HOME » NEWS » State » JEVARGI PSI SUSPENDED FOR CHILD DEATH CASE IN KALBURGI SAKLB HK

ಕಾರಾಗೃಹದಲ್ಲಿ ಮಗು ಸಾವು ಪ್ರಕರಣ ; ಜೇವರ್ಗಿ ಪಿ.ಎಸ್.ಐ. ಅಮಾನತು

ಪಿಎಸ್ ಐ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನಂತರ ಹೋರಾಟ ಕೈ ಬಿಡಲಾಗಿತ್ತು. ಅಂದು ಬೆಳಗಿನ ಜಾವವರೇ ಜೈನಾಪುರ ಗ್ರಾಮದಲ್ಲಿ ಬಾಲಕಿಯ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಇದೀಗ ಕರ್ತವ್ಯಲೋಪ ಆರೋಪದ ಮೇಲೆ ಪಿಎಸ್ ಐ ಅಮಾನತು ಮಾಡಲಾಗಿದೆ.

news18-kannada
Updated:January 5, 2021, 5:21 PM IST
ಕಾರಾಗೃಹದಲ್ಲಿ ಮಗು ಸಾವು ಪ್ರಕರಣ ; ಜೇವರ್ಗಿ ಪಿ.ಎಸ್.ಐ. ಅಮಾನತು
ಪಿಎಸ್ಐ ಮಂಜುನಾಥ
  • Share this:
ಕಲಬುರ್ಗಿ (ಜನವರಿ.05): ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕೇಂದ್ರ ಕಾರಾಗೃಹದಲ್ಲಿ ಬಾಲಕಿ ಸಾವು ಪ್ರಕರಣಕ್ಕೆ ಪಿ.ಎಸ್.ಐ. ತಲೆದಂಡವಾಗಿದೆ. ಬಾಲಕಿಯ ಕುಟುಂಬದ ಸದಸ್ಯರು, ಜೇವರ್ಗಿ ತಾಲೂಕಿನ ಜನರ ಆಕ್ರೋಶ ಒಂದಷ್ಟು ತಣ್ಣಗಾಗುವಂತಾಗಿದೆ. ಕರ್ತವ್ಯ ಲೋಪ ಆರೋಪದ ಮೇಲೆ ಜೇವರ್ಗಿ ಠಾಣೆ ಪಿಎಸ್ಐ ಮಂಜುನಾಥ ಹೂಗಾರ ಅಮಾನತು ಮಾಡಲಾಗಿದೆ. ಕಲಬುರಗಿ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಮಾಹಿತಿ ನೀಡಿದ್ದಾರೆ. ಗ್ರ‍ಾಮ ಪಂಚಾಯಿತಿ ಚುನಾವಣೆ ನಂತರ ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ಹಲ್ಲೆ ಪ್ರಕರಣ ನಡೆದಿತ್ತು. ಗೆದ್ದ ಅಭ್ಯರ್ಥಿ ಗಳಿಂದ ಸೋತ ಅಭ್ಯರ್ಥಿಯ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದವರಿಂದಲೇ ಹಲ್ಲೆ ಮಾಡಿಸಿಕೊಂಡವರ ಮೇಲೆ ದೂರು ದಾಖಲು ಮಾಡಿದ್ದರು. ದೂರನ್ನು ಆಧರಿಸಿ ಸಂತೋಷ್ ಮತ್ತು ಆತನ ಕುಟುಂಬದ ಸದಸ್ಯರನ್ನು ಬಂಧಿಸಲಾಗಿತ್ತು. ಮಹಿಳೆಯರನ್ನು ಬಂಧಿಸುವ ವೇಳೆ ಅವರ ಜತೆಗಿದ್ದ ಮಕ್ಕಳನ್ನೂ ಪೊಲೀಸರು ಕರೆತಂದಿದ್ದರು.

ತಾಯಂದಿರ ಜೊತೆ ಮಕ್ಕಳನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿ ಕೊಡಲಾಗಿತ್ತು. ಕಾರಾಗೃಹದಲ್ಲಿ ಮೂರು ವರ್ಷದ ಬಾಲಕಿ ಭಾರತಿ ಸಾವನ್ನಪ್ಪಿದ್ದಳು. ಬಾಲಕಿಯ ಸಾವಿಗೆ ಪಿಎಸ್ಐ ಮಂಜುನಾಥ ಹೂಗಾರ ಕಾರಣ ಎಂದು ಆರೋಪಿಸಲಾಗಿತ್ತು. ಪೊಲೀಸ್ ಠಾಣೆಯಲ್ಲಿ ತಾಯಿ ಮೇಲೆ ಹಲ್ಲೆ ಮಾಡುವ ವೇಳೆ ಮಗುವಿಗೆ ಪೆಟ್ಟಾಗಿತ್ತು. ಅದೇ ಕಾರಣದಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದರು. ಪಿಎಸ್ಐ ಅಮಾನತಿಗೆ ಒತ್ತಾಯಿಸಿ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯಸಿಂಗ್ ನೇತೃತ್ವದಲ್ಲಿ ನಿನ್ನೆ ಮಧ್ಯರಾತ್ರಿವರೆಗೂ ಪ್ರತಿಭಟನೆ ಮಾಡಲಾಗಿತ್ತು.

24 ತಾಸುಗಳ ಒಳಗಾಗಿ ಪಿಎಸ್ ಐ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನಂತರ ಹೋರಾಟ ಕೈ ಬಿಡಲಾಗಿತ್ತು. ಅಂದು ಬೆಳಗಿನ ಜಾವವರೇ ಜೈನಾಪುರ ಗ್ರಾಮದಲ್ಲಿ ಬಾಲಕಿಯ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಇದೀಗ ಕರ್ತವ್ಯಲೋಪ ಆರೋಪದ ಮೇಲೆ ಪಿಎಸ್ ಐ ಅಮಾನತು ಮಾಡಲಾಗಿದೆ. ಹೆಚ್ಚುವರಿ ಎಸ್.ಪಿ. ಪ್ರಸನ್ನ ದೇಸಾಯಿ ನೇತೃತ್ವದಲ್ಲಿ ಇಲಾಖಾ ತನಿಖೆ ಮುಂದುವರಿಸಲಾಗಿದೆ.

ಪ್ರಭುತ್ವ ಪ್ರೇರಿತ ದೌರ್ಜನ್ಯವೆಂದ ಪ್ರಿಯಾಂಕ್ ಖರ್ಗೆ :

ಜೈನಾಪುರ ಬಾಲಕಿ ಸಾವು ಪ್ರಕರಣ ಪ್ರಭುತ್ವ ಪ್ರೇರೀತ ದೌರ್ಜನ್ಯವಾಗಿದ್ದು, ಘಟನೆಯ ಸಮಗ್ರ ತನಿಖೆ ನಡೆಸುವಂತೆ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. ಬಿಜೆಪಿ ಆಡಳಿತದಲ್ಲಿ ಪೊಲೀಸ್ ವ್ಯವಸ್ಥೆಯಿಂದ ದೌರ್ಜನ್ಯ ವ್ಯಾಪಕವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೇವರ್ಗಿ ತಾಲೂಕಿನ ಜೈನಾಪುರದ 3 ವರ್ಷದ ಮಗು ಭಾರತಿ ಸಾವು ಲಾಕಪ್ ಡೆತ್ ಎನ್ನುವ ಆರೋಪಗಳಿದ್ದು, ಸರ್ಕಾರ ಸಮಗ್ರ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಸಾಮಾಜಿಕ ತಾಣದ ಮೂಲಕ ಆಗ್ರಹಿಸಿದ್ದಾರೆ.

ಮಗುವಿನ ಸಾವು ಮನಸಿಗೆ ತೀವ್ರ ನೋವುಂಟು ಮಾಡಿದೆ. ಪೊಲೀಸರ ವಶದಲ್ಲಿರುವಾಗಲೇ ಅವರ ದೌರ್ಜನ್ಯದಿಂದ ಮಗು ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಹೇಳುತ್ತಾರೆ‌.  ಪೊಲೀಸ್ ವಶದಲ್ಲಿರುವಾಗ ಮಗು ಸಾವನ್ನಪ್ಪಿರುವುದು ಎಂತಹ ಕಲ್ಲು ಮನಸಿನವರಿಗೂ ನೋವುಂಟು ಮಾಡುವ ಸಂಗತಿ ಎಂದಿದ್ದಾರೆ.

ಇದನ್ನೂ ಓದಿ : ಕೊರೋನಾ ವ್ಯಾಕ್ಸಿನ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಮಾಜಿ ಸಂಸದ ಆರ್​. ಧ್ರುವನಾರಾಯಣ್3 ವರ್ಷದ ಮಗುವನ್ನು ಪೋಲಿಸರು‌ ವಶಕ್ಕೆ ಪಡೆದಿದ್ದು ಬಹುಶಃ ದೇಶದ ಇತಿಹಾಸದಲ್ಲೇ ಮೊದಲು. ಒಂದು ಕುಟುಂಬದ ಪುರುಷರೊಟ್ಟಿಗೆ ಮಹಿಳೆಯರನ್ನೂ ಬಂಧಿಸುವ ಜೊತೆಗೆ ಮಕ್ಕಳನ್ನೂ ವಶಕ್ಕೆ ಪಡೆಯುವ ಅನಿವಾರ್ಯತೆಯಾದರೂ ಏನಿತ್ತು? ಮಗುವಿಗೆ ಆರೋಗ್ಯ ಸರಿಯಿಲ್ಲವೆಂದು ತಿಳಿದ ನಂತರವೂ, ಚಿಕಿತ್ಸೆ ಕೊಡಿಸುವ ಸೌಜನ್ಯವೂ ಪೊಲೀಸರಿಗೆ ಇರಲಿಲ್ಲವೇ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸರ್ಕಾರವು ಸೂಕ್ತ ತನಿಖೆ ನಡೆಸಿ, ಆ ಮಗುವಿನ ಸಾವಿಗೆ ನ್ಯಾಯ ಒದಗಿಸಬೇಕು. ಮತ್ತು ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವರದಿ : ಶಿವರಾಮ ಅಸುಂಡಿ
Published by: G Hareeshkumar
First published: January 5, 2021, 5:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories