ಖಾಸಗಿ ಶಿಕ್ಷಕರ ಪರ ಧ್ವನಿಯೆತ್ತಿದ ಜೆಡಿಯು; ಅನುಮತಿಯಿಲ್ಲದೇ ಸಿಎಂ ಗೃಹ ಕಚೇರಿವರೆಗೆ ರ್ಯಾಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಮಾ ಪಾಟೀಲ್, ಖಾಸಗಿ ಶಿಕ್ಷಕರಿಗೆ ಅನುದಾನ ನೀಡುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದರು. ಇನ್ನು, ಇದೇ ವೇಳೆ ಇಂದು ಅನುಮತಿ ಇಲ್ಲದೆ ಸಿಎಂ ಕಚೇರಿವರೆಗೆ ರ್ಯಾಲಿ ನಡೆಸಿದ್ದು ತಪ್ಪು ಎಂದು ಒಪ್ಪಿಕೊಂಡರು.
ಬೆಂಗಳೂರು(ಜು.06): ಲಾಕ್ಡೌನ್ನಿಂದ ಸಂಬಳ ಇಲ್ಲದೇ ಪರದಾಡುತ್ತಿರುವ ಖಾಸಗಿ ಶಿಕ್ಷಕರಿಗೆ ಅನುದಾನ ನೀಡುವಂತೆ ಜೆಡಿಯು ಹೋರಾಟ ನಡೆಸಿದೆ. ಇದು ಪೊಲೀಸರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಇಂದು ಸಿಎಂ ಗೃಹ ಕಚೇರಿ ಕೃಷ್ಣಾಗೆ ಯಾವುದೇ ಅನುಮತಿ ಇಲ್ಲದೆ ಜೆಡಿಯು ರ್ಯಾಲಿ ನಡೆಸಿದೆ. ನೂರೈವತ್ತುಕ್ಕೂ ಹೆಚ್ಚು ಜನರ ಜೊತೆಗೆ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಾಟೀಲ್ ರ್ಯಾಲಿ ನಡೆಸಿದ್ದಾರೆ. ರ್ಯಾಲಿ ನಡೆಸಿಕೊಂಡು ಬಂದ ಕಾರ್ಯಕರ್ತರು ಸಿಎಂ ಕಚೇರಿಗೆ ಮುತ್ತಿಗೆ ಹಾಕುವ ರೀತಿಯಲ್ಲಿ ಬಂದು ಪೊಲೀಸರಿಗೆ ಹೊಸದೊಂದು ಟೆನ್ಶನ್ ಕೊಟ್ಟಿದ್ದಾರೆ.
ಯಾವುದೇ ಅನುಮತಿ ಇಲ್ಲದೆ ಸಿಎಂ ಕಚೇರಿಗೆ ಕಾರ್ಯಕರ್ತರು ಬಂದಾಗ, ಅಲ್ಲಿ ಭದ್ರತೆಗೆ ನಿಯೋಜನೆಗೊಂಡ ಪೊಲೀಸರು ಭಯಗೊಂಡು ಅವರನ್ನು ತಡೆಯುವ ಪ್ರಯತ್ನ ಮಾಡಿದರು. ಈ ವೇಳೆ ಅನುಮತಿ ಇಲ್ಲದೆ ರ್ಯಾಲಿ ಬಂದಿದ್ದರಿಂದ ಜೆಡಿಯು ಕಾರ್ಯಕರ್ತರಿಗೆ ಪೊಲೀಸರು ಕ್ಲಾಸ್ ತೆಗೆದಕೊಂಡರು. ನಂತರ ಪೊಲೀಸರಿಗೆ ನಮ್ಮನ್ನು ಬಂಧಿಸುತ್ತೀರಾ ಬಂಧಿಸಿ ಎಂದು ಕಾರ್ಯಕರ್ತರು ಅವಾಜ್ ಹಾಕಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಬಳಿಕ ಸ್ಥಳಕ್ಕಾಗಮಿಸಿದ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಪರಿಸ್ಥಿತಿ ತಿಳಿಗೊಳಿಸಿ, ಸಿಎಂ ಕಚೇರಿ ಕೃಷ್ಣಾಗೆ ಹೆಚ್ಚು ಭದ್ರತೆ ಒದಗಿಸಿದರು. ನಂತರ ಕಾರ್ಯಕರ್ತರಿಗೆ ಖಡಕ್ ಸೂಚನೆ ಕೊಟ್ಟು ಅವರನ್ನು ದೂರ ಇರುವಂತೆ ಅಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ಕೊಟ್ಟರು. ಡಿಸಿಪಿ ಸೂಚನೆಯಂತೆ ಅಲ್ಲಿರುವ ಕಾರ್ಯಕರ್ತರು ಸಾಮಾಜಿಕ ಅಂತರವನ್ನು ಪಾಲನೆ ಮಾಡಿದರು.
ಬಳಿಕ ಮಹಿಮಾ ಪಾಟೀಲ್ ನೇತೃತ್ವದಲ್ಲಿ ನಾಲ್ವರ ನಿಯೋಗ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ, ಖಾಸಗಿ ಶಿಕ್ಷಕರಿಗೆ ಅನುದಾನ ನೀಡುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಈ ಬಗ್ಗೆ ಪರಿಶೀಲಿಸಿ, ಅನುದಾನ ನೀಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಮಾ ಪಾಟೀಲ್, ಖಾಸಗಿ ಶಿಕ್ಷಕರಿಗೆ ಅನುದಾನ ನೀಡುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದರು. ಇನ್ನು, ಇದೇ ವೇಳೆ ಇಂದು ಅನುಮತಿ ಇಲ್ಲದೆ ಸಿಎಂ ಕಚೇರಿವರೆಗೆ ರ್ಯಾಲಿ ನಡೆಸಿದ್ದು ತಪ್ಪು ಎಂದು ಒಪ್ಪಿಕೊಂಡರು.
ಒಟ್ಟಾರೆ, ಲಾಕ್ಡೌನ್ನಿಂದ ಖಾಸಗಿ ಶಿಕ್ಷಕರು ಸಂಬಳ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಇಂತವರ ಪರ ಇದೀಗ ಜೆಡಿಯು ಧ್ವನಿ ಎತ್ತಿದ್ದು ಒಳ್ಳೆಯ ಸಂಗತಿ. ಆದರೆ ಕೊರೋನಾ ನಿಯಂತ್ರಣ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕೆಲ ನಿಯಮಗಳು ಜಾರಿ ಇವೆ. ಆ ನಿಯಮಗಳನ್ನು ಜೆಡಿಯು ಪಾಲನೆ ಮಾಡದೆ ಹೀಗೆ ಗುಂಪು ಗುಂಪಾಗಿ ರ್ಯಾಲಿ ನಡೆಸಿ, ಸರ್ಕಾರದ ನಿಯಮ ಪಾಲಿಸದೆ ಇರುವುದು ಮಾತ್ರ ತಪ್ಪು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
Published by:Latha CG
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ