ಬೆಂಗಳೂರು(ಡಿ. 09): ವಿಧಾನಪರಿಷತ್ನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಗೆ ಜೆಡಿಎಸ್ ನಿನ್ನೆ ಅಂಗೀಕಾರ ಮಾಡಿ ಅಚ್ಚರಿ ಹುಟ್ಟಿಸಿದೆ. ಆದರೆ, ಜೆಡಿಎಸ್ನ ಈ ನಡೆ ಆ ಪಕ್ಷದ ರಾಜ್ಯಾಧ್ಯಕ್ಷರಿಗೂ ಗೊತ್ತಿಲ್ಲದಂತೆ ಆಗಿದೆ. ವಿಧಾನಸೌಧದಲ್ಲಿ ಇಂದು ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ, ನಿನ್ನೆ ಮೇಲ್ಮನೆಯಲ್ಲಿ ಏನು ನಡೆಯಿತು ಎಂಬುದು ತನಗೆ ಗೊತ್ತಿಲ್ಲ ಎಂದರು. ಭೂ ಸುಧಾರಣೆ ಕಾಯ್ದೆಯಲ್ಲಿ ದ್ವಂದ್ವ ನಿಲುವಿರುವುದನ್ನು ನಾನು ಒಪ್ಪುತ್ತೇನೆ. ನಾನು ಮೇಲ್ಮನೆ ಸದಸ್ಯನಲ್ಲವಾದ್ದರಿಂದ ಪರಿಷತ್ನಲ್ಲಿ ಏನಾಯಿತು ಎಂಬುದು ನನ್ನ ಗಮನಕ್ಕೆ ಬರಲಿಲ್ಲ ಎಂದು ಹೆಚ್.ಕೆ. ಕುಮಾರಸ್ವಾಮಿ ತಿಳಿಸಿದರು.
ಭೂ ಸುಧಾರಣೆ ಕಾಯ್ದೆಗೆ ಬೆಂಬಲ ನೀಡುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ನಮ್ಮ ಶಾಸಕರು ಆತ್ಮಸಾಕ್ಷಿಯಾಗಿ ಮತಹಾಕಿದ್ದಾರಾ ಇಲ್ಲವಾ ಗೊತ್ತಿಲ್ಲ. ಇದನ್ನು ಚರ್ಚಿಸಿ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದ ಜೆಡಿಎಸ್ ರಾಜ್ಯಾಧ್ಯಕ್ಷ, ಜೆಡಿಎಸ್ ಸದಸ್ಯರು ಹಣಕ್ಕೆ ಮಾರಿಕೊಳ್ಳುತ್ತಾರೆಂಬ ಕೋಡಿಹಳ್ಳಿ ಚಂದ್ರಶೇಖರ್ ಆರೋಪವನ್ನು ತಳ್ಳಿಹಾಕಿದರು.
ಇದೇ ವೇಳೆ, ವಿಧಾನಪರಿಷತ್ನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ಜೆಡಿಎಸ್ ಬೆಂಬಲ ನೀಡಿರುವ ವಿಚಾರ ರಾಜಕೀಯ ಪಡಸಾಲೆಯಲ್ಲಿ ಹಲವು ವದಂತಿಗಳಿಗೆ ಎಡೆ ಮಾಡಿಕೊಟ್ಟಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಮೇಲ್ಮನೆ ಸದಸ್ಯರಿಗೆ ವಿಧೇಯಕ ಬೆಂಬಲಿಸುವಂತೆ ಸೂಚನೆ ನೀಡಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ. ವಿಧೇಯಕಕ್ಕೆ ಅಂಗೀಕರಿಸಿದ ನಡೆ ಬಗ್ಗೆ ತನಗೆ ಗೊತ್ತಿರಲಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷರು ನೀಡಿದ ಹೇಳಿಕೆ ಕೂಡ ಈ ಸುದ್ದಿಗೆ ಪುಷ್ಟಿ ಕೊಡುತ್ತಿದೆ.
ಇದನ್ನೂ ಓದಿ: ಕುಮಾರಸ್ವಾಮಿ ಪುಟಗೋಸಿ ರಾಜಕಾರಣ ಮಾಡೋಕೆ ಇರೋದು; ಕೋಡಿಹಳ್ಳಿ ಚಂದ್ರಶೇಖರ್ ಕಿಡಿ
ಇಂದು ವಿಧಾನಪರಿಷತ್ನಲ್ಲಿ ಭೂ ಸುಧಾರಣ ತಿದ್ದುಪಡಿ ವಿಧೇಯಕ ಮೇಲೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ಮಧ್ಯೆ ಬಿಸಿಬಿಸಿ ಚರ್ಚೆ ನಡೆಯಿತು. ಈ ವೇಳೆ ಜೆಡಿಎಸ್ ಸದಸ್ಯರು ಮೌನಕ್ಕೆ ಶರಣಾಗಿದ್ದು ಕುತೂಹಲ ಮೂಡಿಸಿತು. ಕರ್ನಾಟಕದ ಭೂಮಿಯನ್ನು ಅನ್ಯ ರಾಜ್ಯದವರು ಖರೀದಿಸಲು ಅವಕಾಶ ಕೊಡಬಾರದು. ಒಂದೊಮ್ಮೆ ಅಂಥ ಖರೀದಿ ಪ್ರಕ್ರಿಯೆ ಆದರೆ ಜಿಲ್ಲಾಧಿಕಾರಿಗಳಿಗೆ ಇದನ್ನು ರದ್ದು ಮಾಡುವ ಅಧಿಕಾರ ಕೊಡಬೇಕು ಎಂದು ಕಾಂಗ್ರೆಸ್ ಸದಸ್ಯ ಹೆಚ್.ಕೆ. ಪಾಟೀಲ್ ಅವರು ವಿಧೇಯಕಕ್ಕೆ ಇನ್ನಷ್ಟು ತಿದ್ದುಪಡಿ ಮಾಡುವ ಸಲಹೆ ನೀಡಿದರು.
ಕಂದಾಯ ಸಚಿವರು ತಿದ್ದುಪಡಿಯನ್ನು ಪರಿಗಣಿಸುವ ಪ್ರಸ್ತಾಪ ಮಾಡಿದರಾದರೂ ಹೆಚ್.ಕೆ. ಪಾಟೀಲ್ ಅವರು ತಿದ್ದುಪಡಿ ಪ್ರಸ್ತಾಪವನ್ನು ಒಪ್ಪಲು ಕಾನೂನು ಸಚಿವ ಮಾಧು ಸ್ವಾಮಿ ನಿರಾಕರಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಕೂಡ ಹೆಚ್.ಕೆ. ಪಾಟೀಲ್ ಅವರ ಪ್ರಸ್ತಾಪದ ಮೇಲೆ ಚರ್ಚೆಗೆ ಅವಕಾಶ ಇಲ್ಲ ಎಂದು ತಿಳಿಸಿದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಲ್ಲಿ ತಮ್ಮ ಸಲಹೆಯಂತೆ 79 ಎ ಮತ್ತು ಬಿ ಅಂಶಗಳನ್ನ ಕೈಬಿಟ್ಟಿದ್ದರಿಂದ ವಿಧೇಯಕಕ್ಕೆ ಬೆಂಬಲ ನೀಡಿದೆವು. ಇದು ಕೇವಲ ವಿಷಯಾಧಾರಿತ ಬೆಂಬಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಈ ವೇಳೆ ಸ್ಪಷ್ಟಪಡಿಸಿದ್ದಾರೆ.
ವರದಿ: ಕೃಷ್ಣ ಜಿ.ವಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ