ಶನಿವಾರ ಸುದ್ದಿಗೋಷ್ಠಿ ನಡೆಸಿದ್ದ ಸಂಸದೆ ಸುಮಲತಾ ಅಂಬರೀಶ್ (Mandya MP Sumalatha Ambareesh) ಜೆಡಿಎಸ್ ಶಾಸಕರ (JDS MLAs) ವಿರುದ್ಧ ಕಮಿಷನ್ ಆರೋಪ (Commission Allegation) ಮಾಡಿದ್ದರು. ಇಂದು ಸಂಸದರ ಆರೋಪಕ್ಕೆ ಮಾಜಿ ಸಚಿವ, ಮದ್ದೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ (JDS MLA DC Tammanna) ಪ್ರತಿಕ್ರಿಯೆ ನೀಡಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಅವರೇನು ಸತ್ಯ ಹರಿಶ್ಚಂದ್ರರು ಅಲ್ಲ. ಕಮಿಷನ್ ಪಡೆದಿದ್ದಕ್ಕೆ ಸಂಸದರು ತಮ್ಮ ಬಳಿ ಸಾಕ್ಷ್ಯ ಇದ್ರೆ ನೀಡಲಿ. ನಮಗೆ ಸುಮಲತಾ ಅವರ ಬಂಡವಾಳ ಎಲ್ಲವೂ ಗೊತ್ತಿದೆ. ಇವರು ಗಣಿ ವಿಚಾರವಾಗಿ ಧ್ವನಿ ಎತ್ತಿದಾಗ ಏನ್ ಕೇಳಿದ್ರು ಅನ್ನೋದು ಎಲ್ಲೆಡೆ ಹರಿದಾಡಿದೆ. ಯಾತಕ್ಕಾಗಿ ಇವರು ಗಣಿ ವಿರೋಧ ಮಾಡ್ತಿದ್ದಾರೆ ಎಂದು ಎಲ್ಲೆಡೆ ಹರಿದಾಡ್ತು. ಗಣಿಗಾರಿಕೆ ವಿರೋಧ ಮಾಡಿದ್ರಲ್ಲಾ ಸಂಪೂರ್ಣವಾಗಿ ನಿಲ್ಲಿಸಿದ್ರಾ ಎಂದು ಸಂಸದರನ್ನು ಪ್ರಶ್ನೆ ಮಾಡಿದರು,
ಎಲ್ಲಾ ನಾನೇ ಮಾಡಿದ್ದೀನಿ ಅಂತ ಅವರು ಕ್ರೆಡಿಟ್ ತೆಗೆದುಕೊಳ್ಳುವದರ ಬಗ್ಗೆ ನಮಗೆ ಗೊತ್ತಿದೆ. ಪ್ರಜ್ಞಾವಂತರಿಗೆ ಯಾರು ಏನು ಮಾಡ್ತಾರೆ ಅಂತ ಗೊತ್ತಿದೆ. ಸುಮಲತಾ ಅಂಬರೀಶ್ ಏನ್ ಕಮಿಷನ್ ತೆಗೆದುಕೊಂಡಿಲ್ಲವಾ? ಉದಾಹರಣೆ ಕೊಡಲೇ? ನಮ್ಮ ಬಳಿಯೂ ದಾಖಲೆಗಳಿದ್ದು, ಬೇಕು ಅಂದ್ರೆ ಕೊಡುತ್ತೇವೆ ಎಂದು ಆರೋಪ ಮಾಡಿದರು,
ಸಂಸದರು ಸಾಕ್ಷಿ ಇದ್ರೆ ತರಲಿ
ನಾವು ಅವರಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ನಾವು ಕಮಿಷನ್ ಪಡೆದಿರುವುದಕ್ಕೆ ಸಾಕ್ಷಿ ಇದ್ದರೆ ತರಲಿ. ಈ ರೀತಿ ರಾಜಕಾರಣ ಮಾಡೋದು ರಾಜಕಾರಣಿಗಳ ಲಕ್ಷಣ ಅಲ್ಲ. ಬೇಕಿದ್ದರೆ ಈ ಬಗ್ಗೆ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ನನ್ನ 20 ವರ್ಷದ ರಾಜಕೀಯದಲ್ಲಿ ಯಾರ್ ಯಾರ್ ಏನು ಅಂತ ಗೊತ್ತಿದೆ. ಅವರಂತೆ ನಾವು ಕೆಸರೆರಚಲು ಹೋಗಲ್ಲ.ನಾನು ಸತ್ಯ ಹರಿಶ್ಚಂದ್ರನಾ ಅಂತ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚೆರ್ಚೆಗೆ ಸುಮಲತಾ ಅಂಬರೀಶ್ ಯಾವಾಗ ಬೇಕಾದರು ಬರಲಿ ನಾನು ಸಿದ್ಧ ಎಂದು ಸವಾಲು ಹಾಕಿದರು.
ಬುಡುಬುಡುಕೆ ಮಾಡ್ಕೊಂಡು ರಾಜಕಾರಣಕ್ಕೆ ಬಂದಿಲ್ಲ
ನಾವು ತಪ್ಪು ಮಾಡಿದ್ದೇವೆ ಎಂದು ನಿರೂಪಿಸಿದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಇವರ ಆಪಾದನೆಗೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳುವ ಜನ ನಾವಲ್ಲ. ಬುಡುಬುಡುಕೆ ಮಾಡಿಕೊಂಡು ರಾಜಕಾರಣಕ್ಕೆ ಬಂದಿಲ್ಲ ಎಂದು ಸಂಸದರ ಆರೋಪಗಳಿಗೆ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸುಮಲತಾ ಅಂಬರೀಶ್ ಹೇಳಿದ್ದೇನು?
ಶನಿವಾರ ಸುದ್ದಿಗೋಷ್ಠಿ ನಡೆಸಿದ್ದ ಸುಮಲತಾ ಅಂಬರೀಶ್, ದಶಪಥ ರಾಷ್ಟ್ರೀಯ ಹೆದ್ದಾರಿ 275ರ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಆಕ್ರೋಶ ಹೊರ ಹಾಕಿದ್ದರು.ಉದ್ಘಾಟನೆಗೂ ಮೊದಲೇ ಹೆದ್ದಾರಿ ಬಿರುಕು ಬಿಟ್ಟಿದೆ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು,ಹೆದ್ದಾರಿ ಕಾಮಗಾರಿ ಸರಿ ಇದೆ ಎನ್ನುವವರು ಸ್ಥಳಕ್ಕೆ ಬರಲಿ. ಅವೈಜ್ಞಾನಿಕ ಕಾಮಗಾರಿ ಕುರಿತು ಪ್ರಧಾನಿ ಗಮನಕ್ಕೆ ತರುವುದಾಗಿ ಹೇಳಿದ್ದರು.
ಆಡಳಿತ ವ್ಯವಸ್ಥೆ ಬಗ್ಗೆ ಅಸಮಾಧಾನ
ಟೆಂಡರ್ ಆಗ್ತಿದ್ದಂತೆ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಿಗೂ ಕಮಿಷನ್ ನೀಡಬೇಕು. ಕಮಿಷನ್ ವಿಚಾರವನ್ನು ಓಪನ್ ಆಗಿ ಬಯಲು ಮಾಡುತ್ತೇನೆ. ಸರ್ಕಾರದ ಡಿಪಾರ್ಟ್‌ಮೆಂಟ್ ಜೊತೆ ಹೋರಾಡಿ ಸಾಕಾಗಿದೆ. ಯಾವುದೇ ಸಮಸ್ಯೆಯನ್ನ ಬಗೆಹರಿಸುವುದು ಸುಲಭವಾದ ಮಾತಲ್ಲ. ಅಧಿಕಾರಿಗಳಿಂದ ಕೆಲಸ ಮಾಡಿಸುವುದು ಬೆಟ್ಟ ಹತ್ತಿದಂತೆ ಎಂದು ಆಡಳಿತ ವ್ಯವಸ್ಥೆ ಬಗ್ಗೆ ಬೇಸರ ಹೊರ ಹಾಕಿದ್ದರು.
ಯಾವುದೇ ವಿಚಾರವನ್ನ ಮುಚ್ಚಿಡೋಕೆ ಹಾಗೂ ಮೌನವಾಗಿ ಇರೋಕೆ ಇಷ್ಟ ಇಲ್ಲ. ಕಳಪೆ ಕಾಮಗಾರಿಯಾಗ್ತಿರೋದೆ ಕಮಿಷನ್ ಸಂಪ್ರದಾಯದಿಂದ. ಟೆಂಡರ್ ಆದ ಬಳಿಕ ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಎಲ್ಲರಿಗೂ ಕಮಿಷನ್ ನೀಡಬೇಕು ಎಂದು ಆರೋಪಿಸಿದ್ದರು.
ಮಂಡ್ಯದಲ್ಲಿ ಕಮಿಷನ್ ರಾಜಕಾರಣ
ಈ ರೀತಿ ಕಮಿಷನ್ ಕೊಟ್ಮೇಲೆ ಕ್ವಾಲಿಟಿ ವರ್ಕ್ ಎಲ್ಲಿಂದ ಸಿಗತ್ತೆ? ಮಂಡ್ಯದಲ್ಲಿ 100% ಅಲ್ಲಾ 500% ಕಮಿಷನ್ ರಾಜಕಾರಣ ನಡೆಯುತ್ತಿದೆ. ಭ್ರಷ್ಟಾಚಾರದಿಂದಲೇ 3 ತಿಂಗಳಲ್ಲಿ ರೋಡುಗಳು ಕಿತ್ತು ಬರ್ತಿವೆ. 100% ಸ್ಥಳೀಯ ಶಾಸಕರು ಕಮಿಷನ್ ಪಡೆಯುತ್ತಿದ್ದಾರೆ. ಆದ್ರೆ ಅದನ್ನ ಹೇಳಲು ಗುತ್ತಿಗೆದಾರರು ಹೆದರುತ್ತಿದ್ದಾರೆ ಎಂದು ಮಂಡ್ಯ ಶಾಸಕರ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಗಂಭೀರ ಆರೋಪ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ