• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕುಮಾರಸ್ವಾಮಿ ಹೋಟೆಲ್​ನಲ್ಲಿ ಉಳಿಯಲು ಸಿದ್ದರಾಮಯ್ಯನೇ ಕಾರಣ; ಸಾ.ರಾ. ಮಹೇಶ್ ಆರೋಪ

ಕುಮಾರಸ್ವಾಮಿ ಹೋಟೆಲ್​ನಲ್ಲಿ ಉಳಿಯಲು ಸಿದ್ದರಾಮಯ್ಯನೇ ಕಾರಣ; ಸಾ.ರಾ. ಮಹೇಶ್ ಆರೋಪ

ಮಾಜಿ ಸಚಿವ ಸಾ.ರಾ. ಮಹೇಶ್​

ಮಾಜಿ ಸಚಿವ ಸಾ.ರಾ. ಮಹೇಶ್​

ಕುಮಾರಸ್ವಾಮಿ ವಿಧಾನಸೌಧಕ್ಕೆ ಬರುತ್ತಿರಲಿಲ್ಲವಾ? ವಿಶ್ರಾಂತಿ ಪಡೆಯಲು ಹೋಟೆಲ್‌ಗೆ ಹೋಗಿದ್ದು ತಪ್ಪಾ? ನೀವು ಯಾರೂ ಹೋಟೆಲ್‌ನಲ್ಲಿ ವಾಸ ಮಾಡಿಲ್ವಾ? ಎಂದು ಸಿದ್ದರಾಮಯ್ಯನವರನ್ನು ಸಾ.ರಾ. ಮಹೇಶ್ ಪ್ರಶ್ನಿಸಿದ್ದಾರೆ.

  • Share this:

ಮೈಸೂರು (ಡಿ. 19): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೋಟೆಲ್‌ನಲ್ಲಿ ಉಳಿದುಕೊಂಡು, ಅಧಿಕಾರ ಕಳೆದುಕೊಂಡರು ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಸಾ.ರಾ. ಮಹೇಶ್, ಹೆಚ್‌ಡಿ ಕುಮಾರಸ್ವಾಮಿ ಹೋಟೆಲ್‌ನಲ್ಲಿ ಉಳಿಯಲು ಮಾಜಿ ಸಿಎಂ ಸಿದ್ದರಾಮಯ್ಯನವರೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಸಾ.ರಾ. ಮಹೇಶ್, ನೀವು ಅಧಿಕೃತ ಸಿಎಂ ನಿವಾಸವನ್ನು ಖಾಲಿ ಮಾಡದ ಕಾರಣ ಕುಮಾರಸ್ವಾಮಿ ಹೋಟೆಲ್‌ಗೆ ಹೋಗಬೇಕಾಯಿತು. ಅವರ ಜೆ.ಪಿ. ನಗರದ ಮನೆ ದೂರ ಇತ್ತು. ಅದಕ್ಕಾಗಿ ಹೋಟೆಲ್‌ಗೆ ಹೋದರು. ಕುಮಾರಸ್ವಾಮಿ ವಿಧಾನಸೌಧಕ್ಕೆ ಬರುತ್ತಿರಲಿಲ್ಲವಾ? ವಿಶ್ರಾಂತಿ ಪಡೆಯಲು ಹೋಟೆಲ್‌ಗೆ ಹೋಗಿದ್ದು ತಪ್ಪಾ? ನೀವು ಯಾರೂ ಹೋಟೆಲ್‌ನಲ್ಲಿ ವಾಸ ಮಾಡಿಲ್ವಾ? ಎಂದು ಪ್ರಶ್ನಿಸಿದ್ದಾರೆ.


ಸಿದ್ದರಾಮಯ್ಯನವರೇ ಮಾತನಾಡುವಾಗ ಭಾಷೆಯ ಮೇಲೆ ಹಿಡಿತ ಇರಬೇಕು. ಏಕ ವಚನದಲ್ಲಿ ನೀವು ಮಾತನಾಡಿದರೆ ಬೇರೆಯವರು ಅದೇ ಮಾಡುತ್ತಾರೆ. ಸಿದ್ದರಾಮಯ್ಯ ಕುಮಾರಸ್ವಾಮಿ ಅವರನ್ನು ಮನಸ್ಪೂರ್ತಿಯಾಗಿ ಸಿಎಂ ಮಾಡಿರಲಿಲ್ಲ. ಇದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ರೇವಣ್ಣ ಮತ್ತು ಸಿದ್ದರಾಮಯ್ಯ ಮೊದಲಿನಿಂದಲೂ ಚೆನ್ನಾಗಿದ್ದಾರೆ. ಕುಮಾರಸ್ವಾಮಿ ಸಿದ್ದರಾಮಯ್ಯ ರಾಜಕೀಯವಾಗಿ ಭಿನ್ನಾಭಿಪ್ರಾಯ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯನವರಿಗೆ ದೇವೇಗೌಡರ ಕುಟುಂಬದ ಮೇಲೆ ಎಂಥ ಅಭಿಪ್ರಾಯ ಇದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಕುಮಾರಸ್ವಾಮಿ ಸಿಎಂ ಆಗಿದ್ದರೂ ಸಿದ್ದು ಹಿಂಬಾಲಕರು ಮಾತ್ರ ಸಿದ್ದರಾಮಯ್ಯನವರೇ ಸಿಎಂ ಎಂದು ಹೇಳಿದರು. ಅಂತಹ ಶಾಸಕರ ನಡುವೆ ಕುಮಾರಸ್ವಾಮಿ ಒಳ್ಳೆ‌ ಕೆಲಸ ಹೇಗೆ ಮಾಡುತ್ತಾರೆ? ಎಂದು ಮೈಸೂರಿನಲ್ಲಿ ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.


ಇದನ್ನೂ ಓದಿ: ಪ್ರಾದೇಶಿಕ ಪಕ್ಷ ಕಟ್ಟಿ 10 ಸ್ಥಾನ ಗೆದ್ದು ತೋರಿಸಿ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವಾಲು


ಚಾಮುಂಡೇಶ್ವರಿ ಕ್ಷೇತ್ರದ ಸೋಲಿಗೆ ಬಿಜೆಪಿ ಜೆಡಿಎಸ್ ಸಂಚು ಕಾರಣವಾಯಿತು ಎಂಬ ಸಿದ್ದರಾಮಯ್ಯನವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಾ.ರಾ. ಮಹೇಶ್, ರಾಜಕೀಯವೇ ಒಂದು ಸಂಚು. ಆ ಸಂಚನ್ನು ಒಬ್ಬರೇ ಮಾಡುವುದಿಲ್ಲ. ಮಂಡ್ಯದಲ್ಲಿ ನಿಖಿಲ್ ವಿರುದ್ದ ಸಂಚು ಆಗಲಿಲ್ಲವೇ? ಪ್ರಧಾನಿಯಾಗಿದ್ದ ದೇವೇಗೌಡರನ್ನು ತುಮಕೂರಿನಲ್ಲಿ ಸಂಚು ಮಾಡಿ ಸೋಲಿಸಲಿಲ್ಲವೇ? ಸಂವಿಧಾನ ರಚಿಸಿದ ಅಂಬೇಡ್ಕರ್‌ ಅವರನ್ನೇ ಸೋಲಿಸಲಿಲ್ಲವೇ? ರಾಜಕಾರಣದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಅಂತಹ ಮನಸ್ಥಿತಿ ಸಿದ್ದರಾಮಯ್ಯನವರಿಗೆ ಇದೆ. ಆದರೆ, ಅದನ್ನು ಅವರು ಅರ್ಥ ಮಾಡಿಕೊಂಡು ಸ್ವೀಕರಿಸಲಿ ಎಂದು ಮೈಸೂರಿನಲ್ಲಿ ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.


ಜನರು, ಅಧಿಕಾರಿಗಳು, ಶಾಸಕರಿಗೆ ಅತ್ಯಂತ ಸುಲಭವಾಗಿ ಸಿಗುವ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ. ಸಿದ್ದರಾಮಯ್ಯ ಏನಾದರೂ ಟೀಕೆ ಮಾಡಲಿ. ಆದರೆ, ರಾಜ್ಯದಲ್ಲಿ ಮುಖ್ಯಮಂತ್ರಿಯಾದವರ ಪೈಕಿ ಜನರಿಗೆ ಸುಲಭವಾಗಿ ಸಿಗುವ ಸಿಎಂ ಅನಿಸಿಕೊಂಡವರು ಕುಮಾರಸ್ವಾಮಿ. ಕುಮಾರಸ್ವಾಮಿ ನಿಮಗಿಂತ ಮುಂಚೆ ಸಿಎಂ ಆದವರು. ಏನಾದರೂ ಟೀಕೆ ಮಾಡಿ, ಆದರೆ ಮಾತನಾಡುವಾಗ ಭಾಷೆಯ ಮೇಲೆ ಹಿಡಿತ ಇರಲಿ. ನೀವು ನಮ್ಮ ಪಕ್ಷದಿಂದ ಹಣಕಾಸು ಸಚಿವರಾಗಿ 7 ಬಜೆಟ್ ಮಂಡಿಸಿದ್ದೀರಿ. ನೀವು 5 ವರ್ಷ ಪೂರ್ಣಾವಧಿ ಸಿಎಂ ಆಗಿದ್ದ ಬಗ್ಗೆ ಗೌರವ ಇದೆ. ರಾಜ್ಯದಲ್ಲೇ ಅತಿ ಹೆಚ್ಚು ಸಾಲ ಮಾಡಿದ ಸಿಎಂ ಸಿದ್ದರಾಮಯ್ಯ ಎಂಬುದೂ ಗೊತ್ತಿದೆ. ಮೈಸೂರು ಭಾಗದವರು ಅಂತ ನಾವು ಅದೆಲ್ಲವನ್ನೂ ಮಾತನಾಡುವುದಿಲ್ಲ ಎಂದು ಸಾ.ರಾ. ಮಹೇಶ್ ತಿಳಿಸಿದ್ದಾರೆ.


ನೀವೊಬ್ಬ ಹಿರಿಯ ರಾಜಕಾರಣಿ. ನಮ್ಮಂಥವರಿಗೆ ಸಿದ್ದರಾಮಯ್ಯ ಮಾರ್ಗದರ್ಶನ ಮಾಡುವಂತೆ ಇರಬೇಕು. ಅದನ್ನು ಬಿಟ್ಟು ನೀವೇ ಏಕವಚನದಲ್ಲಿ ಮಾತನಾಡಿದರೆ ಹೇಗೆ? ಎಂದು ಸಾ.ರಾ. ಮಹೇಶ್ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯನವರ ವರ್ತನೆ ಹೀಗೆಯೇ ಮುಂದುವರಿದರೆ ಜನ ಸೂಕ್ತ ತೀರ್ಮಾನ ಮಾಡುತ್ತಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಎಚ್ಚರಿಕೆ ನೀಡಿದ್ದಾರೆ.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು