ಕೇಂದ್ರ, ರಾಜ್ಯ ಸರ್ಕಾರಗಳನ್ನು ಬೀಳಿಸಲು ಅಸಾಧ್ಯ; ಬಿಜೆಪಿ ಪರ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಭರ್ಜರಿ ಬ್ಯಾಟಿಂಗ್

ಬಿಜೆಪಿ ಸರ್ಕಾರ ಬೀಳುತ್ತದೆ ಎಂದು ಹೇಳುವವರು ರಾಜಕೀಯ ಪ್ರಬುದ್ಧತೆ ಇಲ್ಲದವರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿರುವ ಜೆಡಿಎಸ್​ ಶಾಸಕ ಜಿ.ಟಿ. ದೇವೇಗೌಡ ಬಿಜೆಪಿ ಪರವಾಗಿ ಮೈಸೂರಿನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಜಿ.ಟಿ.ದೇವೇಗೌಡ

ಜಿ.ಟಿ.ದೇವೇಗೌಡ

  • Share this:
ಮೈಸೂರು (ಡಿ. 11): ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಬಿಜೆಪಿ ಸರ್ಕಾರ ಅಲ್ಲಾಡುತ್ತಿದೆ, ಸರ್ಕಾರ ಬೀಳುತ್ತದೆ ಎಂದು ಹೇಳುವವರು ರಾಜಕೀಯ ಪ್ರಬುದ್ಧತೆ ಇಲ್ಲದವರು ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿರುವ ಜೆಡಿಎಸ್​ ಶಾಸಕ ಜಿ.ಟಿ. ದೇವೇಗೌಡ ಬಿಜೆಪಿ ಸರ್ಕಾರದ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಸದೃಢವಾಗಿದೆ. 5 ವರ್ಷ ಬಿಜೆಪಿ ಸರ್ಕಾರ ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸಿಎಂ ಬದಲಾವಣೆ ವಿಚಾರ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಎರಡು ಸರ್ಕಾರಗಳೂ ತಮ್ಮ ಅಧಿಕಾರಾವಧಿಯನ್ನು ಪೂರೈಸಲಿವೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಸರ್ಕಾರದ ಪರವಾಗಿ ಇರಲಿವೆ. ಯಾರು ಏನೇ ಮಾತನಾಡಿದರೂ ಈ ಫಲಿತಾಂಶವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ಶಾಸಕ‌ ಜಿ.ಟಿ. ದೇವೇಗೌಡ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ; ಗೋಪೂಜೆ ಮಾಡಿ ಸಂಭ್ರಮಿಸಿದ ಸಿಎಂ ಬಿಎಸ್​ ಯಡಿಯೂರಪ್ಪ

ಕಾಂಗ್ರೆಸ್ ಜೊತೆಗೆ ಸರ್ಕಾರ ಮಾಡಿದ್ದು ನಮ್ಮ ತಪ್ಪು ಎಂಬ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜಿ.ಟಿ. ದೇವೇಗೌಡ ಕಾಂಗ್ರೆಸ್ ಜೊತೆ ಕೈ ಜೋಡಿಸುವಾಗ ನಮ್ಮ ಯಾವ ಶಾಸಕರ ಅಭಿಪ್ರಾಯವನ್ನೂ ನಮ್ಮ ಪಕ್ಷ ಕೇಳಲಿಲ್ಲ. ಹೆಚ್​ಡಿ ದೇವೇಗೌಡರು, ಹೆಚ್​ಡಿ ಕುಮಾರಸ್ವಾಮಿ ಸೇರಿಕೊಂಡು ಈ ತೀರ್ಮಾನ ಮಾಡಿದ್ದರು. ಈ ಹಿಂದೆ ಧರ್ಮ ಸಿಂಗ್ ಅವರ ಜೊತೆ ಸಮ್ಮಿಶ್ರ ಸರ್ಕಾರ ಮಾಡುವಾಗ ಪಕ್ಷದವರು ನಮ್ಮ ಅಭಿಪ್ರಾಯ ಕೇಳಿದ್ದರು. ಈ ಬಾರಿ ಆ ರೀತಿ ಅಭಿಪ್ರಾಯ ಕೇಳಲಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಈ ಬಾರಿ ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್ - ಕಾಂಗ್ರೆಸ್ ಸಚಿವರ ಜೊತೆ ಹೊಂದಾಣಿಕೆ ಇತ್ತು. ಕುಮಾರಸ್ವಾಮಿ ಅವರಿಗೆ ಆಗಿರುವ ಕಹಿ ಅನುಭವ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ ಕುಮಾರಸ್ವಾಮಿ ಅವರ ಹೆಸರು ಕೆಟ್ಟಿತ್ತು ಎಂದು ನನಗೆ ಅನ್ನಿಸುವುದಿಲ್ಲ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಒಳ್ಳೆ ಕೆಲಸವನ್ನೇ ಮಾಡಿದ್ದಾರೆ. ಅವರ ಹೆಸರು ಹೇಗೆ ಕೆಡುತ್ತದೆ? ಅವರು ಏನನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹಾಗೇ ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದು ಮೈಸೂರಿನಲ್ಲಿ ಜಿ.ಟಿ. ದೇವೇಗೌಡ ಹೇಳಿದ್ದಾರೆ.

(ವರದಿ: ಕೆ. ಪುಟ್ಟಪ್ಪ)
Published by:Sushma Chakre
First published: