Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R
Updated:July 13, 2019, 6:09 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1. ಎಂಟಿಬಿ ಮನವೊಲಿಸಿದ ಸಿದ್ದರಾಮಯ್ಯ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್​ ಅವರನ್ನು ಕೈ ಮುಖಂಡರು ಮನವೊಲಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ನೆನ್ನೆ ಮಧ್ಯರಾತ್ರಿಯೇ ಡಿ.ಕೆ.ಶಿವಕುಮಾರ್ ನಾಗರಾಜ್ ಮನೆಗೆ ತೆರಳಿ, ಬೆಳಗ್ಗೆವರೆಗೂ ಸಂಧಾನ ನಡೆಸಿದ್ದರು. ಆನಂತರ ಪರಮೇಶ್ವರ್ ಅವರು ತೆರಳಿ ಮನವೊಲಿಸಿದ್ದರು. ಆನಂತರ ಮೂವರು ಒಟ್ಟಿಗೆ ಸಿದ್ದರಾಮಯ್ಯ ಮನೆಗೆ ಬಂದರು. ಈ ವೇಳೆ ಸಿದ್ದರಾಮಯ್ಯ ಅವರು, "ಏನಪ್ಪ ,ಎದೆ ಬಗೆದರೆ ಸಿದ್ದರಾಮಯ್ಯ ಇರ್ತಾರೆ ಎಂದವನು ನೀನೇನಾ? ನೀನು ಶಾಸಕನಾಗಲು ನಿನಗೆ ಟಿಕೆಟ್, ನಂತರ ಮೈತ್ರಿ ಸರ್ಕಾರದ ಸಂಕಟದ ಸಮಯದಲ್ಲಿ ಸಮಾಜದ ಹಿರಿಯ ಮುಖಂಡ ಹೆಚ್.ಎಂ. ರೇವಣ್ಣ ಬಿಟ್ಟು ನಿನಗೆ ಸಚಿವ ಸ್ಥಾನ ಕೊಡಿಸಲು ಶ್ರಮಪಟ್ಟೆ. ಆದರೆ, ನೀನು ಏಕಾಏಕಿ ರಾಜೀನಾಮೆ ನೀಡಿದ್ದೇಕೆ? ಆಗ ನಿನಗೆ ಈ ಶ್ರೀರಾಮನ ರೂಪದ ಸಿದ್ದರಾಮಯ್ಯ ನೆನಪಾಗಲಿಲ್ಲವೆ? ನಿಮ್ಮ ಈ ನಡೆಯಿಂದ ಹೈಕಮಾಂಡ್ ನನ್ನನ್ನು ಗುಮಾನಿಯಿಂದ ನೋಡುವಂತಾಗಿದೆ," ಎಂದು ಸಿದ್ದರಾಮಯ್ಯ ಅವರು ಎಂಟಿಬಿ ನಾಗರಾಜ್​ ಅವರನ್ನು ತರಾಟೆಗೆ ತೆಗೆದುಕೊಂಡರು

2. ಸುಪ್ರೀಂಕೋರ್ಟ್​ಗೆ ಮತ್ತೊಂದು ಪ್ರಮಾಣಪತ್ರ

ಸುಪ್ರೀಂಕೋರ್ಟಿಗೆ ಕರ್ನಾಟಕ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್​ ಅವರು 18 ಪುಟಗಳ ಮತ್ತೊಂದು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಸ್ಪೀಕರ್ ಸಲ್ಲಿಸಿರುವ 18 ಪುಟಗಳ ಪ್ರಮಾಣಪತ್ರದಲ್ಲಿ ಶಾಸಕರು ರಾಜೀನಾಮೆ ನೀಡಿರುವ ಟೈಮ್​ಲೈನ್ ಒಳಗೊಂಡಿದೆ. ಜೊತೆಗೆ ತಾವು ಕೋರ್ಟ್​ಗೆ ಹೇಳಬೇಕಿರುವುದನ್ನು ಸವಿವರವಾಗಿ ವಿವರಿಸಿದ್ದಾರೆ.

3. ಚೀನಾ ಸೈನಿಕರು ದೇಶದ ಒಳನುಸುಳಿಲ್ಲ

ಲಡಾಖ್​ನ ಡೆಮ್ಚೊಕ್​ ವಲಯದಲ್ಲಿ ಚೀನಾ ಸೈನಿಕರು ಒಳನುಸುಳುತ್ತಿಲ್ಲ ಎಂದು ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್​ ಶನಿವಾರ ಸ್ಪಷ್ಟಪಡಿಸಿದರು. ಜುಲೈ 6ರಂದು ದಲೈ ಲಾಮಾ ಜನ್ಮದಿನದಂದು ಟಿಬೆಟಿಯನ್ನರು ಧ್ವಜಾರೋಹಣ ಮಾಡಿದ ಬಳಿಕ ಚೀನಾದ ಸೈನಿಕರು ಕಳೆದ ಲೈನ್​ ಆಫ್ ಆಕ್ಚುಲ್​ ಕಂಟ್ರೋಲ್​ (ಎಲ್​ಎಸಿ) ಗಡಿ ಒಳನುಸುಳಿದ್ದಾರೆ ಎಂಬ ವರದಿ ಬಿತ್ತರವಾದ ಬಳಿಕ ಸೇನೆಯ ಮುಖ್ಯಸ್ಥರು ಈ ಸ್ಪಷ್ಟನೆ ನೀಡಿದ್ದಾರೆ. ಚೀನಾದ ಸೈನಿಕರು ಎಲ್​ಎಸಿ ಬಳಿ ಬಂದು ಗಸ್ತು ತಿರುಗಿದರೆ ನಾವು ಅವರನ್ನು ತಡೆಗಟ್ಟುವ ಪ್ರಯತ್ನ ಮಾಡುತ್ತೇವೆ. ಆದರೆ, ಅದೇ ವೇಳೆ ಸ್ಥಳೀಯರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಡೆಮ್ಚೋಕ್​ ವಲಯದಲ್ಲಿ ನಮ್ಮ ಟಿಬಿಟಿಯನ್ನರು ನಮ್ಮದೇ ಸ್ಥಳದಲ್ಲಿ ಸಂಭ್ರಮಾಚರಿಸುತ್ತಿದ್ದರು. ಇದೇ ವೇಳೆ ಇಲ್ಲಿ ಏನು ನಡೆಯುತ್ತಿದೆ ಎಂದು ನೋಡಲು ಚೀನಿ ಸೈನಿಕರು ಬಂದಿದ್ದಾರೆ. ಆದರೆ, ಅವರು ಒಳನುಸುಳಿಲ್ಲ. ಎಲ್ಲವೂ ಯಥಾಸ್ಥಿತಿಯಂತೆ ಇದೆ ಎಂದು ಬಿಪಿನ್ ರಾವತ್ ತಿಳಿಸಿದರು.

4 ಸಂಸತ್​ ಮುಂದೆ ಕಸಗುಡಿಸಿದ ಹೇಮಾಮಾಲಿನಿಬಾಲಿವುಡ್​ ಡ್ರಿಮ್​ ಗರ್ಲ್ ಎಂದೇ ಖ್ಯಾತಿ ಪಡೆದ​ ಹೇಮಾ ಮಾಲಿನಿ, ತನ್ನ ನಟನೆ ಮತ್ತು ಸೌಂದರ್ಯದಿಂದಲೇ ಎಲ್ಲರ ಮನಸ್ಸು  ಗೆದ್ದವರು, ಹೃದಯ ಕದ್ದವರು. ನಟನೆಯ ನಂತರ ರಾಜಕೀಯ ರಂಗಕ್ಕೆ ಬಂದ ಈ ಕನಸಿನ ಕನ್ಯೆ ಪ್ರಸ್ತುತ ಎರಡನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಇಂದು ಸಂಸತ್​ಗೆ ಬಂದ ಸಂಸದೆ ಕೈಯಲ್ಲಿ ಪೊರಕೆ ಹಿಡಿದು ಕಸ ಗುಡಿಸುವ ಮೂಲಕದ ಅಲ್ಲಿದ್ದ ಸಂಸದರನ್ನಷ್ಟೇ ಅಲ್ಲದೇ, ಇಡೀ ದೇಶದ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಅವರು ಪೊರಕೆ ಹಿಡಿದು ಕಸ ಗುಡಿಸಿದ್ದು, ಮಹಾತ್ಮ ಗಾಂಧೀಜಿ ಅವರ 150ನೇ ಜಯಂತ್ಯುತ್ಸವ ಅಂಗವಾಗಿ ಕೇಂದ್ರ ಸರ್ಕಾರ ಚಾಲನೆ ನೀಡಿರುವ ಸ್ವಚ್ಛ ಭಾರತ್​ ಅಭಿಯಾನಕ್ಕಾಗಿ ಸಂಸತ್​ ಭವನದ ಆವರಣವನ್ನು ಶುಚಿಗೊಳಿಸಿದರು. ಅವರ ಈ ಕಾರ್ಯಕ್ಕೆ ದೇಶಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿದೆಯಾದರೂ, ಅವರು ಕಸ ಗುಡಿಸುವ ಶೈಲಿ ಮಾತ್ರ ಟ್ರೋಲಿಗರಿಗೆ ಹಬ್ಬವಾಗಿದೆ.

5. ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಅತೃಪ್ತ ಶಾಸಕರು

ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿ ಮಾಡಿದ್ದ, ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿದ್ದ ಅತೃಪ್ತ ಶಾಸಕರು ಇಂದು ಕೂಲ್ ಮೂಡ್​ನಲ್ಲಿದ್ದು ಮುಂಬೈನ ಶಿರಡಿ ಸಾಯಿಬಾಬಾ ದರ್ಶನ ಪಡೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಪಕ್ಷದ 13 ರೆಬೆಲ್ ಶಾಸಕರು ಮುಂಬೈನಲ್ಲಿದ್ದು ಎಲ್ಲರೂ ಇಂದು ಇಲ್ಲಿನ ಅಹಮದ್ ನಗರ ಜಿಲ್ಲೆಯ ಶಿರಡಿಗೆ ತಲುಪಿ ಸಾಯಿಬಾಬಾ ದರ್ಶನ ಪಡೆದಿದ್ದಾರೆ. ಬೆಳಗ್ಗೆಯೇ ಖಾಸಗಿ ವಿಮಾನದಲ್ಲಿ ಮುಂಬೈನಿಂದ ಶಿರಡಿಗೆ ಪ್ರಯಾಣ ಬೆಳೆಸಿದ್ದ ಶಾಸಕರು ಸಂಜೆ ವೇಳೆಗೆ ಮತ್ತೆ ಮುಂಬೈಗೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ.

6. ಟಿಕ್​ಟಾಕ್​ ತಂದ ಸಾವು

ರಾಜ್ಯದಲ್ಲಿ ಟಿಕ್ ಟಾಕ್ ಹುಚ್ಚಿಗೆ ಮತ್ತೊಂದು ಬಲಿಯಾಗಿದೆ. ಕೋಲಾರದ ವಡಗೇರಿ ಗ್ರಾಮದ ಯುವತಿ ಮಾಲಾಗೌಡ ಎಂಬಾಕೆ ತಮ್ಮ ತೋಟದ ಪಕ್ಕದ ಕೃಷಿ ಹೊಂಡದ ಬಳಿ ಟಿಕ್ ಟಾಕ್ ವಿಡಿಯೋ ಚಿತ್ರೀಕರಣ ಮಾಡಲು ಹೋಗಿ ಕೃಷಿಹೊಂಡಲ್ಲಿ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ನಿನ್ನೆ ಮಧ್ಯಾಹ್ನವೇ ಈ ದುರ್ಘಟನೆ ನಡೆದಿದೆ. ಆದರೆ, ಸ್ಥಳದಲ್ಲಿ ಯಾವೊಬ್ಬರೂ ಇಲ್ಲದೆ ಇದ್ದದ್ದರಿಂದ ಸಂಜೆ ಸಾವನ್ನಪ್ಪಿದ ಮಾಹಿತಿ ತಿಳಿದುಬಂದಿದೆ.

7. ಬಿಜೆಪಿ ನಾಯಕರು ಪಕ್ಷಾಂತರದ ಪಿತಾಮಹರು; ಉಗ್ರಪ್ಪ

ಭಾರತೀಯ ರಾಜಕೀಯದಲ್ಲಿ ಪಕ್ಷಾಂತರದ ಹೊಸ ಪರ್ವವನ್ನು ಹುಟ್ಟು ಹಾಕಿದ ಬಿಜೆಪಿಯ ನಾಯಕರೆ ಪಕ್ಷಾಂತರದ ಪಿತಾಮಹರು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಲೇವಡಿ ಮಾಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಪಕ್ಷಾಂತರ ರಾಜಕಾರಣ ಹಾಗೂ ಆಪರೇಷನ್ ಕಮಲದ ಕುರಿತು ಶನಿವಾರ ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಿಜೆಪಿ ಕಳೆದ 1 ವರ್ಷದಲ್ಲಿ ಐದು ಬಾರಿ ಮೈತ್ರಿ ಸರ್ಕಾರವನ್ನು ಉರುಳಿಸುವ ಕೆಲಸಕ್ಕೆ ಮುಂದಾಗಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಭಾರಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೆ ಸರ್ಕಾರ ಉರುಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಗಾಳ ಹಾಕಿದ್ದಾರೆ. ಇವರು ಒಂದರ್ಥದಲ್ಲಿ ಪಕ್ಷಾಂತರದ ಪಿತಾಮಹರು” ಎಂದು ಅವರು ಕಿಡಿಕಾರಿದ್ದಾರೆ.

8. ರಾಜೀನಾಮೆ ಹಿಂಪಡೆಯುವ ವಿಶ್ವಾಸವಿದೆ; ಸತೀಶ್​ ಜಾರಕಿಹೊಳಿ

ರಾಜೀನಾಮೆ ನೀಡಿರುವ 16 ಅತೃಪ್ತರಲ್ಲಿ 4 ಶಾಸಕರು ವಾಪಾಸ್​ ಬರುತ್ತಾರೆ. ಎಂತಹ ಸಂದರ್ಭ ಬಂದರೂ ಅವರು ನಮ್ಮ ಜೊತೆಗಿರುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಸಮಾಧಾನದಿಂದ ರಾಜೀನಾಮೆ ನೀಡಿರುವ ಕೆಲವು ಶಾಸಕರು ನಮ್ಮ ಜೊತೆಗಿದ್ದಾರೆ. ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ರೋಷನ್ ಬೇಗ್, ಎಂಟಿಬಿ ನಾಗರಾಜ್, ಡಾ. ಸುಧಾಕರ್ ಕಾಂಗ್ರೆಸ್​ನಲ್ಲೇ ಇದ್ದಾರೆ. ಸರ್ಕಾರ ಅಳಿವಿನಂಚಿನಲ್ಲಿದೆ ಎಂಬ ಭಾವನೆ ಮೂಡಿತ್ತು. ಆದರೆ ಈಗ ವಾತಾವರಣ ತಿಳಿಯಾಗಿದೆ ಎಂದು ಬೆಳಗಾವಿಯಲ್ಲಿ ಹೇಳುವ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಬಿಜೆಪಿ ನಾಯಕರಿಗೆ ಮತ್ತಷ್ಟು ಆಘಾತವನ್ನು ಉಂಟುಮಾಡಿದ್ದಾರೆ.
9. ಶ್ರೀದೇಶಿ ಸಾವು ಸಹಜವಲ್ಲ. ಅದು ಕೊಲೆ

ನಟಿ ಶ್ರೀದೇವಿ ಮೃತಪಟ್ಟು ವರ್ಷ ಕಳೆದರೂ ಅವರ ಸಾವಿನ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಕೆಲವರು ಇದೊಂದು ಆಕಸ್ಮಿಕ ಸಾವು ಎಂಬುದನ್ನು ಬಲವಾಗಿ ನಂಬಿದರೆ, ಇನ್ನೂ ಕೆಲವರು ಇದೊಂದು ಸಂಚಿತ ಕೊಲೆ ಎಂದು ಹೇಳುತ್ತಿದ್ದಾರೆ. ಈ ವಿಚಾರ ಈಗ ತಣ್ಣಗಾಗಿದೆ. ಆದರೆ, ಕೇರಳ ಡಿಜಿಪಿ (ಕಾರಾಗೃಹ) ರಿಷಿರಾಜ್​ ಸಿಂಗ್​ ಶ್ರೀದೇವಿಯವರದ್ದು ಆಕಸ್ಮಿಕ ಸಾವಲ್ಲ, ಅದೊಂದು ಕೊಲೆ ಎಂದು ಹೇಳಿರುವ ವಿಚಾರ ಈಗ ಚರ್ಚೆಗೆ ಎಡೆಮಾಡಿಕೊಟ್ಟಿದೆ. ವಿಧಿವಿಜ್ಞಾನ ತಜ್ಞ ಡಾ. ಉಮಾದಥನ್​ ಶ್ರೀದೇವಿ ಸಾವಿನ ಬಗ್ಗೆ ರಿಷಿರಾಜ್​ ಜೊತೆ ಮಾತುಕತೆ ನಡೆಸಿದ್ದರಂತೆ. “ನಾನು ಉಮಾದಥನ್ ಜೊತೆ ಶ್ರೀದೇವಿ ಸಾವಿನ ವಿಚಾರ ಮಾತನಾಡಿದ್ದೆ. ಈ ವೇಳೆ ಅವರು ಇದೊಂದು ಆಕಸ್ಮಿಕ ಸಾವಲ್ಲ, ಕೊಲೆ ಇರಬಹುದು ಎಂದು ಶಂಕಿಸಿದ್ದರು,” ಎಂದಿದ್ದಾರೆ ರಿಷಿರಾಜ್

10. ರೋಚಕ ಕಾಳಗದಲ್ಲಿ ನಡಾಲ್ ಮಣಿಸಿ ವಿಂಬಲ್ಡನ್ ಫೈನಲ್‌ ಪ್ರವೇಶಿಸಿದ ರೋಜರ್ ಫೆಡರರ್

ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಟೂರ್ನಮೆಂಟ್‌ನಲ್ಲಿ ಎಂಟು ಬಾರಿಯ ಚಾಂಪಿಯನ್ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಹೈ ವೋಲ್ಟೇಜ್ ಟೆನಿಸ್ ಸೆಮಿಫೈನಲ್‌ನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್​ರನ್ನು 7-6 (7/3), 1-6, 6-3, 6-4 ಸೆಟ್‌ಗಳಿಂದ ಮಣಿಸಿದ  ಫೆಡರರ್ 12ನೇ ಬಾರಿಗೆ ವಿಂಬಲ್ಡನ್ ಅಂತಿಮ ಘಟ್ಟಕ್ಕೆ ತಲುಪಿದರು. ವೃತ್ತಿ ಜೀವನದಲ್ಲಿ 40ನೇ ಬಾರಿ ಮುಖಾಮುಖಿಯಾಗಿದ್ದ ನಾಡಾಲ್ - ಫೆಡರರ್ ಜೋಡಿಯ ಈ ಪಂದ್ಯದಲ್ಲಿ ಆರಂಭದಿಂದಲೇ ಸ್ವಿಸ್ ಆಟಗಾರ ಮೇಲುಗೈ ಸಾಧಿಸಿದ್ದರು. ಉತ್ತಮ ಸರ್ವ್ ಹಾಗೂ ರಿವರ್ಸ್​ ಶಾಟ್​ಗಳಿಂದ ನಡಾಲ್​ರನ್ನು ಇಕ್ಕಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾದ ಫೆಡರರ್ ಮೊದಲ ಸೆಟ್​ ಅನ್ನು ತಮ್ಮದಾಗಿಸಿಕೊಂಡರು. ಆದರೆ ಎರಡನೇ ಸೆಟ್​​ನಲ್ಲಿ ಕಂಬ್ಯಾಕ್ ಮಾಡಿದ ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ನಡಾಲ್ ತಮ್ಮ ಟೈಮಿಂಗ್ ಮತ್ತು ಅದ್ಭುತ ಕೈ ಚಳಕದಿಂದ ಫೆಡರರ್​​ರನ್ನು 1-6 ಅಂತರದಿಂದ ಮಣಿಸಿದರು.
First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading