ಜಾರ್ಖಂಡ್ ಚುನಾವಣೆ: ಬಿಜೆಪಿಗೆ ಮುಖಭಂಗ; ಜೆಎಂಎಂ ಹಾಗೂ ಮಿತ್ರರಿಗೆ ಗೆಲುವಿನ ನಗೆ

ನೂತನ ಮುಖ್ಯಮಂತ್ರಿಯಾಗಲಿರುವ ಹೇಮಂತ್ ಸೊರೇನ್ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಹಿಂದೆ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ಧಾಗ ಹೇಮಂತ್ ಅವರು ಆಡಳಿತ ನಡೆಸಿದ್ದು 17 ತಿಂಗಳು ಮಾತ್ರ. ಆದರೆ, ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಕಲ್ಪಿಸಿದ್ದರು. ರಾಜ್ಯದಲ್ಲಿ ಭೀಕರವಾಗಿದ್ದ ನಕ್ಸಲ್ ಸಮಸ್ಯೆಯನ್ನು ತಕ್ಕಮಟ್ಟಿಗೆ ತಹಬದಿಗೆ ತಂದಿದ್ದರು.

ಹೇಮಂತ್ ಸೋರೆನ್

ಹೇಮಂತ್ ಸೋರೆನ್

  • News18
  • Last Updated :
  • Share this:
ರಾಂಚಿ(ಡಿ. 23): ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತವಿರೋಧಿ ಅಲೆಯನ್ನೇರಿ ಜೆಎಂಎಂ ನೇತೃತ್ವದ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿದೆ. 81 ಸದಸ್ಯಬಲದ ಜಾರ್ಖಂಡ್ ವಿಧಾನಸಭೆಯ ಚುನಾವಣೆಯಲ್ಲಿ ಜೆಎಂಎಂ-ಕಾಂಗ್ರೆಸ್-ಆರ್​ಜೆಡಿ ಮೈತ್ರಿಕೂಟ 47 ಸ್ಥಾನಗಳನ್ನು ಜಯಿಸಿದೆ. ಈ ಮೂಲಕ ಬಿಜೆಪಿ ಸರ್ಕಾರ ಉರುಳಿಬಿದ್ದಿದೆ. ರಘುಬರ್ ದಾಸ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ಧಾರೆ. ಜಾರ್ಖಂಡ್​ನ ಅತ್ಯಂತ ಕಿರಿಯ ಮುಖ್ಯಮಂತ್ರಿ ಎನಿಸಿರುವ ಹೇಮಂತ್ ಸೋರೆನ್ ಅವರು ಎರಡನೇ ಬಾರಿ ಸಿಎಂ ಸ್ಥಾನ ಅಲಂಕರಿಸಲಿದ್ದಾರೆ.

ಇಂದು ಪ್ರಕಟವಾದ ಫಲಿತಾಂಶದಲ್ಲಿ ಜೆಎಎಂ ಪಕ್ಷ 30 ಸ್ಥಾನಗಳನ್ನು ಗಳಿಸಿತು. ಕಳೆದ ಬಾರಿಯ ಚುನಾವಣೆಗಿಂತ 11 ಸ್ಥಾನ ಹೆಚ್ಚು ಪಡೆದಿದೆ. ಇನ್ನು, ಕಾಂಗ್ರೆಸ್ ಪಕ್ಷ ಕೂಡ ಈ ಬಾರಿ 16 ಸ್ಥಾನಗಳನ್ನು ಗೆದ್ದು ಮಿಂಚಿದೆ. ಕಳೆದ ಬಾರಿ 6 ಸ್ಥಾನಗಳನ್ನಷ್ಟೇ ಗೆದ್ದಿದ್ದ ಕಾಂಗ್ರೆಸ್​ಗೆ ಈ ಬಾರಿಯ ಫಲಿತಾಂಶ ಸಂಪೂರ್ಣ ಸಂತೃಪ್ತಿ ಕೊಟ್ಟಿದೆ. ಇವರಿಬ್ಬರೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಆರ್​ಜೆಡಿ ಕೂಡ ಲಾಭ ಮಾಡಿಕೊಂಡಿದೆ. 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆರ್​ಜೆಡಿ 1 ಸ್ಥಾನ ಗೆದ್ದು ಜಾರ್ಖಂಡ್​ನಲ್ಲಿ ಖಾತೆ ಓಪನ್ ಮಾಡಿದೆ. ಒಟ್ಟು 5 ಕ್ಷೇತ್ರಗಳಲ್ಲಿ ಆರ್​ಜೆಡಿ ನಿಕಟ ಪೈಪೋಟಿ ನೀಡಿದ್ದು ಗಮನಾರ್ಹ.

ಇನ್ನೊಂದೆಡೆ, ಯಾವುದೇ ಮೈತ್ರಿ ಇಲ್ಲದೇ ಏಕಾಂಗಿಯಾಗಿ ಚುನಾವಣಾ ಕಣಕ್ಕಿಳಿದಿದ್ದ ಬಿಜೆಪಿ 25 ಸ್ಥಾನಗಳನ್ನು ಗೆದ್ದಿದೆ. ಕಳೆದ ಬಾರಿಗಿಂತ ಬಿಜೆಪಿ 12 ಸ್ಥಾನಗಳನ್ನು ಕಳೆದುಕೊಂಡಿದೆ.

ಇದನ್ನೂ ಓದಿ: ಜಾರ್ಖಂಡ್ ಜನತೆಯಿಂದ ಬಿಜೆಪಿಗೆ ಪಾಠ: ಹೇಮಂತ್ ಸೋರೆನ್

ಜೆಎಂಎಂ ಪಕ್ಷ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದಿದೆಯಾದರೂ ವೋಟು ಪ್ರಮಾಣದ ವಿಚಾರದಲ್ಲಿ ಬಿಜೆಪಿ ಮುಂದಿದೆ. ಬಿಜೆಪಿಯ ಮತ ಪ್ರಮಾಣವು ಶೇ. 33ರಷ್ಟಿದೆ. ಜೆಎಂಎಂ ಪಕ್ಷ ಸುಮಾರು ಶೇ. 19ರಷ್ಟು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಪಕ್ಷ ಶೇ. 14ರಷ್ಟು ಮತ ಪಡೆದಿದೆ.

ಹೇಮಂತ್ ಸೋರೆನ್ ಅವರು ಮಾಜಿ ಸಿಎಂ ಶಿಬು ಸೊರೇನ್ ಅವರ ಮಗ. ಹೇಮಂತ್ ಸೊರೇನ್ 2013ರಲ್ಲಿ 38ನೇ ವಯಸ್ಸಿನಲ್ಲಿ ಮುಖ್ಯಮಂತ್ರಿಯಾಗಿದ್ದವರು. ಆಗ ಅವರು ದೇಶದ ಅತ್ಯಂತ ಕಿರಿಯ ಸಿಎಂ ಎನಿಸಿದ್ದರು. ಈಗ ಅಪ್ಪನಂತೆ ಅವರೂ ಕೂಡ ಎರಡನೇ ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಿದ್ದಾರೆ.

ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುತ್ತೇವೆಂದು ಘೋಷಿಸಿ ಬಿಜೆಪಿ ಅಡಿ ಇಡುತ್ತಿರುವಂತೆಯೇ ಕಾಂಗ್ರೆಸ್ ಪಕ್ಷ ಒಂದೊಂದೇ ರಾಜ್ಯಗಳನ್ನ ಬಿಜೆಪಿಯಿಂದ ಕಿತ್ತುಕೊಳ್ಳುತ್ತಿರುವುದು ಗಮನಾರ್ಹ. ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಸೆಳೆದು ಅಧಿಕಾರ ಹಿಡಿಯಿತು. ಈಗ ಜಾರ್ಖಂಡ್​ನಲ್ಲಿ ನೇರವಾಗಿಯೇ ಕಾಂಗ್ರೆಸ್ ಜನಾದೇಶ ಪಡೆದು ಅಧಿಕಾರ ಹಂಚಿಕೊಳ್ಳುತ್ತಿದೆ.

ಇದನ್ನೂ ಓದಿ: ಜಾರ್ಖಂಡ್ ಜನಾದೇಶ ಗೌರವಿಸುತ್ತೇವೆಂದ ಅಮಿತ್ ಶಾ; ಇದು ನನ್ನ ಸೋಲು, ಬಿಜೆಪಿಯದ್ದಲ್ಲ ಎಂದ ರಘುಬರ್ ದಾಸ್

ಇನ್ನು, ಬಿಜೆಪಿಗೆ ಜಾರ್ಖಂಡ್ ಸೋಲು ನಿರೀಕ್ಷಿತವೇ ಆಗಿದೆ. ಬುಡಕಟ್ಟು ಜನಾಂಗಕ್ಕೆ ಸೇರದ ರಘುಬರ್ ದಾಸ್ ಅವರ ಜನಪ್ರಿಯತೆ ಸಾಕಷ್ಟು ಮಂಕಾಗಿಹೋಗಿತ್ತು. ರಾಜ್ಯದಲ್ಲಿ ಆಡಳಿತವಿರೋಧಿ ಅಲೆ ಪ್ರಬಲವಾಗಿತ್ತು. ಸ್ವತಃ ಬಿಜೆಪಿ ಕೂಡ 25ಕ್ಕಿಂತ ಹೆಚ್ಚು ಸ್ಥಾನವನ್ನು ನಿರೀಕ್ಷಿಸಿರಲಿಲ್ಲ. ಬಿಜೆಪಿಗೆ ಸಿಕ್ಕಿರುವ ಒಂದೇ ಸಮಾಧಾನವೆಂದರೆ ರಘುಬರ್ ದಾಸ್ 5 ವರ್ಷ ಆಡಳಿತಾವಧಿ ಪೂರ್ಣಗೊಳಿಸಿದ್ದು. ಜಾರ್ಖಂಡ್​ನಲ್ಲಿ ಪೂರ್ಣಾವಧಿ ಮುಖ್ಯಮಂತ್ರಿಯಾದ ಮೊದಲ ವ್ಯಕ್ತಿ ರಘುಬರ್ ದಾಸ್.

ಇದೇ ವೇಳೆ, ನೂತನ ಮುಖ್ಯಮಂತ್ರಿಯಾಗಲಿರುವ ಹೇಮಂತ್ ಸೊರೇನ್ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಹಿಂದೆ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ಧಾಗ ಹೇಮಂತ್ ಅವರು ಆಡಳಿತ ನಡೆಸಿದ್ದು 17 ತಿಂಗಳು ಮಾತ್ರ. ಆದರೆ, ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಕಲ್ಪಿಸಿದ್ದರು. ರಾಜ್ಯದಲ್ಲಿ ಭೀಕರವಾಗಿದ್ದ ನಕ್ಸಲ್ ಸಮಸ್ಯೆಯನ್ನು ತಕ್ಕಮಟ್ಟಿಗೆ ತಹಬದಿಗೆ ತಂದಿದ್ದರು. ಹಲವು ಆರ್ಥಿಕ ಸುಧಾರಣಾ ಕ್ರಮಗಳನ್ನು ಅವರು ಘೋಷಿಸುವ ಸನ್ನಾಹದಲ್ಲಿದ್ದರು. ಬಿಜೆಪಿಯ ಆಡಳಿತದ ಬಗ್ಗೆ ಭ್ರಮನಿರಸನ ಹೊಂದಿದ್ದ ಜಾರ್ಖಂಡ್ ಜನತೆಗೆ ಹೇಮಂತ್ ಸೋರೆನ್ ಅಭಿವೃದ್ಧಿಯ ಆಶಾಕಿರಣವಾಗಿ ಗೋಚರವಾಗಿದ್ದಂತಿದೆ. ಅಂತೆಯೇ, ಬಿಜೆಪಿಯ ರಾಮ ಮಂದಿರ, ಪೌರತ್ವ ಕಾಯ್ದೆಯ ಮಂತ್ರಕ್ಕೆ ಜನರು ಸೊಪ್ಪು ಹಾಕದೇ ಜೆಎಂಎಂ ಪರವಾಗಿ ಆದೇಶ ಕೊಟ್ಟಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by:Vijayasarthy SN
First published: