ರಮೇಶ್ ಕುಮಾರ್ ವಿರುದ್ಧ 535 ಕೋಟಿ ರೂ. ಅಕ್ರಮದ ಗಂಭೀರ ಆರೋಪ ಹೊರಿಸಿದ ಜೆಡಿಎಸ್ ಮಾಜಿ​ ಶಾಸಕ

ಬಡವರ ರಕ್ತ ಹೀರಿ, ವಂಚನೆ ಮಾಡಿಕೊಂಡು ಜೀವನ ಮಾಡುತ್ತಿರುವ ನಿನಗೆ ನಾಚಿಕೆಯಾಗಲ್ವ? ಎಂದು ರಮೇಶ್ ಕುಮಾರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಜೆಡಿಎಸ್ ನಾಯಕ ವೆಂಕಟಶಿವಾರೆಡ್ಡಿ ನನ್ನ ಆರೋಪ ಸುಳ್ಳಾದರೆ ಗಲ್ಲಿಗೇರಿಸಲಿ ಎಂದು ಸವಾಲು ಹಾಕಿದ್ದಾರೆ.

news18-kannada
Updated:January 11, 2020, 3:22 PM IST
ರಮೇಶ್ ಕುಮಾರ್ ವಿರುದ್ಧ 535 ಕೋಟಿ ರೂ. ಅಕ್ರಮದ ಗಂಭೀರ ಆರೋಪ ಹೊರಿಸಿದ ಜೆಡಿಎಸ್ ಮಾಜಿ​ ಶಾಸಕ
ವೆಂಕಟಶಿವಾರೆಡ್ಡಿ- ರಮೇಶ್ ಕುಮಾರ್
  • Share this:
ಕೋಲಾರ (ಜ. 11): ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ಔಷಧ, ಆ್ಯಂಬುಲೆನ್ಸ್​ ಖರೀದಿಯಲ್ಲಿ ಅಕ್ರಮವೆಸಗಿದ್ದಾರೆ, ಅಕ್ರಮವಾಗಿ 535.22 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಜೆಡಿಎಸ್ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕ ರಮೇಶ್ ಕುಮಾರ್ ವಿರುದ್ಧ ಅಕ್ರಮದ ದಾಖಲೆಗಳನ್ನು ಬಿಡುಗಡೆ ಮಾಡಿರುವ ವೆಂಕಟಶಿವಾರೆಡ್ಡಿ ನಾನು ಹೇಳುತ್ತಿರುವುದು ಸುಳ್ಳು ಮಾಹಿತಿಯಾದರೆ ನನ್ನನ್ನು ಗಲ್ಲಿಗೇರಿಸಲಿ ಎಂದು ಸವಾಲು ಹಾಕಿದ್ದಾರೆ.

ರಮೇಶ್ ಕುಮಾರ್ ತಮ್ಮ ಪ್ರಾಬಲ್ಯ ಬಳಸಿ ಶ್ರೀನಿವಾಸಪುರದಲ್ಲಿ 52 ಎಕರೆ ಭೂ ಖರೀದಿ ಮಾಡಿದ್ದಾರೆ. ಮಗನ ಹೆಸರಲ್ಲಿ 16 ಕೋಟಿ ರೂ. ಮೌಲ್ಯದ ಮನೆ ನಿರ್ಮಾಣ ಮಾಡಿದ್ದಾರೆ. ಅವರಿಗೆ ಬೇರಾವುದೇ ಆದಾಯವಿಲ್ಲದೆ ಇದೆಲ್ಲ ಹೇಗೆ ಸಾಧ್ಯ? ಎಂದು ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಪ್ರಶ್ನಿಸಿದ್ದಾರೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ರಮೇಶ್ ಕುಮಾರ್ ನೇರ ಕಾರಣ. ತಾನು ಬಹಳ ಸರಳ ಜೀವನ ನಡೆಸುತ್ತಿದ್ದೇನೆ, ಬಾಡಿಗೆ ಮನೆಯಲ್ಲಿದ್ದೇನೆ ಎಂದು ರಮೇಶ್ ಕುಮಾರ್ ಸುಳ್ಳು ಹೇಳುತ್ತಿದ್ದಾರೆ. ರಮೇಶ್ ಕುಮಾರ್ ಅವರದ್ದು ಐಷಾರಾಮಿ ಜೀವನ. ಅವರು ಚಿಕ್ಕಮಗಳೂರಲ್ಲಿ ಎಸ್ಟೇಟ್ ಹೊಂದಿದ್ದಾರೆ. ರಮೇಶ್ ಕುಮಾರ್ ವ್ಯವಸಾಯ ಮಾಡಿ ಇಷ್ಟೊಂದು ಆಸ್ತಿ ಸಂಪಾದಿಸಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬೆಲೆಯೇರಿಕೆ ಹಿನ್ನೆಲೆ ಮೆಣಸಿಗೂ ತಟ್ಟಿದ ಕಳ್ಳರ ಕಾಟ; ಗದಗದಲ್ಲಿ 5 ಕ್ವಿಂಟಾಲ್ ಒಣ ಮೆಣಸಿನಕಾಯಿ ಕಳವು

ರಮೇಶ್ ಕುಮಾರ್ ಜನರನ್ನು ಮಾತಿನ ಮೂಲಕ ಮರುಳು ಮಾಡುತ್ತಿದ್ದಾರೆ. ಅವರ ವಿರುದ್ಧ ನನ್ನ ಎಲ್ಲಾ ಆರೋಪಕ್ಕೆ ದಾಖಲೆ ನೀಡಿದ್ದೇನೆ ಎಂದಿರುವ ಜೆಡಿಎಸ್ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ನನ್ನ ಆರೋಪ ಸುಳ್ಳಾದರೆ ನನ್ನನ್ನು ಗಲ್ಲಿಗೇರಿಸಲಿ ಎಂದಿದ್ದಾರೆ.

ಏಕವಚನದಲ್ಲೇ ವಾಗ್ದಾಳಿ:ಬಡವರ ರಕ್ತ ಹೀರಿ, ವಂಚನೆ ಮಾಡಿಕೊಂಡು ಜೀವನ ಮಾಡುತ್ತಿರುವ ನಿನಗೆ ನಾಚಿಕೆಯಾಗಲ್ವ? ಎಂದು ರಮೇಶ್ ಕುಮಾರ್ ವಿರುದ್ಧ ಸುದ್ದಿಗೋಷ್ಠಿಯಲ್ಲಿ ವೆಂಕಟಶಿವಾರೆಡ್ಡಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಅತ್ತಿಕೊಂಟೆ ಕೊಲೆ ಪ್ರಕರಣದಲ್ಲಿ ರಮೇಶ್ ಕುಮಾರ್ 11ನೇ ಆರೋಪಿ, ಅಡ್ಡಗಲ್ ಕೊಲೆ ಪ್ರಕರಣದಲ್ಲಿ 16ನೇ ಆರೋಪಿಯಾಗಿದ್ದರು. ಆದರೆ, ಅಧಿಕಾರವನ್ನು ಬಳಸಿಕೊಂಡು ಬೆದರಿಕೆ ಹಾಕಿ ಆ ಪ್ರಕರಣಗಳಲ್ಲಿ ಬಿ ರಿಪೋರ್ಟ್​ ಹಾಕಿಸಿಕೊಂಡಿದ್ದಾರೆ ಎಂದು ಶ್ರೀನಿವಾಸಪುರದ ಜೆಡಿಎಸ್ ಕಚೇರಿಯಲ್ಲಿ ವೆಂಕಟಶಿವಾರೆಡ್ಡಿ ಆರೋಪ ಮಾಡಿದ್ದಾರೆ.

(ವರದಿ: ರಘುರಾಜ್)
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ