Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:January 11, 2020, 6:01 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1. ಸಿಎಎ ವಿರೋಧದ ನಡುವೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಿ; ಮಮತಾ ಬ್ಯಾನರ್ಜಿ ಜೊತೆ ಮಾತುಕತೆ

ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ವ್ಯಕ್ತವಾಗಿರುವ ವಿರೋಧದ ನಡುವೆಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದಾರೆ. ಇಲ್ಲಿನ ರಾಮಕೃಷ್ಣ ಮಿಷನ್​ಗೆ ಅವರು ಭೇಟಿ ನೀಡಲಿದ್ದು, ಈ ಬಗ್ಗೆ ಹೆಚ್ಚು ಕಾತುರನಾಗಿದ್ದೇನೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದರು.  ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಅವರು, ರಾಜಭವನದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಪ್ರಧಾನಿ ಮೋದಿಯವರನ್ನು ರಾಜ್ಯಪಾಲ ಜಗ್ಧೀಪ್​ ಧನಕರ್​ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಹೊರಗೆ ಸಿಎಎ ವಿರುದ್ಧ ಪ್ರತಿಭಟನೆ ಕೂಡ ಕಂಡು ಬಂದಿತು.

2.ಗುಜರಾತ್​ನ ಗ್ಯಾಸ್ ಕಂಪನಿಯಲ್ಲಿ ಸ್ಪೋಟ; ಐವರ ಸಾವು

ಇಲ್ಲಿನ ಪದ್ರಾ ತಾಲೂಕಿನ ಕೈಗಾರಿಕಾ ಮತ್ತು ವೈದ್ಯಕೀಯ ಅನಿಲ ಉತ್ಪಾದನಾ ಕಂಪನಿಯಲ್ಲಿ ಗ್ಯಾಸ್​ ಸ್ಪೋಟಿಸಿದ ಪರಿಣಾಮ ಐವರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಪಾದ್ರಾದ ಗವಸದ್​ ಗ್ರಾಮದ ಏಮ್ಸ್​ ಕೈಗಾರಿಕಾ ಪ್ರದೇಶದಲ್ಲಿಬೆಳಗ್ಗೆ 11 ಗಂಟೆಗೆ ಈ ಸ್ಪೋಟ ಸಂಭಂವಿಸಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

3.ಮಾನವ ಸಹಜ ತಪ್ಪು ಗ್ರಹಿಕೆಯಿಂದ ಉಕ್ರೇನ್ ವಿಮಾನ ಹೊಡೆದೆವು: ಇರಾನ್ ತಪ್ಪೊಪ್ಪಿಗೆ

ಮೂರು ದಿನಗಳ ಹಿಂದೆ ಇರಾನ್ ನೆಲದಲ್ಲಿ ಉಕ್ರೇನ್ ದೇಶದ ಬೋಯಿಂಗ್ ವಿಮಾನ ಪತನಗೊಂಡು 176 ಮಂದಿ ದುರ್ಮರಣವಪ್ಪಿದ ದುರಂತ ಸಂಭವಿಸಿತ್ತು. ಆ ವಿಮಾನವನ್ನು ಹೊಡೆದುರುಳಿಸಿದ್ದು ತಾನೇ ಎಂದು ಇರಾನ್ ದೇಶ ಒಪ್ಪಿಕೊಂಡಿದೆ. ಮಾನವಸಹಜವಾದ ತಪ್ಪು ಗ್ರಹಿಕೆಯಿಂದ ವಿಮಾನವನ್ನು ಹೊಡೆದುಹಾಕಲಾಯಿತು ಎಂದು ಇರಾನ್ ಸರ್ಕಾರಿ ಟಿವಿಯಲ್ಲಿ ತಿಳಿಸಲಾಗಿದೆ. ಹಾಗೆಯೇ, ಈ ದುರಂತಕ್ಕೆ ಅಮೆರಿಕವೂ ಪರೋಕ್ಷವಾಗಿ ಕಾರಣ ಎಂದು ಇರಾನ್ ಆರೋಪಿಸಿದೆ.

4.ಡಿಕ್ಕಿಯ ರಭಸಕ್ಕೆ ಬೆಂಕಿಗಾಹುತಿಯಾದ ಬಸ್​; 20 ಮಂದಿ ಸಜೀವ ದಹನಖಾಸಗಿ ಬಸ್​ ಮತ್ತು ಟ್ರಕ್​ ಮುಖಾಮುಖಿ ಡಿಕ್ಕಿಯಾಗಿ ಸುಮಾರು 20 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಕನ್ನೌಜ್​ ಜಿಲ್ಲೆಯ ಚಿಲೋಯಿ ಗ್ರಾಮದ ಸಮೀಪ ನಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಲೀಪರ್ ಬಸ್​ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಬಸ್​ನಲ್ಲಿದ್ದ ಸುಮಾರು 20 ಜನ ಸಜೀವ ದಹನಗೊಂಡಿದ್ದಾರೆ.5

5.ಓಮನ್ ದೊರೆ ಖಾಬೂಸ್ ವಿಧಿವಶ; ಹೈಥಮ್ ಹೊಸ ಸುಲ್ತಾನ್

ಬರೋಬ್ಬರಿ 49 ವರ್ಷಗಳ ಸುದೀರ್ಘ ಕಾಲ ಓಮನ್ ದೇಶದ ರಾಜನಾಗಿದ್ದ ಸುಲ್ತಾನ್ ಖಾಬೂಸ್ ಬಿನ್ ಸಯಿದ್ ದೇಹಾಂತ್ಯವಾಗಿದೆ. 79 ವರ್ಷದ ಸುಲ್ತಾನರು ಇತ್ತೀಚಿನ ಕಾಲದಲ್ಲಿ ಅನಾರೋಗ್ಯಪೀಡಿತರಾಗಿದ್ದರೆನ್ನಲಾಗಿದೆ. ಅವರ ನಿಧನಕ್ಕೆ ರಾಜ ನ್ಯಾಯಾಲಯವು ರಾಷ್ಟ್ರಾದ್ಯಂತ ಮೂರು ದಿನ ಶೋಕಾಚರಣೆ ಘೋಷಿಸಿದೆ. ಇದೇ ವೇಳೆ, ಹೈದಮ್ ಬಿನ್ ತಾರಿಖ್ ಅವರು ಓಮನ್ ದೇಶದ ನೂತನ ದೊರೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಓಮನ್ ದೇಶದ ಮಾಧ್ಯಮಗಳು ವರದಿ ಮಾಡಿವೆ.

6.ಮಂಗಳೂರು ಗಲಭೆ ಸಂಬಂಧ ಸಿಡಿ ಬಿಡುಗಡೆ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದ ಎಚ್​ಡಿಕೆ

ಮಂಗಳೂರು ಗಲಭೆಯ ಸತ್ಯಾಸತ್ಯತೆ ಕುರಿತ ಸಿಡಿ ಬಿಡುಗಡೆಯ ಬಗ್ಗೆ ಬಿಜೆಪಿಯ ನಾಯಕರು ನೀಡಿರುವ ಪ್ರತಿಕ್ರಿಯೆಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. "ಅದಕ್ಕೆಲ್ಲಾ ಅರ್ಥ ಇದ್ಯೇನ್ರೀ, ಅದೆಲ್ಲಾ ಕಟ್ ಆಂಡ್ ಪೇಸ್ಟ್ ವೀಡಿಯೋ ಎಂದು ಸಿಎಂ ಹೇಳುತ್ತಾರೆ. ಸಿ.ಡಿ. ಬಿಡುಗಡೆ ವೇಳೆಯೇ ಇಂತಹ ಬಾಲಿಶತನದ ಪ್ರತಿಕ್ರಿಯೆ ಬಿಟ್ಟು ಬಿಜೆಪಿ ನಾಯಕರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ? ಎಂದಿದ್ದೆ. ಅದನ್ನು ಅವರು ರುಜುವಾತುಪಡಿಸಿದಿರಿ," ಎಂದು ಎಚ್​ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

7.ನಟಿಯರಿಗೆ ಸ್ವಂತ ಬುದ್ಧಿ ಇರಲ್ಲ; ದೀಪಿಕಾ ಪಡುಕೋಣೆ ಬಗ್ಗೆ ಬಿಜೆಪಿ ಶಾಸಕ ರಾಜೂಗೌಡ

ಜೆಎನ್​ಯು ವಿದ್ಯಾರ್ಥಿಗಳ ಪರವಾಗಿ ನಿಂತ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಬಗ್ಗೆ ಸುರಪುರದ ಬಿಜೆಪಿ ಶಾಸಕ ರಾಜೂಗೌಡ  ನಾಲಿಗೆ ಹರಿಬಿಟ್ಟಿದ್ದಾರೆ.  ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಿಕಾ ಪಡುಕೋಣೆ ವಿರುದ್ಧ ಲೇವಡಿ ಮಾಡಿದ್ದಾರೆ. "ನಟ-ನಟಿಯರಿಗೆ ಸ್ವಂತ ಬುದ್ಧಿ ಇರಲ್ಲ. ಅವರು ನಿರ್ದೇಶಕರು ಹೇಳಿದಂತೆ ನಟಿಸುತ್ತಾರೆ ಅಷ್ಟೇ. ತಮ್ಮ ಸ್ವಂತ ಬುದ್ಧಿಯಿಂದ ಕೆಲಸ ಮಾಡುವುದು ತುಂಬಾ ಕಡಿಮೆ," ಎಂದು ವ್ಯಂಗ್ಯವಾಡಿದ್ದಾರೆ.

8.ಕಾಂಗ್ರೆಸ್ ಮನೆ ಕೊಟ್ಟರೆ, ಬಿಜೆಪಿ ಅದನ್ನು ಕಿತ್ತುಕೊಳ್ಳೋ ಕೆಲಸ ಮಾಡ್ತಿದೆ ; ಈಶ್ವರ್ ಖಂಡ್ರೆ ಕಿಡಿ

ಕಾಂಗ್ರೆಸ್ ಸರಕಾರ ಬಡವರಿಗೆ ಮನೆ ಕೊಟ್ಟರೆ ಬಿಜೆಪಿ ಅಂತಹ ಮನೆಗಳಿಗೆ ಹಣ ನೀಡದೆ ದ್ವೇಷದ ರಾಜಕೀಯ ಮಾಡುತ್ತಿದೆ. ಬಡವರ ಹೊಟ್ಟೆಯ ಮೇಲೆ ಒಡೆದು ಅವರ ಬದುಕನ್ನು ನಾಶ ಮಾಡುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಸಾಲ ಸೋಲವನ್ನು ಮಾಡಿ ಮನೆ ಕಟ್ಟಿಕೊಂಡಿರುವ 3 ಲಕ್ಷ 60 ಸಾವಿರ ಫಲಾನುಭವಿಗಳು ಆತಂಕದಲ್ಲಿದ್ದಾರೆ. ಕೂಡಲೇ ಆ ಬಡವರ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

9.ವಿಶ್ವಪ್ರಸಿದ್ದ ಹಂಪಿ ಉತ್ಸವದಲ್ಲಿ ಯಶ್ ಹವಾ; ಕೆಜಿಎಫ್ ಡೈಲಾಗ್, ಹಂಪಿ ಬಗ್ಗೆ ಯಶ್‌ ಹೇಳಿದ್ದೇನು?

ವಿಶ್ವವಿಖ್ಯಾತ ಹಂಪಿಯಲ್ಲಿ ಮೊದಲ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂದಿನಂತೆ ಮನೆ ಮಾತಾದವು. ಪ್ರಾಣೇಶ್ ಮತ್ತು ಅವರ ತಂಡ ನಡೆಸಿಕೊಟ್ಟ ಕಾಮಿಡಿ ಕಲರವ ಜನರ ಕಚಗುಳಿ ಇರಿಸಿತು. ಇದೆಲ್ಲದಕ್ಕೂ ಮುಖ್ಯವಾಗಿ ಕಾರ್ಯಕ್ರಮದ ಕೇಂದ್ರ ಬಿಂದು ರಾಕಿಂಗ್ ಸ್ಟಾರ್ ಯಶ್ ಆಗಮನ ಪ್ರೇಕ್ಷಕರ ಮನೆಸೂರೆಗೊಂಡಿತು. ಕೆಜಿಎಫ್ ಸಿನಿಮಾದ ಡೈಲಾಗ್ ಗೆ ರಾಕಿ ಬಾಯ್ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಈ ವೇಳೆ ರಾಕಿಂಗ್ ಸ್ಟಾರ್ ಕೆಜಿಎಫ್ ಸಿನಿಮಾದ ಡೈಲಾಗ್ ಹೊಡೆದು ಪ್ರೇಕ್ಷಕರನ್ನ ರಂಜಿಸಿದ್ರು. ನಾನು ಮೈಸೂರಿನವರು. ಹಂಪಿಯಲ್ಲಿರುವ ನೀವು ಪುಣ್ಯವಂತರು. ನಮ್ಮ ಸಂಸ್ಕೃತಿ ಉಳಿಸಿಕೊಳ್ಳಬೇಕಾದುದು ನಮ್ಮ ಕರ್ತವ್ಯವೆಂದು ಪ್ರೇಕ್ಷಕರಿಗೆ ನಟ ಯಶ್ ಸಲಹೆ ನೀಡಿದರು.

10.ಐಪಿಎಲ್​ನಲ್ಲಿ ಕೆಕೆಆರ್ ತಂಡದ ಪರ ಆಡಬೇಕಿದ್ದ ಬೌಲರ್​​ 3 ತಿಂಗಳು ಬ್ಯಾನ್!

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪಾಲಾಗಿದ್ದ ಆಸ್ಟ್ರೇಲಿಯಾದ ಯುವ ಆಫ್ ಸ್ಪಿನ್ನರ್ ಕ್ರಿಸ್‌ ಗ್ರೀನ್, ಅನುಮಾನಾಸ್ಪದ ಬೌಲಿಂಗ್ ಆರೋಪದ ಕಾರಣ 3 ತಿಂಗಳ ಕಾಲ ನಿಷೇಧಿಸಲ್ಪಟ್ಟಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಗ್ರೀನ್‌ಗೆ ನಿಷೇಧ ಶಿಕ್ಷೆ ವಿಧಿಸಿದೆ.

 
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ