‘ಕೊರೋನಾ ವಿರುದ್ಧದ ಹೋರಾಟಕ್ಕೆ ಜೆಡಿಎಸ್​​ ಬೆಂಬಲ ಇದೆ; ಹಾಗಾಗಿ ಮೋದಿ ಮಾತು ಪಾಲಿಸಿದ್ದೇವೆ‘ - ದೇವೇಗೌಡ

ಹೀಗೆ ಮುಂದುವರೆದ ಅವರು, ಬಿಜೆಪಿ ಪಕ್ಷದ ಹುಟ್ಟುಹಬ್ಬದ ಹಿನ್ನೆಲೆ‌ ಕರೆ ನೀಡಿದ್ದೇವೆ. ಹೀಗೆಂದು ಖುದ್ದು ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಕೂಡ ಅದನ್ನೇ ಹೇಳಿದ್ದಾರೆ. ಕುಮಾರಸ್ವಾಮಿ ಹೇಳಿದಂತೆಯೇ ಇವತ್ತು ನಡೆದೇ ಬಿಟ್ಟಿದೆಯಲ್ಲ ಎಂದು ಮಗನ ಟ್ವೀಟ್​​ ಅನ್ನು ಸಮರ್ಥಿಸಿಕೊಂಡರು.

ಎಚ್.ಡಿ. ದೇವೇಗೌಡ

ಎಚ್.ಡಿ. ದೇವೇಗೌಡ

  • Share this:
    ಬೆಂಗಳೂರು(ಏ.06): ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಸ್ಪಂದಿಸಿ ನಾನು ಮತ್ತು ಜೆಡಿಎಸ್​​​​​ ಕೊರೋನಾ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುತ್ತಲೇ ಬಂದಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್​​.ಡಿ ದೇವೇಗೌಡ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಜೆಡಿಎಸ್​​ ರಾಜ್ಯ ಕಚೇರಿ ಜೆ.ಪಿ ಭವನದಲ್ಲಿ ಮಾತಾಡಿದ ಅವರು, ಇಡೀ ಭಾರತ ಲಾಕ್​​ಡೌನ್​​ ಮಾಡಿದ ಬಳಿಕ ನಾನು ಮನೆಯಿಂದ ಹೊರಗಡೆ ಬಂದಿರಲಿಲ್ಲ. ಚಪ್ಪಾಳೆ ಹೊಡೆದು, ದೀಪಾ ಹಚ್ಚಿ ಎಂದಿದ್ದಕ್ಕೆ ಪ್ರಧಾನಿಗೆ ಬೆಂಬಲ ನೀಡಲು ಮನೆಯಿಂದ ಹೊರಗೆ ಬಂದಿದ್ದೆ ಎಂದರು.

    ನಾನು ಕೂಡ ಚಪ್ಪಾಳೆ ಹೊಡೆದೆ, ನಿನ್ನೆ ರಾತ್ರಿ ದೀಪ ಕೂಡ ಹಚ್ಚಿದೆ. ಆದರೆ ಒಂದು ವಿಚಾರ ನನಗೆ ಬೇಜಾರಾಯ್ತು. ಒಂದು ಹೋತ್ತಿನ ಊಟ ಬಿಡಿ ಎಂದು ಬಿಜೆಪಿ ಕಾರ್ಯರ್ತರಿಗೆ ಮಾತ್ರ ಮನವಿ ಮಾಡಲಾಗಿದೆ. ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮನವಿ ಮಾಡಿದ ಬೆನ್ನಲ್ಲೆ ಪ್ರಧಾನಿ ಮೋದಿ ಕೂಡ ಹೀಗೆ ಮನವಿ ಮಾಡಿದರು. ಕೋರೋನಾ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಮಾಡಿದ ಮನವಿಯನ್ನು ಇಡಿ ದೇಶ ಬೆಂಬಲಿಸಿತ್ತು. ಆದರೀಗ, ಈ ಮನವಿ ಕೇವಲ ಬಿಜೆಪಿ ಕಾರ್ಯರ್ತರಿಗೆ ಮಾಡಿದ್ದರಿಂದ ತಪ್ಪು ಸಂದೇಶ ರವಾನೆಯಾಗಿದೆ ಎಂದು ಹೇಳಿದರು ದೇವೇಗೌಡರು.

    ಪ್ರಧಾನಿ ಮೋದಿಯವರು ಇಂತಹ ಸಂದರ್ಭದಲ್ಲಿ ಪಕ್ಷಕ್ಕೆ ಒತ್ತು ನೀಡೋದು ತಪ್ಪು. ಕೋವಿಡ್​-19 ಸುಮಾರು ಇನ್ನೂರು ದೇಶಗಳಲ್ಲಿ ಕಾಣಿಸಿಕೊಂಡಿದೆ. ಈ ಮಾರಕ ರೋಗಕ್ಕೆ 60 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇದಕ್ಕೆ ನಿಖರ ಔಷಧ ಕಂಡು ಹಿಡಿಯಲು ಸಾಧ್ಯವಾಗಲ್ಲ ಎಂದರು.

    ಇನ್ನು, ಕೆಲವು ಕಡೆ ಚಿಕಿತ್ಸೆ ಕಿಟ್‌, ವೆಂಟಿಲೇಟರ್‌ಗಳ ಕೊರತೆ‌ ಇದೆ. ಬಸ್‌ಗಳಲ್ಲಿ ವಾರ್ಡ್ ಮಾಡಿ ರೋಗಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೇರಳದಲ್ಲಿ ಒಂದು ಸಾವು ಬಿಟ್ಟರೆ ಹೆಚ್ಚು ಅನಾಹುತ ಆಗಿಲ್ಲ. ಅವರು ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. ಅರಬ್ ರಾಷ್ಟ್ರಗಳಿಂದ‌ ಬರುವ ಜನರಿಗೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಾನು ಸಮಸ್ಯೆಗಳನ್ನು ಕಂಡು ಹಿಡಿದು ದೂಷಿಸಲ್ಲ, ವಾಸ್ತವ ಹೇಳುತ್ತಿದ್ದೇವೆ ಎಂದು ತಿಳಿಸಿದರು.

    ಪ್ರಧಾನಿ ಮಾತಿಗೆ ನಾವೆಲ್ಲ ಗೌರವ ಕೊಟ್ಟಿದ್ದೇವೆ. ಚಪ್ಪಾಳೆ ಹೊಡೆದು, ದೀಪ ಹಚ್ಚಲು ನಾವೆಲ್ಲ ಒಪ್ಪಿಗೆ ಕೊಟ್ಟಿದ್ದೇವೆ. ನಾನು ಲಾಕ್‌ಡೌನ್ ಬಳಿಕ ಇವತ್ತೇ ಕಚೇರಿಗೆ ಬಂದಿದ್ದೇನೆ. ಪಕ್ಷದ ಕಾರ್ಯಕರ್ತರು ಬರ್ತಾರೆ, ಅದಕ್ಕಾಗಿ ಕಚೇರಿ ಮುಚ್ಚಲಾಗಿತ್ತು. ನಿನ್ನೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಚೇರಿಗಳಲ್ಲಿ ಜಗಜೀವನ್ ರಾಮ್ ದಿನಾಚರಣೆ ಮಾಡಿದ್ದರು. ನಾವು ಇವತ್ತು ಕಚೇರಿಯಲ್ಲಿ ಆಚರಿಸುತ್ತಿದ್ದೇವೆ. ಕತ್ತಲೆಯಿಂದ ಬೆಳಕಿನೆಡೆಗೆ ಹೋಗುವುದರಿಂದ ಹೆಮ್ಮಾರಿಯನ್ನು‌ ಹೊರಗೆ ಕಳಿಸಲು ಸಾಧ್ಯ ಎಂದು ಟಿವಿಗಳಲ್ಲಿ‌ ಹೇಳುತ್ತಿದ್ದರು. ಇದು ಯಾವುದೋ ಹಿನ್ನೆಲೆಯಲ್ಲಿ ಒಂದು ನಂಬಿಕೆ ಇರಬಹುದು ಎಂದು ಸಮರ್ಥಿಸಿಕೊಂಡರು.

    ಇದನ್ನೂ ಓದಿ: ವಿಶ್ವಾದ್ಯಂತ 12,73,794 ಜನರಿಗೆ ಕೊರೋನಾ ಸೋಂಕು; 69,419 ಮಂದಿ ಸಾವು

    ಇಡೀ ರಾಷ್ಟ್ರದ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ಮಾತಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ನನಗೆ ನಿನ್ನೆ ಮಧ್ಯಾಹ್ನ ಮೋದಿ ಫೋನ್ ಮಾಡಿದ್ದರು. ನಿಮ್ಮ ಸಹಕಾರ ಬೇಕು ಎಂದು ಮೋದಿ‌ ಕೇಳಿದರು. ನಾನು ಬೆಂಬಲಿಸುತ್ತೇನೆ ಎಂದಿದ್ದೆ, ಬೆಂಬಲಿಸಿದ್ದೇನೆ. ಪಾಕಿಸ್ತಾನ ಯುದ್ಧ ಸಮಯದಲ್ಲಿ ಲಾಲ್‌ ಬಹದ್ದೂರ್ ಶಾಸ್ತ್ರಿ ಹೀಗೆ ಇಡೀ ದೇಶಕ್ಕೆ ಕರೆ ನೀಡಿದ್ದರು. ಇದು ಅದಕ್ಕಿಂತಲೂ ಘೋರಯುದ್ಧ ಎಂಬಂತಿದೆ. ಆದರೀಗ, ಮತ್ತೊಂದು ಮನವಿಯನ್ನು ಕೇವಲ ತಮ್ಮ ಕಾರ್ಯಕರ್ತರಿಗೆ ಮಾಡಲಾಗಿದೆ. ಜೆ.ಪಿ.ನಡ್ಡಾ ಹೇಳಿದ್ದಕ್ಕೂ ನನಗೂ ಸಂಬಂಧವಿಲ್ಲ. ಆದರೆ, ಪ್ರಧಾನಿ ಹೇಳಿರುವುದು ಬೇಸರ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ದೆಹಲಿ ಧಾರ್ಮಿಕ ಸಭೆಯಲ್ಲಿ ಅನೇಕರು ಭಾಗವಹಿಸಿದ್ದರು. ಹೀಗಾಗಿ ಕೊರೊನಾ‌ ಹರಡಲು ಕಾರಣವಾಯ್ತು ಎನ್ನುತ್ತಿದ್ದಾರೆ. ದೆಹಲಿಗೆ ನಮಾಜ್ ಕಾರಣ ಎಂದರೆ ಮಹಾರಾಷ್ಟ್ರಕ್ಕೆ‌ ಕಾರಣವೇನು? ಟ್ರಂಪ್ ಕೂಡ ಇನ್ನೆರಡು ವಾರಗಳಲ್ಲಿ ದುಪ್ಪಟ್ಟಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ಒಂದು ಸಮುದಾಯವನ್ನು ಗುರಿಯಾಗಿಸುವುದು ಬೇಡ. ನಮ್ಮಲ್ಲಿ‌ ಬೇಕಾದ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದೇವೆ. ಮೆಡಿಕಲ್ ಕಿಟ್, ಔಷಧಿ ತರಿಸಿದ್ದಾರೆ. ಕೊರೊನಾ ಶಂಕಿತರಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಆದರೆ ಇನ್ನಷ್ಟು ಎಚ್ಚರಿಕೆ ಅಗತ್ಯ ಎಂದು ಕುಟುಕಿದರು.

    ಇದು ಮೂರನೇ ಹಂತ, ನಾಲ್ಕನೇ‌ ಹಂತ ಎನ್ನುತ್ತಿದ್ದಾರೆ. ಕಡಿಮೆಯಾದ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ ಎಂದರು.

    ಹೀಗೆ ಮುಂದುವರೆದ ಅವರು, ಬಿಜೆಪಿ ಪಕ್ಷದ ಹುಟ್ಟುಹಬ್ಬದ ಹಿನ್ನೆಲೆ‌ ಕರೆ ನೀಡಿದ್ದೇವೆ. ಹೀಗೆಂದು ಖುದ್ದು ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಕೂಡ ಅದನ್ನೇ ಹೇಳಿದ್ದಾರೆ. ಕುಮಾರಸ್ವಾಮಿ ಹೇಳಿದಂತೆಯೇ ಇವತ್ತು ನಡೆದೇ ಬಿಟ್ಟಿದೆಯಲ್ಲ ಎಂದು ಮಗನ ಟ್ವೀಟ್​​ ಅನ್ನು ಸಮರ್ಥಿಸಿಕೊಂಡರು.
    First published: