ಗುರುವಾರ ಒಂದು ಕುತೂಹಲಕಾರಿ ಘಟನೆ ನಡೆದಿದ್ದು, ಮಾಜಿ ಬಿಜೆಪಿ ಸಂಸದ ದಿವಂಗತ ಅನಂತ್ ಕುಮಾರ್ ಅವರ ಪುತ್ರಿ ವಿಜೇತ ಅನಂತ್ಕುಮಾರ್ ’’ಜೆಡಿಎಸ್ ಕರ್ನಾಟಕದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿದೆ’’ ಎಂದು ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಈ ಟ್ವೀಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಬೊಮ್ಮಾಯಿ ಮೂಲ ಜನತಾದಳದವರಾಗಿದ್ದು ಅವರು ಬಿಜೆಪಿಗೆ ಸೇರುವವರೆಗೂ 2008 ರವರೆಗೆ ಜೆಡಿಎಸ್ ಸದಸ್ಯರಾಗಿದ್ದರು. ಅಲ್ಲದೇ ಯುವ ಜನತಾದಳ ಬೆಳೆಯಲು ಕಾರಣರಾದವರು ಹಾಗೂ ಜೆ.ಎಚ್.ಪಟೇಲ್ ಸೇರಿದಂತೆ ಜನತಾದಳದ ಅನೇಕ ಘಟಾನುಘಟಿಗಳ ನೆರಳಿನಲ್ಲಿ ತಮ್ಮ ರಾಜಕೀಯ ಚತುರತೆಯನ್ನು, ಜ್ಞಾನವನ್ನು ಅರಳಿಸಿಕೊಂಡವರು.
https://twitter.com/vijeta_at/status/1420646451420401667
“ಕರ್ನಾಟಕ ರಾಜಕೀಯ ನಿಜವಾಗಿಯೂ ಏಕೆ ಇಷ್ಟೊಂದು ಆಸಕ್ತಿದಾಯಕವಾಗಿದೆ? ಜೆಡಿಎಸ್ ಇನ್ನೂ ಬಲವಾದ ರಾಜಕೀಯ ಶಕ್ತಿಯಾಗಿದೆ "ಎಂದು ಅವರು ಟ್ವೀಟ್ ಮಾಡಿದ್ದಾರೆ.
"ವಾಸ್ತವವಾಗಿ, ಕರ್ನಾಟಕದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದೆ" ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸುವ ವೇಳೆ ಕುಮಾರಸ್ವಾಮಿ ಅವರು ಈ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಈ ಮಾತನ್ನು ಹೇಳಿದ್ದರು.
ಕುಮಾರಸ್ವಾಮಿ ಅವರ ಅಣ್ಣ ಎಚ್.ಡಿ.ರೇವಣ್ಣ ಅವರ ಪುತ್ರ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರು ವಿಜೇತ ಅವರ ಟ್ವೀಟ್ ಗೆ ಧನ್ಯವಾದ ಅರ್ಪಿಸಿದ್ದಾರೆ.
ಬಸವರಾಜ್ ಬೊಮ್ಮಾಯಿ ಅವರು ಜನತಾದಳದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್. ಬೊಮ್ಮಾಯಿ ಅವರ ಪುತ್ರ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ 2006 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರುವವರೆಗೂ ಜೆಡಿಎಸ್ ಸದಸ್ಯರಾಗಿದ್ದರು. ಅಲ್ಲದೇ ಕಳೆದ ಹತ್ತು ವರ್ಷದಲ್ಲಿ ಕರ್ನಾಟಕ ನಾಲ್ಕು ಜನ ಮುಖ್ಯಮಂತ್ರಿಗಳನ್ನು ಕಂಡಿದ್ದು ಅದರಲ್ಲಿ ಯಡಿಯೂರಪ್ಪ ಹೊರತಾಗಿ ಮೂವರು ಜನತಾ ದಳ ಮೂಲದವರು.
ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಮುನ್ನ ಅವರ ಸ್ಥಾನಕ್ಕೆ ಯಾರನ್ನು ಕೂರಿಸಬೇಕು ಎಂದು ಕೇಳಿದಾಗ ಬೊಮ್ಮಾಯಿ ಹೆಸರನ್ನು ಹೈಕಮಾಂಡಿಗೆ ಶಿಫಾರಸು ಮಾಡಿದ್ದರು ಎಂದು ಹೇಳಲಾಗಿದೆ. ಆದ ಕಾರಣ ಬಿಎಸ್ವೈ ನಂತರ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು, ಹಲವಾರು ಹಿರಿಯ ಬಿಜೆಪಿ ನಾಯಕರನ್ನು ಸಹ ಈ ವೇಳೆ ಪರಿಗಣಿಸದೆ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದ್ದು ಮಾತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ