• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Evening Digest: ಕರೋನಾ ವೈರಸ್​ ಸುದ್ದಿಯಿಂದ ಹಿಡಿದು ಭಾರತ ಕ್ರಿಕೆಟ್​ ತಂಡದ ಗೆಲುವಿನ ವರೆಗಿನ ನೀವು ಓದಲೇ ಬೇಕಾದ ಟಾಪ್​ ಸುದ್ದಿಗಳು

Evening Digest: ಕರೋನಾ ವೈರಸ್​ ಸುದ್ದಿಯಿಂದ ಹಿಡಿದು ಭಾರತ ಕ್ರಿಕೆಟ್​ ತಂಡದ ಗೆಲುವಿನ ವರೆಗಿನ ನೀವು ಓದಲೇ ಬೇಕಾದ ಟಾಪ್​ ಸುದ್ದಿಗಳು

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

  • Share this:

1. ಕರೋನಾ ವೈರಸ್​ಗೆ 213 ಬಲಿ; ಪ್ರಪಂಚಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ವಿಧಿಸಿದ ವಿಶ್ವ ಆರೋಗ್ಯ ಸಂಸ್ಥೆ


ಮಾರಣಾಂತಿಕ ಕರೋನಾ ವೈರಸ್​ನಿಂದ ಮೃತಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ವೈರಸ್​ಗೆ ಮೃತಪಟ್ಟವರ ಸಂಖ್ಯೆ 213ಕ್ಕೆ ಏರಿಕೆ ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ.  ಕೊರೋನಾ ವೈರಸ್​​ಗೆ ತುತ್ತಾದ 9,692 ಪ್ರಕರಣ ದಾಖಲಾಗಿದೆ. ಇವರಲ್ಲಿ ಹಲವರ ಪರಿಸ್ಥಿತಿ ಗಂಭೀರವಾಗಿದೆ. ವೈರಸ್​ನ ಆತಂಕ ಹೆಚ್ಚಿರುವುದರಿಂದ ವಿಶ್ವಸಂಸ್ಥೆ ಪ್ರಪಂಚಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.


2.ಮುಂಬರುವ ವರ್ಷದಲ್ಲಿ ದೇಶದ ಜಿಡಿಪಿ ಶೇ. 6ರಿಂದ 6.5 ಬೆಳವಣಿಗೆ: ಆರ್ಥಿಕ ಸಮೀಕ್ಷೆ ಅಂದಾಜು


ಭಾರತದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿರುವ ಹೊತ್ತಲ್ಲೇ ಭರವಸೆಯ ಸುದ್ದಿ ಬಂದಿದೆ. ಮುಂಬರುವ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಶೇ. 6ರಿಂದ 6.5 ದರದಲ್ಲಿ ಬೆಳವಣಿಗೆ ಸಾಧಿಸಲಿದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ. ಕೇಂದ್ರ ಬಜೆಟ್​ಗೂ ಪೂರ್ವದಲ್ಲಿ ಇಂದು ಆರ್ಥಿಕ ಸಮೀಕ್ಷೆಯನ್ನು ಸಂಸತ್​ನಲ್ಲಿ ಪ್ರಸ್ತುಪಡಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸಿದರು. ಈ ಸಮೀಕ್ಷೆ ಪ್ರಕಾರ, ಏಪ್ರಿಲ್​ನಿಂದ ಮುಂದಿನ ವರ್ಷದ ಮಾರ್ಚ್​ವರೆಗಿನ ವರ್ಷದಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣುತ್ತದೆ ಎನ್ನಲಾಗಿದೆ


3.ಐಬಿಎಂಗೆ ಮುಂದಿನ ಸಿಇಒ ಅರವಿಂದ್ ಕೃಷ್ಣ; ಅಮೆರಿಕನ್ ಸಂಸ್ಥೆಗಳ ಮೇಲೆ ಮುಂದುವರಿದ ಭಾರತೀಯರ ಪಾರಮ್ಯ


ಅಮೆರಿಕದ ಅಗ್ರಗಣ್ಯ ಸಂಸ್ಥೆಗಳಲ್ಲಿ ಭಾರತೀಯರ ಪಾರಮ್ಯ ಮುಂದುವರಿಯುತ್ತಿರುವಂತಿದೆ. ಅಡೋಬ್, ಮೈಕ್ರೋಸಾಫ್ಟ್ ಮತ್ತು ಗೂಗಲ್ ಸಂಸ್ಥೆಗಳಿಗೆ ಭಾರತೀಯರೇ ಸಿಇಒ ಆಗಿದ್ಧಾರೆ. ಈಗ ಈ ಪಟ್ಟಿಗೆ ಐಬಿಎಂ ಸೇರ್ಪಡೆಯಾಗಿದೆ. ನೂರು ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಇಂಟರ್​ನ್ಯಾಷನಲ್ ಬ್ಯುಸಿನೆಸ್ ಮೆಷೀನ್ಸ್ (ಐಬಿಎಂ) ಸಂಸ್ಥೆಗೆ ಭಾರತೀಯ ಮೂಲದ ಅರವಿಂದ್ ಕೃಷ್ಣ ಅವರೇ ಮುಂದಿನ ಸಿಇಒ ಆಗಲಿದ್ಧಾರೆ. ಈಗಿನ ಸಿಇಒ ಗಿನ್ನಿ ರೋಮೆಟ್ಟಿ ಅವರೇ ಸ್ವತಃ ಈ ವಿಚಾರವನ್ನು ತಿಳಿಸಿದ್ಧಾರೆ. ಏಪ್ರಿಲ್ 6ರಿಂದ ಐಬಿಎಂಗೆ ಅರವಿಂದ್ ಕೃಷ್ಣ ಅವರೇ ಸಿಇಓ ಆಗಿ ಕಂಪನಿಯನ್ನು ಮುನ್ನಡೆಸಲಿದ್ಧಾರೆ ಎಂದು ಗಿನ್ನಿ ರೋಮೆಟ್ಟಿ ಹೇಳಿದ್ಧಾರೆ. ಇದರೊಂದಿಗೆ ಅಮೆರಿಕ ಮೂಲದ ನಾಲ್ಕು ಸಂಸ್ಥೆಗಳಿಗೆ ಭಾರತೀಯರೇ ಸಿಇಒ ಆದಂತಾಗುತ್ತದೆ.


4.Budget 2020: ಬಜೆಟ್ ಮುನ್ನಾ ದಿನ ಷೇರುಪೇಟೆ ಮಿಂಚು; ಸೆನ್ಸೆಕ್ಸ್ 200 ಅಂಕ ಹೆಚ್ಚಳ


ನಾಳೆ ಕೇಂದ್ರ ಬಜೆಟ್ ಮಂಡನೆಗೆ ಒಂದು ದಿನ ಮುನ್ನವಾದ ಇಂದು ಆರ್ಥಿಕ ಸಮೀಕ್ಷೆಯ ವರದಿ ಸಂಸತ್​ನಲ್ಲಿ ಮಂಡನೆಯಾಗುತ್ತಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಮತ್ತೆ ಪುಷ್ಟಿ ಸಿಗಬಹುದು. ಮುಂಬರುವ ಹಣಕಾಸು ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ. 6ರಿಂದ 6.5 ಇರಬಹುದು ಎಂಬುದನ್ನು ಈ ಸಮೀಕ್ಷೆ ಅಂದಾಜು ಮಾಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಷೇರುಪೇಟೆಯ ಉತ್ಸಾಹ ಗರಿಗೆದರಿದೆ. ದೇಶದ ಪ್ರಮುಖ ಷೇರುಮಾರುಕಟ್ಟೆಯಾದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ 200 ಪಾಯಿಂಟ್ಸ್ ಹೆಚ್ಚಳ ಕಂಡಿದೆ.


5.ಕುಡಿಯುವ ನೀರು, ಇ-ಸ್ಕೂಟರ್, 2 ರೂಗೆ ಗೋಧಿ ಹಿಟ್ಟು: ದೆಹಲಿ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯ ಹೈಲೈಟ್ಸ್


ದೇಶದ ರಾಜಧಾನಿಯ ಗದ್ದುಗೆ ಏರಲು ಹಣಾಹಣಿ ನಡೆಸಿರುವ ಬಿಜೆಪಿ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮತದಾರರನ್ನು ಸೆಳೆಯಲು ಭಾರೀ ಕಸರತ್ತು ನಡೆಸಿದೆ. ಚುನಾವಣೆಗೆ ಇನ್ನೇನು ಒಂದು ವಾರ ಬಾಕಿ ಇದ್ದು, ಇಲ್ಲಿನ ಜನರನ್ನು ಅತಿಹೆಚ್ಚು ಕಾಡುವ ವಾಯು ಮತ್ತು ಜಲ ಮಾಲಿನ್ಯ ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.


6.ಅಮಿತ್ ಶಾ-ಬಿಎಸ್​ವೈ ಭೇಟಿ ಮುಕ್ತಾಯ; 11 ಶಾಸಕರ ಪೈಕಿ 10 ಮಂದಿಗೆ ಸಚಿವ ಸ್ಥಾನ


ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಭೇಟಿ ಮುಕ್ತಾಯವಾಗಿದೆ. ಸುಮಾರು 25 ನಿಮಿಷಗಳ ಕಾಲ ಚರ್ಚೆ ನಡೆಸಿದರು. ಮೂಲಗಳ ಪ್ರಕಾರ 11 ಶಾಸಕರ ಪೈಕಿ 10 ಜನರಿಗೆ ಸಚಿವ ಸ್ಥಾನ ನೀಡಲು ಅಮಿತ್​ ಶಾ ಸೂಚಿಸಿದ್ದಾರೆ. ಮಹೇಶ್​ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್​ ಇಬ್ಬರಲ್ಲಿ ಒಬ್ಬರು ಸಚಿವ ಸ್ಥಾನ ವಂಚಿತರಾಗಲಿದ್ದಾರೆ.


7.ಸಂಪುಟ ಕಗ್ಗಂಟು - ಸಿಎಂ ಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ; ಪ್ರಿಯಾಂಕ್ ಖರ್ಗೆ ವ್ಯಂಗ್ಯ


ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿ ಮುಂದುವರೆದಿದೆ. ಯಡಿಯೂರಪ್ಪ ನಾಲ್ಕು ದಿನಗಳಿಂದ ಕಾದರೂ ಬಿಜೆಪಿ ನಾಯಕರು ಭೇಟಿಗೆ ಅವಕಾಶ ನೀಡದೇ ಇರೋದನ್ನ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.


8.ನಾವು ಸ್ಕೂಲ್​ ಮಕ್ಕಳಲ್ಲ, ಜನಪ್ರತಿನಿಧಿಗಳ ಹಕ್ಕನ್ನು ಯಾರಿಂದಲೂ ಕಸಿಯಲು ಆಗಲ್ಲ; ಸಿಎಂ ವಿರುದ್ಧ ಕಿಡಿಕಾರಿದ ಡಿಕೆಶಿ


ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳ ಹಕ್ಕನ್ನು ಯಾರೂ ಸಹ ಮೊಟಕುಗೊಳಿಸಲು ಸಾಧ್ಯವಿಲ್ಲ. ನಮಗೂ ಏನು ಅಂತಾ ಗೊತ್ತಿದೆ, ನಾವು ಶಾಲಾ ಮಕ್ಕಳಲ್ಲ. ಯಡಿಯೂರಪ್ಪನವರು ದ್ವೇಷ ರಾಜಕಾರಣ ಮಾಡಲ್ಲ ಅಂತಾ ಹೇಳಿದ್ದರು. ನಮ್ಮ ಶಾಸಕರಿಗೆ ಹಿಂದಿನ ಸರ್ಕಾರದಲ್ಲಿ ಬಿಡುಗಡೆಯಾಗಿದ್ದ ಅನುದಾನವನ್ನು ಕಡಿತಗೊಳಿಸಿದರು. ಆದರೆ ಯಾವುದೇ ಬಿಜೆಪಿಯ ಶಾಸಕರ ಅನುದಾನ ಕಡಿತ ಆಗಿಲ್ಲ. ಅಧಿಕಾರಕ್ಕೆ ಬಂದಾಗಿನಿಂದ ಸಿಎಂ ದ್ವೇಷವನ್ನೇ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್​ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.


9.ಹಿಂದಿ ಸಿನಿಮಾ ಪಿಂಕ್​ ತೆಲುಗು ರಿಮೇಕ್​ಗೆ ಪವನ್​ ಕಲ್ಯಾಣ್​ ಪಡೆದ ಸಂಭಾವನೆ ಕೇಳಿ ದಂಗಾದ ಟಾಲಿವುಡ್​ ಸ್ಟಾರ್​ ನಟರು..!


ಪವನ್​ ಈ ಸಿನಿಮಾಗಾಗಿ ಭಾರೀ ದೊಡ್ಡ ಮೊತ್ತವನ್ನೇ ತೆಗೆದುಕೊಂಡಿದ್ದಾರಂತೆ. ಈ ವಿಷಯ ಕೇಳಿದ ನಂತರ ಟಾಲಿವುಡ್​ನ ಸ್ಟಾರ್​ ನಟರೂ ದಂಗಾಗಿದ್ದಾರಂತೆ. 'ಅಜ್ಞಾತವಾಸಿ' ಸಿನಿಮಾ ತೆರೆಕಂಡು ನೆಲಕಚ್ಚಿದ ನಂತರ ಪವನ್​ ರಾಜಕೀಯದಲ್ಲಿ ಸಕ್ರಿಯವಾದರು. ಇದಾದ ನಂತರ ಯಾವುದೇ ಸಿನಿಮಾ ಮಾಡಲಿಲ್ಲ. ಟಾಲಿವುಡ್​ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಲಾಂಗ್​ ಗ್ಯಾಪ್​ ನಂತರ ಮತ್ತೆ ಬಣ್ಣ ಹಚ್ಚಿದ್ದಾರೆ. ಹಿಂದಿ ಸಿನಿಮಾ 'ಪಿಂಕ್​' ತೆಲುಗು ರಿಮೇಕ್​ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ನಡೆಯುತ್ತಿದ್ದು, ಈ ಹಿಂದೆ ಸೆಟ್​ನಲ್ಲಿ ಪವನ್​ ಇದ್ದ ಚಿತ್ರಗಳು ಲೀಕ್​ ಆಗಿ ವೈರಲ್​ ಆಗಿದ್ದವು.  ಪವನ್​ ಕಲ್ಯಾಣ್​ ಅಭಿನಯದ ಈ ಸಿನಿಮಾ ಕುರಿತಂತೆ ಈಗ ಮತ್ತೊಂದು ಬಿಸಿ ಬಿಸಿ ಸುದ್ದಿ ಟಾಲಿವುಡ್​ ಅಂಗಳದಲ್ಲಿ ಓಡಾಡುತ್ತಿದೆ. ಅದು ಪವನ್​ ಈ ಸಿನಿಮಾಗಾಗಿ ಪಡೆದಿದ್ದಾರೆ ಎನ್ನಲಾಗುತ್ತಿರುವ ಸಂಭಾವನೆ ವಿಷಯ.


10. ರೋಚಕ ಸೂಪರ್ ಓವರ್​ನಲ್ಲಿ ಮತ್ತೆ ಗೆದ್ದ ಭಾರತ; ಸರಣಿಯಲ್ಲಿ 4-0 ಮುನ್ನಡೆ


ಸ್ಕೈ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ರೋಚಕ ಟಿ-20 ಪಂದ್ಯವೂ ಟೈ ಆದ ಪರಿಣಾಮ ಸೂಪರ್ ಓವರ್​ನಲ್ಲಿ ಅಂತ್ಯಕಂಡಿತು. ಸೂಪರ್ ಓವರ್​ನಲ್ಲಿ ಈ ಬಾರಿಯೂ ಭಾರತ ಗೆಲ್ಲುವ ಮೂಲಕ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿತು.

top videos
    First published: