ಬೆಂಗಳೂರು (ಅ.30): ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ 450 ಕೋಟಿ ರೂ. ಅನುದಾನ ನೀಡಿದರೂ ಮುನಿರತ್ನ ಪಕ್ಷ ಬದಲಾಯಿಸಿ, ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಿ, ಜೆಡಿಎಸ್ಗೆ ಮತಹಾಕಿ ಎಂದು ಅಭ್ಯರ್ಥಿ ವಿ.ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿವೆ. ಕೇಂದ್ರ ಸರಕಾರ ರಾಜ್ಯಕ್ಕೆ ಗೌರವ ನೀಡುತ್ತಿಲ್ಲ. ಪ್ರವಾಹ ಬಂದು ಜನ ಸಂಕಷ್ಟದಲ್ಲಿದ್ದರು ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡುತ್ತಿಲ್ಲ. ಬಿಜೆಪಿ ಸರಕಾರಕ್ಕೂ ಕೂಡ ಚುನಾವಣೆಯೇ ಮುಖ್ಯವಾಗಿದೆ. ಸಂಕಷ್ಟದಲ್ಲಿರುವ ಜನರ ಕಣ್ಣೀರು ಹೊರೆಸುವ ಕಾರ್ಯ ಮಾಡುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು, ಕಾಂಗ್ರೆಸ್ಗೆ ಚುನಾವಣೆ ಬಂದಾಗ ಜಾತಿ ನೆನಪಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಅವರ ತಂದೆ ಹನುಮಂತರಾಯಪ್ಪ ಸಮಯ ಸಾಧಕರಾಗಿದ್ದಾರೆ. ಈಗ ಒಕ್ಕಲಿಗ ಎಂದು ಹೇಳಿಕೊಳ್ಳುವ ಅವರು ತಮ್ಮ ಸಮಾಜಕ್ಕೆ ಏನು ಮಾಡಿದ್ದಾರೆ ಎಂಬುದನ್ನು ಹೇಳಲಿ. ನಾನು ಕೂಡ ಒಕ್ಕಲಿಗನೇ, ಈ ಕ್ಷೇತ್ರದ ಮನೆ ಮಗ ಯಾವತ್ತೂ ನಾನು ಒಕ್ಕಲಿಗ ಕಾರ್ಡ್ನ್ನು ಬಳಸಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಆರ್ಆರ್ ನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಚನ್ನಕೇಶವಮೂರ್ತಿ, ಕೊರೋನಾ ಸಮಯದಲ್ಲಿ ಮುನಿರತ್ನ ಕೇವಲ ವೋಟ್ ಇದ್ದವರಿಗೆ ಮಾತ್ರ ರೇಷನ್ ಹಂಚಿದ್ದಾರೆ. ಆದರೆ, ಮತ ಇರದವರಿಗೂ ಕೂಡ ಹಸಿವಾಗುತ್ತದೆ ಎಂಬ ಸಣ್ಣ ಸೂಕ್ಷ್ಮವನ್ನು ಬಿಜೆಪಿ ಅಭ್ಯರ್ಥಿ ಅರಿಯಲಿಲ್ಲ. ಅಂತವರಿಗೆ ನಿಮ್ಮ ಮತ ಹಾಕುತ್ತೀರಾ ಎಂದು ಪ್ರಶ್ನಿಸಿದರು.
ಜ್ಞಾನಭಾರತಿ ವಾರ್ಡ್, ಮಾಳಗಾಳ, ಲಗ್ಗೆರೆ, ಲಕ್ಷ್ಮೀದೇವಿ ನಗರ, ಆರ್ಆರ್ ನಗರ ವಾರ್ಡ್ಗಳಲ್ಲಿ ಮನೆ-ಮನೆಗೆ ತೆರಳಿ ಮತಯಾಚಿಸಿದರು. ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಶನಿವಾರ ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಲಿರುವ ಮಾಜಿ ಸಿಎಂ ಬಳಿಕ, ಜೆಬಿ ವಾರ್ಡ್, ಕೊಟ್ಟಿಗೆಪಾಳ್ಯ, ಲಗ್ಗೆರೆ, ಎಚ್ಎಂಟಿ ವಾರ್ಡ್, ಯಶವಂತಪುರ ಹಾಗೂ ಜಾಲಹಳ್ಳಿಯಲ್ಲಿ ಸಂಜೆಯವರೆಗೂ ಮತಯಾಚಿಸಲಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ