ಮಂಡ್ಯದ ಕೆಆರ್ ಪೇಟೆ ಪುರಸಭೆ ಅಧಿಕಾರಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಜಂಘೀ ಕುಸ್ತಿ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸೋತ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿ ಇನ್ನಷ್ಟು ಹೆಚ್ಚಾಗಿದೆ. ಪುರಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ನಂತರ ಈ ಜಿದ್ದಾಜಿದ್ದಿ ಪೊಲೀಸ್ ಠಾಣೆ ಮೆಟ್ಟಿಲೇರುವ ಮಟ್ಟಕ್ಕೂ ಹೋಗಿದೆ.

news18
Updated:June 12, 2019, 6:53 PM IST
ಮಂಡ್ಯದ ಕೆಆರ್ ಪೇಟೆ ಪುರಸಭೆ ಅಧಿಕಾರಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಜಂಘೀ ಕುಸ್ತಿ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ಕೆಆರ್ ಪೇಟೆ ಪುರಸಭೆ
news18
Updated: June 12, 2019, 6:53 PM IST
ಮಂಡ್ಯ(ಜೂನ್ 12): ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವಿದೆ. ಆದ್ರೆ ಸಕ್ಕರೆನಾಡು ಮಂಡ್ಯದಲ್ಲಿ ಮೈತ್ರಿಗೆ ಎರಡು ಪಕ್ಷದ  ಜಿಲ್ಲಾ ಮತ್ತು ಕಾರ್ಯಕರ್ತರು ವಿರೋಧ ವ್ಯಕ್ತಪಡಿಸ್ತಿದ್ದಾರೆ. ಇತ್ತೀಚೆಗೆ ಕೆ.ಆರ್. ಪೇಟೆ ಪುರಸಭೆಗೆ ನಡೆದ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 23 ಸದಸ್ಯ ಬಲದ ಕೆಆರ್ ಪೇಟೆ ಪುರಸಭೆಯಲ್ಲಿ ಜೆಡಿಎಸ್ 11, ಕಾಂಗ್ರೆಸ್ 10, ಬಿಜೆಪಿ 1 ಸದಸ್ಯರನ್ನು ಹೊಂದಿವೆ. ಹಾಗೆಯೇ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.

ಒಂದೆಡೆ, ಒಬ್ಬ ಪಕ್ಷೇತರ ಅಭ್ಯರ್ಥಿ ಬೆಂಬಲದೊಂದಿಗೆ ಅಧಿಕಾರ ಹಿಡಿಯಲು ಕೆಆರ್ ಪೇಟೆಯ ಜೆಡಿಎಸ್ ಶಾಸಕ ಕೆ.ಸಿ. ನಾರಾಯಣಗೌಡ ಶತಾಯಗತ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಕೆ.ಬಿ. ‌ಚಂದ್ರಶೇಖರ್ ಅವರು ಪುರಸಭಾ ಸದಸ್ಯರಾದ ತನ್ನ ಪುತ್ರ ಶ್ರೀಕಾಂತ್ ಹಾಗೂ ಸಹೋದರ ಕೆ.ಬಿ. ‌ಮಹೇಶ್ ಮೂಲಕ ಕೆಲ ಜೆಡಿಎಸ್ ಪಕ್ಷದ ಸದಸ್ಯರಿಗೆ ತಮ್ಮ ಪಕ್ಷಕ್ಕೆ ಬೆಂಬಲಿಸುವಂತೆ ಧಮಕಿ ಹಾಕಿಸಿದ್ದಾರೆನ್ನಲಾಗಿದೆ.

ಇದ್ರಿಂದ ರೊಚ್ಚಿಗೆದ್ದ ಜೆಡಿಎಸ್​ನ ಪುರಸಭಾ ಸದಸ್ಯರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಕುತಂತ್ರರಾಜಕಾರಣದ ಮೂಲಕ ಅಧಿಕಾರ ಹಿಡಿಯಲು ಹೊರಟಿರುವ ಕಾಂಗ್ರೆಸ್ಸಿಗರು ನಮ್ಮ ಪುರಸಭಾ ಸದಸ್ಯರ ತಂಟೆಗೆ ಬಂದ್ರೆ ಸುಟ್ಟು ಹೋಗುತ್ತಾರೆ ಎಂದು ಶಾಸಕ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ರೈತರಿಗೆ ಸಮಸ್ಯೆಯಾದರೆ ಜಿಲ್ಲಾಧಿಕಾರಿಗಳೇ ಹೊಣೆ: ಸಭೆಯಲ್ಲಿ ಡಿ.ಸಿ.ಗಳಿಗೆ ಸಿಎಂ ಕುಮಾರಸ್ವಾಮಿ ಖಡಕ್​ ಎಚ್ಚರಿಕೆ

ಜೆಡಿಎಸ್​ನ ಪುರಸಭಾ ಸದಸ್ಯ ಸಂತೋಷ್ ಅವರು ಶಾಸಕ ನಾರಾಯಣಗೌಡ ಅವರ ಜೊತೆಗೂಡಿ ನೀಡಿದ ದೂರಿನ ಮೇರೆಗೆ ಕೆಆರ್ ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಂಗ್ರೆಸ್​ನ ಮಾಜಿ ಶಾಸಕ ಚಂದ್ರಶೇಖರ್ ಅವರ ಪುತ್ರ ಶ್ರೀಕಾಂತ್ ಹಾಗೂ ಸಹೋದರ ಕೆ.ಬಿ. ಮಹೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಬೆನ್ನಲ್ಲೇ ಕಾಂಗ್ರೆಸ್​ನ ಪುರಸಭಾ ಸದಸ್ಯರು ರಾಜೀ ಸೂತ್ರಕ್ಕೆ ಮುಂದಾಗಿದ್ದಾರೆ. “ಕೃಷ್ಣರಾಜಪೇಟೆ ಪುರಸಭೆಯಲ್ಲಿ ಕುದುರೆ ವ್ಯಾಪಾರ ನಡೆದಿಲ್ಲ. 23 ಸದಸ್ಯರ ಬಲದ ಪುರಸಭೆಯಲ್ಲಿ ಕಾಂಗ್ರಸ್ 10 ಸದಸ್ಯರನ್ನು ಹೊಂದಿದೆ. ಪಕ್ಷೇತರ ಮತ್ತು ಬಿಜೆಪಿ ಸದಸ್ಯರು ಸೇರಿದಂತೆ ಸಂಸದೆ ಸುಮಲತಾ ಅವರ ಬೆಂಬಲ ಪಡೆದುಕೊಂಡು ಕಾಂಗ್ರೆಸ್ ಪುರಸಭೆಯ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತಿದೆ. ಇದರಲ್ಲಿ ತಪ್ಪೇನಿದೆ?” ಎಂದು 16ನೇ ವಾರ್ಡಿನ ಹಿರಿಯ ಕಾಂಗ್ರೆಸ್ ಸದಸ್ಯ ಡಿ. ಪ್ರೇಮಕುಮಾರ್ ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 'ನೀವು ಯಾರಿಗೂ‌ ಹೆದರಬೇಡಿ, ಯಾವ ರಾಜಕಾರಣಿಗೆ ಹಣ ನೀಡಿದ್ದಿರಾ ಹೇಳಿ ವಸೂಲಿ‌ ಮಾಡೋಣ'; ಮನ್ಸೂರ್​ಗೆ ಸಚಿವ ಜಮೀರ್ ಅಭಯ

ರಾಜ್ಯದಲ್ಲಿ 80 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷ 37 ಶಾಸಕರನ್ನು ಹೊಂದಿರುವ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಟ್ಟಿರುವಾಗ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಯಾಕೆ ಹೊಂದಾಣಿಕೆ ಮಾಡಿಕೊಳ್ಳಬಾರದು? ದ್ವೇಷದ ರಾಜಕಾರಣ ಒಳ್ಳೆಯದಲ್ಲ. ಸಣ್ಣ ಪುಟ್ಟ ವಿಚಾರಗಳಿಗೆ ಪೋಲಿಸರಿಗೆ ದೂರು ನೀಡಿ ಎಫ್​ಐಆರ್ ದಾಖಲು ಮಾಡಿಸುವುದು ಸರಿಯಲ್ಲ ಎಂದು ಪ್ರೇಮಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಕೆ.ಆರ್. ಪೇಟೆಯ ಪುರಸಭೆ ಅಧಿಕಾರ ಗದ್ದುಗೆಯ ಗುದ್ದಾಟ ಇದೀಗ ಜೆಡಿಎಸ್ ಮತ್ತು ಕೈ ಪಕ್ಷದ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಇದಕ್ಕಾಗಿ ಇಬ್ಬರು ನಾಯಕರು ಈಗ ಅಧಿಕಾರಕ್ಕಾಗಿ ಶತಾಯಗತಾಯ ಪ್ರಯತ್ನ ಮಾಡ್ತಿದ್ದಾರೆ. ‌ಇಬ್ಬರು ನಾಯಕರ ಈ ಜಿದ್ದಾಜಿದ್ದಿ ಪ್ರಯತ್ನ‌ಒಂದು ಕಡೆ ವಾಕ್ಸಮರಕ್ಕೆ ದಾರಿ ಮಾಡಿ ಕೊಟ್ಟರೆ, ಮತ್ತೊಂದೆಡೆ ಪೊಲೀಸ್ ಠಾಣೆಯ ಮೆಟ್ಟಿಲು ಏರಿ ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.

(ವರದಿ: ರಾಘವೇಂದ್ರ ಗಂಜಾಮ್)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...