ಉಪಸಮರದಲ್ಲಿ ಜೆಡಿಎಸ್ ಟಾರ್ಗೆಟ್-10; ಬಿಜೆಪಿ ಸೋಲಿಗೆ ಹೆಚ್​ಡಿಕೆ ಚಾಣಕ್ಯ ತಂತ್ರ

ಕುಮಾರಸ್ವಾಮಿ ಅವರ ಗುರಿ ಇರುವ 10 ಬಿಜೆಪಿ ಅಭ್ಯರ್ಥಿಗಳು: ನಾರಾಯಣಗೌಡ, ಹೆಚ್. ವಿಶ್ವನಾಥ್, ಕೆ. ಗೋಪಾಲಯ್ಯ, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್, ಎಂಟಿಬಿ ನಾಗರಾಜ್, ಡಾ| ಕೆ. ಸುಧಾಕರ್, ಬಿ.ಸಿ. ಪಾಟೀಲ್, ಮಹೇಶ್ ಕುಮಟಳ್ಳಿ ಮತ್ತು ರಮೇಶ್ ಜಾರಕಿಹೊಳಿ.

news18
Updated:November 19, 2019, 4:39 PM IST
ಉಪಸಮರದಲ್ಲಿ ಜೆಡಿಎಸ್ ಟಾರ್ಗೆಟ್-10; ಬಿಜೆಪಿ ಸೋಲಿಗೆ ಹೆಚ್​ಡಿಕೆ ಚಾಣಕ್ಯ ತಂತ್ರ
ಹೆಚ್​.ಡಿ. ಕುಮಾರಸ್ವಾಮಿ
  • News18
  • Last Updated: November 19, 2019, 4:39 PM IST
  • Share this:
ಬೆಂಗಳೂರು(ನ. 19): ಅನರ್ಹ ಶಾಸಕರಿಂದಾಗಿ ಅಧಿಕಾರ ಕಳೆದುಕೊಂಡ ಹೆಚ್.ಡಿ. ಕುಮಾರಸ್ವಾಮಿ ಅವರು ಉಪಸಮರವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ತಮ್ಮ ಪತನಕ್ಕೆ ಕಾರಣವಾದ ಈ ಶಾಸಕರನ್ನು ಶತಾಯಗತಾಯ ಸೋಲಿಸಿ ಪಾಠ ಕಲಿಸಲು ಅವರು ಪಣತೊಟ್ಟಿದ್ಧಾರೆ. ತಮಗೆ ಕೈಕೊಟ್ಟ 15 ಶಾಸಕರ ಪೈಕಿ 10 ಮಂದಿಯನ್ನು ಗುರಿಯಾಗಿಸಿ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಅದರಂತೆ, ತಮಗೆ ಗೆಲುವು ದಕ್ಕದಿದ್ದರೂ ಸರಿ, ಬಿಜೆಪಿಗೆ ಸೋಲುಣಿಸುವುದು ಅವರ ತಂತ್ರಗಾರಿಕೆ. ಒಂದೊಂದು ಕ್ಷೇತ್ರಕ್ಕೂ ಅವರು ವಿಭಿನ್ನ ಕಾರ್ಯಯೋಜನೆ ರೂಪಿಸಿದ್ದಾರೆ. ಅಭ್ಯರ್ಥಿ ಆಯ್ಕೆಯಲ್ಲೇ ಕುಮಾರಸ್ವಾಮಿ ರಣತಂತ್ರದ ಒಂದು ಭಾಗ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಕುಮಾರಸ್ವಾಮಿ ಅವರ ಗುರಿ ಇರುವ 10 ಬಿಜೆಪಿ ಅಭ್ಯರ್ಥಿಗಳು: ನಾರಾಯಣಗೌಡ, ಹೆಚ್. ವಿಶ್ವನಾಥ್, ಕೆ. ಗೋಪಾಲಯ್ಯ, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್, ಎಂಟಿಬಿ ನಾಗರಾಜ್, ಡಾ| ಕೆ. ಸುಧಾಕರ್, ಬಿ.ಸಿ. ಪಾಟೀಲ್, ಮಹೇಶ್ ಕುಮಟಳ್ಳಿ ಮತ್ತು ರಮೇಶ್ ಜಾರಕಿಹೊಳಿ.

ಟಾರ್ಗೆಟ್ 1: ನಾರಾಯಣ ಗೌಡ, ಕೆಆರ್ ಪೇಟೆ

ಕೆಆರ್ ಪೇಟೆಯ ಅನರ್ಹ ಶಾಸಕ ನಾರಾಯಣ ಗೌಡ ಅವರು ತಮ್ಮ ಬೆನ್ನಿಗೆ ಚೂರಿ ಹಾಕಿದರೆಂಬ ಸಿಟ್ಟು ಗೌಡರ ಕುಟುಂಬಕ್ಕಿದೆ. ಸ್ಥಳೀಯ ಕಾರ್ಯಕರ್ತರು ಮತ್ತು ನಾಯಕರ ವಿರೋಧದ ಮಧ್ಯೆಯೂ ಕುಮಾರಸ್ವಾಮಿ ಅವರು ಎರಡು ಬಾರಿ ನಾರಾಯಣಗೌಡರಿಗೆ ಕೆಆರ್ ಪೇಟೆಯಲ್ಲಿ ಜೆಡಿಎಸ್ ಟಿಕೆಟ್ ನೀಡಿದ್ದರು. ದೇವೇಗೌಡರ ಕುಟುಂಬದ ಬಗ್ಗೆ, ಅದರಲ್ಲೂ ಹೆಣ್ಮಕ್ಕಳ ಬಗ್ಗೆ ನಾರಾಯಣಗೌಡರು ಟೀಕೆಗಳನ್ನು ಮಾಡಿದ್ದರು. ಇವರನ್ನು ಹಣಿಯಲು ಬಿಎಲ್ ದೇವರಾಜು ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ.

ಇದನ್ನೂ ಓದಿ: ರೋಷನ್ ಬೇಗ್-ಬಿಎಸ್​ವೈ ಭೇಟಿ; ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿಗೆ ಅನರ್ಹ ಶಾಸಕನ ಬೆಂಬಲ?

ಟಾರ್ಗೆಟ್ 2: ಹೆಚ್. ವಿಶ್ವನಾಥ್, ಹುಣಸೂರು

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯರಿಂದ ಟಾರ್ಗೆಟ್ ಆಗಿ ರಾಜಕೀಯವಾಗಿ ಮೂಲೆಗುಂಪಾಗಿದ್ದ ಹೆಚ್. ವಿಶ್ವನಾಥ್ ಅವರಿಗೆ ಜೆಡಿಎಸ್ ಮೂಲಕ ರಾಜಕೀಯ ಪುನರ್ಜನ್ಮ ನೀಡಿದ್ದು ದೇವೇಗೌಡರ ಕುಟುಂಬ. ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದುಕೊಂಡೇ ಮೈತ್ರಿ ಸರ್ಕಾರಕ್ಕೆ ಕೈಕೊಟ್ಟರು. ಅಷ್ಟೇ ಅಲ್ಲ, ಕುಮಾರಸ್ವಾಮಿ ವಿರುದ್ಧ ನಿರಂತರ ಆರೋಪಗಳನ್ನೇ ಮಾಡುತ್ತಾ ಬಂದಿದ್ದಾರೆ. ಇದು ಹೆಚ್​ಡಿಕೆ ಕೆಂಗಣ್ಣಿಗೆ ಕಾರಣವಾಗಿದೆ. ಹೀಗಾಗಿ, ಹುಣಸೂರು ಉಪಚುನಾವಣೆಯಲ್ಲಿ ವಿಶ್ವನಾಥ್​ಗೆ ಮಣ್ಣುಮುಕ್ಕಿಸಲು ಕುಮಾರಸ್ವಾಮಿ ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.ಟಾರ್ಗೆಟ್ 3: ಕೆ. ಗೋಪಾಲಯ್ಯ, ಮಹಾಲಕ್ಷ್ಮೀ ಲೇಔಟ್

ಕೆಆರ್ ಪೇಟೆಯಲ್ಲಿ ನಾರಾಯಣಗೌಡರಂತೆ ಮಹಾಲಕ್ಷ್ಮೀ ಲೇಔಟ್​ನಲ್ಲಿ ಸ್ಥಳೀಯ ಜೆಡಿಎಸ್ ನಾಯಕರ ವಿರೋಧದ ಮಧ್ಯೆಯೂ ಕುಮಾರಸ್ವಾಮಿ ಅವರು ಗೋಪಾಲಯ್ಯಗೆ ಟಿಕೆಟ್ ನೀಡಿ ಗೆಲ್ಲಿಸಿದ್ದರು. ಅವರ ಪತ್ನಿಯನ್ನು ಉಪಮೇಯರ್ ಆಗಿ ಮಾಡಲಾಗಿತ್ತು. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದರೂ ಅವರನ್ನು ಕ್ಷಮಿಸಿ ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳಲಾಗಿತ್ತು. ಅವರು ಒಕ್ಕಲಿಗರಾಗಿದ್ದರೂ ಕೈಕೊಟ್ಟು ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದನ್ನು ಮಾತ್ರ ಕುಮಾರಸ್ವಾಮಿ ಕ್ಷಮಿಸಲು ತಯಾರಿಲ್ಲ. ಮಹಾಲಕ್ಷ್ಮೀ ಲೇಔಟ್​ನಲ್ಲಿ ಪ್ರಬಲರಲ್ಲದ ಗಿರೀಶ್ ನಾಶಿ ಎಂಬುವರಿಗೆ ಟಿಕೆಟ್ ನೀಡಿರುವುದರ ಹಿಂದೆ ಕುಮಾರಸ್ವಾಮಿ ಬೇರೆಯೇ ತಂತ್ರಗಾರಿಕೆ ಇದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ಅವರಿಗೆ ನೆರವಾಗಲೆಂದೇ ಜೆಡಿಎಸ್ ಪ್ರಭಾವಿಯಲ್ಲದ, ಒಕ್ಕಲಿಗರಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿದಂತಿದೆ. ಒಕ್ಕಲಿಗರ ಮತಗಳು ಹಂಚಿಹೋಗಬಾರದು ಎಂಬುದು ಅದರ ಉದ್ದೇಶವಿದ್ದಂತಿದೆ.

ಟಾರ್ಗೆಟ್ 4: ಎಸ್.ಟಿ. ಸೋಮಶೇಖರ್, ಯಶವಂತಪುರ

ಮಾಜಿ ಕಾಂಗ್ರೆಸ್ ನಾಯಕ ಎಸ್.ಟಿ. ಸೋಮಶೇಖರ್ ಒಕ್ಕಲಿಗ ಸಮುದಾಯದರಾಗಿಯೂ ತಮ್ಮ ಸರ್ಕಾರ ಬೀಳಿಸಿದರೆಂಬ ಸಿಟ್ಟು ಕುಮಾರಸ್ವಾಮಿಗೆ ಇದೆ. ಹಾಗೆಯೇ ಕುಮಾರಸ್ವಾಮಿ ವಿರುದ್ಧ ವೈಯಕ್ತಿಕ ಮಟ್ಟದಲ್ಲಿ ಟೀಕೆಗಳನ್ನು ಮಾಡಿದರೆಂಬ ಕೋಪವೂ ಇದೆ. ಇಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಸಹಾಯವಾಗುವಂತೆ ಜೆಡಿಎಸ್ ಅಭ್ಯರ್ಥಿ ಹಾಕಿದೆ. ಎಸ್.ಟಿ. ಸೋಮಶೇಖರ್ ಒಕ್ಕಲಿಗರಾಗಿರುವುದರಿಂದ ಈ ಸಮುದಾಯದ ಮತಗಳು ವಿಭಜನೆಯಾಗುವಂತೆ ಟಿ.ಎನ್. ಜವರಾಯಿಗೌಡರನ್ನು ಕಣಕ್ಕಿಳಿಸಿದೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಪಿ. ನಾಗರಾಜ್ ಗೆಲುವಿಗೆ ಸಹಕಾರಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸಿದ್ಧರಾಮಯ್ಯ ಸಿಎಂ ಆದಾಗ ಎಷ್ಟು ದುರ್ಘಟನೆ ಆಗಿವೆ ಅಂತ ಆತ್ಮಾವಲೋಕನ ಮಾಡಿಕೊಳ್ಳಲಿ ; ಎಂ.ಪಿ.ರೇಣುಕಾಚಾರ್ಯ

ಟಾರ್ಗೆಟ್ 5: ಭೈರತಿ ಬಸವರಾಜು, ಕೆಆರ್ ಪುರಂ

ಎಸ್.ಟಿ. ಸೋಮಶೇಖರ್ ಮತ್ತು ಮುನಿರತ್ನ ಮಾತುಗಳನ್ನು ನಂಬಿಕೊಂಡು ಮೈತ್ರಿ ಸರ್ಕಾರಕ್ಕೆ ಕೈಕೊಟ್ಟ ಭೈರತಿ ಬಸವರಾಜ್ ಕೂಡ ದೇವೇಗೌಡರ ಕುಟುಂಬದ ಬಗ್ಗೆ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಹೀಗಾಗಿ, ಕೆಆರ್ ಪುರಂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಗೆಲುವಿಗೆ ಸಹಕಾರಿಯಾಗಲೆಂದು ಜೆಡಿಎಸ್ ಪಕ್ಷ ಕೃಷ್ಣ ಮೂರ್ತಿ ಎಂಬ ದುರ್ಬಲ ಅಭ್ಯರ್ಥಿಯನ್ನು ಹಾಕಿದೆ.

ಟಾರ್ಗೆಟ್ 6: ಎಂಟಿಬಿ ನಾಗರಾಜ್, ಹೊಸಕೋಟೆ

ಹೊಸಕೋಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕದೇ ಇರುವುದರ ಹಿಂದೆ ಎಂಟಿಬಿ ನಾಗರಾಜ್ ವಿರುದ್ಧ ಸೇಡಿನ ವಾಸನೆ ಇದೆ. ಶರತ್ ಬಚ್ಚೇಗೌಡ ಅವರು ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಹಾಕಿದರೆ ಒಕ್ಕಲಿಗ ಮತಗಳು ಹಂಚಿಕೆಯಾಗಿ ಶರತ್ ಬಚ್ಚೇಗೌಡ ಗೆಲುವಿಗೆ ಕಷ್ಟವಾಗಬಹುದು. ಅದಕ್ಕೆ ಅಭ್ಯರ್ಥಿ ಹಾಕದಿದ್ದರೆ ಎಂಟಿಬಿ ಸೋಲು ಸುಲಭವಾಗುತ್ತದೆ ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ.

ಟಾರ್ಗೆಟ್ 7: ಡಾ. ಸುಧಾಕರ್, ಚಿಕ್ಕಬಳ್ಳಾಪುರ

ಮೈತ್ರಿ ಸರ್ಕಾರದ ಪತನದಲ್ಲಿ ಸುಧಾಕರ್ ಪಾತ್ರ ಬಹಳ ಪ್ರಮುಖವಾದುದು. ಇವರನ್ನು ಚುನಾವಣಾ ಕಣದಲ್ಲಿ ಸೋಲಿಸಲೇಬೇಕೆಂದು ಕುಮಾರಸ್ವಾಮಿ ಪಣತೊಟ್ಟಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಆಂಜಿನಪ್ಪಗೆ ನೆರವಾಗಲೆಂದೇ ಇಲ್ಲಿಯೂ ಜೆಡಿಎಸ್ ರಾಧಾಕೃಷ್ಣ ಎಂಬ ಪ್ರಭಾವಿಯಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇಲ್ಲಿ ಡಿಕೆಶಿ ಮತ್ತು ಕುಮಾರಸ್ವಾಮಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಉಪಚುನಾವಣೆ ಅಖಾಡಕ್ಕಿಳಿದ ಡಿಕೆಶಿ: ಸುಧಾಕರ್​​​ ಮತ್ತು ಎಂಟಿಬಿ ಸೋಲಿಸಲು ಟ್ರಬಲ್​​ ಶೂಟರ್​​ ರಣತಂತ್ರ

ಟಾರ್ಗೆಟ್ 8: ಬಿ.ಸಿ. ಪಾಟೀಲ್, ಹಿರೇಕೆರೂರು

ಕುಮಾರಸ್ವಾಮಿ ಒಬ್ಬ ಅಸಮರ್ಥ ಸಿಎಂ ಎಂದು ಬಿ.ಸಿ. ಪಾಟೀಲ್ ಜರಿದಿದ್ದರು. ಲಿಂಗಾಯತ ಸಮುದಾಯದ ಇವರನ್ನು ಹಣಿಯಲು ಹಿರೇಕೆರೂರು ಕ್ಷೇತ್ರದಲ್ಲಿ ಜೆಡಿಎಸ್ ಒಬ್ಬ ಲಿಂಗಾಯ ಸ್ವಾಮೀಜಿಯನ್ನೇ ಕಣಕ್ಕಿಳಿಸಿದೆ. ಇಲ್ಲಿ ಲಿಂಗಾಯತ ಮತ ವಿಭಜನೆ ಮಾಡಿ ಕಾಂಗ್ರೆಸ್ ಗೆಲುವಿಗೆ ಸಹಕರಿಸುವುದು ಜೆಡಿಎಸ್ ತಂತ್ರ.

ಟಾರ್ಗೆಟ್ 9: ಮಹೇಶ್ ಕುಮಟಳ್ಳಿ, ಅಥಣಿ

ರಮೇಶ್ ಜಾರಕಿಹೊಳಿ ಅವರ ಶಿಷ್ಯನೆಂದು ಗುರುತಿಸಲಾಗಿರುವ ಮಹೇಶ್ ಕುಮಟಳ್ಳಿ ಅವರನ್ನು ಸೋಲಿಸಲು ಜೆಡಿಎಸ್ ಪಕ್ಷವು ಬಿಜೆಪಿಯ ಲಕ್ಷ್ಮಣ ಸವದಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಡಿಸಿಎಂ ಲಕ್ಷ್ಮಣ ಸವದಿ ಅವರ ಶಿಷ್ಯನನ್ನೇ ಜೆಡಿಎಸ್ ಕಣಕ್ಕಿಳಿಸಿದೆ. ಇಲ್ಲಿ ಬಿಜೆಪಿಯ ಮತಗಳನ್ನು ವಿಭಜನೆ ಮಾಡಿ ಕುಮಟಳ್ಳಿಗೆ ಸೋಲುಣಿಸುವುದು ಜೆಡಿಎಸ್​ನ ಉದ್ದೇಶವಾಗಿದೆ.

ಟಾರ್ಗೆಟ್ 10: ರಮೇಶ್ ಜಾರಕಿಹೊಳಿ, ಗೋಕಾಕ್

ಆಪರೇಷನ್ ಕಮಲದ ಮಾಸ್ಟರ್ ಮೈಂಡ್ ಇವರು. ಅಂದರೆ, ರಾಜೀನಾಮೆ ನೀಡಿದ್ದ ಬಹುತೇಕ ಶಾಸಕರು ಇವರ ನೇತೃತ್ವದಲ್ಲೇ ಸಾಗಿದ್ದು. ಇಲ್ಲಿ ಜೆಡಿಎಸ್ ಪಕ್ಷವು ಪ್ರಬಲ ಅಭ್ಯರ್ಥಿಯಾದ ಅಶೋಕ್ ಪೂಜಾರಿಯನ್ನು ಕಣಕ್ಕಿಳಿಸಿದೆ. ಬಿಜೆಪಿಗೆ ಹೋಗುವ ಲಿಂಗಾಯತ ಮತಗಳನ್ನು ಆದಷ್ಟೂ ವಿಭಜನೆ ಮಾಡುವ ಸಲುವಾಗಿ ಅಶೋಕ್ ಪೂಜಾರಿಯನ್ನು ಕಣಕ್ಕಿಳಿಸಲಾಗಿದೆ. ಇಲ್ಲಿಯೂ ಲಖನ್ ಜಾರಕಿಹೊಳಿ ಗೆಲುವಿಗೆ ದಾರಿ ಸುಗಮ ಮಾಡಿಕೊಡುವುದು ಜೆಡಿಎಸ್ ಉದ್ದೇಶವಿದ್ದಂತಿದೆ.

(ವರದಿ: ಚಿದಾನಂದ ಪಟೇಲ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 19, 2019, 4:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading