Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:July 12, 2019, 12:36 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
Seema.R | news18
Updated: July 12, 2019, 12:36 PM IST
1.ಸ್ಪೀಕರ್​ ಮುಂದೆ ಹಾಜರಾಗಿ ರಾಜೀನಾಮೆ ನೀಡಿ; ಅತೃಪ್ತರಿಗೆ ಸುಪ್ರೀಂ ಸೂಚನೆ

ಈಗಾಗಲೇ ರಾಜೀನಾಮೆ ಸಲ್ಲಿಸಿರುವ ಶಾಸಕರು ಇಂದು ಸಂಜೆ ಆರು ಗಂಟೆಗೆ ಖುದ್ದಾಗಿ ಸ್ಪೀಕರ್ ಅವರನ್ನು ಭೇಟಿಯಾಗಿ, ರಾಜೀನಾಮೆ ಸಲ್ಲಿಸುವಂತೆ ಸುಪ್ರೀಂಕೋರ್ಟ್​ ಸೂಚನೆ ನೀಡಿದೆ.  ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ನಮ್ಮ ರಾಜೀನಾಮೆ ಅಂಗೀಕಾರಕ್ಕೆ ತಡ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಅತೃಪ್ತ ಶಾಸಕರು ನೆನ್ನೆ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ನೇತೃತ್ವದದ ತ್ರಿಸದಸ್ಯ ಪೀಠ, ಇಂದು ಸಂಜೆ ಆರು ಗಂಟೆಯೊಳಗೆ ಅತೃಪ್ತ ಶಾಸಕರು ಸ್ಪೀಕರ್​ ಭೇಟಿಯಾಗಿ ವೈಯಕ್ತಿಕವಾಗಿ ರಾಜೀನಾಮೆ ಸಲ್ಲಿಸಬೇಕು. ಮತ್ತು ಅವರ ರಾಜೀನಾಮೆ ಅಂಗೀಕರಿಸಲಾಗಿದೆಯೋ ಇಲ್ಲವೋ ಎಂಬುದನ್ನು ಸ್ಪೀಕರ್​ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಹೇಳಿ, ನಾಳೆಗೆ ಪ್ರಕರಣದ ವಿಚಾರಣೆಯನ್ನು ಮುಂದೂಡಿತು. ಈ ಆದೇಶದಂತೆ ಅತೃಪ್ತರು ಬೆಂಗಳೂರಿಗೆ ಆಗಮಿಸಲು ಸಜ್ಜಾಗಿದ್ದಾರೆ.

2. ಮಧ್ಯಸ್ಥಿಕೆ ಸಮಿತಿ ವಿಫಲವಾದರೆ ಜುಲೈ 25ರಿಂದ ಅಯೋಧ್ಯೆ ಪ್ರಕರಣ ವಿಚಾರಣೆ

ಅಯೋಧ್ಯೆ ರಾಮಜನ್ಮ ಭೂಮಿ-ಬಾಬರಿ ಮಸೀದಿ ಜಾಗ ವಿವಾದ ಬಗೆಹರಿಸುವ ಸಂಬಂಧ ರಚನೆಯಾಗಿದ್ದ ಮಧ್ಯಸ್ಥಿಕೆ ಸಮಿತಿ ವಿಫಲವಾದರೆ ಸುಪ್ರೀಂಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ಜುಲೈ 25ರಿಂದ ಪ್ರತಿದಿನ ನಡೆಯಲಿದೆ. ಮಧ್ಯಸ್ಥಿಕೆ ಸಮಿತಿಯ ಪ್ರಗತಿಯ ವರದಿಯನ್ನು ಜುಲೈ 18ರಂದು ಸಲ್ಲಿಸಬೇಕು. ಒಂದು ವೇಳೆ ವಿವಾದ ಬಗೆಹರಿಸಲು ಸಮಿತಿ ವಿಫಲವಾದರೆ, ಜುಲೈ 25ರಿಂದ ವಿಚಾರಣೆ ಆರಂಭಿಸುವುದಾಗಿ ನ್ಯಾಯಾಲಯ ಹೇಳಿದೆ.
3. ಆದೇಶಕ್ಕೆ ತಡೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ ಸ್ಪೀಕರ್​

ಶಾಸಕರ ರಾಜೀನಾಮೆ ವಿಚಾರವಾಗಿ ಸ್ಪೀಕರ್​ ಇಂದೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದೆ. ಆದರೆ, ಇಷ್ಟು ಕಡಿಮೆ ಅವಧಿಯಲ್ಲಿ ರಾಜೀನಾಮೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸಮಯಾವಕಾಶ ಬೇಕು ಎಂದು ಸ್ಪೀಕರ್ ರಮೇಶ್​ ಕುಮಾರ್ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿ, ತುರ್ತು ವಿಚಾರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಸ್ಪೀಕರ್ ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ. ​ ಆದರೆ, ಇಂದು ಮಧ್ಯರಾತ್ರಿ 12 ಗಂಟೆಯೊಳಗೆ ಎಲ್ಲ ಶಾಸಕರ ರಾಜೀನಾಮೆ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ನ್ಯಾಯಾಲಯ ಮರುಪರಿಶೀಲನೆ ಮಾಡಬೇಕು. ತನ್ನ ಆದೇಶಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿ ಸ್ಪೀಕರ್ ಪರ ಅಭಿಷೇಕ್ ಮನು ಸಿಂಗ್ವಿ ಅರ್ಜಿ ಸಲ್ಲಿಸಿದರು. ಆದರೆ, ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್​ ಹೇಳಿದೆ.

4. ಬಿಜೆಪಿ ವಿರುದ್ಧ ದೆಹಲಿಯಲ್ಲಿ ರಾಹುಲ್​ ಗಾಂಧಿ ಪ್ರತಿಭಟನೆ
Loading...

ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ. ಆಪರೇಷನ್ ಕಮಲ ಮೂಲಕ ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್​ನ ರಾಹುಲ್​ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಸೇರಿ ಕಾಂಗ್ರೆಸ್​ ಸಂಸದರು ದೆಹಲಿಯ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್​ ಸಂಸದರು ಪ್ರಜಾಪ್ರಭುತ್ವ ಉಳಿಸಿ, ಬಿಜೆಪಿ ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡುತ್ತಿದೆ ಎಂದು ಘೋಷಣೆಗಳನ್ನು ಮೊಳಗಿಸಿದರು.

5. ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಂಪುಟ ಸಭೆ

ಅಳಿವು-ಉಳಿವಿನ ಅಂಚಿನಲ್ಲಿ ಹೋರಾಡುತ್ತಿರುವ ಮೈತ್ರಿ ಸರ್ಕಾರದ ಸಚಿವ ಸಂಪುಟ ಸಭೆ ಆರಂಭವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ವಿಧಾನಸಭೆಯಲ್ಲಿ ಸಂಪುಟ ಸಭೆ ನಡೆಯಿತು. ಮೈತ್ರಿ ಸ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಈ ಸಂದರ್ಭದಲ್ಲಿ ಸಚಿವ ಸಂಪುಟ ಸಭೆ ನಡೆಸಬಾರದು. ಈ ಹಿನ್ನೆಲೆಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡು, ಯಾವುದೇ ಮಸೂದೆಗಳಿಗೆ ಅಂಗೀಕಾರ, ಕಾಮಗಾರಿಗಳಿಗೆ ಚಾಲನೆ ನೀಡದಂತೆ ಸಭೆ ನಡೆಸುವಂತೆ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯಭಾಸ್ಕರ್​ಗೆ ಸೂಚನೆ ನೀಡಿದ್ದರು. ಈ ಸೂಚನೆಯಂತೆ ಸಿಎಂ ಸಭೆ ನಡೆಸಿದರು.  ಈ ಮೊದಲು ಸಂಪುಟ ಸಭೆಯಲ್ಲಿ ಸಿಎಂ 135 ವಿಷಯಗಳ ಕುರಿತು ಚರ್ಚಿಸಲು ಸಿದ್ಧತೆ ನಡೆಸಿದ್ದರು. ಆದರೆ ಮುಖ್ಯ ಕಾರ್ಯದರ್ಶಿ ಈ ವಿಷಯಗಳ ಸಂಖ್ಯೆಯನ್ನು 15ಕ್ಕೆ ಇಳಿಸಿದರು. ಬಳಿಕ ಸಿಎಂ ಹೆಚ್ಚುವರಿಯಾಗಿ 6ವಿಷಯಗಳನ್ನು ಸೇರಿಸಿದ್ದಾರೆ. ಬಿಬಿಎಂಪಿ ವಿಭಜನೆ ವಾಪಸ್​ ಸೇರಿದಂತೆ ಒಟ್ಟು 21 ವಿಷಯಗಳ ಕುರಿತು  ಸಚಿವರೊಟ್ಟಿಗೆ ಚರ್ಚೆ ನಡೆಸಿದರು

6. ಮುಂಬೈನಲ್ಲಿ ಡಿಕೆಶಿ ರಸ್ತೆಯಲ್ಲಿದ್ದಾಗ ನಾನು ಹೊಟೇಲ್​ನಲ್ಲಿದ್ದೆ; ಅಶೋಕ್​​

ಸಚಿವ ಡಿಕೆ ಶಿವಕುಮಾರ್ ಮುಂಬೈನ ರೆನೈಸೆನ್ಸ್​ ಹೋಟೆಲ್ ಮುಂಭಾಗ ಇದ್ದಾಗ, ನಾನು ಹೋಟೆಲ್ ನಲ್ಲಿಯೇ ಇದ್ದೇ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ನಾನು ಸಹ ಮುಂಬೈನ ಹೋಟೆಲ್ ನಲ್ಲಿ ಇದ್ದೆ. ಪಕ್ಷೇತರ ಇಬ್ಬರ ಶಾಸಕರು ಅದೇ ಹೋಟೆಲ್​ನಲ್ಲಿ ಇದ್ದರು. ಅವರನ್ನು ಬಿಜೆಪಿಗೆ ಬೆಂಬಲ ಕೊಡುವಂತೆ ಕೇಳಲು ಹೋಗಿದ್ದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ನಾನು ಭೇಟಿ ಮಾಡಿಯೇ ಇಲ್ಲ. ಸುಮ್ಮನೆ ನನ್ನ ಮೇಲೆ ಆರೋಪ ಮಾಡೋದು ಅಲ್ಲ. ನಾನೇನು ಮುಂಬೈ ಕಮೀಷನರ್​ಗೆ ದೂರು‌ ಕೊಡಿ ಎಂದು ಶಾಸಕರಿಗೆ ಹೇಳಿಲ್ಲ. ಹೋಟೆಲ್​ ಬಳಿ 144 ಸೆಕ್ಷನ್ ಜಾರಿ ಮಾಡಿದ್ದರು. ಆಗ ಡಿಕೆಶಿ ಗಲಾಟೆ ಮಾಡಿದ್ರು. ಹಾಗಾಗಿ ವಶಕ್ಕೆ ಪಡೆದರು ಎಂದು ಸ್ಪಷ್ಟಪಡಿಸಿದರು.

7. ಲೋಕಸಭಾ ಸೋಲಿನ ಬಳಿಕ ಸಂಸತ್ತಿನಲ್ಲಿ ರಾಹುಲ್​ ಮೊದಲ ಭಾಷಣ

ಲೋಕಸಭಾ ಸೋಲಿನ ಬಳಿಕ 17ನೇ ಸಂಸತ್ತು ಅಧಿವೇಶನದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಮೊದಲ ಬಾರಿ ಮಾತನಾಡಿದ್ದಾರೆ. ಶೂನ್ಯ ಸಮಯದಲ್ಲಿ ಮಾತನಾಡಿದ ವಯನಾಡು ಕ್ಷೇತ್ರದ ಸಂಸದ ರಾಹುಲ್​ ಗಾಂಧಿ, ರೈತರ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂದಿನ ರೈತರ ಸ್ಥಿತಿಗೆ ದಶಕಗಳ ಕಾಲ ಆಡಳಿತ ನಡೆಸಿದ ಸರ್ಕಾರ ಕಾರಣ ಎಂಬ ರಾಜನಾಥ್​ ಸಿಂಗ್​ ಟೀಕೆಗೆ ಉತ್ತರಿಸಿದ ಅವರು, ದೇಶದಲ್ಲಿನ ರೈತರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಆತಂಕ ಹೊರಹಾಕಿದರು. "ದೇಶದಲ್ಲಿ ರೈತರ ಪರಿಸ್ಥಿತಿ ಹದಗೆಟ್ಟಿದ್ದು, ಅವರ ಸ್ಥಿತಿಯನ್ನು ಸುಧಾರಿಸಲು ಪ್ರಧಾನಿ ಮುಂದಾಗಬೇಕು. ಸರ್ಕಾರ ರೈತರಿಗೆ ಯಾವುದೇ ಪರಿಹಾರ ನೀಡುತ್ತಿಲ್ಲ. ಅದರಲ್ಲಿಯೂ ಕೇರಳದ ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು" ಎಂದು ಮನವಿ ಮಾಡಿದರು.

8.ಇಬ್ಬರು ಶಾಸಕರ ಅನರ್ಹತೆಗೆ ಮನವಿ

ಇಬ್ಬರು ಶಾಸಕರನ್ನು ಅನರ್ಹತೆ‌ ಮಾಡುವಂತೆ ಮನವಿ ಮಾಡಿದ್ದೇವೆ. ಅದರ ಬಗ್ಗೆ ಇಂದು ಸಚಿವ ಸಂಪುಟದಲ್ಲಿ ಚರ್ಚೆ‌ ನಡೆಸಿದ್ದೇವೆ. ಉಳಿದ ಬಗ್ಗೆ ನಾನು ಹೆಚ್ಚೇನು‌ ಹೇಳಲ್ಲಾ.  ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಾಡುವುದರ ಬಗ್ಗೆ ಬಿಜೆಪಿ ಮಾತಾಡ್ತಿಲ್ಲಾ. ಸದನದಲ್ಲಿ ಬಹುಮತ ಸಾಬೀತು ಬಗ್ಗೆ ಮಾತಾಡ್ತಿಲಾ. ಅದಕ್ಕಾಗಿ ನಾವೇ ವಿಶ್ವಾಸ ಮಂಡಿಸಲು ತಯಾರಿದ್ದೇವೆ. ಅಧಿವೇಶನದಲ್ಲಿ ನಮ್ಮ ಶಕ್ತಿ‌ ಪ್ರದರ್ಶಿಸುತ್ತೇವೆ. ನಾವೇ ಬಹುಮತ ಸಾಬೀತು‌ಪಡಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡೂರಾವ್ ಹೇಳಿದರು.  ರಾಮಲಿಂಗಾ ರೆಡ್ಡಿ ಬಿಟ್ಟು ಪಕ್ಷದಿಂದ ಅನರ್ಹಗೊಳಿಸಲು ಎಲ್ಲರ ಮೇಲೆ ಫಿಟಿಷನ್ ಹಾಕಿದ್ದೇವೆ. ರಾಜೀನಾಮೆ ಪತ್ರ ಸರಿ‌ ಕೊಡದೇ ಇರುವವರು ಕೊಡಬೇಕಿದೆ ಎಂದ ಅವರು, ದೇಶದಲ್ಲಿ ಸರ್ಕಾರ ತೆಗೆಯುವ ಕೆಲಸ‌ ಮಾಡುವುದಕ್ಕೆ‌ ಇಂತವರು ಇದ್ದಾರೆ. ರಾಜೀನಾಮೆ ನೀಡುವವರು ಚುನಾವಣೆಗೆ ಯಾಕೆ‌ ನಿಲ್ಲಬೇಕು. ಬೇಕಾದರೆ ಪಕ್ಷೇತರವಾಗಿ‌ ಇವ್ರು‌ ನಿಲ್ಲಲಿ.  ದೇಶದಲ್ಲಿ‌ ಸರ್ವಾಧಿಕಾರಿ ಆಡಳಿತ ನಡೀತ ಇದೆ. ಕುದುರೆ ವ್ಯಾಪಾರ ತಡೆಯುವುದಷ್ಟೇ ನಮ್ಮ‌ ಕೆಲಸ. ದ್ರೋಹ ಬಗೆಯವ ಶಾಸಕರಿಗೆ ಬುದ್ಧಿ ಕಲಿಸಬೇಕು. ರಾಜ್ಯದ ಜನ್ರು‌ ಕೂಡ ಶಿಕ್ಷೆ ಆಗಬೇಕು ಅಂತಾ ಬಯಸ್ತಾ ಇದ್ದಾರೆ. ಕಾನೂನು ವ್ಯವಸ್ಥೆಯಲ್ಲಿ ಕ್ರಮ‌ ಕೈಗೊಳ್ಳಬೇಕಿದೆ ಎಂದು ಹೇಳಿದರು

9.ಇಂಗ್ಲೆಂಡ್ ಮಾರಕ ದಾಳಿ: ಸಂಕಷ್ಟದಲ್ಲಿ ಆಸ್ಟ್ರೇಲಿಯಾ

ವಿಶ್ವಕಪ್​ನ 2ನೇ ಸೆಮಿ ಫೈನಲ್​ನಲ್ಲಿ ಇಂದು ಅತಿಥೇಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿದೆ. ಎಡ್ಜ್​ಬಾಸ್ಟನ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸೀಸ್ ನಾಯಕ ಆರೋನ್ ಫಿಂಚ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ತವರಿನ ಬೆಂಬಲದೊಂದಿಗೆ ಬೌಲಿಂಗ್​ ಆರಂಭಿಸಿದ ಇಂಗ್ಲೆಂಡ್​ ತಂಡದ ಮಾರಕ ದಾಳಿ ಮುಂದೆ ಆಸೀಸ್​ ಬ್ಯಾಟ್ಸ್​ಮನ್​ಗಳು ತರಗೆಲೆಯಂತೆ ಉದುರಿದರು. ಆಸ್ಟ್ರೇಲಿಯಾ ಪರ ಸ್ಮಿತ್ 68* ಗಳಿಸಿರುವುದು ಬಿಟ್ಟರೆ ಉಳಿದ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳಿಂದ ಯಾವುದೇ ಉತ್ತಮ ಮೊತ್ತ ದಾಖಲಾಗಲಿಲ್ಲ. ಇನ್ನು ಇಂಗ್ಲೆಂಡ್ ಪರ ಆದಿಲ್ ರಶೀದ್ 3 ವಿಕೆಟ್ ಉರುಳಿಸಿ ಮಿಂಚಿದರು. ಇತ್ತೀಚಿನ ವರದಿ ಬಂದಾಗ ಇಂಗ್ಲೆಂಡ್ 38 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್​ಗಳಿಸಿದೆ

10.ಹೊಸ ಟ್ರೈಲರ್​ಗಾಗಿ ಡಿಬಾಸ್​ ಅಭಿಮಾನಿಗಳಿಂದ ಹೆಚ್ಚಿದ ಬೇಡಿಕೆ: ಅಭಿಮಾನಿಗಳ ಒತ್ತಾಯಕ್ಕೆ ಮಣಿದರಾ ಮುನಿರತ್ನ..?

'ಕುರುಕ್ಷೇತ್ರ' ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾದಾಗಿನಿಂದ ದರ್ಶನ್ ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆಯೇ ಇಲ್ಲದಂತಾಗಿದೆ. ಜು.12ಕ್ಕೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳದಲ್ಲಿ ಮತ್ತೆ ಹೊಸ ಟ್ರೈಲರ್ ಬಿಡುಗಡೆ ಮಾಡಲಿದೆಯಂತೆ. ಈ ವಿಷಯ ತಿಳಿದ ದರ್ಶನ್​ ಅಭಿಮಾನಿಗಳು ಸದ್ಯ ಸಂಭ್ರಮದಿಂದ ಹಂಚಿಕೊಳ್ಳುತ್ತಿದ್ದು, ನಿರ್ಮಾಪಕ ಮುನಿರತ್ನ ಅವರಿಗೆ ಧನ್ಯವಾದ ತಿಳಿಸುತ್ತಿದ್ದಾರೆ. ಆದರೆ ಸಿನಿಮಾ ತಂಡ ಮಾತ್ರ ಇನ್ನೂ ಎಲ್ಲೂ ಅಧಿಕೃತವಾಗಿ ಈ ಕುರಿತು ಹೇಳಿಕೆ ನೀಡಿಲ್ಲ. ಒಂದು ರಾತ್ರಿ ಕಳೆದರೆ ಸಾಕು ಬೆಳಿಗ್ಗೆ ಸತ್ಯಾಸತ್ಯತೆ ಗೊತ್ತಾಗಲಿದೆ.
First published:July 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...