ರಾಷ್ಟ್ರೀಯ ಪಕ್ಷಗಳಲ್ಲಿ ಜಾರಕಿಹೊಳಿಗಳದ್ದೇ ದರ್ಬಾರ್; ಸಿಎಂ ಕನಸು ಹೊಂದಿರುವ ಸತೀಶ್​ಗೆ ಒಲಿದುಬಂದ ಕಾರ್ಯಾಧ್ಯಕ್ಷ ಸ್ಥಾನ

ಸತೀಶ್ ಜಾರಕಿಹೊಳಿ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎನ್ನುವ ಮಹದಾಸೆ ಹೊಂದಿದ್ದಾರೆ. ಈ ಬಗ್ಗೆ ಅನೇಕ ಸಲ ಹೇಳಿಕೊಂಡಿರುವ ಜಾರಕಿಹೊಳಿ ಇದಕ್ಕೆ ಇನ್ನೂ 10 ವರ್ಷ ಬೇಕು ಎನ್ನುವ ಮಾತನ್ನು ಸಹ ಹೇಳಿದ್ದಾರೆ. ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಹುದ್ದೆ ಸಿಕ್ಕಿದ್ದು, ಸಿಎಂ ಕುರ್ಚಿ ಮೇಲಿನ ಅವರ ಕನಸಿನ ಮೆಟ್ಟಲು ಹತ್ತಿವಾದಂತಾಗಿದೆ.

ಜಾರಕಿಹೊಳಿ ಕುಟುಂಬ.

ಜಾರಕಿಹೊಳಿ ಕುಟುಂಬ.

  • Share this:
ಬೆಳಗಾವಿ; ಕಗ್ಗಂಟಾಗಿದ್ದ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ನೇಮಕವನ್ನು ಬುಧವಾರ ಎಐಸಿಸಿ ಪ್ರಕಟಿಸಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ನೇಮಕವಾಗಿದ್ದು, ಕಾರ್ಯಾಧ್ಯಕ್ಷರಾಗಿ ಸತೀಶ ಜಾರಕಿಹೊಳಿ  ನೇಮಕವಾಗಿದ್ದಾರೆ. ಈ ಮೂಲಕ ಜಾಕಿಹೊಳಿ ಸಹೋದರರು ಕಾಂಗ್ರೆಸ್, ಬಿಜೆಪಿಯಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿದ್ದಾರೆ.

ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿದ್ದು ಸಚಿವ ರಮೇಶ ಜಾರಕಿಹೊಳಿ. ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಮಂತ್ರಿಯಾಗಿದ್ದುಕೊಂಡೇ ಬಂಡಾಯದ ಬಾವುಟ ಹಾರಿಸಿದ್ದರು. ತಂಡವೊಂದನ್ನು ರಚನೆ ಮಾಡಿಕೊಂಡು ಮೈತ್ರಿ ಸರ್ಕಾರ ಪತನ ಮಾಡಿದ್ದು ಈಗ ಇತಿಹಾಸ. ರಮೇಶ ಜಾರಕಿಹೊಳಿ ಬಂಡಾಯಕ್ಕೆ ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿಯ ಹಸ್ತಕ್ಷೇಪವೇ ಪ್ರಮುಖ ಕಾರಣವಾಗಿತ್ತು. ಪಿಎಲ್​ಡಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನಿಗೆ ಡಿಕೆಶಿ ಇದ್ದಾರೆ ಎಂದು ಜಾರಕಿಹೊಳಿ ಸಹೋದರರು ಸಿಟ್ಟಾಗಿದ್ದರು. ಈ ಸಿಟ್ಟು ಮುಂದೆ ಬಂಡಾಯವಾಗಿ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿತು.

ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡು ಉಪಚುನಾವಣೆಯಲ್ಲಿ ಗೆದ್ದು, ಡಿಕೆಶಿ ನಿಭಾಯಿಸಿದ್ದ ಜಲಸಂಪನ್ಮೂಲ ಖಾತೆ ಪಡೆಯುಲ್ಲಿ ರಮೇಶ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಡಿಕೆಶಿ ಜತೆಗಿನ ಕುಸ್ತಿಯಲ್ಲಿ ರಮೇಶ ಜಾರಕಿಹೊಳಿಗೆ ಸಾಥ್ ಕೊಟ್ಟಿದ್ದ ಸತೀಶ್ ಜಾರಕಿಹೊಳಿ ಮಾತ್ರ ಕಾಂಗ್ರೆಸ್​ನಲ್ಲಿಯೇ ಕೆಪಿಸಿಸಿ ಕಾರ್ಯಾಧ್ಯಕ್ಷರಾಗುವ ಮೂಲಕ ತಮ್ಮ ಪ್ರಾಬಲ್ಯ ಹೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್​ನಲ್ಲಿ ಸತೀಶ್ ಜಾರಕಿಹೊಳಿ ಕಾರ್ಯಾಧ್ಯಕ್ಷ ಹುದ್ದೆಗೆ ಏರಿದ್ದಾರೆ. ಬಿಜೆಪಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಉನ್ನತ ಖಾತೆ ನಿಭಾಯಿಸುತ್ತಿದ್ದಾರೆ. ಜತೆಗೆ ಕೆಎಂಎಫ್ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್, ಬಿಜೆಪಿಯಲ್ಲಿ ಜಾರಕಿಹೊಳಿ ಸಹೋದರರು ಅತ್ಯಂತ ಪ್ರಬಲರಾಗಿದ್ದು, ಅವರ ದರ್ಬಾರ್ ಆರಂಭವಾಗಿದೆ.

ಕನಸಿನ ಮೆಟ್ಟಿಲು ಹತ್ತಿದ ಸತೀಶ್ ಜಾರಕಿಹೊಳಿ..!

ಪ್ರತಿಷ್ಠಿತ ಜಾರಕಿಹೊಳಿ ಕುಟುಂಬದ ಎರಡನೇ ಸಹೋದರ ಸತೀಶ್ ಜಾರಕಿಹೊಳಿ 1992ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ 1998, 2005ರಲ್ಲಿ ಸತತ ಎರಡು ಭಾರಿ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಾರೆ. ಕ್ಷೇತ್ರ ಪುನರ್ ವಿಂಗಡನೆ ಬಳಿಕ ಯಮಕನಮರಡಿ ಎಸ್​ಟಿ ಮೀಸಲು ಕ್ಷೇತ್ರದಿಂದ 2008, 2013 ಹಾಗೂ 2018ರಲ್ಲಿ ಸತತ ಮೂರು ಸಲ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆ ಮೊದಲು ಎಐಸಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಜತೆಗೆ ತೆಲಂಗಾಣ ಉಸ್ತುವಾರಿಯನ್ನು ಸಹ ವಹಿಸಿಕೊಂಡಿದ್ದರು. ಆದರೆ ಸಂಪುಟದಲ್ಲಿ ಸ್ಥಾನ ಪಡೆಯಲು ಹಾಗೂ ಬೆಂಬಲಿಗರಿಗೆ ಸ್ಥಾನಮಾನ ಕೊಡಿಸುವಲ್ಲಿ ವಿಫಲರಾದ ಬಳಿಕ ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸತೀಶ್ ಜಾರಕಿಹೊಳಿ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎನ್ನುವ ಮಹದಾಸೆ ಹೊಂದಿದ್ದಾರೆ. ಈ ಬಗ್ಗೆ ಅನೇಕ ಸಲ ಹೇಳಿಕೊಂಡಿರುವ ಜಾರಕಿಹೊಳಿ ಇದಕ್ಕೆ ಇನ್ನೂ 10 ವರ್ಷ ಬೇಕು ಎನ್ನುವ ಮಾತನ್ನು ಸಹ ಹೇಳಿದ್ದಾರೆ. ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಹುದ್ದೆ ಸಿಕ್ಕಿದ್ದು, ಸಿಎಂ ಕುರ್ಚಿ ಮೇಲಿನ ಅವರ ಕನಸಿನ ಮೆಟ್ಟಲು ಹತ್ತಿವಾದಂತಾಗಿದೆ.

ಇದನ್ನು ಓದಿ: ಪಕ್ಷಕ್ಕಾಗಿ ನಿಷ್ಠೆ ತೋರಿದ ಕನಕಪುರ ಬಂಡೆ ಕೈ ಹಿಡಿದ ಹೈಕಮಾಂಡ್; ಕೆಪಿಸಿಸಿಗೆ ಡಿಕೆಶಿ ಆಯ್ಕೆ ಹಿಂದಿವೆ ಹತ್ತಾರು ಕಾರಣ

ಕಳೆದುಕೊಂಡಿದ್ದಕ್ಕಿಂತ ಹೆಚ್ಚು ಪಡೆದುಕೊಂಡ ಜಾರಕಿಹೊಳಿ ಸಹೋದರರು.!

ಕಳೆದ ಕೆಲ ವರ್ಷಗಳಲ್ಲಿ ಜಾರಕಿಹೊಳಿ ಸಹೋದರರ ಪರಸ್ಪರ ವಾಗ್ಸಮರ, ಆರೋಪ, ಪ್ರತ್ಯಾರೋಪ ಮಾಡಿಕೊಂಡಿದ್ದರು. ರಮೇಶ ಜಾರಕಿಹೊಳಿ ಬಂಡಾಯ ಬಗ್ಗೆ ಸತೀಶ್​ ಜಾರಕಿಹೊಳಿ ಅನೇಕ ಸಲ ಖಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದರು. ಇನ್ನೂ ಸತೀಶ ಬಗ್ಗೆಯೂ ಸಹೋದರ ರಮೇಶ ಜಾರಕಿಹೊಳಿ ಅಷ್ಟೇ ಖಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದರು. ಗೋಕಾಕ್ ಉಪಚುನಾವಣೆಯಲ್ಲಿ ಸತೀಶ  ಜಾರಕಿಹೊಳಿ ಹಾಗೂ ರಮೇಶ ಜಾರಕಿಹೊಳಿ ನಡುವೆ ಪೈಪೋಟಿ ನಡೆದಿತ್ತು. ಆದರೆ ಇದೆರಲ್ಲರ ಹೊರತಾಗಿ ಜಾರಕಿಹೊಳಿ ಸಹೋದರರ ಪರಸ್ಪರ ಪೈಪೋಟಿಯಲ್ಲಿ ಕಳೆದುಕೊಂಡಿದ್ದಕ್ಕಿಂತ ಪಡೆದುಕೊಂಡಿದ್ದೇ ಹೆಚ್ಚು.
First published: