Muthappa Rai Death: ಡಾನ್ ಜಯರಾಜನ ಕೊಲೆಯಿಂದ ಅಮರ್​‌ ಆಳ್ವಾ ಮರ್ಡರ್​ವರೆಗೆ ಮುತ್ತಪ್ಪ ರೈ ರಕ್ತಸಿಕ್ತ ಇತಿಹಾಸ!

Muthappa Rai: ಅಸಲಿಗೆ ಬೆಂಗಳೂರಿನಲ್ಲಿ ಬಂದೂಕಿನ ಗುಂಡಿಗೆ ಬಲಿಯಾದ ಮೊದಲ ಭೂಗತ ದೊರೆ ಎಂ.ಪಿ. ಜಯರಾಜ್ ಮತ್ತು ಆ ಗುಂಡು ಹಾರಿಸಿದ್ದು Master Mind Killer ಮುತ್ತಪ್ಪ ರೈ ಅಲಿಯಾಸ್ ರೈ.

ಮುತ್ತಪ್ಪ ರೈ.

ಮುತ್ತಪ್ಪ ರೈ.

  • Share this:
ಮುತ್ತಪ್ಪ ರೈ…! ಬೆಂಗಳೂರು ಭೂಗತ ಲೋಕದ ಮಟ್ಟಿಗೆ ಅಂದಿಗೂ ಇಂದಿಗೂ ಎಂದಿಗೂ ಅತಿರಂಜಕ ಹೆಸರು ಎಂದರೆ ಮುತ್ತಪ್ಪ ರೈ. ಏಕೆಂದರೆ 70 ದಶಕದಲ್ಲಿ ಕೇವಲ ಹಫ್ತ ವಸೂಲಿ, ಕಲಬೆರಕೆ ದಂಧೆ, ಆಯಿಲ್ ಇಂಡಸ್ಟ್ರಿ, ಬಾರ್‌-ಕ್ಲಬ್ ಇಂಡಸ್ಟ್ರಿ ಮತ್ತು ಸುಫಾರಿ ಕೊಲೆಗಳಿಗೆ ಸೀಮಿತವಾಗಿದ್ದ ರಾಜಧಾನಿಯ ರೌಡಿಸಂಗೆ ದುಬೈನಿಂದ ಆಫ್ರಿಕಾ ರಷ್ಯಾ ದೇಶದವರೆಗೆ ಕಾಂಟ್ಯಾಕ್ಟ್ ಬೆಳೆಸಿದ ಮೊದಲ ಡಾನ್ ಮುತ್ತಪ್ಪರೈ.

ಇನ್ನೂ ಅಂತಾರಾಷ್ಟ್ರೀಯ ಭಯೋತ್ಪಾದಕ ದಾವೂದ್‌ ಇಬ್ರಾಹಿಂ ಚೋಟಾ ಶಕೀಲ್ ಜೊತೆಗೂ ಮುತ್ತಪ್ಪ ರೈ ಅವರಿಗೆ ನಂಟು ಇತ್ತು ಎನ್ನುವುದು ಇಂದು ಗುಟ್ಟಾಗೇನು ಉಳಿದಿಲ್ಲ.

ಕರ್ನಾಟಕದ ಪುತ್ತೂರಿನಲ್ಲಿ ಎನ್‌. ನಾರಾಯಣ ಮತ್ತು ಸುಶೀಲಾ ರೈ ಅವರಿಗೆ ಮಗನಾಗಿ ಜನಿಸಿದ್ದ ಮುತ್ತಪ್ಪ ರೈ ತಾನು ಬೆಂಗಳೂರು ಭೂಗತ ಲೋಕದಲ್ಲಿ ಈ ಹಂತಕ್ಕೆ ಬೆಳೆಯುತ್ತೇನೆ ಮತ್ತು ಇಡೀ ಭಾರತದ ಮಟ್ಟಿಗೆ ದೊಡ್ಡ ಡಾನ್ ಎಂಬ ಹೆಸರು ಪಡೆಯುತ್ತೇನೆ ಎಂದು ಸ್ವತಃ ಆವರೂ ಎಣಿಸಿರಲಿಕ್ಕಿಲ್ಲವೇನೋ? ಆದರೆ, ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರದಂತಿತ್ತು ಆ ಒಂದು ಕೊಲೆ. ಬೆಂಗಳೂರಿನ ಮೊದಲ ಡಾನ್ ಜಯರಾಜ್ ಕೊಲೆ.

ಅಸಲಿಗೆ ಮುತ್ತಪ್ಪ ರೈ ತಾನು ಡಾನ್ ಆಗಬೇಕು ಎಂದು ಬೆಂಗಳೂರಿಗೆ ಆಗಮಿಸಿದವರಲ್ಲ. ಕನಸು ಮನಸಿನಲ್ಲೂ ಎಣಿಸಿದವರಲ್ಲ. ಪುತ್ತೂರಿನಲ್ಲೇ ಶಿಕ್ಷಣ ಮುಗಿಸಿದ್ದ ರೈ ವಿಜಯ ಬ್ಯಾಂಕಿನಲ್ಲಿ ಮೊದಲು ಕೆಲಸಕ್ಕೆ ಸೇರಿದ್ದರು. ಆದರೆ, ಬ್ಯಾಂಕಿನಲ್ಲಿ ಚೆ‌ಕ್ ವ್ಯವಹಾರದಲ್ಲಿ ಮೋಸ ಮಾಡಿದ ಆರೋಪಕ್ಕಾಗಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ತನ್ನದು ತಪ್ಪಿಲ್ಲದಿದ್ದರೂ ಕೆಲಸದಿಂದ ಸುಳ್ಳೇ ಆರೋಪ ಮಾಡಿ ನನ್ನನ್ನು ಹೊರಗೆ ಕಳುಹಿಸಲಾಗಿತ್ತು ಎಂದು ಸ್ವತಃ ಮುತ್ತಪ್ಪ ರೈ ಹಲವು ಕಡೆಗಳಲ್ಲಿ ಹೇಳಿಕೊಂಡಿದ್ದಾರೆ.

ಹೀಗೆ ವಿಜಯ ಬ್ಯಾಂಕ್ ಕೆಲಸ ಕಳೆದುಕೊಂಡು ರೇಖಾ ಅವರನ್ನು ಮದುವೆಯಾಗಿ ಹೊಟ್ಟೆಪಾಡಿಗಾಗಿ ಕೆಲಸ ಹುಡುಕುತ್ತಾ ಬೆಂಗಳೂರು ಸೇರಿದ ಮುತ್ತಪ್ಪ ರೈ ಮೊದಲು ಬ್ರಿಗೇಡ್‌ ರಸ್ತೆಯ ಲೇಡಿಸ್ ಬಾರ್‌ ಒಂದರಲ್ಲಿ ಕೆಲಸಕ್ಕೆ ಸೇರುತ್ತಾರೆ. ಇಲ್ಲಿಂದಲೇ ಅವರಿಗೆ ಭೂಗತ ಲೋಕದ ಪರಿಚಯವಾಗುತ್ತದೆ.

ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ರೈ ಅವರಿಗೆ ಗೋಲ್ಡ್‌ ಡೀಲರ್‌ಗಳಾದ ಅಶೋಕ್ ಶೆಟ್ಟಿ ಮತ್ತು ಶರತ್‌ ಶೆಟ್ಟಿ ಪರಿಚಯವಾಗುತ್ತೆ. ಇವರ ಮೂಲಕ ಅಮರ್‌ ಆಳ್ವ ಪರಿಚಯವಾಗುತ್ತೆ. ಇಲ್ಲಿಂದಲೇ ರೈ ಹೆಸರು ಭೂಗತ ಲೋಕದಲ್ಲಿ ಹರಿದಾಡಲು ಆರಂಭವಾಗುತ್ತದೆ. ಆದರೆ, ರೈ ಎಂಬ ಹೆಸರು ಭೂಗತಲೋಕದ ರಕ್ತಸಿಕ್ತ ಪುಟಗಳಲ್ಲಿ ಅಚ್ಚಳಿಯದ ಉಳಿದದ್ದು ಮಾತ್ರ ಆ ಒಂದು ಕೊಲೆಯಿಂದ..ಡಾನ್ ಜಯರಾಜನ ಕೊಲೆಯಿಂದ

ಡಾನ್ ಜಯರಾಜನ ಬರ್ಬರ ಹತ್ಯೆ!:

ಅದು 1989 ನವೆಂಬರ್ 21. ಲಾಲ್ಬಾಗ್ನಿಂದ ಜಯನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೊಂದರ ತಿರುವಿನಲ್ಲಿ ಬೆಂಗಳೂರು ಭೂಗತ ಜಗತ್ತಿನ ಅನಭಿಕ್ಷಿಕ್ತ ದೊರೆಯೊಬ್ಬನ ಬರ್ಬರ ಹತ್ಯೆ ನಡೆದೇ ಹೋಗಿತ್ತು. ಇಡೀ ಬೆಂಗಳೂರನ್ನು ಕಾಡಿದ Hi Profile killer ಡಾನ್ ಜಯರಾಜ್ ತನ್ನಹಳೆಯ ಅಂಬಾಸಿಡರ್ ಕಾರಿನಲ್ಲಿ ರಕ್ತದ ಮಡುವಿನ ನಡುವೆ ಯಕಶ್ಚಿತ್ ಹೆಣವಾಗಿ ಮಲಗಿದ್ದ. ನೇರ ಕಣ್ಣಿಗೆ ಬಿದ್ದಿದ್ದ ಗುಂಡು ತಲೆಯನ್ನು ಸೀಳಿ ಹಾಕಿತ್ತು. ಅಲ್ಲಿಗೆ ಬೆಂಗಳೂರು ಭೂಗತ ಲೋಕದ ಕರಾಳ ಅಧ್ಯಾಯವೊಂದು ಮುಗಿದಿತ್ತು.

ಅಸಲಿಗೆ ಬೆಂಗಳೂರಿನಲ್ಲಿ ಬಂದೂಕಿನ ಗುಂಡಿಗೆ ಬಲಿಯಾದ ಮೊದಲ ಭೂಗತ ದೊರೆ ಎಂ.ಪಿ. ಜಯರಾಜ್ ಮತ್ತು ಆ ಗುಂಡು ಹಾರಿಸಿದ್ದು Master Mind Killer ಮುತ್ತಪ್ಪ ರೈ ಅಲಿಯಾಸ್ ರೈ.

ದುಷ್ಮನಿಯನ್ನು ಕಂಡರೆ ಸಾಕು ಎಲ್ಲೆಂದರಲ್ಲಿ ಯಾವುದೇ ಯೋಜನೆ ಇಲ್ಲದೆ ಯುದ್ಧಕ್ಕೇ ಮುಂದಾಗುತ್ತಿದ್ದ ಬೆಂಗಳೂರು ಭೂಗತ ಲೋಕದಲ್ಲಿ, ಹುಲಿಯೊಂದನ್ನು ಭೇಟೆಯಾಡುವ ಮುನ್ನ ಎಷ್ಟು ತಯಾರಿ ನಡೆಸಬೇಕು? ಹೇಗೆ ಹೊಂಚು ಹಾಕಬೇಕು? ಎಂದು ಲೆಕ್ಕಾಚಾರ ಹಾಕುವ ಕಲೆಯನ್ನು ಕಲಿಸಿದ ಮೊದಲ ವ್ಯಕ್ತಿ ಮುತ್ತಪ್ಪ ರೈ. ಇದೇ ಕಾರಣಕ್ಕೆ ಆತನಿಗೆ Master Mind Killer ಎಂಬ ಹೆಸರು ಸಹ ಜೊತೆ ಜೊತೆಗೆ ಸೇರಿಕೊಂಡಿತ್ತು. ಆ ನಂತರ ನಡೆದದ್ದು ಮಾತ್ರ ಸಾಲು ಸಾಲು ಸರಣಿ ಕೊಲೆಗಳು.

ಅನಾಮತ್ತಾಗಿ ಪ್ರಾಣ ಬಿಟ್ಟ ಆಯಿಲ್ ಕುಮಾರ:

ಅಸಲಿಗೆ ಜಯರಾಜನ ಕೊಲೆಗೆ ಸುಫಾರಿ ಕೊಟ್ಟದ್ದೇ ಆಯಿಲ್ ಕುಮಾರ. ಅಮರ್ ಆಳ್ವ ಮಾತಿನಂತೆ ಆಯಿಲ್ ಕುಮಾರನಿಂದ ಸುಫಾರಿ ಪಡೆದ ರೈ ಕೊನೆಗೂ ಜಯರಾಜನನ್ನು ಮೊದಲ ಯತ್ನದಲ್ಲೇ ಮುಗಿಸಿದ್ದರು. ಪರಿಣಾಮ ಇಡೀ ಬೆಂಗಳೂರು ಭೂಗತಲೋಕ ಆಯಿಲ್ ಕುಮಾರನ ಪಾಲಾಗಿತ್ತು.

ಆರಂಭದಲ್ಲಿ ರೈ ಹೆಸರನ್ನು ಬಳಸಿಕೊಂಡು ಆಯಿಲ್ ಕುಮಾರ್ ಸಾಕಷ್ಟು ಹಣ ಮಾಡಿದ್ದ. ಆದರೆ, ಇದು ಇಷ್ಟವಾಗದ ರೈ ಅನಾಮತ್ತಾಗಿ ಆಯಿಲ್ ಕುಮಾರನನ್ನೂ ಮುಗಿಸಿಬಿಟ್ಟಿದ್ದರು. ಆದರೆ, ಆಯಿಲ್ ಕುಮಾರನ ಬಳಿಯೇ ಸುಫಾರಿ ಪಡೆದು ಕೊನೆಗೆ ಆತನನ್ನೇ ಕೊಂದದ್ದು ಅಮರ್ ಆಳ್ವಾ ಅವರಿಗೆ ಇಷ್ಟವಿರಲಿಲ್ಲ. ಪರಿಣಾಮ ಬೆಂಗಳೂರು ಭೂಗತ ಲೋಕ ಮತ್ತೆ ಎರಡು ಬಣವಾಗಿತ್ತು.

ಡೆಡ್ಲಿ ಅಟಾಕ್‌ನಿಂದಲೂ ಬಚಾವಾಗಿದ್ದ ರೈ:

ಆಯಿಲ್ ಕುಮಾರನ ಕೊಲೆಗೆ ಸಂಬಂಧಿಸಿದಂತೆ ರೈ ಕೋರ್ಟ್‌‌ಗೆ ಹೊರಡುವ ಸಂದರ್ಭದಲ್ಲಿ ಕೋರ್ಟ್‌ ಆವರಣದಲ್ಲೇ ಅವರ ಮೇಲೆ ಕೊಲೆ ಯತ್ನ ನಡೆದಿತ್ತು. ಆಯಿಲ್‌ ಕುಮಾರನ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಅಮರ್​ ಆಳ್ವಾ ರೈ ಮೇಲೆ ಸಲೀಂ ಎಂಬವನ ಮೂಲಕ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ರೈ ಅವರ ಎದೆಗೆ ಐದು ಗುಂಡು ತಗುಲಿತ್ತು. ಅವರ ಕಿಡ್ನಿಗೂ ಒಂದು ಗುಂಡು ಹಾನಿ ಮಾಡಿತ್ತು. ಆದರೂ ಬದುಕುಳಿದ ರೈ ಕೊನೆಗೆ ಅಮರ್​ ಆಳ್ವಾ ಅವರಿಗೆ ಸ್ಕೆಚ್‌ ಇಟ್ಟರು.

ಅಮರ್​ ಆಳ್ವಾ ಕೊಲೆ ಮತ್ತು ದುಬೈ ನಂಟು:

ಗುಂಡಿನ ದಾಳಿಗೆ ಒಳಗಾಗಿ ವರ್ಷಗಟ್ಟಲೆ ಆಸ್ಪತ್ರೆಯಲ್ಲಿದ್ದು ಬಿಡುಗಡೆಯಾದ ಮುತ್ತಪ್ಪ ರೈ ಕೊನೆಗೆ ಅಮರ್​ ಆಳ್ವಾ ತನ್ನ ಮಗಳ ಮದುವೆಗೆ ಆಹ್ವಾನ ಪತ್ರಿಕೆ ಹಂಚುವಾಗ ಸ್ಕೆಚ್ ಹಾಕಿ ಅವರ ಕೊಲೆ ನಡೆಸುತ್ತಾರೆ. ಅಲ್ಲದೆ, ಈ ಕೊಲೆಯ ನಂತರವೇ ರೈ ದುಬೈ ಸೇರುತ್ತಾರೆ.

ಇದನ್ನೂ ಓದಿ: Muthappa Rai Passes Away: ಭೂಗತ ಲೋಕದ ಮಾಜಿ ದೊರೆ ಮುತ್ತಪ್ಪ ರೈ ನಿಧನ

ಹೀಗೆ ದುಬೈ ಸೇರುವ ಮುತ್ತಪ್ಪ ರೈ ಚೋಟಾ ಶಕೀಲ್ ಮತ್ತು ದಾವೂದ್‌ ಇಬ್ರಾಹಿಂ ನಂಟು ಗಳಿಸ್ತಾರೆ. ಪರಿಣಾಮ ಅಲ್ಲಿಂದಲೇ ಶರತ್‌ ಶೆಟ್ಟಿಗೆ ತಿಳಿಯದೆ ಹಣ ವಸೂಲಿಗೆ ಇಳಿಯುತ್ತಾರೆ. ಬಿಲ್ಡರ್‌ ಸುಬ್ಬಾರಾಜು ಕೊಲೆಗೆ ಸುಫಾರಿ ಪಡೆಯುತ್ತಾರೆ.

ಇದನ್ನೂ ಓದಿ: Muthappa Rai - ಐದು ಗುಂಡು ಬಿದ್ದಾಗಲೇ ಹೆದರಲಿಲ್ಲ, ಈ ಕ್ಯಾನ್ಸರ್​ಗೆ ಹೆದರುತ್ತೇನೆಯೇ ಎಂದಿದ್ದರು ಮುತ್ತಪ್ಪ ರೈ

ಆದರೆ, ಈ ವಿಚಾರದಲ್ಲಿ ಮುತ್ತಪ್ಪ ರೈ ಮತ್ತು ಶರತ್‌ ಶೆಟ್ಟಿ ನಡುವೆ ಭಿನ್ನಾಭಿಪ್ರಾಯ ಬೆಳೆಯುತ್ತದೆ. ಪರಿಣಾಮ ಶರತ್ ಶೆಟ್ಟಿ ರೈ ನಕಲಿ ಪಾಸ್‌ಪೋರ್ಟ್‌ ಕುರಿತು ದುಬೈ ಸರ್ಕಾರಕ್ಕೆ ಮಾಹಿತಿ ಕೊಡುತ್ತಾರೆ. ಇದರ ಬೆನ್ನಿಗೆ ಮುತ್ತಪ್ಪ ರೈ ಅವರನ್ನು ಅಲ್ಲಿನ ಸರ್ಕಾರ ಮತ್ತೆ ಭಾರತಕ್ಕೆ ಗಡಿಪಾರು ಮಾಡುತ್ತೆ. ಇಲ್ಲಿ ಪರಪ್ಪನ ಅಗ್ರಹಾರದಲ್ಲೇ ಕೂತು ಚೋಟಾ ಶಕೀಲ್ ಬಳಿ ವ್ಯವಹಾರ ಕುದುರಿಸುವ ರೈ ಕೊನೆಗೆ ಶರತ್‌ ಶೆಟ್ಟಿಯ ಕಥೆಯನ್ನೂ ಮುಗಿಸುತ್ತಾರೆ. ಅಲ್ಲಿಗೆ ಬೆಂಗಳೂರಿಗೆ ಏಕಮಾತ್ರ ಡಾನ್ ಆಗಿ ಮುತ್ತಪ್ಪ ರೈ ಮಿಂಚಿದ್ದು ಇಂದು ಇತಿಹಾಸ.

ಇದನ್ನೂ ಓದಿ: ಎದೆಗಾರಿಕೆಗೆ ಸೀಮಿತವಾಗಿದ್ದ ಬೆಂಗಳೂರು ಅಂಡರ್​ವಲ್ಡ್​ಗೆ ಸ್ಕೆಚ್​ ಹಾಕುವುದನ್ನು ಕಲಿಸಿಕೊಟ್ಟ ಮಾಸ್ಟರ್​ ಮೈಂಡ್​ ರೈ

ಈ ರಕ್ತಸಿಕ್ತ ಭೂಗತಲೋಕದ ಅಧ್ಯಾಯದಲ್ಲಿ ಅಪಾರ ಹಣವನ್ನೂ ಗಳಿಸಿದ್ದ ಮುತ್ತಪ್ಪ ರೈ ತನ್ನ ರೌಡಿಸಂ ಬದುಕಿಗೆ ಗುಡ್‌ಬೈ ಹೇಳಿ ಇಂದಿಗೆ ದಶಕಗಳೇ ಕಳೆದಿವೆ. ಬೆಂಗಳೂರಿನ ಹೊರವಲಯದಲ್ಲಿ ತನ್ನ ಮಡದಿ ಮಕ್ಕಳ ಜೊತೆಗೆ ಸಂತೋಷದಿಂದ ಬದುಕು ಕಳೆಯುತ್ತಿದ್ದರು. ಮತ್ತೊಬ್ಬ ಮಗ ಅಮೆರಿಕದಲ್ಲಿ ಓದುತ್ತಿದ್ದಾನೆ. ಜಯ ಕರ್ನಾಟಕ ಎಂಬ ಸಂಘಟನೆಯನ್ನೂ ಸ್ಥಾಪಿಸಿಕೊಂಡಿದ್ದ ಮುತ್ತಪ್ಪ ರೈ ಇತ್ತೀಚೆಗೆ ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದರು. ಆದರೆ, ಬಿಟ್ಟು ಬಿಡದೆ ಕಾಡಿದ ಕ್ಯಾನ್ಸರ್‌ ಕೊನೆಗೂ ಅವರ ಅತಿರಂಜಕ ಮತ್ತು ಯಾವ ಸಿನಿಮಾಗೂ ಕಡಿಮೆ ಇಲ್ಲದ ರೋಚಕ ಬದುಕಿಗೆ ತೆರೆ ಎಳೆದಿದೆ.

ಇದನ್ನೂ ಓದಿ: Muthappa Rai: ಡಾನ್​ ಆಗುವ ಮೊದಲು ಮುತ್ತಪ್ಪ ರೈ ಬ್ಯಾಂಕ್​ ಕೆಲಸಕ್ಕೆ ಸೇರಿದ್ದ ಕತೆ ಇದು..!
First published: