ಫೆಬ್ರವರಿ 17ರಿಂದ ಜಂಟಿ ಅಧಿವೇಶನ, ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡನೆ; ಸಚಿವ ಮಾಧುಸ್ವಾಮಿ

ಸಾರ್ವಜನಿಕ ಆಸ್ತಿ ಹಾನಿ ವಿಚಾರ‌ವಾಗಿ ಮಾತನಾಡಿದ ಕಾನೂನು ಹಾಗೂ ಸಂಸದೀಯ ಸಚಿವ ಮಾಧುಸ್ವಾಮಿ, ಸಾರ್ವಜನಿಕ ಆಸ್ತಿ ನಷ್ಟ ಉಂಟು ಮಾಡಿದರೆ  ಪ್ರತಿಭಟನಾಕಾರರಿಂದ ನಷ್ಟ ವಸೂಲಿ ಮಾಡುವ ಉತ್ತರಪ್ರದೇಶ ಮಾದರಿ ಅನುಸರಿಸಲು ರಾಜ್ಯದಲ್ಲಿ ಕಾಯ್ದೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಸಚಿವ ಮಾಧುಸ್ವಾಮಿ

ಸಚಿವ ಮಾಧುಸ್ವಾಮಿ

  • Share this:
ಬೆಂಗಳೂರು: ಸಿಎಂ ವಿದೇಶ ಪ್ರವಾಸದಿಂದ ಜನವರಿ 20ರಿಂದ ನಿಗದಿಯಾಗಿದ್ದ ಅಧಿವೇಶನ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಫೆಬ್ರವರಿ 17ರಿಂದ 21ರವರೆಗೆ ಜಂಟಿ ಅಧಿವೇಶನ ನಡೆಯಲಿದೆ. ಮಾರ್ಚ್​ 2ರಿಂದ ಬಜೆಟ್ ಅಧಿವೇಶನ ಆರಂಭವಾಗಿ, ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಧುಸ್ವಾಮಿ ಅವರು, 2020 ನವೆಂಬರ್ 3, 4, 5 ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಸಂಪುಟ ತೀರ್ಮಾನಿಸಿದೆ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಆ ಭಾಗದ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಲಾಗಿದೆ. ಕಾರಜೋಳ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಹೊರಗಡೆಯವರನ್ನು ಮಾಡಿದ್ದಾರೆ ಅಂತ ತಕರಾರು ಬಂದಿತ್ತು ಎಂದು ತಿಳಿಸಿದರು.

ಕೆಪಿಎಸ್​ಸಿಯ ಎ, ಬಿ ಗ್ರೂಪ್​ನ ಆಯ್ದ ಕೆಲ ಹುದ್ದೆಗಳಿಗೆ ಸಂದರ್ಶನ ಇಲ್ಲ. ಸಂದರ್ಶನ ಇಲ್ಲದೇ ಅಂಕ ಗಳಿಕೆ ಆಧಾರದ ಮೇಲೆ ಉದ್ಯೋಗ ನೀಡಲಾಗುವುದು. ಯಾವ್ಯಾವ ಹುದ್ದೆ ಅನ್ನೋದನ್ನು ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಬೆಂಗಳೂರು ಟರ್ಫ್ ಕ್ಲಬ್ ನಿಂದ 37.46 ಕೋಟಿ ಬಾಡಿಗೆ ಬರಬೇಕಾಗಿದೆ. ಅವರ ಲೀಸ್ ಅವಧಿಯೂ ಮುಕ್ತಾಯವಾಗಿದೆ. 2009ಕ್ಕೆ ಅವರ ಅವಧಿ ಮುಕ್ತಾಯವಾಗಿದೆ. ಆದರೆ ಅವರು ಬಾಡಿಗೆ ಪಾವತಿಸದೇ ಇವಾಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯಾಲಯ ಸೂಚಿಸಿತ್ತು. ಅಡ್ವೊಕೆಟ್ ಜ‌ನರಲ್ ಸಲಹೆಯಂತೆ ಬಾಡಿಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನಂತರ ಅವರ ಗುತ್ತಿಗೆ ಅವಧಿ ಮುಂದುವರಿಸಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಲಾಗುತ್ತದೆ. ಟರ್ಪ್ ಕ್ಲಬ್ ಸ್ಥಳಾಂತರಿಸಬೇಕು ಎಂದು ಎರಡು ಬಾರಿ ತೀರ್ಮಾನವಾಗಿದೆ. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಮೈಸೂರು ಟರ್ಫ್ ಕ್ಲಬ್ ಹಾಗೂ ಗಾಲ್ಫ್ ಕ್ಲಬ್ ಬಾಡಿಗೆ ಮೊತ್ತವನ್ನು ಏರಿಕೆ ಮಾಡಲು ನಿರ್ಧರಿಸಲಾಗಿದೆ. ಅವರಿಗೆ ಬರುವ ಲಾಭಾಂಶದ ಮೇಲೂ ಶೇಕಡಾ 2ರಷ್ಟು ಬಾಡಿಗೆ ನಿಗದಿ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ಇದನ್ನು ಓದಿ: ನನಗೇಕೆ ಇನ್ನೂ ಸರ್ಕಾರಿ ಕಾರು ನೀಡಿಲ್ಲ? ಸ್ಪೀಕರ್ ಸರ್ವಾಧಿಕಾರಿಯೇ?; ಕಾಗೇರಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ರಾಮನಗರ ಜಿಲ್ಲೆ ಕಪಾಲಿ ಬೆಟ್ಟ ವಿವಾದದ ಬಗ್ಗೆ ಪ್ರಸ್ತಾಪ ಇರಲಿಲ್ಲ. ಹೀಗಾಗಿ ಆ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದ ಮಾಧುಸ್ವಾಮಿ, ಹೆಚ್ಚು ರಕ್ಷಣೆಯೊಂದಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಹೆಣ್ಣು ಮಕ್ಕಳಿಗೆ ಅವಕಾಶ ನೀಡಲಾಗಿದೆ. ಬರುವ ಅಧಿವೇಶನದಲ್ಲಿ ಈ ಕಾಯ್ದೆ ಮಂಡನೆಯಾಗಲಿದೆ. ನೂತನ ಕೈಗಾರಿಕಾ ನೀತಿ ತಿದ್ದುಪಡಿಗೆ ಸಮ್ಮತಿಸಲಾಗಿದ್ದು, ನವೀಕರಣ ಪ್ರಕ್ರಿಯೆಯ ಅವಧಿಯನ್ನು ಆರು ತಿಂಗಳಿಂದ ಮೂರು ವರ್ಷಕ್ಕೆ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಶೇ. 25 ರಷ್ಟು ಸೀಟು ಕನ್ನಡಿಗರಿಗೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಮುಂದಿನ ಅಧಿವೇಶನದಲ್ಲಿ ವಿಧೇಯಕದ ಮಂಡನೆ ಮಾಡಲಾಗುತ್ತದೆ. ಹಾಗೆಯೇ  ಜೇವರ್ಗಿಯ ಯಡ್ರಾಮಿ, ನ್ಯಾಮತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.  ಬಾದಾಮಿ ಪುರಸಭೆ ಮೇಲ್ದರ್ಜೆಗೇರಿಕೆಗೆ ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ಆಸ್ತಿ ಹಾನಿ ವಿಚಾರ‌ವಾಗಿ ಮಾತನಾಡಿದ ಕಾನೂನು ಹಾಗೂ ಸಂಸದೀಯ ಸಚಿವ ಮಾಧುಸ್ವಾಮಿ, ಸಾರ್ವಜನಿಕ ಆಸ್ತಿ ನಷ್ಟ ಉಂಟು ಮಾಡಿದರೆ  ಪ್ರತಿಭಟನಾಕಾರರಿಂದ ನಷ್ಟ ವಸೂಲಿ ಮಾಡುವ ಉತ್ತರಪ್ರದೇಶ ಮಾದರಿ ಅನುಸರಿಸಲು ರಾಜ್ಯದಲ್ಲಿ ಕಾಯ್ದೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
First published: