ಹಾಸನ: ಶಾಸಕ ಎ.ಟಿ ರಾಮಸ್ವಾಮಿ (AT Ramaswamy) ಅವರು ಜೆಡಿಎಸ್ (JDS) ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹದ ಸುದ್ದಿಗಳು ಹರಿದಾಡುತ್ತಿರುವ ಮಧ್ಯೆಯೇ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna) ಮತ್ತವರ ಕುಟುಂಬದ ವಿರುದ್ಧ ರಾಮಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ‘ರಾಮಸ್ವಾಮಿ ಕೆಟ್ಟವರು ಅವರಿಗೆ ಟಿಕೆಟ್ ಕೊಡಬೇಡಿ ಎಂದು ಜನರಿಂದ ಹೇಳಿಸಿದ್ರು’ ಎಂದು ಹೇಳಿದ ರಾಮಸ್ವಾಮಿ, ‘ಮೈಕ್ ಹಾಕಿಕೊಂಡು ಅವರ ಮನೆಯೊಳಗೆ ಹೋಗಿ ಮಾತಾಡೋಕೆ ಸಾಧ್ಯ ಇದಿಯಾ?’ ಎಂದು ಪ್ರಶ್ನಿಸಿದರು.
ಇಡೀ ರಾಜ್ಯಕ್ಕೆ ರಾಮಸ್ವಾಮಿ ಎಂತಹವರು ಎಂಬುದು ಗೊತ್ತಿದೆ ಎಂದಿರುವ ಅವರು, ನಾನು ಅವತ್ತು ಇಡೀ ರಾತ್ರಿ ನಿದ್ದೆ ಮಾಡಿಲ್ಲ. ಬೆಳಿಗ್ಗೆ ಕಾರ್ಯಕ್ರಮ ಇದೆ ಎಂದು ಮೆಸೇಜ್ ಹಾಕ್ತಾರೆ, ನಾನು ದೇವೇಗೌಡರನ್ನ ಕಾರ್ಯಕ್ರಮಕ್ಕೆ ಕರೆಯೋದಕ್ಕೆ ಹೋದಾಗ ರಾಜಕೀಯ ಮಾತಾಡೋಕೆ ಶುರು ಮಾಡಿದ್ರು. ಆರೋಗ್ಯ ಕಾಪಾಡಿಕೊಳ್ಳಿ ಇನ್ನೊಂದು ದಿನ ಮಾತಾಡೋಣ ಎಂದೆ. ನನ್ನ ಕೈ ಹಿಡಿದುಕೊಂಡು ನಿಮಗೆ ಏನು ಕಿರುಕುಳ ಕೊಡ್ತಿದ್ದಾರೆ, ಏನು ಅನ್ಯಾಯ ಆಗ್ತಿದೆ ನನಗೆ ಗೊತ್ತು. ನಾನು ಬದುಕಿರೋವರೆಗೆ ಅನ್ಯಾಯ ಆಗೋದಕ್ಕೆ ಬಿಡೋದಿಲ್ಲ ಎಂದು ದೇವೇಗೌಡರು ಹೇಳಿದ್ದರು ಎಂದು ರಾಮಸ್ವಾಮಿ ಹೇಳಿದರು.
'ದೇವೇಗೌಡರನ್ನು ಮೂಲೆಗುಂಪು ಮಾಡಿದ್ರು'
ಮುಂದುವರಿದು ಮಾತನಾಡಿರುವ ಎ.ಟಿ ರಾಮಸ್ವಾಮಿ, ನಾನು ಕರೆದ ಕಾರ್ಯಕ್ರಮಕ್ಕೆ ಎಚ್‌ಡಿ ದೇವೇಗೌಡರ ಟೂರ್ ಪ್ಲಾನ್ ಆಗಿತ್ತು. ಆದರೆ ಅವರು ಬರೋದನ್ನ ತಡೆದರು. ಪಾಪ.. ಇವರೆಲ್ಲಾ ಅವರನ್ನ ಉತ್ಸವ ಮೂರ್ತಿ ಮಾಡ್ಕೊಂಬಿಟ್ರು. ಅಂತಹ ಮುತ್ಸದ್ದಿ ರಾಜಕಾರಣಿಯನ್ನ ಮೂಲೆಗುಂಪು ಮಾಡಿದ್ದು ನನಗೆ ನೋವಾಗಿದೆ. ಅವರ ಮಾತಿಗೆ ಕಿಮ್ಮತ್ತು ಕೊಡ್ತಿದ್ದಾರಾ ಇವರು? ಅವರನ್ನೇ ಜಿಲ್ಲೆಯಿಂದ ಹೊರ ದಬ್ಬಿದ್ರು ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: HD Revanna: ಹೈವೋಲ್ಟೇಜ್ ಕ್ಷೇತ್ರ ಹಾಸನದಿಂದ ಚುನಾವಣೆಗೆ ಸ್ಪರ್ಧಿಸಲು ಎಚ್‌ಡಿ ರೇವಣ್ಣಗೆ ಸಿಕ್ತಾ ಗ್ರೀನ್ ಸಿಗ್ನಲ್?
'ನನ್ನ ಮೇಲೆ ಹಗೆತನ ಶುರು ಮಾಡಿದ್ರು'
ಹಾಸನದ ಚನ್ನಪಟ್ಟಣದಲ್ಲಿ ಲೋಕಸಭಾ ಚುನಾವಣೆ ಬಗ್ಗೆ ಪೂರ್ವಭಾವಿ ಸಭೆ ಆಯ್ತು. ಎಲ್ಲರೂ ಪ್ರಜ್ವಲ್ ರೇವಣ್ಣ ಅಂತಾ ಹೇಳಿದ್ರು, ನಾನು ಹೇಳಲಿಲ್ಲ ಎಂದ ಶಾಸಕ ಎ.ಟಿ ರಾಮಸ್ವಾಮಿ, ಅಲ್ಲಿಂದಲೇ ನನ್ನ ಮೇಲೆ ಹಗೆತನ ಶುರುವಾಯ್ತು. ದೇವೇಗೌಡರು ನಿವೃತ್ತಿ ಆಗ್ತೀನಿ ಅಂದಿದ್ರೆ ನಾನು ಹೆಸರು ಹೇಳ್ತಿದ್ದೆ. ಅವರು ನಿಂತ್ಕೊಳ್ತಿನಿ ಅಂತಿರುವಾಗ ಜಿಲ್ಲೆಯಿಂದ ಹೊರದಬ್ಬಿ, ಮನೆಯಿಂದ ಹೊರದಬ್ಬಿದ್ರು. ಇವೆಲ್ಲ ಪೂರ್ವ ನಿರ್ಧರಿತ ತೀರ್ಮಾನಗಳು. ಇವರು ಹೋಗ್ಬೇಕಾಗಿತ್ತು, ಕಾದಾಡಬೇಕಾಗಿತ್ತು. ಇದರಿಂದ ಪಕ್ಷಕ್ಕೂ ನಷ್ಟ ಆಯ್ತೋ ಇಲ್ವೋ ಎಂದು ಪ್ರಶ್ನಿಸಿದರು.
'ಅನ್ಯಾಯದ ವಿರುದ್ಧ ಹೋರಾಡಬೇಕು, ಜನರಿಗೆ ಕರೆ'
ಇನ್ನು ಪ್ರಜ್ವಲ್ ರೇವಣ್ಣ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಎ.ಟಿ ರಾಮಸ್ವಾಮಿ, ಪ್ರಜ್ವಲ್ ರೇವಣ್ಣ ವಿರುದ್ಧ ಆಸ್ತಿ ಘೋಷಣೆ ವಿಚಾರವಾಗಿ ಕೋರ್ಟ್‌ನಲ್ಲಿ ಕೇಸು ನಡೆಯುತ್ತಿದೆ. ತೀವ್ರತರವಾದ ವಿಚಾರಣೆ ನಡೆಯುತ್ತಿದೆ. ಅವರಿಗೆ ಶಿಕ್ಷೆ ಆಗುತ್ತದೆ ಎನ್ನುವಲ್ಲಿಗೆ ಬಂದಿತ್ತು. ಕೇಸ್‌ನ್ನು ರಾಜಿ ಮಾಡೋದಕ್ಕಾಗಿ ಅವರಿಗೆ ಟಿಕೆಟ್ ಘೋಷಣೆ ಮಾಡಿದರು. ಬೆಳಗಾವಿ ಅಧಿವೇಶನದಲ್ಲಿ ನಮ್ಮ ಶಾಸಕರ ಬಳಿ ಅವರಿಗೆ ಟಿಕೆಟ್ ಕೊಡಲ್ಲ ಎಂದು ಹೇಳಿದ್ದರು. ಅವರ ಸ್ವಾರ್ಥಕ್ಕಾಗಿ ಟಿಕೆಟ್ ಘೋಷಣೆ ಮಾಡಿದರು. ಇವರ ಸ್ವಾರ್ಥಕ್ಕಾಗಿ ನಮ್ಮ ಜನರು, ರೈತರನ್ನು ಬಲಿ ಕೊಡಲಿಕ್ಕೆ ಹೊರಟಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇಂತಹ ಅನ್ಯಾಯಗಳಾದಾಗ ನೀವು ಬೆಂಕಿ ಉಂಡೆಗಳಾಗಬೇಕು ಎಂದು ಜನರಿಗೆ ಕರೆ ನೀಡಿದ ರಾಮಸ್ವಾಮಿ, ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕೆಂದು ಮನವಿ ಮಾಡಿದರು.
ರೇವಣ್ಣ ವಿರುದ್ಧ ಕಿಡಿ
ಇನ್ನು ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಗುಟ್ಟು ಬಿಟ್ಟುಕೊಡದ ರಾಮಸ್ವಾಮಿ, ನಾನು ರಾಜಕೀಯ ಜೀವನದಲ್ಲಿ ಕುಟುಂಬಕ್ಕಿಂತ ಹೆಚ್ಚು ಸಾರ್ವಜನಿಕರಿಗೆ ಒತ್ತು ನೀಡಿದ್ದೇನೆ. ಸರಿಯಾದ ತಳಪಾಯ ಹಾಕಿಕೊಂಡೇ ಅನೌನ್ಸ್ ಮಾಡಬೇಕಲ್ವಾ? ನಾನು ಮತ್ತೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ವಿಧಾನಸೌಧಕ್ಕೆ ಹೋಗುತ್ತೇನೆ. ಇಂತಹವರಿಗೆ ಅನ್ಯಾಯ ಆಯ್ತಲ್ಲ ಎಂಬ ನೋವು ನಿಮ್ಮನ್ನು ಕೂಡ ಕಾಡ್ತಾ ಇದೆ. ಕೆಲವರು ಮನುಷ್ಯರಾಗಿ ಯೋಚನೆ ಮಾಡಲಿಲ್ಲ ಎಂದು ಹೇಳುವ ಮೂಲಕ ಮಾತಿನುದ್ದಕ್ಕೂ ಎಚ್‌ಡಿ ರೇವಣ್ಣ ವಿರುದ್ಧ ಕಿಡಿಕಾರಿದರು.
ನಿನ್ನೆ ನಾನು ವಿಧಾನಸಭೆಯಲ್ಲಿ ಮಾತನಾಡಿದ ನಂತರ ಎಚ್‌ಡಿ ರೇವಣ್ಣ ಅವರು ಮಾತನಾಡಿದರು, ರಾಮಸ್ವಾಮಿ ಅಣ್ಣನವರು ಪ್ರಾಮಾಣಿಕರು, ಅದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು ಎಂದ ರಾಮಸ್ವಾಮಿ, ಒಳಗೊಂದು ಹೊರಗೊಂದು ಇದ್ದರೆ ನಾನೇನು ಮಾಡಲಿಕ್ಕಾಗ್ತದೆ? ನಾನು ರಾಜಕೀಯಕ್ಕೆ ಬಂದಿರುವುದು ಅಧಿಕಾರಕ್ಕಾಗಲ್ಲ ಜನರ ಸೇವೆಗಾಗಿ. ನಾನು ಅಧಿಕಾರಕ್ಕೆ ಹೋಗೋದಾಗಿದ್ದರೆ ಎಸ್ಎಂ ಕೃಷ್ಣನವರು ಮುಖ್ಯಮಂತ್ರಿ ಆದಾಗ್ಲೇ ಹೋಗಬಹುದಿತ್ತು. ಕೃಷ್ಣರವರು ನೀವು ಸೋಲಬಾರದಿತ್ತು ನಿಮಗೆ ಬೋರ್ಡ್, ನಿಗಮ ಮಂಡಳಿ ಕೊಡುತ್ತೇನೆ ಎಂದರು. ನನಗೆ ಬೇಡ ಸಾರ್ ಯಾರಿಗಾದರೂ ಕಾರ್ಯಕರ್ತರಿಗೆ ದುಡಿದವರಿಗೆ ಕೊಡಿ ಸರ್ ಅಂದೆ. ಬೇಕಿದ್ರೆ ಎಸ್ಎಂ ಕೃಷ್ಣರವರನ್ನು ಕೇಳಿ ನೋಡಿ ಎಂದು ಹೇಳಿದರು.
ಇದನ್ನೂ ಓದಿ: HD Reavanna: ಹಾಸನದಲ್ಲಿ ಸ್ಪರ್ಧೆ ಮಾಡ್ತಾರಾ ಎಚ್‌ಡಿ ರೇವಣ್ಣ? ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ
ಯಡಿಯೂರಪ್ಪ ಬಿಜೆಪಿಗೆ ಕರೆದ್ರು
ಈ ಹಿಂದೆ ಬಿಎಸ್ ಯಡಿಯೂರಪ್ಪನವರು ನನ್ನನ್ನು ಬನ್ನಿ ಅಂತ ಕರೆದರು, ಆದರೆ ನಾನು ಬೇಡ ಸಾರ್, ನಾನು ಅಧಿಕಾರಕ್ಕೋಸ್ಕರ ರಾಜಕೀಯಕ್ಕಾಗಿ ಬಂದವನಲ್ಲ ಎಂದು ಹೇಳಿದ್ದೆ. ಈಗ ಮೂರು ವರ್ಷಗಳ ಹಿಂದೆ ಮತ್ತೆ ಕರೆದರು. ಸರ್ಕಾರಿ ಜಮೀನಿನ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿ ಕ್ಯಾಬಿನೆಟ್ ರಾಂಕಿಂಗ್ ಕೊಡ್ತೀವಿ ಅಂದ್ರು. ವಿರೋಧ ಪಕ್ಷದ ಶಾಸಕರನ್ನು ಹೇಗೆ ಮಾಡುತ್ತೀರಿ ಅಂತ ನಾನು ಪ್ರಶ್ನೆ ಕೇಳಿದೆ. ಇದೊಂದು ಇತಿಹಾಸ ಸೃಷ್ಟಿಯಾಗಲಿ ನಿಮ್ಮಂತವರು ಹುಡುಕಿದ್ರೂ ಸಿಗೋದಿಲ್ಲ ಒಪ್ಕೊಳ್ಳಿ ಎಂದು ಹೇಳಿದ್ದರು. ಆದರೆ ನಾನು ನಿಮಗೆಲ್ಲ ತುಂಬಿಕೊಟ್ಟಿರುವ ಗೌರವದಿಂದ ಹೋಗಿಲ್ಲ ಎಂದು ಎ.ಟಿ ರಾಮಸ್ವಾಮಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ನಾನು ಜನರ ಅಭಿಪ್ರಾಯದಂತೆ ಆವತ್ತು ಜೆಡಿಎಸ್‌ಗೆ ಹೋದೆನೇ ಹೊರತು ಅವತ್ತು ಕೂಡ ನನ್ನ ಅಭಿಪ್ರಾಯದಂತೆ ಹೋಗಲಿಲ್ಲ ಎಂದು ರಾಮಸ್ವಾಮಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ