ಅಷ್ಟಮಿಯಂದು ಬರುವ ಜೋಕುಮಾರ ಮಳೆ ತರುತ್ತಾನಾ?; ಉ.ಕ ಸಾಂಪ್ರದಾಯಿಕ ಹಬ್ಬ ಇಂದಿಗೂ ವಿಶಿಷ್ಟ

ಗಣಪತಿ ಕುಳಿತು 4ನೇ ದಿನಕ್ಕೆ ಜೋಕುಮಾರ ಜನಿಸುತ್ತಾನೆ. ನಂತರ ಅವನಿಗೆ ಬೆಣ್ಣೆ, ಬೇವಿನ ತಪ್ಪಲದಿಂದ ಸಿಂಗರಿಸಿ ಬಿದರಿನ ಬುಟ್ಟಿಯಲ್ಲಿಟ್ಟುಕೊಂಡು ಮಹಿಳೆಯರು ಗಲ್ಲಿ ಗಲ್ಲಿ, ಮನೆ ಮನೆ ತಿರುಗಾಡುತ್ತಾರೆ

ಜೋ ಕುಮಾರ ಹಬ್ಬದ ವಿಶೇಷ

ಜೋ ಕುಮಾರ ಹಬ್ಬದ ವಿಶೇಷ

  • Share this:
ಚಿಕ್ಕೋಡಿ (ಸೆ. 17):  ಭಾದ್ರಪ್ರದ ಶುಕ್ಲದ ಚೌತಿಯಂದು ಬರುವ ಗಣಪ (Ganesha festival) ಬಂದು ಕುಳಿತು ತಿಂದು ಉಂಡು ಹೋದರೆ, ಅಷ್ಟಮಿಯಂದು ಹುಟ್ಟುವ ಜೋಕುಮಾರ(jokumara festival ಜನರ ಮಧ್ಯೆ ಸುತ್ತಾಡಿ, ಶಿವನಿಗೆ ವರದಿ ಒಪ್ಪಿಸಿ ಮಳೆ ತರುತ್ತಾನೆ ಎಂಬ ನಂಬಿಕೆ ಇಂದಿಗೂ ಇದೆ. ಕುಂಬಾರರ ಮನೆಯಲ್ಲಿ ಹುಟ್ಟಿ, ತಳವಾರರ ಮನೆಯಲ್ಲಿ ಮೆರೆದಾಡಿ ಕೊನೆಗೆ ದಾಸರ ಪಡಿಯಲ್ಲಿ ಕಲ್ಲು ಹೊಡೆಸಿಕೊಂಡು ಸಾಯುವ ಜೋಕುಮಾರನ ಹಬ್ಬದ ಸಂಪೂರ್ಣ ಮಾಹಿತಿ ಇಲ್ಲಿದೆ. 

ಉತ್ತರ ಕರ್ನಾಟಕದ (uttara karnataka) ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ ಐತಿಹಾಸಿಕ ಜೋಕುಮಾರನ ಹಬ್ಬ. ನಮ್ಮದು ಸಂಪ್ರದಾಯ ಸಂಸ್ಕೃತಿಯ ನೆಲೆಬೀಡು, ಗ್ರಾಮೀಣ ಪ್ರದೇಶದಲ್ಲಿ ಹಿಂದಿನಿಂದ ಆಚರಿಸುತ್ತಾ ಬಂದ ಕೆಲ ಧಾರ್ಮಿಕ ಆಚರಣೆಗಳು ಇಂದಿಗೂ ನಮ್ಮಲ್ಲಿ ಪ್ರಸ್ತುತ ಎನ್ನುವುದಕ್ಕೆ ಉತ್ತರ ಕರ್ನಾಟಕದ ಜೋಕುಮಾರನ ಹಬ್ಬ ಕೂಡಾ ಒಂದು. ಭಾದ್ರಪದ ಮಾಸದ ಅಷ್ಟಮಿಯಂದು ಹುಟ್ಟುವ ಜೋಕುಮಾರ, ಜೋ ಎಂಬ ಮುನಿಯ ಮಗನು, ಜೇಷ್ಠಾ ದೇವಿಯ ಮಗನೆಂದು ಹೇಳಲಾಗುತ್ತಿದೆ. ಗಣಪ ಕುಳಿತು ತಿಂದು ಉಂಡು ಹೋದರೆ ಜೋಕುಮಾರ ಮಾತ್ರ ಭೂಮಂಡಲದಲ್ಲಿ ಓಣಿ ಓಣಿಗೂ ಸುತ್ತಾಡಿ, ಮಳೆ ಬೆಳೆ ಇಲ್ಲದೇ ಕಂಗಾಲಾಗಿರುವುದನ್ನು ಕಂಡು ಶಿವನಿಗೆ ವರದಿ ಒಪ್ಪಿಸಿ ಮಳೆ ತರುತ್ತಾನೆ ಎಂಬ ಪ್ರತೀತಿಯೂ ಇದೆ.ಗಣಪತಿ ಕುಳಿತು 4ನೇ ದಿನಕ್ಕೆ ಜೋಕುಮಾರ ಜನಿಸುತ್ತಾನೆ. ನಂತರ ಅವನಿಗೆ ಬೆಣ್ಣೆ, ಬೇವಿನ ತಪ್ಪಲದಿಂದ ಸಿಂಗರಿಸಿ ಬಿದರಿನ ಬುಟ್ಟಿಯಲ್ಲಿಟ್ಟುಕೊಂಡು ಮಹಿಳೆಯರು ಗಲ್ಲಿ ಗಲ್ಲಿ, ಮನೆ ಮನೆ ತಿರುಗಾಡುತ್ತಾರೆ. ಜೋಕುಮಾರನ ಜಾನಪದ ಹಾಡುಗಳನ್ನು ಹಾಡುತ್ತಾ, ಕೇಳುಗರನ್ನು ಮಂತ್ರ ಮುಗ್ದರನ್ನಾಗಿಸುತ್ತಾರೆ ಜೋಕುಮಾರನಿಗೆ ಗೋದಿ, ಜೋಳ, ಸಜ್ಜಿ ಹಣ ಸೇರಿದಂತೆ ಅನೇಕ ಪದಾರ್ಥಗಳನ್ನು ಜನ ನೀಡುತ್ತಾರೆ.

ಇದನ್ನು ಓದಿ: ದೇವಾಲಯಗಳು ನಮ್ಮ ಅಸ್ಮಿತೆ, ದೇವಸ್ಥಾನಗಳ ರಕ್ಷಣೆ ಮಾಡುತ್ತೇವೆ; ಸಿಎಂ ಬಸವರಾಜ ಬೊಮ್ಮಾಯಿ

ಜೋಕುಮಾರನು ಕುಂಬಾರರ ಮನೆಯಲ್ಲಿ ಜನಿಸಿ, ತಳವಾರ ಮನೆಯಲ್ಲಿ ಮೆರೆದಾಡಿ, ಕರ‍್ಯಾನವರ ಮನೆಯಲ್ಲಿ ಜಿಗಿದಾಡಿ ಕೊನೆಗೆ ದಾಸರ ಪಡಿಯಲ್ಲಿ ಮರಣ ಹೊಂದುತ್ತಾನೆ ಎಂಬುದು ಮೊದಲಿನಿಂದಲೂ ಜಾರಿಯಲ್ಲಿರುವ ಪದ್ದತಿಯಾಗಿದೆ. 7 ದಿನಗಳ ವರೆಗೆ ಪ್ರತಿ ಗ್ರಾಮದಲ್ಲಿ ತಿರುಗಾಡಿ 7 ನೇ ರಾತ್ರಿ ಎಲ್ಲ ಜನ ಮಲಗಿದ ಮೇಲೆ ಕೇರಿಯಲ್ಲಿನ ದೇವಿಗುಡಿ ಕಟ್ಟೆಮೇಲೆ ಜೋಕುಮಾರನನ್ನ ಇಟ್ಟು ಬರುತ್ತಾರೆ. ನಂತರ ಕೇರಿಯ ಜನ ಜೋಕುಮಾರನ ಮೂರ್ತಿಮೇಲೆ ಬಾರಿಗಿಡದ ಕಂಟಿಯಿಂದ ಮುಚ್ಚಿ ಆತನ ಸುತ್ತಲೂ ಸುತ್ತುತ್ತಾರೆ.

ಸುತ್ತುವಾಗ ಬಾರಿ ಕಂಟಿಗೆ ಸೀರೆ ಸಿಲುಕಿದಾಗ ಜೋಕುಮಾರ ಜಗ್ಗಿದಾ ಎಂದು ಭಾವಿಸಿ ಕಲ್ಲಿನಿಂದ ಹಾಗೂ ಒಣಕೆಯಿಂದ ಜಡಿದು ತಲೆ ಬುರುಡೆ ಒಡೆಯುವುದು ವಾಡಿಕೆ. ನಂತರ ದಾಸರ ಪಡಿಯಲ್ಲಿ ಒಡೆದ ಮೂರ್ತಿ ( ಧಫನ್ ) ಮಣ್ಣು ಮಾಡುತ್ತಾರೆ. ಮರುದಿನ  ಅಗಸರು ಜೋಕುಮಾರನ ದಿನದ (ತಿಥಿ) ಮಾಡುವ ಪದ್ದತಿ ಇಂದಿಗೂ  ಜಾರಿಯಲ್ಲಿದೆ.
ಜೋಕುಮಾರ ಬಂದು ಹೋದ 3-4 ದಿನಗಳಲ್ಲಿ ಮಳೆ ಬರುವುದೆಂಬ ನಂಬಿಕೆ ಇಂದಿಗೂ ಗ್ರಾಮೀಣ ಜನರಲ್ಲಿದ್ದು, ಆ ಜೋಕುಮಾರಸ್ವಾಮಿ ಎಲ್ಲರಿಗೂ ಒಳಿತನ್ನು ಮಾಡಲಿ ಎಂಬುದು ನಮ್ಮ ಆಶಯ.
Published by:Seema R
First published: