ಹಾಸನ(ಸೆ.20): ಮಾಜಿ ಸಚಿವ ಎಚ್ಡಿ ರೇವಣ್ಣನವರ ಸರ್ವಾಧಿಕಾರಿ ಧೋರಣೆಗೆ ಶಾಸಕ ಎಟಿ ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಮಾತನಾಡಿದ ಎಟಿ ರಾಮಸ್ವಾಮಿಯವರು, ಜೆಡಿಎಸ್ ಪಕ್ಷದ ಕೆಲವು ವಿದ್ಯಮಾನಗಳಿಂದ ಬೇಸರವಾಗಿದೆ. ಅನಿವಾರ್ಯ ಕಾರಣ ಮನಸ್ಸಿನ ನೋವು ಹೊರ ಹಾಕಬೇಕಾಗಿದೆ. ಹಾಸನ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಕ್ಷೀಣಿಸುತ್ತಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ಕಳೆದ ಚುನಾವಣೆ ಸಂದರ್ಭದಲ್ಲೇ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇ. ಆದರೆ, ಪಕ್ಷದ ವರಿಷ್ಠರು ಯಾವುದನ್ನು ಗಂಭೀರವಾಗಿ ಪರಿಗಣಿಸಿಲ್ಲ.ಬದಲಿಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಹೊನ್ನವಳ್ಳಿ ಸತೀಶ್ಗೆ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಗಿದೆ.
ಇದು ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಅಪಮಾನ ಮಾಡಿದಂತಾಗಿದೆ. ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ. ಜೊತೆಗೆ ಪಕ್ಷದ ಮಾಜಿ ಸಚಿವ ರೇವಣ್ಣ ಅವರ ಸರ್ವಾಧಿಕಾರಿ ಧೋರಣೆಯ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎಟಿ ರಾಮಸ್ವಾಮಿ, ಹೊನ್ನವಳ್ಳಿ ಸತೀಶ್ಗೆ ಹೊಳೆನರಸೀಪುರದಲ್ಲಿ ಮಾತ್ರ ಜೆಡಿಎಸ್. ಇನ್ನು ಅರಕಲಗೂಡಿನಲ್ಲಿ ಸತೀಶ್ ವಿರೋಧ ಪಕ್ಷಕ್ಕೆ ಸಹಕಾರ ನೀಡುತ್ತಾರೆ ಎಂದು ಆರೋಪಿಸಿದರು.
ಕೆ.ಬಿ ಮಲ್ಲಪ್ಪನವರ ಕಾಲದಿಂದಲೂ ತಾಲ್ಲೂಕಿನಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಯುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರ ಸಂಘದ ಚುನಾವಣೆ ಹಾಗೂ ಒಕ್ಕಲಿಗ ಸಂಘದ ಚುನಾವಣೆ ಸಮಯದಲ್ಲೂ ಪಕ್ಷ ಅಭ್ಯರ್ಥಿ ಪರ ಕೆಲಸ ಮಾಡಲಿಲ್ಲ. ಜೊತೆಗೆ ವಿರೋಧಿ ಪಕ್ಷ ಅಭ್ಯರ್ಥಿಗೆ ಸಹಕಾರ ನೀಡಿದರು. ಗ್ರಾಮಾಂತರ ಕೃಷಿ ಸಹಕಾರ ಬ್ಯಾಂಕುಗಳಲ್ಲಿ ಇವರ ಪ್ರಭಾವದಿಂದ ಭ್ರಷ್ಟಾಚಾರ ಏಲ್ಲೇ ಮೀರಿದೆ ಎಂದರು.
ಇವುಗಳನ್ನು ವರಿಷ್ಠರ ಗಮನಕ್ಕೆ ತಂದರೂ ಸಹ ಏನು ಕ್ರಮ ಕೈಗೊಳ್ಳಲಿಲ್ಲ. ಯಾರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೋ ಅವರನ್ನೇ ಹಾಲು ಉತ್ಪಾದಕ ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ವರಿಷ್ಠರು ಕನಿಷ್ಟ ಪಕ್ಷ ಸ್ಥಳೀಯ ಶಾಸಕರು ಮತ್ತು ನಿಷ್ಠಾವಂತ ಕಾರ್ಯಕರ್ತರ ಸಲಹೆ ಸಹ ತೆಗೆದುಕೊಳ್ಳದೇ ಸರ್ವಾಧಿಕಾರಿ ಧೋರಣೆ ನೀತಿ ಅನುಸರಿಸುತ್ತಿದ್ದಾರೆ. ಇದು ನನ್ನ ಮನಸ್ಸಿಗೆ ಘಾಸಿಗೊಳಿಸಿದೆ. ಇನ್ನೂ ಮುಂದೆ ಪಕ್ಷದ ಸಂಘಟನೆ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಜವಾಬ್ದಾರಿಯಿಂದ ಹಿಂದೆ ಸರಿಯುವ ಇಂಗಿತ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ