ಮೈಸೂರು (ಡಿ. 1): ಕಳೆದ ವರ್ಷ ಹೆಚ್. ವಿಶ್ವನಾಥ್ ಮತ್ತು ಸಾ.ರಾ. ಮಹೇಶ್ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಣೆ- ಪ್ರಮಾಣ ಮಾಡುವ ಕುರಿತು ದೊಡ್ಡ ಹೈಡ್ರಾಮಾ ನಡೆದಿತ್ತು. ಹೆಚ್. ವಿಶ್ವನಾಥ್ ದುಡ್ಡು ಪಡೆದು, ಬಿಜೆಪಿಗೆ ಸೇರಿಲ್ಲ ಎಂದಾದರೆ ಚಾಮುಂಡಿ ದೇವಿಯ ಎದುರು ಪ್ರಮಾಣ ಮಾಡಲಿ ಎಂದು ಸಾರಾ ಮಹೇಶ್ ಸವಾಲು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಆಣೆ ಮಾಡಲು ಚಾಮುಂಡಿ ಬೆಟ್ಟಕ್ಕೆ ಬಂದಿದ್ದ ಹೆಚ್. ವಿಶ್ವನಾಥ್ ಹಾಗೂ ಸಾ.ರಾ. ಮಹೇಶ್ ಕೊನೆಗೂ ಪ್ರಮಾಣ ಮಾಡದೆ ವಾಪಾಸ್ ತೆರಳಿದ್ದರು. ಇಂದು ಆಣೆ ಪ್ರಮಾಣದ ಹರಕೆ ತೀರಿಸಿಲು ಚಾಮುಂಡಿ ಬೆಟ್ಟಕ್ಕೆ ಬಂದ ಶಾಸಕ ಸಾ.ರಾ. ಮಹೇಶ್ ತಪ್ಪು ಕಾಣಿಕೆ ಸಲ್ಲಿಸಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದಾರೆ.
ಹೆಚ್. ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ನಿನ್ನೆ ಕೋರ್ಟ್ ಮಧ್ಯಂತರ ತೀರ್ಪು ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಇಂದು ಚಾಮುಂಡಿಬೆಟ್ಟಕ್ಕೆ ಬಂದು ಪೂಜೆ ಮಾಡಿಸಿದ ಸಚಿವ ಸಾ.ರಾ. ಮಹೇಶ್, ಇದು ನನ್ನ ಮತ್ತು ಕಾರ್ಯಕರ್ತರು ಬಿಟ್ಟ ನಿಟ್ಟುಸಿರಿಗೆ ವಿಶ್ವನಾಥ್ಗೆ ದೇವರೇ ಕೊಟ್ಟ ಶಿಕ್ಷೆ. ಕಾರ್ಯಕರ್ತರಿಗೆ ಮೋಸ ಮಾಡಿದರೆ ದೇವರು ಕೂಡ ಕ್ಷಮಿಸೋದಿಲ್ಲ ಎಂಬುದಕ್ಕೆ ಇದು ಉದಾಹರಣೆ. ಆಣೆ ಪ್ರಮಾಣ ನಡೆದು ಸರಿಯಾಗಿ ಒಂದೇ ವರ್ಷಕ್ಕೆ ಸತ್ಯ ಯಾವುದು ಎಂಬುದು ತೀರ್ಮಾನವಾಗಿದೆ. ಚಾಮುಂಡಿ ತಾಯಿ ನ್ಯಾಯ ದೇವತೆ ಮೂಲಕ ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟಿದ್ದಾಳೆ. ವಿಶ್ವನಾಥ್ ಅವರನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತಿದೆ ಎಂದು ಹೆಚ್. ವಿಶ್ವನಾಥ್ ವಿರುದ್ಧ ಸಾ.ರಾ. ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ನಾನು ದೇವಾಲಯದಲ್ಲಿ ಕಣ್ಣೀರಿಟ್ಟು ತಪ್ಪು ಯಾರದ್ದು, ಸರಿ ಯಾರದ್ದು ಎಂದು ನೀನೇ ತೋರಿಸು ತಾಯಿ ಎಂದು ಬೇಡಿಕೊಂಡಿದ್ದೆ. ಆ ಪ್ರಸಂಗ ನಡೆದ ಸರಿಯಾಗಿ ಒಂದು ವರ್ಷಕ್ಕೆ ನ್ಯಾಯ ದೇವತೆ ತೀರ್ಪು ಕೊಟ್ಟಿದ್ದಾಳೆ. ತಪ್ಪು ಮಾಡಿದ್ದರೂ ಭಂಡತನದಿಂದ ಶಕ್ತಿ ದೇವತೆ ಮುಂದೆ ಕೂತರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ. ಇದು ನಮ್ಮಂತ ರಾಜಕಾರಣಿಗಳಿಗೆ ಪಾಠ. ಬೇರೆ ಪಕ್ಷಗಳಿಂದ ವಲಸೆ ಹೋದ 16 ಜನರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಹೆಚ್. ವಿಶ್ವನಾಥ್ ಒಬ್ಬರಿಗೆ ಶಿಕ್ಷೆ ಆಗುತ್ತದೆ ಎಂದರೆ ಇದು ದೇವರೇ ಕೊಟ್ಟ ಶಿಕ್ಷೆ ಎಂದು ಅರ್ಥ ಎಂದು ಸಾ.ರಾ. ಮಹೇಶ್ ಹೇಳಿದ್ದಾರೆ.
ಇದನ್ನೂ ಓದಿ: IMA Scam: ಐಎಂಎ ಹಗರಣ; ಇಂದು ಮಾಜಿ ಸಚಿವ ರೋಷನ್ ಬೇಗ್ ಜಾಮೀನು ಅರ್ಜಿ ವಿಚಾರಣೆ
ನಾವು ರಾಮಾಯಣವನ್ನ ನಿದರ್ಶನವಾಗಿ ತೆಗೆದುಕೊಂಡವರು. ಅವರು ಮಹಾಭಾರತವನ್ನು ನಿದರ್ಶನವಾಗಿ ತೆಗೆದುಕೊಂಡವರು. ಅದಕ್ಕೆ ಈ ರೀತಿಯ ಶಿಕ್ಷೆ ಆಗಿದೆ. ಹೆಚ್. ವಿಶ್ವನಾಥ್ಗೆ ಸಚಿವ ಸ್ಥಾನ ನೀಡದಂತೆ ಕೋರ್ಟ್ ತೀರ್ಪು ನೀಡಿದೆ. ನಾನು ಈ ಬಗ್ಗೆ ಮೊದಲೇ ಹೇಳಿದ್ದೆ. ಆದರೆ, ನಾನು ರಾಜಕೀಯ ದ್ವೇಷದಿಂದ ಹೀಗೆಲ್ಲ ಹೇಳುತ್ತಿದ್ದೇನೆ ಎಂದಿದ್ದರು. ಈಗ ಹೈಕೋರ್ಟೇ ತೀರ್ಪು ನೀಡಿ, ಅವರು ಸಚಿವರಾಗಲು ಅನರ್ಹ ಎಂದು ಹೇಳಿದೆ. ನಾನು ಚಾಮುಂಡಿ ದೇವಿಯಲ್ಲಿ ನಂಬಿಕೆಯಿಟ್ಟಿದ್ದೆ. ನಿನ್ನ ಕ್ಷೇತ್ರವನ್ನು ಸಾಕ್ಷಿಯಾಗಿಟ್ಟುಕೊಂಡು ಆಣೆ ಪ್ರಮಾಣ ಮಾಡಲು ಹೇಳಿದ್ದಕ್ಕೆ ಕ್ಷಮಿಸು ಎಂದು ಚಾಮುಂಡಿಯಲ್ಲಿ ಕೇಳಿದ್ದೆ. ಅದಕ್ಕಾಗಿ 1001 ರೂ. ತಪ್ಪು ಕಾಣಿಕೆ ನೀಡಿ ಬಂದಿದ್ದೇನೆ. ಸತ್ಯ ತಡವಾಗಿ ಬೆಳಕಿಗೆ ಬಂದರೂ ಜಯ ಸಿಕ್ಕೇ ಸಿಗುತ್ತದೆ ಎಂದು ಸಾ.ರಾ. ಮಹೇಶ್ ಹೇಳಿದ್ದಾರೆ.
(ವರದಿ: ಕೆ. ಪುಟ್ಟಪ್ಪ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ