ಈ ಬಾರಿ ತಮ್ಮ ಮಗ ಯತೀಂದ್ರ ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರದಲ್ಲಿ ತುರ್ತಾಗಿ ಕೈ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದರು. ಈಗ ಸಿದ್ದರಾಮಯ್ಯ ನಡೆಸುತ್ತಿರುವ ತುರ್ತು ಸಭೆಗಳು ಗೌಡರ ಮಾತಿಗೆ ಪುಷ್ಟಿ ನೀಡುವಂತಿವೆ. ಮಧ್ಯಂತರ ಚುನಾವಣೆ ಬಂದರೆ ಬಾದಾಮಿ ಮತ್ತು ವರುಣ ಕ್ಷೇತ್ರಗಳು ಕೈಬಿಟ್ಟುಹೋಗದಂತೆ ಸಿದ್ದರಾಮಯ್ಯ ಭದ್ರ ಮಾಡಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಮೂಡಿಸುತ್ತಿದೆ

4. ರಮೇಶ್​ ಜಾರಕಿಹೊಳಿ ರಾಜೀನಾಮೆಗೆ 80 ಕೋಟಿ ಆಫರ್​ಕಾಂಗ್ರೆಸ್ ಪಕ್ಷದಲ್ಲಿನ ಶಾಸಕರ ರಾಜೀನಾಮೆ ಪ್ರಸಂಗದಿಂದಾಗಿ ರಾಜ್ಯ ರಾಜಕೀಯ ವಲಯದಲ್ಲಿ ಈಗಾಗಲೇ ದೊಡ್ಡ ಕೋಲಾಹಲವೇ ಸೃಷ್ಟಿಯಾಗಿದೆ. ಇದರ ಬೆನ್ನಿಗೆ ಕಾಂಗ್ರೆಸ್ ಆಪರೇಷನ್ ಕಮಲದ ಆರೋಪ ಮಾಡುತ್ತಿದೆ. ಈ ಆರೋಪಕ್ಕೆ ಇಂಬು ನೀಡುವಂತೆ "ಬಿಜೆಪಿ ಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ತಲಾ 40 ಕೋಟಿ ಆಫರ್ ಮಾಡಿತ್ತು, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಎದುರು 80 ಕೋಟಿ ಬೇಡಿಕೆ ಇಟ್ಟಿದ್ದರು ಎಂದು ಹೇಳುವ ಮೂಲಕ ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಕೆ. ಮಹದೇವ್ ಹೊಸ ಬಾಂಬ್ ಸಿಡಿಸಿದ್ದಾರೆ. ಬುಧವಾರ ಪಿರಿಯಾಪಟ್ಟಣದಲ್ಲಿ ನಡೆದ ಒಂದು ಸಭೆಯಲ್ಲಿ ಮಾತನಾಡಿರುವ ಅವರು, “ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಪಕ್ಷಕ್ಕೆ ಸೇರಲು ರಮೇಶ್ ಬಿಜೆಪಿಯವರ ಮುಂದೆ 80 ಕೋಟಿ ಹಣದ ಬೇಡಿಕೆ ಇಟ್ಟಿದ್ದರು. ನನಗೂ ಸಹ 40 ಕೋಟಿ ಆಫರ್ ಮಾಡಿ ಬಿಜೆಪಿಗೆ ಬಂದುಬಿಡಿ ಎಂದಿದ್ದರು. ಅಲ್ಲದೆ ನನ್ನ ಟೇಬಲ್ ಮುಂದೆ ಹಣ ತಂದು ಇಟ್ಟಿದ್ರು. ಆದರೆ, ನಾನು ಈ ಆಮಿಷಕ್ಕೆ ಬಲಿಯಾಗಿರಲಿಲ್ಲ. ಈಗಲೇ ಹೋಗ್ತೀರ? ಇಲ್ಲ ಎಸಿಬಿಗೆ ಹೇಳಬೇಕ? ಎಂದು ಗದರಿಸಿ ಕಳಿಸಿದ್ದೆ” ಎಂದು ಹೇಳಿದ್ದಾರೆ.

5.ಪಶ್ಚಿಮಘಟ್ಟ ಅಭಿವೃದ್ಧಿಗೆ 33 ಶಿಫಾರಸ್ಸು ನೀಡಿದ ಸಮಿತಿ

ಪಶ್ಚಿಮ ಘಟ್ಟ ಅಭಿವೃದ್ಧಿ ಸಂಬಂಧ 2017 ಜೂನ್​ನಲ್ಲಿ ಸರ್ಕಾರದಿಂದ ರಚಿಸಲಾಗಿದ್ದ ಪಶ್ಚಿಮಘಟ್ಟ ಕಾರ್ಯಪಡೆ ಸಮಿತಿಯೂ ಇಂದು ತನ್ನ ವರದಿಯನ್ನು ಅರಣ್ಯ ಸಚಿವ ಸತೀಶ್​ ಜಾರಕಿಹೊಳಿ ಅವರಿಗೆ ನೀಡಿದೆ. ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಚಂದ್ರಶೇಖರ್ ಅವರು ಅಂತಿಮ ವರದಿಯನ್ನು ಅರಣ್ಯ ಸಚಿವ ಸತೀಶ್ ಜಾರಕಿಹೊಳಿಗೆ ಇಂದು ಹಸ್ತಾಂತರ ಮಾಡಿದರು. ಪಶ್ಚಿಮಘಟ್ಟಗಳ ಕಾರ್ಯಪಡೆ ಸಲ್ಲಿಸಿರುವ ವರದಿ ಬಗ್ಗೆ ಅಧ್ಯಯನ ನಡೆಸಿ, ಅರಣ್ಯ ಸಂರಕ್ಷಣೆ, ಅಭಿವೃದ್ಧಿಗೆ ನೀಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಪಶ್ಚಿಮ ಘಟ್ಟದಲ್ಲಿ ಪ್ರವಾಸ ಕೈಗೊಂಡು ಅಲ್ಲಿ ವಾಸಿಸುವ ಜನರು, ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಮಧ್ಯಂತರ ವರದಿ ಸೇರಿಸಿ ಅಂತಿಮ ವರದಿಯನ್ನು ಸಲ್ಲಿಕೆ ಮಾಡಿದರು

6. ಆನಂದ್​ ಸಿಂಗ್​ ವಿರುದ್ದ ಗರಂ ಆದ ಸ್ಪೀಕರ್

ಮಂಗಳವಾರ ರಾಜ್ಯ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ವಿಜಯನಗರ ಶಾಸಕ ಆನಂದ್​ ಸಿಂಗ್ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಈ ಕುರಿತು ಸಿಟ್ಟಾಗಿರುವ ರಮೇಶ್ ಕುಮಾರ್, "ಶಾಸಕರಾದವರಿಗೆ ಎಲ್ಲಿ ಯಾರಿಗೆ ರಾಜೀನಾಮೆ ನೀಡಬೇಕು ಎಂಬ ಅರಿವಿರಬೇಕು" ಎಂದು ಹೇಳುವ ಮೂಲಕ ಶಾಸಕ ಆನಂದ್ ಸಿಂಗ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಸ್ಪೀಕರ್​ ಕಚೇರಿಗೆ ರಾಜೀನಾಮೆ ಪತ್ರ ನೀಡಿದ್ದ ಶಾಸಕ ಆನಂದ್ ಸಿಂಗ್ ನಂತರ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೂ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಆನಂದ್ ಸಿಂಗ್ ಅವರ ಈ ನಡೆ ಸ್ಪೀಕರ್ ರಮೇಶ್ ಕುಮಾರ್ ಅವರ ಅಸಹನೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

7. ವಿದ್ಯಾರ್ಥಿನಿಗೆ ಗಾಂಜಾ ನೀಡಿ ಗ್ಯಾಂಗ್​ ರೇಪ್​; ಆರೋಪಿಗಳ ಬಂಧನ

 ಕಾಲೇಜು ವಿದ್ಯಾರ್ಥಿನಿಗೆ ಗಾಂಜಾ ನೀಡಿ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರಿನಲ್ಲಿ ಈ ಹೀನ ಕೃತ್ಯ ನಡೆದಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ. ಕೆಲವು ತಿಂಗಳ ಹಿಂದೆಯೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ ಎಂದು ತಿಳಿದುಬಂದಿದೆ. ನಾಲ್ಕು ಮಂದಿ ಸಹಪಾಠಿಗಳೇ ಸೇರಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿಗೆ  ಮಾದಕ ಪದಾರ್ಥ ನೀಡಿ, ಪ್ರಜ್ಞೆ ತಪ್ಪಿದ ಬಳಿಕ ಕಾಡಿಗೆ ಕರೆದುಕೊಂಡು ಹೋಗಿ ಕಾರಿನಲ್ಲಿ ಗ್ಯಾಂಗ್​ ರೇಪ್​ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಐವರು ಆರೋಪಿಗಳನ್ನು ಪುತ್ತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ.

8. ರಾಜ್ಯ ರಾಜಕಾರಣಕ್ಕೆ ಗ್ರಹಣ ಹಿಡಿದಿದೆ; ವಿಶ್ವನಾಥ್​

ಮೈತ್ರಿ ಸರ್ಕಾರವನ್ನು ಕಾಪಾಡುವಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಿಎಂ ಹೆಚ್​.ಡಿ. ಕುಮಾರಸ್ವಾಮಿ ವಿಫಲರಾಗಿದ್ದಾರೆ ಎಂದು ನವದೆಹಲಿಯಲ್ಲಿ ನ್ಯೂಸ್18ಗೆ ಜೆಡಿಎಸ್​ ಮುಖಂಡ ಹೆಚ್. ವಿಶ್ವನಾಥ್ ಟೀಕಿಸಿದ್ದಾರೆ. ಮೈತ್ರಿ ಕಾಪಾಡುವಲ್ಲಿ ಸಿಎಂ ಕುಮಾರಸ್ವಾಮಿ ವಿಫಲರಾಗಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಕೂಡ ವಿಫಲರಾಗಿದ್ದಾರೆ. ರಾಜ್ಯ ರಾಜಕಾರಣಕ್ಕೆ ಗ್ರಹಣ ಹಿಡಿದು ವರ್ಷವಾಗಿದೆ. ಮೈತ್ರಿಯಲ್ಲಿ ಹಲವರು ಅಸಮಾಧಾನಗೊಂಡಿದ್ದಾರೆ. ಆದರೆ, ಯಾರೂ ಅತೃಪ್ತರನ್ನು ಸಮಾಧಾನಪಡಿಸುತ್ತಿಲ್ಲ. ಎಲ್ಲ ನಾಯಕರೂ ಜವಾಬ್ದಾರಿಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

9. ಬಾಟಲ್​ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿದ ಗಣೇಶ್​

ರಾಜವರ್ಧನ್​ ಸಿಂಗ್​ ರಾಥೋಡ್​ ಕೇಂದ್ರ ಕ್ರೀಡಾ ಸಚಿವರಾಗಿದ್ದಾಗ ಅವರು  ಈಗ ಏನಿದ್ದರೂ ಸಾಮಾಜಿಕ ಜಾಲತಾಣದ ಜಮಾನ. ಇಲ್ಲಿ ಸೆಲೆಬ್ರಿಟಿಗಳು ಹಾಗೂ ಕ್ರೀಡಾಪಟುಗಳು ಏನೇ ಮಾಡಿದರೂ ಅದು ರಾತ್ರೋರಾತ್ರಿ ವೈರಲ್​ ಆಗುತ್ತವೆ. ನಟ ಫಿಟ್​ನೆಸ್​ ಗುರು ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಸದ್ಯ ಸಾಮಾಜಿಕ ಜಾಲತಾಣದ ಮೂಲಕ ಒಂದು ಫಿಟ್​ನೆಸ್​ಗೆ ಸವಾಲೆಸೆಯುವ #BottelCapChallengeಗೆ ಚಾಲನೆ ನೀಡಿದ್ದಾರೆ. ಒಂದು ಕಾಲನ್ನು ನೆಲದ ಮೇಲೆ ಗಟ್ಟಿಯಾಗಿ ಕಾಲೂರಿ ಮತ್ತೊಂದು ಕಾಲನ್ನು ಗಾಳಿಯಲ್ಲಿ ಹಾರುತ್ತ ಮುಂದಿರುವ ಬಾಟಲಿಯ ಮುಚ್ಚಳನ್ನು ಕಾಲಿನಿಂದ ತೆಗೆಯುವುದೇ ಈ #BottelCapChallenge. ಹಾಲಿವುಡ್​ ನಟ ಜೇಸನ್​ ಸ್ಟ್ಯಾತಮ್ ಅವರು ಮೊದಲು ಈ ಚಾಲೆಂಜ್​ ಅನ್ನು ಆರಂಭಿಸಿದ್ದು, ಅದನ್ನು ಅಕ್ಷಯ್​ ಮುಂದುವರೆಸಿದ್ದಾರೆ. ಅಕ್ಷಯ್​ ಕುಮಾರ್​ ಅವರಿಗೆ ಜೇಸನ್​ ಇಷ್ಟದ ನಟರಂತೆ. ಅದಕ್ಕಾಗಿಯೇ ಅವರು ಮಾಡಿರುವ ಚಾಲೆಂಜ್​ ಅನ್ನು ಅಕ್ಷಯ್​ ಸ್ವಯಂಪ್ರೇರಿತರಾಗಿ ತೆಗೆದುಕೊಂಡಿದ್ದಾರೆ.

10. ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ: ಧೋನಿಯ ನಿವೃತ್ತಿ ದಿನಾಂಕ ಫಿಕ್ಸ್..?

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೊನಿ ವಿಶ್ವಕಪ್​ನಲ್ಲಿ ಭಾರತ ತಂಡ ಆಡುವ ಕೊನೆಯ ಪಂದ್ಯದ ಬಳಿಕ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವಿಚಾರವೊಂದು ಬಹಿರಂಗವಾಗಿದೆ. ಪ್ರಸಕ್ತ ವರ್ಲ್ಡ್​ಕಪ್​ನಲ್ಲಿ ಕಳಪೆ ಫಾರ್ಮ್​ನಲ್ಲಿರುವ ಎಂಎಸ್​ಡಿಗೆ ಸೆಮಿ ಫೈನಲ್ ಅಥವಾ ಫೈನಲ್ ಪಂದ್ಯವು ವೃತ್ತಿ ಬದುಕಿನ ವಿದಾಯ ಪಂದ್ಯವಾಗಲಿದೆ ಎಂದು ಹೇಳಲಾಗಿದೆ. ಟೀಂ ಇಂಡಿಯಾ ಈಗಾಗಲೇ ವಿಶ್ವಕಪ್​ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದು, ಸದ್ಯ ಜುಲೈ 14ರಂದು ನಡೆಯಲಿರುವ ಫೈನಲ್​ಗೇರುವ ತುಡಿತದಲ್ಲಿದೆ. ಈ ಮೂಲಕ 2ನೇ ಬಾರಿ ವಿಶ್ವಕಪ್​ ತಂದುಕೊಟ್ಟ ನಾಯಕನಿಗೆ ಅದ್ದೂರಿ ಬೀಳ್ಕೊಡುಗೆ ಕೊಡುವ ನಿರ್ಧಾರದಲ್ಲಿದೆ ವಿರಾಟ್​ ಕೊಹ್ಲಿ ಮತ್ತು ಬಳಗ. ವಿಶ್ವಕಪ್ ಕ್ರಿಕೆಟ್ ಬಳಿಕ ಧೋನಿ ತಂಡದಲ್ಲಿ ಮುಂದುವರೆಯುವ ಸಾಧ್ಯತೆ ಇಲ್ಲ. ಈ ಹಿಂದೆ ಮೂರು ಮಾದರಿಯ ಕ್ರಿಕೆಟ್​ನ ನಾಯಕತ್ವಕ್ಕೆ ದಿಢೀರನೇ ನಿವೃತ್ತಿ ಘೋಷಿಸಿದ್ದನ್ನೂ ಕೂಡ ಯಾರು  ಊಹಿಸಿರಲಿಲ್ಲ. ಅದರಂತೆ ಅಚ್ಚರಿಯ ನಿರ್ಧಾರವನ್ನು ಧೋನಿ ಪ್ರಕಟಿಸಲಿದ್ದಾರೆ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
First published:July 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ