Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:July 19, 2019, 6:40 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: July 19, 2019, 6:40 PM IST
  • Share this:
1.ಮನ್ಸೂರ್​ ಖಾನ್​ ಬಂಧನ

ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಐಎಂಎ  ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್​ನನ್ನು ಬಂಧಿಸುವಲ್ಲಿ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. 2 ಸಾವಿರ ಕೋಟಿ ರೂ. ವಂಚನೆ ಮಾಡಿ ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್​ ಮನ್ಸೂರ್​ ಖಾನ್​ ದೆಹಲಿಯಲ್ಲಿ ಇಡಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ತನಗೆ ಆರೋಗ್ಯ ಸರಿಯಿಲ್ಲದ ಕಾರಣ ವಿಶ್ರಾಂತಿ ಪಡೆಯುತ್ತಿದ್ದೆ ಎಂದು ವಿಡಿಯೋ ಮಾಡಿ ಪೊಲೀಸ್​ ಕಮಿಷನರ್​ಗೆ ಕಳುಹಿಸಿದ್ದ ಮನ್ಸೂರ್​ ಖಾನ್​ ಕಳೆದ ಭಾನುವಾರ 24 ಗಂಟೆಗಳಲ್ಲಿ ಬೆಂಗಳೂರಿಗೆ ವಾಪಾಸ್​ ಆಗುವುದಾಗಿ ತಿಳಿಸಿದ್ದ. ಆದರೆ, ಆತ ಸುಳ್ಳು ಹೇಳಿದ್ದಾನೆಂದು ಗೊತ್ತಾಗುತ್ತಿದ್ದಂತೆ ಎಸ್​ಐಟಿ ಅಧಿಕಾರಿಗಳು ಮತ್ತೆ ಚುರುಕಾಗಿದ್ದರು.

2. ಸುಪ್ರೀಂಕೋರ್ಟ್​ಗೆ ಅರ್ಜಿ

ರಾಜ್ಯಪಾಲರು ಮಧ್ಯಾಹ್ನ 1:30ರೊಳಗೆ ವಿಶ್ವಾಸಮತ ಯಾಚನೆ ನಡೆಸಿ ಎಂದು ಮುಖ್ಯಮಂತ್ರಿಗೆ ನಿರ್ದೇಶನ ನೀಡಿದ ಬಳಿಕ ರಾಜ್ಯದ ರಾಜಕೀಯದಲ್ಲಿ ಜಂಘೀ ಕುಸ್ತಿ ಇನ್ನಷ್ಟು ಜೋರಾಗಿದೆ. ಸಾಂವಿಧಾನಿಕ ಬಿಕ್ಕಟ್ಟು ಇನ್ನೂ ಕಗ್ಗಂಟಾಗಿ ಮುಂದುವರಿಯುತ್ತಿದೆ. ಇವತ್ತು ಸುಪ್ರೀಂ ಕೋರ್ಟ್​​ನಲ್ಲಿ 3 ಅರ್ಜಿಗಳು ಸಲ್ಲಿಕೆಯಾಗಿವೆ. ಸಿಎಂ ಕುಮಾರಸ್ವಾಮಿ, ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ. ವಿಶ್ವಾಸ ಮತ ಯಾಚಿಸುವಂತೆ ರಾಜ್ಯಪಾಲರು ತಂದ ನಿರ್ದೇಶನಕ್ಕೆ ತಡೆ ತರುವುದು ಮೈತ್ರಿಪಾಳಯದ ಪ್ರಮುಖ ಗುರಿಯಾಗಿದೆ.

3.ಎರಡನೇ ಡೆಡ್​ಲೈನ್​ ಕೊಟ್ಟ ಗವರ್ನರ್​​

ಪ್ರಸ್ತುತ ರಾಜ್ಯ ರಾಜಕಾರಣ, ಸಾಂವಿಧಾನಿಕ ಬಿಕ್ಕಟ್ಟು ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿದ ಬೆನ್ನಿಗೆ ರಾಜ್ಯಪಾಲ ವಜುಭಾಯ್ ವಾಲಾ ಬಹುಮತ ಸಾಬೀತುಪಡಿಸಲು ಮೈತ್ರಿ ಸರ್ಕಾರಕ್ಕೆ ಎರಡನೇ ಬಾರಿ ಡೆಡ್​ಲೈನ್ ಕೊಟ್ಟಿದ್ದಾರೆ. ಶುಕ್ರವಾರ ಸಂಜೆ 6 ಗಂಟೆಗೆ ಡೆಡ್ಲೈನ್ ಕೊಟ್ಟಿದ್ದು ಈ ಬಾರಿಯಾದರೂ ಸರ್ಕಾರ ಬಹುಮತ ಸಾಬೀತುಮಾಡುತ್ತಾ? ಎಂಬ ಪ್ರಶ್ನೆ ಹುಟ್ಟಿದೆ. ಬಿಜೆಪಿ ನಾಯಕರ ಒತ್ತಾಯದ ಮೇರೆಗೆ ರಾಜ್ಯಪಾಲ ವಜುಭಾಯ್ ವಾಲಾ ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಹುಮತ ಸಾಬೀತಿಗೆ ನಿರ್ದೇಶನ ನೀಡಿದ್ದರು. ಅವರ ನಿರ್ದೇಶನದಂತೆ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಬಹುಮತ ಸಾಬೀತುಪಡಿಸುವ ಹೊಣೆಗಾರಿಕೆ ಮೈತ್ರಿ ಸರ್ಕಾರದ ಮೇಲಿತ್ತು. ಆದರೆ, ಮೈತ್ರಿ ಸರ್ಕಾರ ರಾಜ್ಯಪಾಲರ ಈ ನಿರ್ದೇಶನವನ್ನು ಗಾಳಿಗೆ ತೂರಿದೆ. ಗುರುವಾರ ಮೊದಲ ಅವಧಿಯ ಅಧಿವೇಶನ ಮುಗಿದರೂ ಸಹ ಕೊನೆಯವರೆಗೆ ಬಹುಮತ ಸಾಬೀತುಪಡಿಸಲು ಮುಂದಾಗಿರಲಿಲ್ಲ

4.ಸದನಲ್ಲಿ ಗದ್ದಲ ಸೃಷ್ಟಿಸಿದ ಐದುಕೋಟಿ ಡೀಲ್​ವಿಶ್ವಾಸಮತ ಯಾಚನೆ ಗೊತ್ತುವಳಿಯ ಮೇಲಿನ ಚರ್ಚೆಯ ವೇಳೆ ಶಾಸಕರ ಖರೀದಿ ವಿಚಾರ ಸಾಕಷ್ಟು ಗದ್ದಲಕ್ಕೆ ಕಾರಣವಾಯಿತು. ಮುಖ್ಯಮಂತ್ರಿಗಳು ಸುದೀರ್ಘವಾಗಿ ಮಾತನಾಡುವ ಸಂದರ್ಭದಲ್ಲಿ ಬಿಜೆಪಿಯವರಿಂದ ಶಾಸಕರ ಖರೀದಿಯಾಗುತ್ತಿರುವುದನ್ನು ಪ್ರಸ್ತಾಪಿಸಿದರು. ಶಾಸಕರಿಗೆ 30-40 ಕೋಟಿ ಆಫರ್ ಕೊಡುತ್ತಾರೆ ಎಂದು ಸಿಎಂ ಟೀಕಿಸುತ್ತಿದ್ದ ವೇಳೆ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಅವರು ಮಧ್ಯಪ್ರವೇಸಿದರು. ತಮಗೂ 5 ಕೋಟಿ ರೂ ಕೊಡಲು ಮುಂದೆ ಬಂದಿದ್ದರು ಎಂದು ಹೇಳಿದರು. ಕೋಲಾರ ಶಾಸಕರ ಶ್ರೀನಿವಾಸಗೌಡರ ಈ ಹೇಳಿಕೆಯ ಬಳಿಕ ಕಾಂಗ್ರೆಸ್ ಸದಸ್ಯರು ಬಿಜೆಪಿಯವನ್ನು ಕೆಣಕಿದರು. ಇದು ಬಿಜೆಪಿಯವರಿಗೆ ಕೋಪ ತರಿಸಿತು. ಇದೆಲ್ಲವೂ ದಾಖಲೆಗಳ ಮೇಲೆ ಹೋಗಲಿ. ನಾವು ಕಾನೂನಿಗೆ ಹೋಗುತ್ತೇವೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪಿಸಿದರು. ಆ ಬಳಿಕ ಶ್ರೀನಿವಾಸ ಗೌಡ ಅವರು ಎದ್ದು ನಿಂತು ತಮಗೆ ಆಮಿಷ ಒಡ್ಡಿದವರ ಹೆಸರು ಮತ್ತು ಘಟನೆಯನ್ನು ವಿವರಿಸಿದರು

5.ಪ್ರಿಯಾಂಕ ಗಾಂಧಿ ಪೊಲೀಸ್​ ವಶಕ್ಕೆ

ಉತ್ತರ ಪ್ರದೇಶದ ಸೋನ​ಭದ್ರಾದ ಆದಿವಾಸಿ ಕುಟುಂಬಗಳನ್ನು ಭೇಟಿ ಮಾಡಲು ಮುಂದಾಗಿದ್ದ ಪ್ರಿಯಾಂಕ ಗಾಂಧಿ ವಾದ್ರಾರನ್ನು ನಾರಯಣಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಆದಿವಾಸಿಗಳ ಮೇಲಿನ ಗುಂಡಿನ ದಾಳಿ ಖಂಡಿಸಿ ಶಾಂತಿಯುತ ಪ್ರತಿಭಟನೆಗೆ ಮುಂದಾದಾಗ, ಪ್ರಿಯಾಂಕರನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ಮಿರ್ಜಾಪುರ ಬಳಿಯ ಸೊನ​ಭದ್ರಾದದಲ್ಲಿ ಭೂವಿವಾದ ಹಿನ್ನಲೆಯಲ್ಲಿ ಆದಿವಾಸಿ ಕುಟುಂಬದವರ ಮೇಲೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿತ್ತು. ಈ ಗುಂಡಿನ ದಾಳಿಯಲ್ಲಿ 10 ಮಂದಿ ಸಾವನ್ನಪ್ಪಿದಲ್ಲದೇ, 19 ಜನ ತೀವ್ರ ಗಾಯಗೊಂಡಿದ್ದರು. ಈ ಘಟನೆ ಬಳಿಕ ಪೊಲೀಸರು ಈ ಪ್ರದೇಶದ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದರು. ಇದೀಗ ಸಂತ್ರಸ್ತರನ್ನು ಭೇಟಿ ಮಾಡಲು ಪ್ರಿಯಾಂಕ ಗಾಂಧಿ ತೆರಳಿದ್ದು, ಪೊಲೀಸರು ತಡೆಯೋಡ್ಡಿದ್ದಾರೆ.
6. ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಜನರಿಂದ ಸಲಹೆ ಕೇಳಿದ ಮೋದಿ

ಆಗಸ್ಟ್​ 15ರಂದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಅವರು ಕೆಂಪುಕೋಟೆಯ ಮೇಲೆ ನಿಂತು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ದೇಶದ ಸಾಮಾನ್ಯ ಜನರ ಧ್ವನಿಯಾಗಿ ತಾವು ಏನನ್ನು ಮಾತನಾಡಬಹುದು ಎಂದು ದೇಶದ 130 ಕೋಟಿ ಜನರ  ಸಲಹೆ, ಸೂಚನೆ, ಕೇಳಿ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಯಾವ ವಿಷಯದ ಬಗ್ಗೆ ಗಮನ ಹರಿಸಬೇಕು, ದೇಶದ ಪ್ರಗತಿಗೆ ಯಾವೆಲ್ಲಾ ಯೋಜನೆಗಳನ್ನು ಕೈಗೊಳ್ಳಬಹುದು ಹಾಗೂ ಸಾಮಾನ್ಯ ಜನರ ಸಮಸ್ಯೆಗಳೇನು ಎಂಬುದರ ಮೇಲೆ ಬೆಳಕು ಚೆಲ್ಲಿ, ತಮ್ಮ ಸಲಹೆ ಸೂಚನೆ ಜೊತೆಗೆ ಹೊಸ ಹೊಸ ಐಡಿಯಾಗಳನ್ನು ಜನರು ನೀಡಬಹುದಾಗಿ. ಅವುಗಳಲ್ಲಿ ಮೌಲ್ಯಾಧರಿತ ವಿಷಯವನ್ನು ಪ್ರಧಾನಿ ಮೋದಿ ಅವರು ಆಯ್ಕೆ ಮಾಡಿಕೊಂಡು, ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಂಡಿಸಲಿದ್ದಾರೆ.

7. ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ; ನಾಲ್ವರ ಸಾವು

ಕಾರು ಮತ್ತು ಗ್ಯಾಸ್​​​​ ಟ್ಯಾಂಕರ್​​​​​​​ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಬ್ರಹ್ಮರಕೂಟ್ಲು ಎಂಬುವಲ್ಲಿ ನಡೆದಿದೆ. ಸಾವನ್ನಪ್ಪಿದವರನ್ನು ಗೋವಿಂದ, ಪದ್ಮಾವತಿ, ನಾಗರಾಜ ಹಾಗೂ ಗಣೇಶ  ಎಂದು ಗುರುತಿಸಲಾಗಿದೆ. ಉಳಿದ 7 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದರು ಎನ್ನಲಾಗಿದೆ.

8. ಶ್ರೀನಿವಾಸಗೌಡ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾದ ಬಿಜೆಪಿ

ವಿಶ್ವಾಸಮತ ಗೊತ್ತುವಳಿ ಚರ್ಚೆ ವೇಳೆ ಬಿಜೆಪಿ ಶಾಸಕರು ತಮ್ಮ ಖರೀದಿಗೆ ಮುಂದಾಗಿದ್ದರು. ಇದಕ್ಕಾಗಿ ಐದು ಕೋಟಿ ಹಣದ ಆಮಿಷ ಒಡ್ಡಿದ್ದರು ಎಂದು ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರು ಬಿಜೆಪಿ ವಿರುದ್ಧ ಗಂಭೀರ ಆರೋಪ  ಹೊರಿಸಿದ್ದರು. ಈ ಹಿನ್ನೆಲೆಯಲ್ಲಿ ಕೋಲಾರ​ ಶಾಸಕರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲು ಮುಂದಾಗಿರುವುದಾಗಿ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ. ಸದನದಲ್ಲಿ ಗದ್ದಲ ಎಬ್ಬಿಸಿದ ಶಾಸಕರ ಖರೀದಿ ವಿಚಾರ ಕುರಿತು ಮಾಧ್ಯಮಗೋಷ್ಠಿ ನಡೆಸಿದ ಯಡಿಯೂರಪ್ಪ, ಅಶ್ವತ್ಥ ನಾರಾಯಣ, ಸಿ.ಪಿ. ಯೋಗೇಶ್ವರ್, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ವಿರುದ್ಧ ದುರುದ್ಧೇಶಪೂರ್ವಕವಾಗಿ ಆರೋಪ ಮಾಡಿದ್ದಾರೆ.  ಸದನದಲ್ಲಿ ವಿಶ್ವಾಸ ಗೊತ್ತುವಳಿ ಚರ್ಚೆ ನಡೆಯುತ್ತಿರುವ ವೇಳೆ ಈ ವಿಚಾರ ಪ್ರಸ್ತಾಪ ಮಾಡಿರುವುದು ತಪ್ಪು. ಈ ಬಗ್ಗೆ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದರು.

9.ದತ್ತಣ್ಣ ಜೀವನ ರಹಸ್ಯ ಬಯಲು ಮಾಡಿದ ಅಕ್ಷಯ್​

ಹಿರಿಯ ಕಲಾವಿದ ದತ್ತಣ್ಣ ಚಿತ್ರರಂಗಕ್ಕೆ ಕಾಲಿಟ್ಟಿದ್ದು 45ನೇ ವರ್ಷದಲ್ಲಿ. ಸಾಕಷ್ಟು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈಗ ಅವರು ಬಾಲಿವುಡ್​ಗೂ ಕಾಲಿಟ್ಟಿದ್ದಾರೆ. ಅಕ್ಷಯ್​ ಕುಮಾರ್​ ಅಭಿನಯದ ‘ಮಿಷನ್​ ಮಂಗಳ್’ ಸಿನಿಮಾದಲ್ಲಿ ದತ್ತಣ್ಣ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೈಲರ್​ ಬಿಡುಗಡೆ ಆಗಿದೆ. ಟ್ರೈಲರ್​ ರಿಲೀಸ್​ ಕಾರ್ಯಕ್ರಮದಲ್ಲಿ ದತ್ತಣ್ಣ ಮೊದಲು ಏನು ಕೆಲಸ ಮಾಡುತ್ತಿದ್ದೆ ಎಂಬ ಬಗ್ಗೆ ಹೇಳಿಕೊಂಡಿದ್ದಾರೆ. ದತ್ತಣ್ಣ ಈ ಮೊದಲು ವಾಯುಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರಂತೆ. “ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ವಾಯುಪಡೆಯಲ್ಲಿ 23 ವರ್ಷ ಹಾಗೂ ಎಚ್​ಎಎಲ್​ನಲ್ಲಿ 9  ವರ್ಷ ಕಾರ್ಯನಿರ್ವಹಿಸಿದ್ದೆ. ಹಾಗಾಗಿ ಚಿತ್ರರಂಗಕ್ಕೆ ಬರುವುದು ತಡವಾಯಿತು.  ಏರ್​ಫೋರ್ಸ್​​ನಲ್ಲಿರುವಾಗ ಉಪಗ್ರಹವನ್ನು ನಾನು ಮುಟ್ಟಿದ್ದೆ. ನನ್ನ ಅನೇಕ ಗೆಳೆಯರು ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ,” ಎಂದರು ದತ್ತಣ್ಣ

10. ಸಚಿನ್​ ತೆಂಡೂಲ್ಕರ್​ಗೆ​​ 'ಐಸಿಸಿ ಹಾಲ್ ಆಫ್ ಫೇಮ್’ ಗೌರವ

ಕ್ರಿಕೆಟ್​  ದಿಗ್ಗಜ, ಲಿಟ್ಲ್ ಮಾಸ್ಟರ್​​ ಸಚಿನ್​ ತೆಂಡೂಲ್ಕರ್​ ಐಸಿಸಿ ಹಾಲ್​ ಆಫ್​ ಫೇಮ್​ ಗೌರವಕ್ಕೆ ಭಾಜನರಾಗಿದ್ದಾರೆ. ಗುರುವಾರ ಲಂಡನ್​ನಲ್ಲಿ ನಡೆದ ಸಮಾರಂಭದಲ್ಲಿ ಸಚಿನ್​ ತೆಂಡೂಲ್ಕರ್​  ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ‘ಕ್ರಿಕೆಟ್ ಹಾಲ್ ಆಫ್ ಫೇಮ್’ಗೆ ಸೇರ್ಪಡೆ ಮಾಡಿತು. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಅಲೇನ್​ ಡೊನಾಲ್ಡ್​, ಎರಡು ಬಾರಿ ವಿಶ್ವಕಪ್​ ಗೆದ್ದ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್​ಗಾರ್ತಿ  ಕ್ಯಾತ್ರಿನ್​ ಫಿಟ್ಜ್​ಪ್ಯಾಟ್ರಿಕ್​ ಕೂಡ ಈ ಕ್ರಿಕೆಟ್​ ಹಾಲ್​ ಆಫ್​ ಫೇಮ್​ ಗೆ ಸೇರಿದ್ಧಾರೆ.
First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ