ಬಿಬಿಎಂಪಿಯ 198 ವಾರ್ಡ್​​ಗಳಲ್ಲಿ ಜೆಡಿಎಸ್​​​ ಏಕಾಂಗಿ ಸ್ಪರ್ಧೆ; ಮಹಿಳೆಯರಿಗೆ ಶೇ. 50 ಸೀಟು: ಪಕ್ಷದ ಸಭೆಯಲ್ಲಿ ನಿರ್ಣಯ

ನಾನು ಇನ್ಮುಂದೆ ಸುಮ್ಮನೆ ಕೂರುವುದಿಲ್ಲ. ಪ್ರಾದೇಶಿಕ ಪಕ್ಷ ಉಳಿಸಲು ಶ್ರಮಿಸುತ್ತೇನೆ.  ಪಕ್ಷದ ನಿರಂತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೇನೆ. ಜ. 23ರಂದು ಜೆಡಿಎಸ್​ ಬೃಹತ್ ಸಮಾವೇಶ ನಡೆಸಲಿದ್ದೇವೆ. ಹಾಲಿ, ಮಾಜಿ ಶಾಸಕರು, ಸೋತ ಅಭ್ಯರ್ಥಿಗಳು, ಎಲ್ಲಾ ಚುನಾಯಿತ ಜೆಡಿಎಸ್​​​ ಸದಸ್ಯರ ಸಮಾವೇಶ ಇದಾಗಿದೆ-ದೇವೇಗೌಡ

news18-kannada
Updated:January 13, 2020, 4:02 PM IST
ಬಿಬಿಎಂಪಿಯ 198 ವಾರ್ಡ್​​ಗಳಲ್ಲಿ ಜೆಡಿಎಸ್​​​ ಏಕಾಂಗಿ ಸ್ಪರ್ಧೆ; ಮಹಿಳೆಯರಿಗೆ ಶೇ. 50 ಸೀಟು: ಪಕ್ಷದ ಸಭೆಯಲ್ಲಿ ನಿರ್ಣಯ
ಎಚ್​​.ಡಿ. ದೇವೇಗೌಡ
  • Share this:
ಬೆಂಗಳೂರು(ಜ.13): ಮುಂಬರುವ ಬಿಬಿಎಂಪಿ ಚುನಾವಣೆಗೆ ಮೂರು ಪಕ್ಷಗಳು ಸಿದ್ದತೆ ನಡೆಸಿಕೊಳ್ಳುತ್ತಿವೆ. ಇಂದು ಜೆಡಿಎಸ್​ ಪಕ್ಷದ ವತಿಯಿಂದ ಬೆಂಗಳೂರಿನ ಜೆ.ಪಿ.ಭವನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಪೂರ್ವಭಾವಿ ಸಭೆ  ನಡೆಸಲಾಯಿತು. ಸಭೆಯಲ್ಲಿ ಬಿಬಿಎಂಪಿ ಚುನಾವಣೆಗೆ ಪೂರಕವಾದ ಕೆಲವೊಂದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಅದರಂತೆ, ಬಿಬಿಎಂಪಿಯ ಚುನಾವಣೆಗೆ ಜೆಡಿಎಸ್ ಪಕ್ಷ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿದೆ. ಎಲ್ಲಾ 198 ವಾರ್ಡ್​ಗಳಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸುವ ನಿರ್ಣಯವನ್ನು ಜೆಡಿಎಸ್ ಕೈಗೊಂಡಿದೆ. ಇನ್ನೊಂದು ಮಹತ್ವದ ಸಂಗತಿ ಎಂದರೆ ಶೇ. 50ರಷ್ಟು ಸ್ಥಾನಗಳಿಗೆ ಮಹಿಳೆಯರನ್ನೇ ಕಣಕ್ಕಿಳಿಸುವ ನಿರ್ಧಾರಕ್ಕೆ ಬರಲಾಗಿದೆ.

ಜೆಡಿಎಸ್ ಪೂರ್ವಭಾವಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳು


  • ಬಿಬಿಎಂಪಿಯ 198 ವಾರ್ಡ್​​​ಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧಾರ.

  • ಶೇ.50ರಷ್ಟು ಸೀಟುಗಳನ್ನು ಮಹಿಳೆಯರಿಗೆ ನೀಡಲಾಗುವುದು.

  • ಮಹಿಳೆಯರು ಕೂಡ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ಕೊಡಬೇಕು.
  • ಈಗಿನಿಂದಲೇ ಪ್ರತಿ ವಾರ್ಡ್​​​ಗಳಲ್ಲೂ ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡಲು ಸೂಚನೆ.

  • ಟಿಕೆಟ್ ಯಾರಿಗೆ ಕೊಡಬೇಕು ಎಂಬುವುದನ್ನು ಎಲ್ಲರೂ ಕೂತು ಗೆಲ್ಲುವ ವ್ಯಕ್ತಿಗೆ ಟಿಕೆಟ್ ಕೊಡಲಾಗುವುದು.

  • ಟಿಕೆಟ್ ಬಗ್ಗೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ.

  • ಬೆಂಗಳೂರು ನಗರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿ.

  • ಇಂದಿನಿಂದಲೇ ಪ್ರತಿ ವಾರ್ಡ್ ಅಧ್ಯಕ್ಷರು ಸಭೆಗಳನ್ನು ಮಾಡಿ ಪಕ್ಷ ಸಂಘಟನೆಗೆ ಪ್ರಾರಂಭ ಮಾಡಬೇಕು.

  • ತಮ್ಮ ವಾರ್ಡ್ ಗಳಲ್ಲಿ ಮಾಡಿದ ಸಂಘಟನೆ ಬಗ್ಗೆ ಪಕ್ಷದ ಕಚೇರಿಗೆ ಪ್ರತಿ ವಾರದ ರಿಪೋರ್ಟ್ ಕೊಡಬೇಕು.


ಆಗಸ್ಟ್​​ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಸ್ತುತ ಜೆಡಿಎಸ್​ನ 14 ಕಾರ್ಪೋರೇಟರ್​​ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್​ ಜೊತೆಗೆ ಮೈತ್ರಿ; ಮಾಜಿ ಸಚಿವ ಸಾರಾ ಮಹೇಶ್​ ಸ್ಪಷ್ಟನೆ

ಜೆಡಿಎಸ್ ವರಿಷ್ಠ ಎಚ್​.ಡಿ.ದೇವೇಗೌಡ ಮಾತನಾಡಿ, "ನಾನು ಇನ್ಮುಂದೆ ಸುಮ್ಮನೆ ಕೂರುವುದಿಲ್ಲ. ಪ್ರಾದೇಶಿಕ ಪಕ್ಷ ಉಳಿಸಲು ಶ್ರಮಿಸುತ್ತೇನೆ.  ಪಕ್ಷದ ನಿರಂತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೇನೆ. ಜ. 23ರಂದು ಜೆಡಿಎಸ್​ ಬೃಹತ್ ಸಮಾವೇಶ ನಡೆಸಲಿದ್ದೇವೆ. ಹಾಲಿ, ಮಾಜಿ ಶಾಸಕರು, ಸೋತ ಅಭ್ಯರ್ಥಿಗಳು, ಎಲ್ಲಾ ಚುನಾಯಿತ ಜೆಡಿಎಸ್​​​ ಸದಸ್ಯರ ಸಮಾವೇಶ ಇದಾಗಿದೆ," ಎಂದರು.

"ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಒರಿಸ್ಸಾದಲ್ಲಿ ಪ್ರಾದೇಶಿಕ ಪಕ್ಷ ಗಟ್ಟಿಯಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗೆ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಾವು ಪ್ರಾದೇಶಿಕ ಪಕ್ಷ ಉಳಿಸಿದರೆ, ರಾಷ್ಟ್ರದ ಬೆಳವಣಿಗೆಗೆ ನಮ್ಮದೂ ಸಣ್ಣ ಕೊಡುಗೆ ಕೊಟ್ಟಂತಾಗುತ್ತದೆ," ಎಂದು ಹೇಳಿದರು.

"ನನ್ನ ಆರೋಗ್ಯ ಸ್ಥಿತಿ ಇನ್ನೂ ಸಹ ಸುಧಾರಿಸಿಲ್ಲ. ನನಗಿನ್ನೂ ಚಿಕಿತ್ಸೆಯ ಅಗತ್ಯವಿದೆ. ಆದರೂ ನಾನು ಪಕ್ಷದ ಉಳಿವಿಗಾಗಿ ಶ್ರಮಿಸುತ್ತೇನೆ. ಕೆಲವೇ ದಿನಗಳಲ್ಲಿ ತಾಲೂಕು, ಜಿಲ್ಲಾಮಟ್ಟದ ನಾಯಕರ ಸಮಾವೇಶ ನಡೆಯಲಿದೆ. ಇದು ಈ ವರ್ಷದ ಮೊದಲ ಕಾರ್ಯಕ್ರಮವಾಗಿದೆ. ಅಲ್ಲದೇ ರಾಷ್ಟ್ರೀಯ ಕಾರ್ಯಕಾರಿ ಸಭೆ ಸೇರಲು ನಿರ್ಣಯ ಮಾಡಲಾಗಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಜೆಡಿಎಸ್​​ ಪ್ರಬಲವಾಗಿದೆ. ಎರಡೂ ರಾಜ್ಯ ಘಟಕಗಳು ಚುನಾವಣಾ ಆಯೋಗದ ಮಾನ್ಯತೆ ಹೊಂದಿದೆ. ಬೇರೆ ಕಡೆಯೂ ಜೆಡಿಎಸ್ ಪಕ್ಷವಿದೆ, ಆದರೆ ಪ್ರಬಲವಾಗಿಲ್ಲ," ಎಂದರು.

ಇದು ಬೇಜವಾಬ್ದಾರಿ: ಪ್ರತಿಭಟನಾಕಾರರನ್ನು ನಾಯಿಗಳಂತೆ ಹೊಡೆದೆವೆಂದಿದ್ದ ಬಿಜೆಪಿ ನಾಯಕನ ಹೇಳಿಕೆಗೆ ಕೇಂದ್ರ ಸಚಿವ ಸುಪ್ರಿಯೋ ಬೇಸರ

ಬೆಂಗಳೂರು ನಗರ ಅಧ್ಯಕ್ಷ ಆರ್ ಪ್ರಕಾಶ, ಎಂಎಲ್​ಸಿಗಳು, ಬಿಬಿಎಂಪಿ ಸದಸ್ಯರು, ಬೆಂಗಳೂರು ನಗರ ಮುಖಂಡರುಗಳು ಸೇರಿ ಒಟ್ಟು 300ಕ್ಕೂ ಹೆಚ್ಚು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಿದ್ದರು.

 
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ