ಮೈಸೂರು (ಜನವರಿ 28); ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ದೆಹಲಿ ಹೊರವಲಯದಲ್ಲಿ ಶಾಂತಿಯುತವಾಗಿ ಹೋರಾಟ ನಡೆಸಿದ್ದಾರೆ. ಆದರೆ, ಜನವರಿ 26 ರಂದು ಆಯೋಜಿಸಿದ್ದ ಟ್ರ್ಯಾಕ್ಟರ್ ರ್‍ಯಾಲಿ ವೇಳೆ ಕೆಂಪುಕೋಟೆಯ ಬಳಿ ಅಹಿತಕರ ಘಟನೆ ನಡೆದಿದೆ. ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, 20 ಜನ ಗಾಯಾಳುಗಳಾಗಿದ್ದಾರೆ. ಕೆಲ ಪೊಲೀಸರಿಗೂ ಸಹ ಗಾಯಗಳಾಗಿವೆ. ಈ ಸಂಬಂಧ 200 ಜನರನ್ನು ಬಂಧಿಸಲಾಗಿದ್ದು 22 ಎಫ್ಐಆರ್ ದಾಖಲಿಸಲಾಗಿದೆ. ರೈತ ಮುಖಂಡರಿಗೂ ಸಹ ಮೂರು ದಿನದಲ್ಲಿ ಉತ್ತರ ನೀಡುವಂತೆ ದೆಹಲಿ ಪೊಲೀಸರು ನೊಟೀಸ್ ನೀಡಿದ್ದಾರೆ. ಆದರೆ, ಈ ಬಗ್ಗೆ ಇಂದು ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿಷಾಧ ವ್ಯಕ್ತಪಡಿಸಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್, " ಸಮಾಜಘಾತುಕ ವ್ಯಕ್ತಿಗಳಿಂದ ರೈತರ ಹೆಸರಿಗೆ ಮಸಿಯಾಗಿದೆ. ಹೀಗಾಗಿ ದೆಹಲಿ ಘಟನೆ ಬಗ್ಗೆ ಸರ್ವೋಚ್ಚನ್ಯಾಯಾಲದ ನ್ಯಾಯಾಧೀಶರಿಂದ ತನಿಖೆಯಾಗಬೇಕು" ಎಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, "60 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾನಿರತ ರೈತರ ಹೆಸರಿಗೆ ಮಸಿ ಬಳಿಯಲು ಸರ್ಕಾರ ಷಡ್ಯಂತ್ರ ರಚಿಸಿದೆ. ಆದರೆ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಘಟನೆ ದುರಾದೃಷ್ಠಕರ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಬೇರೆ ಬಾವುಟ ಹಾರಿಸಿದ್ದು ಪಂಜಾಬಿನ ನಟ ದೀಪ್ ಸಿಧು. ದೀಪ್ ಸಿಧು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ. ಅಲ್ಲದೇ ಬಾವುಟ ಹಾರಿಸಿದ್ದು ನಾನೆ ಎಂದು ದೀಪ್ ಸಿಧು ಒಪ್ಪಿಕೊಂಡಿದ್ದಾನೆ.
ಇದು ರೈತರ ಹೆಸರಿಗೆ ಕಳಂಕ ತರಲು ನಡೆಸಿದ ಷಡ್ಯಂತ್ರ. ಇಂತಹ ಸಮಾಜಘಾತುಕ ವ್ಯಕ್ತಿಗಳ ಮೇಲೆ ಮೊಕದ್ದಮೆ ದಾಖಲಿಸಿ ಜೀವಾವಧಿ ಶಿಕ್ಷೆ ನೀಡಬೇಕು. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆಯಾಗಬೇಕು. ಈ ವಿಚಾರ ಬೇಹುಗಾರಿಕೆ ಸಂಸ್ಥೆ ಮೂಲಕ ಕೇಂದ್ರ ಸರ್ಕಾರಕ್ಕೆ ತಿಳಿದಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಸಿದ್ದು ಯಾಕೆ..? ಇದಕ್ಕೆ ಕೇಂದ್ರ ಸರ್ಕಾರ ಉತ್ತರ ಕೊಡಬೇಕು" ಎಂದು ಮೈಸೂರಿನಲ್ಲಿ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧದ ರೈತ ಹೋರಾಟ ಮುಂದುವರೆಯಲಿದೆ ಎಂದು ಹೇಳಿರುವ ಅವರು, "ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮುಂದುವರೆಯುತ್ತೆ. ಗಲಭೆಯಿಂದ ಹೋರಾಟಕ್ಕೆ ಯಾವುದೇ ಹಿನ್ನಡೆಯಾಗಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ರೈತರನ್ನು ಮನೆಯಲ್ಲಿ ಕೂಡಿಹಾಕಿ ಈ ಕಾಯ್ದೆಯನ್ನು ತಂದಿದ್ದಾರೆ. ರೈತರ ಜೊತೆ ನಾಟಕೀಯವಾಗಿ 11ಸಭೆ ನಡೆಸಿದ್ದಾರೆ. 145ರೈತರು ಚಳುವಳಿ ಮೂಲಕ ಪ್ರಾಣ ಕಳೆದುಕೊಂಡಾಗ ರೈತರ ಬಗ್ಗೆ ಕನಿಕರ ಇರಲಿಲ್ವಾ..?
ಇದು ಇಡೀ ರೈತ ಕುಲವನ್ನೇ ನಾಶ ಮಾಡುವ ಸಂಚು. ಈ ಕಾಯ್ದೆಗಳ ವಿರುದ್ಧ ನಮ್ಮ ಹೋರಾಟ ನಿಲ್ಲಲ್ಲ. ಇದೇ ಜ.30ರಂದು ಉಪವಾಸ ನಿರಸನ ದಿನ ನಡೆಸಲು ತೀರ್ಮಾನಿಸಿದ್ದೇವೆ. ದೆಹಲಿಯ ಎಲ್ಲಾ ಗಡಿಭಾಗದಲ್ಲೂ ಉಪವಾಸ ನಿರಶನ ದಿನ ಆಚರಣೆ ಮಾಡಲಾಗುತ್ತದೆ. ನಾವು ಸಹ ರಾಜ್ಯದಿಂದ ತಂಡ ತಂಡವಾಗಿ ಚಳುವಳಿಗೆ ಹೋಗಲು ಚಿಂತನೆ ನಡೆಸಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ರೈತ ಹೋರಾಟಗಾರರನ್ನು ಭಯೋತ್ಪಾದಕರು ಎಂದು ಬಹಿರಂಗ ಹೇಳಿಕೆ ನೀಡಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ಗುಡುಗಿರುವ ಕುರುಬೂರು ಶಾಂತಕುಮಾರ್, "ಬಿ.ಸಿ. ಪಾಟೀಲ್ ಕೃಷಿ ಸಚಿವರಲ್ಲ. ಅವರೊಬ್ಬ ಸಿನಮಾ ಸಚಿವರು. ಎಷ್ಟೇ ಆಗಲಿ ಅವರು ಸಿನಿಮಾ ಕ್ಷೇತ್ರದಿಂದ ಬಂದವರಲ್ಲವೇ. ಅದಕ್ಕಾಗಿ ರೈತ ಹೋರಾಟದ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಒಂದೆಡೆ ಹೋಗಿ ಭತ್ತ ನಾಟಿ ಮಾಡಿ ಫೋಸ್ ಕೊಡ್ತಾರೆ. ಇನ್ನೊಂದ್ ಕಡೆ ಜೋಳದ ತೆನೆ ಹೊತ್ತು ರೈತನೆಂದು ಫೋಸ್ ಕೊಡ್ತಾರೆ. ಅವರು ಕೃಷಿ ಸಚಿವರಾಗಲು ನಾಲಯಕ್. ಅವರ ಮಾತಿನ ಫಲವನ್ನು ಶೀಘ್ರದಲ್ಲೇ ಅವರು ಅನುಭವಿಸಲಿದ್ದಾರೆ ಎಂದು ಕುರುಬೂರು ಶಾಂತಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ