ಬೆಂಗಳೂರು (ಜನವರಿ 31); ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ವಚನಭ್ರಷ್ಟ ಎಂದು ಹಂಗಿಸುತ್ತಿದ್ದ ಬಿಎಸ್ ಯಡಿಯೂರಪ್ಪ ಅರ್ಹ 17 ಶಾಸಕರಿಗೂ ಸಚಿವ ಸ್ಥಾನ ನೀಡುವ ಮೂಲಕ ತಾವು ಸತ್ಯಸಂಧರೆಂದು ನಿರೂಪಿಸಿಕೊಳ್ಳಲಿ ಎಂದು ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಸವಾಲು ಹಾಕಿದ್ದಾರೆ.
ಇಂದು ಟ್ವಿಟರ್ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಸವಾಲು ಹಾಕಿರುವ ಟಿ.ಎ. ಶರವಣ, “ಬಿಎಸ್ ಯಡಿಯೂರಪ್ಪನವರಿಗೆ ತಾವು ಸತ್ಯಸಂಧರು ಎಂಬುದನ್ನು ನಿರೂಪಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಸಚಿವ ಸ್ಥಾನದ ಆಸೆಗೆ ಮೈತ್ರಿ ಸರ್ಕಾರ ಉರುಳಿಸಿ ಹೋದ 17 ಮಂದಿ ಸಚಿವರಾಗಲು ಸಿದ್ದರಾಗಿದ್ದಾರೆ. ಈಗಲೂ ಬಿಎಸ್ವೈ ವಚನಭ್ರಷ್ಟರಾಗದೆ 17 ಜನಕ್ಕೆ ಮಂತ್ರಿ ಸ್ಥಾನ ಕೊಟ್ಟು ತಮ್ಮ ಮಾತು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಪಕ್ಷದ ಅತೃಪ್ತ ಶಾಸಕರು ಸಚಿವ ಸ್ಥಾನಕ್ಕಾಗಿಯೇ ಮೈತ್ರಿ ಸರ್ಕಾರವನ್ನು ಬೀಳಿಸಿದ್ದರು ಎಂಬುದು ಇಂದು ಗುಟ್ಟಾಗೇನು ಇಲ್ಲ. ಆದರೆ, ಬಿಜೆಪಿ ಸರ್ಕಾರದಲ್ಲೂ ಪ್ರಸ್ತುತ ಇದೇ ಲಾಬಿ ನಡೆಯುತ್ತಿದ್ದು, ಅರ್ಹ/ವಲಸಿಗ ಶಾಸಕರಿಗೆ ಸಚಿವ ಸ್ಥಾನ ನೀಡುವುದು ಸಿಎಂ ಬಿಎಸ್ವೈ ಗೆ ಇದೀಗ ತಲೆ ನೋವಾಗಿ ಪರಿಣಮಿಸಿದೆ. ಪರಿಣಾಮ ಉಪ ಚುನಾವಣೆ ಫಲಿತಾಂಶ ಬಂದು ಎರಡು ತಿಂಗಳಾದರೂ ಸಂಪುಟ ವಿಸ್ತರಣೆ ಎಂಬುದು ಇನ್ನೂ ಕಗ್ಗಂಟಾಗಿಯೇ ಉಳಿದಿದೆ.
ಈ ಹಿನ್ನೆಲೆಯಲ್ಲಿ ಒಂದು ದಶಕದ ಹಳೆಯ ಪ್ರಕರಣವನ್ನು ನೆನಪಿಸಿಕೊಂಡಿರುವ ಶಾಸಕ ಟಿ.ಎ ಶರವಣ ಅವರು, “ಮಾತು ಮಾತಿಗೆ ಹೆಚ್ಡಿಕೆ ಅವರನ್ನು ವಚನಭ್ರಷ್ಟ ಎಂದು ಹಂಗಿಸುತ್ತಿದ್ದ ಬಿಎಸ್ ಯಡಿಯೂರಪ್ಪ ಇದೀಗ ಕೊಟ್ಟ ಮಾತಿನಂತೆ ಎಲ್ಲಾ ಅರ್ಹ ಶಾಸಕರಿಗೂ ಸಚಿವ ಸ್ಥಾನ ನೀಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಳ್ಳಲಿ” ಎಂದು ಟ್ವಿಟ್ ಮೂಲಕ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಸಿಎಂ ಯಡಿಯೂರಪ್ಪಗೆ ಇಂದೂ ಕೂಡ ಕಾಯುವುದೇ ಕಾಯಕ; ಅಮಿತ್ ಶಾ ಭೇಟಿ ಅನುಮಾನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ