ಚಿಕ್ಕಮಗಳೂರು (ಜ. 11): ಜಿ.ಟಿ. ದೇವೇಗೌಡರನ್ನು ನಾವು ಉಚ್ಛಾಟನೆ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಅವರೇ ತಮ್ಮನ್ನು ಉಚ್ಛಾಟನೆ ಮಾಡಲಿ ಎಂದು ಕಾಯುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಜಿ.ಟಿ. ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಹೆಚ್ಕೆ ಕುಮಾರಸ್ವಾಮಿ, ಓರ್ವ ಶಾಸಕ ಪಕ್ಷದಲ್ಲಿ ಗೆದ್ದ ಮೇಲೆ ಅವಧಿ ಇರುವವರೆಗೂ ಪಕ್ಷಕ್ಕೆ ನಿಷ್ಠೆಯಿಂದ ಇರುವುದು ಒಳ್ಳೆಯದು ಎಂದರು.
ಈಗ ಉಚ್ಛಾಟನೆಗೆ ಯಾರೂ ಹೆದರಲ್ಲ. ಏಕೆಂದರೆ, ಅದರಿಂದ ಸದಸ್ಯತ್ವ ಹೋಗುವುದಿಲ್ಲ. ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಲಿ ಎಂದು ಜಿಟಿ ದೇವೇಗೌಡರೇ ಕಾಯುತ್ತಿದ್ದಾರೆ. ಆಗ ಇನ್ನೂ ಹಗುರವಾಗಿ ಮಾತನಾಡಬಹುದು. ಅವರಿಗೆ ಬೇರೆ-ಬೇರೆ ಅವಕಾಶಗಳಿವೆ. ಅವರ ಮಾತು, ರೀತಿ-ನೀತಿ ನೋಡಿದರೆ ಹಾಗೇ ಅನ್ನಿಸುತ್ತಿದೆ. ನಾವು ಅವರನ್ನ ಪ್ರತಿ ಸಭೆಗೂ ಕರೆಯುತ್ತೇವೆ. ಪಕ್ಷದ ಕರೆಗೆ ಬೆಲೆ ಕೊಟ್ಟು ನಮ್ಮ ಗುಬ್ಬಿ ಶ್ರೀನಿವಾಸ್ ಬಂದಿದ್ದರು. ಅವರನ್ನ ಸ್ವಾಗತಿಸುತ್ತೇವೆ. ಜಿ.ಟಿ. ದೇವೇಗೌಡರಿಗೂ ಕರೆ ಹೋಗಿತ್ತು. ಅವರು ಬಂದಿಲ್ಲ. ಅವರ ಭಾವನೆಗಳು ಏನಿವೆ ಎಂದು ನೋಡೋಣ ಎಂದು ಹೆಚ್ಕೆ ಕುಮಾರಸ್ವಾಮಿ ಹೇಳಿದ್ದಾರೆ.
ಸಾ.ರಾ. ಮಹೇಶ್ ಕೂಡ ನಮ್ಮ ಪಕ್ಷದ ಶಾಸಕರು. ಜಿ.ಟಿ. ದೇವೇಗೌಡರಿಗೆ ಅವರದ್ದೇ ಆದ ಕ್ಷೇತ್ರವಿದೆ. ಮೊದಲು ಅವರ ಕ್ಷೇತ್ರದಲ್ಲಿ ಗೆದ್ದವರಿಗೆ ಸನ್ಮಾನ ಮಾಡಲಿ. ಆಮೇಲೆ ಬೇರೆ ಕ್ಷೇತ್ರಕ್ಕೆ ಹೋಗಲಿ. ಹೋಗಬಾರದು ಅಂತಲ್ಲ, ಅವರು ನಮ್ಮ ಪಕ್ಷದಲ್ಲಿ ಇನ್ನೂ ಇದ್ದಾರೆ. ನಮ್ಮ ಪಕ್ಷದ ಬಗ್ಗೆ ವಿಶ್ವಾಸ ಇಟ್ಟುಕೊಂಡು ಸ್ಥಳೀಯ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಅವರು ಕರೆದರೂ, ಕರೆಯದಿದ್ದರೂ ನಾನೂ ಪಕ್ಷದ ಶಾಸಕನಿದ್ದೇನೆ, ನಾನೂ ಬರ್ತೀನಿ ಅಂತ ಹೋಗಲಿ. ಆದರೆ, ಅವರು ಯಾವ ರೀತಿ ಹೋಗಿದ್ದಾರೆ ಎಂಬುದು ನನಗೆ ಸರಿಯಾದ ಮಾಹಿತಿ ಇಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ