ಬರಗಾಲದಿಂದ ಸ್ಥಗಿತಗೊಂಡಿದ್ದ ಗಗನಚುಕ್ಕಿ ಜಲಪಾತೋತ್ಸವಕ್ಕೆ ಜ.18ರಂದು ಅದ್ಧೂರಿ ಚಾಲನೆ

ಒಟ್ಟಾರೆ ಮೂರ್ನಾಲ್ಕು ವರ್ಷಗಳಿಂದ ಬರಗಾಲದಿಂದ ಕಂಗೆಟ್ಟಿದ್ದ ಮಂಡ್ಯ ಜಿಲ್ಲೆಯ ರೈತರಿಗೆ ಈ ಬಾರಿ ಮಳೆಯಿಂದ ಸಮೃದ್ಧಿಯಾಗಿ ನೀರು ಸಿಗುತ್ತಿದೆ. ಇದರಿಂದ ಸದ್ಯ ಬೆಳೆಗಳಿಗೂ ನೀರು ತಲುಪುತ್ತಿದೆ. ಇದರ ಜೊತೆಗೆ ನನೆಗುದಿಗೆ ಬಿದ್ದಿದ್ದ ಗಗನಚುಕ್ಕಿ ಜಲಪಾತೋತ್ಸವ ಸಹ ಅದ್ದೂರಿಯಾಗಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಜನರ ಸಂತೋಷಕ್ಕೆ ಕಾರಣವಾಗಿದೆ.

news18-kannada
Updated:January 15, 2020, 3:03 PM IST
ಬರಗಾಲದಿಂದ ಸ್ಥಗಿತಗೊಂಡಿದ್ದ ಗಗನಚುಕ್ಕಿ ಜಲಪಾತೋತ್ಸವಕ್ಕೆ ಜ.18ರಂದು ಅದ್ಧೂರಿ ಚಾಲನೆ
ಗಗನಚುಕ್ಕಿ.
  • Share this:
ಮಂಡ್ಯ: ಕಳೆದ ಮೂರ್ನಾಲ್ಕು ವರ್ಷದಿಂದ ಮಂಡ್ಯ ಜಿಲ್ಲೆಯಲ್ಲಿ ಮಳೆ ಬೆಳೆ ಇಲ್ಲದೆ ಬರಗಾಲ ಆವರಿಸಿತ್ತು. ಈ ಕಾರಣದಿಂದ ಜಿಲ್ಲೆಯ ಗಗನಚುಕ್ಕಿಯಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿತ್ತು. ಕಳೆದ ಬಾರಿ ಮತ್ತು ಈ ಬಾರಿ ಕೆಆರ್​ಎಸ್ ತುಂಬಿದ್ದು, ಈ ಬಾರಿ ಜಲಪಾತೋತ್ಸವ ಸಂಭ್ರಮಾಚರಣೆಗೆ ಜ. 18 ಮತ್ತು 19 ದಿನಾಂಕ ನಿಗದಿಪಡಿಸಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ಇದೇ ಜನವರಿ 18 ಮತ್ತು 19ರಂದು ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ ಗಗನಚುಕ್ಕಿ ಜಲಪಾತೋತ್ಸವ ಎರಡು ದಿನಗಳ ಕಾಲ ನಡೆಯಲಿದ್ದು, ಕಳೆದ ಆರು ವರ್ಷಗಳಿಂದ ಉತ್ಸವವನ್ನು ಬರಗಾಲದಿಂದ ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಅದ್ಧೂರಿ ಜಲಪಾತೋತ್ಸವ ನಡೆಯಲಿದ್ದು, ಶನಿವಾರ ಮತ್ತು ಭಾನುವಾರ ಸಂಜೆ ಉತ್ಸವ ವೈಭವದಿಂದ ಜರುಗಲಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಮ್ಯೂಸಿಕಲ್ ನೈಟ್ಸ್, ಜಲಪಾತದ ಲೇಸರ್ ಲೈಟ್ ಷೋ ಸೇರಿ ಅನೇಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಗಗನಚುಕ್ಕಿ ಜಲಪಾತೋತ್ಸವದ ಅಂಗವಾಗಿ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಜ.18ರಂದು ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಜಲಪಾತೋತ್ಸವ ಉದ್ಘಾಟಿಸಲಿದ್ದಾರೆ. ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಲಪಾತೋತ್ಸವ ನಡೆಯಲಿದೆ. ಗಗನಚುಕ್ಕಿ ಜಲಪಾತೋತ್ಸವದಲ್ಲಿ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಗಾರುಡಿ ಗೊಂಬೆ, ಜನಪದ ಗಾಯನ, ಹಾಗೂ ಖ್ಯಾತ ಗಾಯಕ ನವೀನ್ ಸಜ್ಜು ಅವರ ಎನ್​ಎಸ್​ ಲೈವ್​ ತಂಡದಿಂದ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಜ.19ರಂದು ಸಾಮೂಹಿಕ ನೃತ್ಯ, ಸ್ಯಾಂಡಲ್ ವುಡ್ ನೈಟ್,ವಿವಿಧ ರಸಮಂಜರಿ ಕಾರ್ಯಕ್ರಮಗಳು ಇರಲಿವೆ. ವಿಶೇಷವಾಗಿ ರಿವರ್ ರ್ಯಾಫ್ಟಿಂಗ್, ಹೆಲಿ ಟೂರಿಸಂ, ರಾಕ್ ಕ್ಲೈಂಬಿಂಗ್, ಬೋಟಿಂಗ್, ಹಾಗೂ ವಸ್ತುಪ್ರದರ್ಶನ ಮತ್ತು ಉದ್ಯೋಗ ಮೇಳವನ್ನು ಸಹ ಆಯೋಜಿಸಲಾಗಿದೆ.

ಒಟ್ಟಾರೆ ಮೂರ್ನಾಲ್ಕು ವರ್ಷಗಳಿಂದ ಬರಗಾಲದಿಂದ ಕಂಗೆಟ್ಟಿದ್ದ ಮಂಡ್ಯ ಜಿಲ್ಲೆಯ ರೈತರಿಗೆ ಈ ಬಾರಿ ಮಳೆಯಿಂದ ಸಮೃದ್ಧಿಯಾಗಿ ನೀರು ಸಿಗುತ್ತಿದೆ. ಇದರಿಂದ ಸದ್ಯ ಬೆಳೆಗಳಿಗೂ ನೀರು ತಲುಪುತ್ತಿದೆ. ಇದರ ಜೊತೆಗೆ ನನೆಗುದಿಗೆ ಬಿದ್ದಿದ್ದ ಗಗನಚುಕ್ಕಿ ಜಲಪಾತೋತ್ಸವ ಸಹ ಅದ್ದೂರಿಯಾಗಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಜನರ ಸಂತೋಷಕ್ಕೆ ಕಾರಣವಾಗಿದೆ.

ಇದನ್ನು ಓದಿ: ಮಾಜಿ ಸಿಎಂ ಸಿದ್ದರಾಮಯ್ಯಗೆ ಎಸ್​ಪಿಜಿ-ಬ್ಲಾಕ್​​ ಕಮಾಂಡೋ ಭದ್ರತೆ?

ತಮಿಳುನಾಡಿಗೆ ನೀರು ವದಂತಿ 

ಜಲಪಾತೋತ್ಸವಕ್ಕೆ ಸಾಮಾಜಿಕ ಜಾಲತಾಣದಿಂದ ವಿಘ್ನವೊಂದು ಎದುರಾಗಿದೆ. ಕೆಆರ್​ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗುತ್ತಿದೆ ಎಂಬ ವದಂತಿ ಜಿಲ್ಲೆಯಲ್ಲಿ ಹರಡುತ್ತಿದೆ. ಈ ವದಂತಿಗೆ ಪ್ರತಿಕ್ರಿಯಿಸಿರುವ ಮಂಡ್ಯ ಡಿಸಿ ವೆಂಕಟೇಶ್, ಸಂಕ್ರಾಂತಿ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ತೊಳೆಯಲು, ಕೃಷಿಗಾಗಿ ಜಿಲ್ಲೆಯ ವಿಶ್ವೇಶ್ವರಯ್ಯ ಹಾಗೂ ಚಿಕ್ಕದೇವರಾಜ ನಾಲೆಗಳಿಗೆ ನೀರು ಬಿಡಲಾಗಿದೆ. ಕೇವಲ ಮಂಡ್ಯ ಜಿಲ್ಲೆಯ ನಾಲೆಗಳಿಗೆ ಮಾತ್ರ ನೀರು ಬಿಡಲಾಗುತ್ತಿದೆ ಹೊರತು ತಮಿಳುನಾಡಿಗಲ್ಲ. ನಾಲೆಗಳಿಗೆ ದಿನಕ್ಕೆ 1500 ಕ್ಯೂಸೆಕ್ಸ್ ನೀರನ್ನು ನಾಲ್ಕು ದಿನಗಳ ಕಾಲ ಹರಿಸಲಾಗುತ್ತಿದೆ. ಅಲ್ಲದೇ ಇದೇ 18 ಮತ್ತು 19ರಂದು ಗಗನಚುಕ್ಕಿ ಜಲಪಾತೋತ್ಸವ ಇರುವುದರಿಂದ ಜಲಪಾತ ವೈಭವದಿಂದ ಕಾಣಲಿ ಎಂದು ನೀರು ಬಿಡುಗಡೆ ಮಾಡಲಾಗಿದೆಯೇ ಹೊರತು ತಮಿಳುನಾಡಿಗೆ ನೀರು ಬಿಟ್ಟಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.
First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ