ಸೊಳ್ಳೆಗಳ ಮೂಲಕ ಹರಡುವ ಜಪಾನೀಸ್ ಎನ್ಸೆಫಲೈಟಿಸ್ ಕಾಯಿಲೆ ಅಥವಾ ಜೆಇ ಮೆದುಳು ಜ್ವರ ಪ್ರಕರಣಗಳು ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ಏರಿಳಿತ ಕಾಣುತ್ತಿದೆ. ಇನ್ನೂ ಈ ವರ್ಷದ ಅಂಕಿಅಂಶಗಳಿಗೆ ಬಂದರೆ ರಾಜ್ಯದಲ್ಲಿ ಅಕ್ಟೋಬರ್ವರೆಗೆ 21 ಪ್ರಕರಣಗಳು ದಾಖಲಾಗಿವೆ. ಜೆಇ ಮೆದುಳು ಜ್ವರ ನಿಯಂತ್ರಣಕ್ಕೆ ಲಸಿಕೆ ಇದ್ಯಾ? ಅಂತ ಕೇಳಿದ್ರೆ, ಇನ್ನೇನು ಈ ವರ್ಷ ಕೊನೆಯಾಗುತ್ತಿದ್ದು, ವರ್ಷ ಮುಗಿಯುವಷ್ಟರಲ್ಲಿ ಜಪಾನೀಸ್ ಎನ್ಸೆಫಲೈಟಿಸ್ ಕಾಯಿಲೆಗೆ ಸಂಬಂಧಿಸಿದಂತೆ ವಿಶೇಷ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಜೆಇ ಮೆದುಳು ಜ್ವರ ನಿಯಂತ್ರಣಕ್ಕಾಗಿ ವಿಶೇಷ ಲಸಿಕಾ ಅಭಿಯಾನ ಆರಂಭವಾಗಲಿದೆ. 1-15 ವರ್ಷದ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಪ್ರಾರಂಭಿಸಿದೆ.
ಕೇಂದ್ರದಿಂದ ಉಚಿತ ಜೆನ್ವಾಕ್ ಲಸಿಕೆ
ಈ ಬಗ್ಗೆ ಮಾತನಾಡಿದ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಕೆ.ಸುಧಾಕರ್ ಈ ಲಸಿಕೆ ಅಭಿಯಾನದ ಮೂಲಕ 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಂಡಿದ್ದೇವೆ. ಕೇಂದ್ರ ಆರೋಗ್ಯ ಸಚಿವಾಲಯವು ನಮಗೆ ಜೆನ್ವಾಕ್ ಲಸಿಕೆಯನ್ನು ಉಚಿತವಾಗಿ ಒದಗಿಸುತ್ತಿದೆ ಎಂದು ತಿಳಿಸಿದರು. ಮೂರು ವಾರಗಳ ಅಭಿಯಾನಕ್ಕೆ ಒಂದರಿಂದ 15 ವರ್ಷದೊಳಗಿನ ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಲಸಿಕೆಗಳನ್ನು ಮೊದಲು ಶಾಲಾ ಮಕ್ಕಳಿಗೆ ಮತ್ತು ನಂತರ ಆರೋಗ್ಯ ಸಂಸ್ಥೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಸಮುದಾಯದ ಇನ್ನಿತರ ಪ್ರದೇಶಗಳಲ್ಲಿ ಲಸಿಕಾಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು..
10 ಜೆಇ ಎಂಡೆಮಿಕ್ ಜಿಲ್ಲೆಗಳಲ್ಲೂ ಲಸಿಕೆ
ಇದಲ್ಲದೆ, ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮದ ಭಾಗವಾಗಿ, ರಾಜ್ಯದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಧಾರವಾಡ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನು 10 ಜೆಇ ಎಂಡೆಮಿಕ್ ಜಿಲ್ಲೆಗಳು ಎಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮಕ್ಕಳಿಗೆ 9 ತಿಂಗಳು ತುಂಬಿದ ನಂತರ ಮೊದಲನೇ ಡೋಸ್ ಮತ್ತು 1.5 ವರ್ಷದ ವಯಸ್ಸಿನಲ್ಲಿ 2ನೇ ಡೋಸ್ ಲಸಿಕೆ ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ: ಚೀನಾ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದರೆ ಎಷ್ಟೆಲ್ಲ ಸಾವುಗಳು ಸಂಭವಿಸಬಹುದು?
ಬಾಗಲಕೋಟೆ, ದಕ್ಷಿಣ ಕನ್ನಡ, ಗದಗ, ಹಾಸನ, ಹಾವೇರಿ, ಕಲಬುರ್ಗಿ, ತುಮಕೂರು, ರಾಮನಗರ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲೂ ಸಹ ಹೆಚ್ಚುವರಿ ಜೆಇ ಲಸಿಕಾ ಅಭಿಯಾನಗಳನ್ನು ನಡೆಸಲಾಗುತ್ತದೆ. ಈ ಅಭಿಯಾನದಲ್ಲಿ 1 - 15 ವರ್ಷ ವಯಸ್ಸಿನ ಮಕ್ಕಳಿಗೆ ಒಂದು ಡೋಸ್ ಲಸಿಕೆ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ. ಪ್ರತಿ ವರ್ಷ 68000 ಪ್ರಕರಣಗಳು ಮತ್ತು 30 ಪ್ರತಿಶತದಷ್ಟು ಸಾವುಗಳು ವರದಿಯಾಗುತ್ತಿದ್ದು, ದೇಶದಲ್ಲಿ ಎನ್ಸೆಫಾಲಿಟಿಸ್ಗೆ ಜೆಇ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಈ ರೋಗದಿಂದ ಹಲವರು ಗುಣಮುಖರಾದರೂ ಸಹ ಅದರಲ್ಲಿ 30% ರಿಂದ 50% ರಷ್ಟು ರೋಗಿಗಳು ಶಾಶ್ವತ ದೈಹಿಕ ಮತ್ತು ಮಾನಸಿಕ ದುರ್ಬಲತೆಯನ್ನು ಎದುರಿಸುತ್ತಾರೆ ಎಂದು ರೋಗದ ತೀವ್ರತೆಯ ಬಗ್ಗೆ ಸಚಿವ ಸುಧಾಕರ್ ವಿವರಿಸಿದರು.
ಜಪಾನೀಸ್ ಎನ್ಸೆಫಲೈಟಿಸ್ ಎಂದರೇನು?
ಸೊಳ್ಳೆಗಳ ಮೂಲಕ ಹರಡುವ ವೈರಸ್ ನಿಂದ ಈ ಕಾಯಿಲೆ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಸೊಳ್ಳೆಯ ಕಚ್ಚುವಿಕೆಯಿಂದ ರೋಗಿಯ ರಕ್ತಕ್ಕೆ ಫ್ಲಾವಿವೈರಿಡೇ ಎಂಬ ಕೀಟಪ್ರಜಾತಿಗೆ ಸೇರಿದ ಫ್ಲಾವಿವೈರಸ್ ಎಂಬ ವೈರಸ್ ದಾಟಿಕೊಳ್ಳುತ್ತದೆ. ಹಳದಿ ಜ್ವರ ಮತ್ತು ಡೆಂಘಿ ರೋಗದ ಹರಡುವಿಕೆಗೆ ಕಾರಣವಾದ ವೈರಸ್ಸುಗಳು ಸಹಾ ಇದೇ ಕೀಟಪ್ರಜಾತಿಗೆ ಸೇರಿವೆ. ಜೆಇ ಮೆದುಳು ಜ್ವರ 'ಪ್ಲೇವಿ ವೈರಸ್' ಎಂಬ ವೈರಾಣುವಿನಿಂದ ಬರುತ್ತದೆ. ಇದು ಕ್ಯುಲೆಕ್ಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಈ ಸೊಳ್ಳೆ ಜಾನುವಾರುಗಳನ್ನೂ ಕಡಿಯುವ ಕಾರಣ ವೈರಸ್ ನ ಸೋಂಕು ಜಾನುವಾರುಗಳಿಗೂ ಹರಡಬಹುದು. ಮುಖ್ಯವಾಗಿ ಈ ರೋಗ ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ಆವರಿಸುವುದರಿಂದ ಮಕ್ಕಳನ್ನು ಸಾಧ್ಯವಾದಷ್ಟು ಸೊಳ್ಳೆಗಳಿಂದ ಸುರಕ್ಷಿತವಾಗಿಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ