HOME » NEWS » State » JDS GETS COUNCIL CHAIRMAN POST AS BJP AND CONGRESS PUT UP CANDIDATES FOR DY CHAIRMAN POST KGV SNVS

ಜೆಡಿಎಸ್​​ಗೆ ಮೇಲ್ಮನೆ ಸಭಾಪತಿ ಸ್ಥಾನ; ಉಪಸಭಾಪತಿ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್ ಸ್ಪರ್ಧೆ

ಮೇಲ್ಮನೆ ಸಭಾಪತಿ ಸ್ಥಾನವನ್ನು ಜೆಡಿಎಸ್​ಗೆ ಬಿಜೆಪಿ ಬಿಟ್ಟುಕೊಟ್ಟಿದೆ. ಬಸವರಾಜ ಹೊರಟ್ಟಿ ಅವರು ಮುಂದಿನ ಪರಿಷತ್ ಸಭಾಪತಿ ಆಗಲಿದ್ದಾರೆ. ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ ಪ್ರಾಣೇಶ್ ಮತ್ತು ಕಾಂಗ್ರೆಸ್​ನ ಕೆ.ಸಿ. ಕೊಂಡಯ್ಯ ಸ್ಪರ್ಧಿಸುತ್ತಿದ್ದಾರೆ.

news18-kannada
Updated:January 28, 2021, 11:05 AM IST
ಜೆಡಿಎಸ್​​ಗೆ ಮೇಲ್ಮನೆ ಸಭಾಪತಿ ಸ್ಥಾನ; ಉಪಸಭಾಪತಿ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್ ಸ್ಪರ್ಧೆ
ದೇವೇಗೌಡ ಅವರ ಜೊತೆ ಬಸವರಾಜ ಹೊರಟ್ಟಿ
  • Share this:
ಬೆಂಗಳೂರು(ಜ. 28): ವಿಧಾನಪರಿಷತ್ ಸಭಾಪತಿ ಮತ್ತು ಉಪಸಭಾಪತಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಪ್ಪಂದ ಮಾಡಿಕೊಂಡಿವೆ. ತಾನು ಹೆಚ್ಚು ಸ್ಥಾನ ಹೊಂದಿದ್ದರೂ ಸಭಾಪತಿ ಸ್ಥಾನವನ್ನು ಜೆಡಿಎಸ್​ಗೆ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿದೆ. ಅದರಂತೆ ಜೆಡಿಎಸ್​ನ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿಯ ಪ್ರಾಣೇಶ್ ಅವರು ಉಪಸಭಾಪತಿ ಸ್ಥಾನಕ್ಕಾಗಿ ಸ್ಪರ್ಧಿಸಲಿದ್ದಾರೆ. ಇದೇ ವೇಳೆ, ಆರಂಭದಲ್ಲಿ ಸಭಾಪತಿ ಮತ್ತುಉಪಸಭಾಪತಿ ಸ್ಥಾನಕ್ಕೆ ಸ್ಪರ್ಧಿಸದಿರಲು ನಿರ್ಧರಿಸಿದ್ದ ಕಾಂಗ್ರೆಸ್ ಪಕ್ಷ ಇದೀಗ ಅಭ್ಯರ್ಥಿ ಕಣಕ್ಕಿಳಿಸುತ್ತಿದೆ. ಕೆ.ಸಿ. ಕೊಂಡಯ್ಯ ಅವರು ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ಧಾರೆ.

ಇನ್ನು, ಸಭಾಪತಿ ಸ್ಥಾನದ ಅವಕಾಶ ನೀಡಿದ್ದಕ್ಕೆ ಬಸವರಾಜ ಹೊರಟ್ಟಿ ಅವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಅವರಿಗೆ ಧನ್ಯವಾದ ಹೇಳಿದರು. ಇಂದು ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಹೊರಟ್ಟಿ ಆಶೀರ್ವಾದ ಪಡೆದರು. ಸಭಾಪತಿಯಾಗಿ ಮುಂದೆ ಯಾವ ರೀತಿ ನಡೆ ಇರಬೇಕು ಎಂಬುದರ ಬಗ್ಗೆ ದೇವೇಗೌಡರಿಂದ ಅವರು ಸಲಹೆ ಪಡೆದರು.

ಸಭಾಪತಿ ಸ್ಥಾನದ ಬದಲು ಉಪಸಭಾಪತಿ ಸ್ಥಾನಕ್ಕೆ ಆಯ್ಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಪ್ರಾಣೇಶ್ ಅವರು, ಜೆಡಿಎಸ್-ಬಿಜೆಪಿ ಮೈತ್ರಿ ದೂರದೃಷ್ಟಿಯಿಂದ ತೆಗೆದುಕೊಂಡಿರುವ ತೀರ್ಮಾನವಾಗಿರಬಹುದು ಎಂದು ಅಭಿಪ್ರಾಯಪಟ್ಟರು. ನಾಮಪತ್ರ ಸಲ್ಲಿಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪರಿಷತ್​ನಲ್ಲಿ ಬಿಜೆಪಿಗೆ ಬಹುಮತ ಇಲ್ಲದೇ ಇರುವುದರಿಂದ ಮೈತ್ರಿ ಅನಿವಾರ್ಯವಾಗಿದೆ. ಆದರೆ, ಗೋಹತ್ಯೆ ನಿಷೇಧ ಮಸೂದೆ ಸೇರಿದಂತೆ ಹಲವು ವಿಧೇಯಕಗಳನ್ನ ಮೇಲ್ಮನೆಯಲ್ಲಿ ಪಾಸ್ ಮಾಡಲೇಬೇಕೆಂದು ತೀರ್ಮಾನಿಸಿದ್ದೇವೆ. ಜೆಡಿಎಸ್​ಗೂ ಇದನ್ನ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಸಹಕರಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ತಾನು ಉಪಸಭಾಪತಿಯಾಗಿ ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ. ಈ ಸ್ಥಾನದ ಘನತೆಗೆ ಯಾವತ್ತೂ ಕುಂದು ಬರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಪ್ರಾಣೇಶ್ ಭರವಸೆ ನೀಡಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಒಂದೇ ಕುಟುಂಬದ ನಾಲ್ವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಇದಾದ ಬಳಿಕ ಪ್ರಾಣೇಶ್ ಅವರು ವಿಧಾನಸೌಧದಲ್ಲಿ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ ಅವರಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಡಿಸಿಎಂ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಸೇರಿದಂತೆ ಬಿಜೆಪಿಯ ಹಿರಿಯ ಪರಿಷತ್ ಸದಸ್ಯರು ಉಪಸ್ಥಿತರಿದ್ದರು. ಜೆಡಿಎಸ್ ಸದಸ್ಯ ಅಪ್ಪಾಜಿ ಗೌಡ ಕೂಡ ಜೊತೆಯಲ್ಲಿದ್ದರು.

ಕಾಂಗ್ರೆಸ್​ನಿಂದ ಪ್ರತಿತಂತ್ರ:

ಇಂದು ವಿಧಾನಮಂಡಲ ಅಧಿವೇಶನ ಪ್ರಾರಂಭಕ್ಕೆ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಮೇಲ್ಮನೆ ಸಭಾಪತಿ, ಉಪಸಭಾಪತಿ ಸ್ಥಾನ ಸೇರಿದಂತೆ ಹಲವು ವಿಚಾರಗಳನ್ನ ಈ ಸಭೆಯಲ್ಲಿ ಚರ್ಚಿಸಲಾಯಿತು. ಮೇಲ್ಮನೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮಾಡಿಕೊಂಡಿರುವ ಮೈತ್ರಿ ಬಗ್ಗೆಯೂ ಚರ್ಚೆಯಾಯಿತು. ತಮಗೆ ಸಂಖ್ಯೆ ಇಲ್ಲದಿದ್ದರೂ ಉಪಸಭಾಪತಿ ಸ್ಥಾನಕ್ಕೆ ಸ್ಪರ್ಧಿಸುವ ನಿರ್ಧಾರಕ್ಕೆ ಬರಲಾಯಿತು. ಗೆಲ್ಲದಿದ್ದರೂ ಪರವಾಗಿಲ್ಲ, ಜೆಡಿಎಸ್ ಪಕ್ಷದ ಬಣ್ಣ ಬಯಲು ಮಾಡಲಾದರೂ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಸಿದ್ದರಾಮಯ್ಯ ಕೊಟ್ಟ ಸಲಹೆಗೆ ಸಭೆ ಒಪ್ಪಿತು. ಅದರಂತೆ ಕೆ.ಸಿ. ಕೊಂಡಯ್ಯ ಅವರು ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಬೇಕೆಂದು ನಿರ್ಧರಿಸಲಾಯಿತು.ವರದಿ: ಕೃಷ್ಣ ಜಿ.ವಿ.
Published by: Vijayasarthy SN
First published: January 28, 2021, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories