ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ (Bengaluru-Mysuru Express Highway) ಅವೈಜ್ಞಾನಿಕ ಕಾಮಗಾರಿ ಆರೋಪಿಸಿ ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಮಂಜುನಾಥ್ (JDS MLA Manjunath) ಮಾಧ್ಯಮಗೋಷ್ಠಿ ನಡೆಸಿದರು. ಮಳೆಯಿಂದಾಗಿ (Rain) ಹೆದ್ದಾರಿ ಹಾನಿಯಾಗಿದ್ದು, ಇಡೀ ರಸ್ತೆಯುದ್ದಕ್ಕೂ ನೀರು ತುಂಬಿದೆ. ಆ ಭಾಗದ ರೈತರು, ಜನರಿಗೆ ಅನಾನುಕೂಲವಾಗಿದೆ. ನಾನು ಆ ಭಾಗದ ಜನಪ್ರತಿನಿಧಿಯಾಗಿದ್ದೇನೆ. ನಾವು ಕಳೆದ ನಾಲ್ಕು ವರ್ಷಗಳ ಹಿಂದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಸಲಾಗಿತ್ತು. ಅವರ ದುರ್ನಡತೆಯಿಂದಾಗಿ ಈ ಸ್ಥಿತಿ ತಲುಪಿದೆ ಎಂದು ಆರೋಪಿಸಿದರು. ಭೂ-ಸ್ವಾಧೀನದ ವೇಳೆ ನಾವು ರೈತರ ಮನವೊಲಿಸಿ ಭೂಮಿಗೆ ಪರಿಹಾರ ಕೊಡಿಸ್ತೇವೆಂದು ಮನವಿ ಮಾಡಿಕೊಳ್ಳಲಾಗಿತ್ತು. ಎಲ್ಲರ ಸಹಕಾರವನ್ನು ಪಡೆದಿದ್ದೇವು, ಭೂ ಸ್ವಾಧೀನ ಪರಿಹಾರದಲ್ಲೂ ಲೋಪವಾಗಿದೆ. ಹೆದ್ದಾರಿ ಪ್ರಾಧಿಕಾರಕ್ಕೆ ಗಮನಕ್ಕೆ ತಂದರೂ ಪರಿಹಾರ ಆಗಲಿಲ್ಲ. ಪ್ರಾಧಿಕಾರದ ಶ್ರೀಧರ್ ಎಂಬ ವ್ಯಕ್ತಿಯಿಂದ ಹೀಗಾಗಿದೆ ಎಂಬ ಗಂಭೀರ ಆರೋಪ ಮಾಡಿದರು.
ಸಮಸ್ಯೆಗಳನ್ನ ನುಂಗಿ ಹೆದ್ದಾರಿಗೆ ಸಹಕರಿಸಲಾಗಿತ್ತು. ರಸ್ತೆ ಯಾದರೆ ಒಳ್ಳೆಯದು ಎಂಬ ಕಾರಣಕ್ಕೆ ಸುಮ್ಮನಿದ್ದೇವು. ಈಗ ಸಂಸದ ಪ್ರತಾಪ್ ಸಿಂಹ ನಾನೇ ರಸ್ತೆ ಮಾಡಿರೋದು ಅಂತ ಹೊಗಳಿಕೊಂಡು ಪೋಸ್ ಕೊಡುತ್ತಿದ್ದಾರೆ. ಪ್ರತಾಪ್ ಸಿಂಹ ಅವರೇ ನೀವು ಯಾರಿಗೆ ಬ್ರಾಂಡ್ ಅಂಬಾಸಿಡರ್ ಹೇಳಿ? ಹೆದ್ದಾರಿ ಮಾಡೋ ಸಂಸ್ಥೆಯವರಿಗಾ ಎಂದು ವ್ಯಂಗ್ಯ ಮಾಡಿದರು.
ಈ ಯೋಜನೆಯಿಂದ ಸಾರ್ವಜನಿಕರಿಗೆ ಏನು ಲಾಭ?
ಇವತ್ತು ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಲಾಗಿದೆ. ರಸ್ತೆಯಲ್ಲಿ ಪ್ರಯಾಣಿಕರು ಓಡಾಡೋಕೆ ಆಗ್ತಿಲ್ಲ. ಬಿಡದಿಗೆ ರಸ್ತೆ ಬಿಟ್ಟಿಲ್ಲ. 119 ಕಿ.ಮೀ ರಸ್ತೆಯಲ್ಲಿ ಇಂಟರ್ ಜಂಕ್ಷನ್ ಇಲ್ಲ. ಪೆಟ್ರೋಲ್ ಹಾಕಿಸೋಕೆ, ಟೀ ಕುಡಿಯೋಕೆ ಅವಕಾಶವಿಲ್ಲ. ಬೇರೆ ಎಕ್ಸ್‌ಪ್ರೆಸ್ ವೇಗಳನ್ನ ಹೀಗೆ ಮಾಡಲಾಗಿದೆಯಾ ಎಂದು ಪ್ರಶ್ನೆ ಮಾಡಿದರು.
ಅಪಘಾತವಾದ್ರೆ ಟ್ರಾಮಾಸೆಂಟರ್ ಮಾಡಿಲ್ಲ. ಬಸ್ ಬೇ, ಟ್ರಕ್ ಬೇ ಏನಾದ್ರೂ ಮಾಡಿದ್ದೀರ? ಸಾರ್ವಜನಿಕರಿಗೆ ಇದ್ರಿಂದ ಏನು ಲಾಭ ಹೇಳಿ. ರಾಮದೇವರ ಬೆಟ್ಟದಿಂದ ನೀರು ಬಂದಿದೆ ಅಂತೀರಿ. ರಾಮದೇವರ ಬೆಟ್ಟ ಇವತ್ತು ಆಗಿರೋದಾ? ಅಲ್ಲಿಂದ ಎಷ್ಟು ಮೆಟ್ರಿಕ್ ಟನ್ ಕಲ್ಲು ಹೊಡೆದಿದ್ದೀರಿ?
ಇದನ್ನೂ ಓದಿ: Ganesh Chaturthi 2022: ಧರ್ಮ ಸಂಘರ್ಷದ ನಡುವೆ ಭಾವೈಕ್ಯತೆ ಸಂದೇಶ; ಮುಸ್ಲಿಂ ಕುಟುಂಬದಿಂದ ಗಣೇಶ ಚತುರ್ಥಿ ಆಚರಣೆ!
ಭೂ ಪರಿಹಾರದ ಬಗ್ಗೆ ಇಡಿ ,ಸಿಬಿಐ ತನಿಖೆಯಾಗಬೇಕು
ಇದು ನಿಮ್ಮ ನಮ್ಮ ಮನೆಯ ಹಣ ಅಲ್ಲ ಎಂಬ ವಿಷಯ ಸಂಸದರಿಗೆ ನೆನಪಿರಲಿ. 1300 ಕೋಟಿ ತಂದಿದ್ದೇವೆ ಅಂತೀರಲ್ಲ. ಇದು ಆನ್ ಗೋಯಿಂಗ್ ಪ್ರಾಜೆಕ್ಟ್. ನಿಮಗೆ ನಾಚಿಕೆ ಆಗಲ್ವೇ? ದುಡ್ಡು ನೀವು ತಂದು ಮಾಡಿರೋ ತರ ಹೇಳ್ತೀರಿಲ್ಲವಾ? 10 ತಿಂಗಳಿಗೆ ರಸ್ತೆ ಬಿಡುಗಡೆ ಮಾಡ್ತೀವಿ ಅಂತ ಹೇಳಿದ್ದೀರಿ. ಎಲ್ಲಿ ಇನ್ನೂ ರಸ್ತೆ ಅಭಿವೃದ್ಧಿಯೇ ಆಗಿಲ್ಲ. ಈ ಪ್ರಾಜೆಕ್ಟ್ಗೆ ನೀವು ಯಾರು ಎಂಬುದನ್ನು ಹೇಳಿ. ಇದರಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದ್ದು, ಭೂ ಪರಿಹಾರದ ಬಗ್ಗೆ ಇಡಿ ,ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಲು ಅನುಮತಿ ಕೇಳಿದ್ದೇವೆ. ಇದೇ ಸೆಪ್ಟೆಂಬರ್ 7ರಂದು ಕುಮಾರಸ್ವಾಮಿ, ರೇವಣ್ಣ ನಿಯೋಗ ದೆಹಲಿಗೆ ತೆರಳಲಿದೆ ಎಂದು ಹೇಳಿದರು.
ಬನ್ನಿ ನಾವು ನೋಡಿಕೊಳ್ತೇವೆ
ಯಾರದ್ದೋ ಭೂಮಿ, ಇನ್ಯಾರಿಗೋ ಪರಿಹಾರ ಸಿಕ್ಕಿದೆ. ಭೂ ಪರಿಹಾರ ಕೇಳಿದ್ರೆ ಜೈಲಿಗೆ ಕಳುಹಿಸಲಾಗುತ್ತಿದೆ. ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಬಿಡದಿಗೆ ಬರಬೇಕು. ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ಬಿಡದಿಗೆ ಬರಬೇಕು. ಬಿಡದಿಗೆ ಬನ್ನಿ ನಾವು ನೋಡಿಕೊಳ್ತೇವೆ ಎಂದು ಸವಾಲ್ ಹಾಕಿದರು.
ಶ್ರೀಧರ್ ಹೊಡೆದಿರುವ ದುಡ್ಡನ್ನ ಪ್ರತಾಪ್ ಸಿಂಹಗೆ ತುಂಬಿದ್ದಾನೆ. ಈ ಯೋಜನೆಯಲ್ಲಿ 800 ರಿಂದ 900 ಕೋಟಿ ಹಣ ಲೂಟಿ ಮಾಡಲಾಗಿದೆ. ಕೊಳ್ಳೆ ಹೊಡೆದ ಹಣ ಪ್ರತಾಪ್ ಸಿಂಹ ರಕ್ಷಣೆ ಮಾಡ್ತಾನೆ. ಹೆದ್ದಾರಿಯಲ್ಲಿ ಕ್ರಾಸಿಂಗ್ ಕೊಟ್ಟಿಲ್ಲ. ನಮ್ಮ ಜನ ಎತ್ತಿನ ಗಾಡಿ ಎಲ್ಲಿಂದ ಓಡಿಸಬೇಕು? ಟ್ರ್ಯಾಕ್ಟರ್ ಗಳನ್ನು ಎಲ್ಲಿ ಕ್ರಾಸ್ ಮಾಡಬೇಕು ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Murugha Shri: ಮುರುಘಾ ಶ್ರೀಗಳಿಗೆ ಪುರುಷತ್ವ ಪರೀಕ್ಷೆ; ಶರಣರ ಮುಂದೆ ತನಿಖಾಧಿಕಾರಿಗಳಿಂದ ಪ್ರಶ್ನೆಗಳ ಸುರಿಮಳೆ
ರೈತರಿಗೆ ಬರಬೇಕಾದ ಭೂಪರಿಹಾರ ಕೊಡಿಸಿ
50 ಕಡೆ ಕ್ರಾಸಿಂಗ್ ಮಾಡಲಾಗಿದ್ದು, ಅಲ್ಲಿ ನೀರು ತುಂಬಿಕೊಂಡಿದೆ. ಸಂಸದರೇ ಬನ್ನಿ ನಿಮಗೆ ಎಲ್ಲಿ ಮಿಸ್ಟೇಕ್ ಇದೆ ಎಂಬುದನ್ನು ತೋರಿಸುತ್ತೇವೆ. ರೈತರಿಗೆ ಬರಬೇಕಾದ ಭೂಪರಿಹಾರ ಕೊಡಿಸಿ. ಒಂದು ವೇಳೆ ಪರಿಹಾರ ಕೊಡದೇ ಇದ್ರೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ ಎಂದು ಎಚ್ಚರಿಸಿದರು.
1 ಕಿಮೀ ರಸ್ತೆ ಮಾಡಲು 80 ಕೋಟಿ ರೂ. ಖರ್ಚು ಮಾಡಲಾಗಿದೆ. ಇದಲ್ಲದೆ ಇನ್ನೂ ಹೆಚ್ಚಿನ ಹಣ ಖರ್ಚು ಮಾಡಬೇಕು. ಇದು ಡಾಂಬರ್ ರಸ್ತೆಯಾ? ಚಿನ್ನ ಬೆಳ್ಳಿ ಮಾಡಿರೋದಾ? ನಿಮ್ಮಂತೆ ನಮಗೆ ಫೋಸ್ ಕೊಡೋಕೆ ನಾವು ಬಂದಿಲ್ಲ. ನಮ್ಮ ಬಗ್ಗೆ ಮಾತನಾಡಬೇಕಾದ್ರೆ ಎಚ್ಚರಿಕೆ ಇರಲಿ ಎಂದು ಸಂದೇಶ ರವಾನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ